26 C
Karnataka
Thursday, November 21, 2024

    ರಕ್ತ ದಾನ ಮಹಾ ದಾನ; ಇಂದು ವಿಶ್ವ ರಕ್ತದಾನಿಗಳ ದಿನ

    Must read

    ತಮ್ಮ ಜೀವವನ್ನು ಒತ್ತೆ ಇಟ್ಟು  ಶತ್ರು ರಾಷ್ಟ್ರದ ವಿರುದ್ಧ  ಸೈನಿಕರು ಯುದ್ಧದಲ್ಲಿ ಹೋರಾಡುತ್ತಿದ್ದರು.  ಗಾಯಗೊಂಡ   ನೂರಾರು ಸೈನಿಕರನ್ನು ಮಿಲಿಟರಿ  ಆಸ್ಪತ್ರೆಗೆ ತರಲಾಗುತಿತ್ತು.  ಜೀವನ್ಮರಣದ ಹೋರಾಟದಲ್ಲಿದ್ದ ಸೈನಿಕರಿಗೆ ಬ್ಲಡ್ ಬ್ಯಾಂಕ್ ನಿಂದ ರಕ್ತ ತರಿಸಿ ವರ್ಗಾಯಿಸಲಾಗುತಿತ್ತು.  ಬ್ಲಡ್ ಬ್ಯಾಂಕ್ ನಲ್ಲಿ  ರಕ್ತ ಬಾಟಲ್ಗಳ ಶೇಖರಣೆ ಕಡಿಮೆಯಾಗುತ್ತಿದ್ದಂತೆ ರಕ್ತದಾನಕ್ಕಾಗಿ  ಘೋಷಣೆಯನ್ನು  ನೀಡಲಾಯಿತು.   ಅನೇಕ ಜನರು ಬಂದು  ತಮ್ಮ ರಕ್ತವನ್ನು ನೀಡಿದರು. ದಾನಿಗಳ ನೆರವಿನಿಂದ ಸಾವಿನ ಅಂಚಿನಲ್ಲಿದ್ದ ಎಷ್ಟೋ ಸೈನಿಕರನ್ನು ಬದುಕಿಸಲಾಯಿತು.  

    ಇನ್ನೊಂದು  ಘಟನೆ: ರಸ್ತೆ ಅಪಘಾತಕ್ಕೆ ಒಳಗಾದ  ವ್ಯಕ್ತಿಯೊಬ್ಬರನ್ನು   ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು.  ತುಂಬ ರಕ್ತಸ್ರಾವ ಆಗಿರುವುದರಿಂದ ತಕ್ಷಣ ರಕ್ತವನ್ನು ನೀಡಬೇಕಾಗಿತ್ತು.  ವೈದ್ಯರು ಆತನ ರಕ್ತ ಪರೀಕ್ಷೆ ಮಾಡಿದಾಗ ಅದು   ಎಬಿ ನೆಗೆಟಿವ್ (AB−).  ಅತಿ  ವಿರಳ ಗುಂಪಿನ ಈ  ರಕ್ತ ಆಸ್ಪತ್ರೆಯ    ಬ್ಲಡ್ ಬ್ಯಾಂಕ್ ನಲ್ಲಿ ಸಂಗ್ರಹ  ಇರಲಿಲ್ಲ.  ರೋಗಿಯ ಕಡೆಯವರಿಗೆ AB−  ರಕ್ತವನ್ನು ತುರ್ತಾಗಿ  ವ್ಯವಸ್ಥೆ ಮಾಡಲು ಹೇಳಲಾಯಿತು.  ಯಾರಲ್ಲಿ ಕೇಳಿದರೂ  AB− ರಕ್ತದ ಗುಂಪಿನವರು ಸಿಗಲಿಲ್ಲ. ಚಿಂತೆಗೀಡಾದ ರೋಗಿಯ ಮನೆಯವರು  ಸೋಷಿಯಲ್ ಮಾಧ್ಯಮದ ಮೂಲಕ ವಿನಂತಿಸಿಕೊಂಡರು.  ಇದನ್ನು  ನೋಡಿದ ಅದೇ ರಕ್ತದ ಗುಂಪಿನ ಇಬ್ಬರು ಉದಾರಿಗಳು   ಬಂದು ತಮ್ಮ ರಕ್ತವನ್ನು  ನೀಡಿದರು.  ತಕ್ಷಣಕ್ಕೆ ರಕ್ತದ ವ್ಯವಸ್ಥೆ  ಆಗಿರುವುದರಿಂದ ವೈದ್ಯರು ಶಸ್ತ್ರಕ್ರಿಯೆಯನ್ನು ಯಶಸ್ವಿಗೊಳಿಸಿ ರೋಗಿಯನ್ನು ಉಳಿಸಿದರು.  ಒಂದು ವೇಳೆ ಆ ಇಬ್ಬರು ಹೃದಯವಂತರು ಬಂದು ರಕ್ತದಾನ ಮಾಡದೆ ಹೋಗಿರದಿದ್ದರೆ  ಅಪಘಾತಕ್ಕೆ ಒಳಗಾದ  ವ್ಯಕ್ತಿಯ ಪ್ರಾಣಪಕ್ಷಿ ಅಂದೇ ಹಾರಿಹೋಗುತಿತ್ತು.

    ಸತ್ಯ ಘಟನೆ ಆಧರಿತ ಈ ಸನ್ನಿವೇಶಗಳು ರಕ್ತದಾನದ ಮಹತ್ವವನ್ನು ಸಾರಿ ಹೇಳುತ್ತದೆ. ವಿಶ್ವದಾದ್ಯಂತ  ಪ್ರತಿ ನಿತ್ಯ ಇಂತಹ ಅನೇಕ ಘಟನೆಗಳು ನಡೆಯುತ್ತಾ ಇರುತ್ತವೆ.  ಇಂದು ಜೂನ್ 14, ವಿಶ್ವ ರಕ್ತ ದಾನಿಗಳ ದಿನ;  ವಿಶ್ವ ಆರೋಗ್ಯ ಸಂಸ್ಥೆಯ ನೇತ್ರತ್ವದಲ್ಲಿ  ಜಗತ್ತಿನಾದ್ಯಂತ ರಕ್ತದಾನದ ಮಹತ್ವ, ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಹಾಗೂ  ರಕ್ತದಾನ ಶಿಬಿರವನ್ನು ಏರ್ಪಡಿಸಲು ಮೀಸಲಾಗಿಟ್ಟಿರುವ  ದಿನ.  ನಮ್ಮ ದೇಶದಲ್ಲಿ  ‘ರಕ್ತದಾನ  ಮಹಾದಾನ’  ಎಂಬ ಮಾತಿದೆ. ಇದನ್ನು ಅರಿತವರು ಶಿಬಿರಗಳನ್ನು ಏರ್ಪಡಿಸಿದಾಗ ಅಥವಾ ತುರ್ತು ಅಗತ್ಯತೆ ಇರುವಾಗ ಸ್ವಯಂಪ್ರೇರಿತರಾಗಿ  ರಕ್ತ ನೀಡುವ  ಲಕ್ಷಾಂತರ ಜನರು ಇರುವುದು  ಒಂದು ಅಭಿಮಾನದ  ವಿಷಯ. 

    ವಿಶ್ವ ರಕ್ತದಾನಿಗಳ ದಿನದ  ಈ ಸಂದರ್ಭದಲ್ಲಿ ಒಂದಿಷ್ಟು ರಕ್ತದಾನದ ಬಗ್ಗೆ ಅರಿಯೋಣ

    • ಭಾರತದಲ್ಲಿ ರಕ್ತದಾನಕ್ಕೆ ಸಂಬಂಧಿಸಿದಂತೆ  ಒಂದು  ಇತಿಹಾಸವಿದೆ.   1942 ರ ಎರಡನೆಯ ಮಹಾಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರನ್ನು ಬದುಕಿಸಲು  ರಕ್ತದಾನ ಶಿಬಿರವನ್ನು ಮೊದಲ ಬಾರಿಗೆ ಆಯೋಜಿಸಲಾಯಿತು.
    • ಭಾರತದಲ್ಲಿ ಪ್ರಥಮ   ಬ್ಲಡ್  ಬ್ಯಾಂಕ್ ನ್ನು ರೆಡ್ ಕ್ರಾಸ್ ಸಂಸ್ಥೆಯ  ನಿರ್ವಹಣೆಯಲ್ಲಿ   ಮಾರ್ಚ್ 1942 ರಲ್ಲಿ ಕೋಲ್ಕತ್ತಾದಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಹೈಜೀನ್ ಅಂಡ್ ಪಬ್ಲಿಕ್ ಹೆಲ್ತ್ (All India Institute of Hygiene and Public Health)  ಸಂಸ್ಥೆಯಲ್ಲಿ ಸ್ಥಾಪಿಸಲಾಯಿತು.  
    • ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯನ್ನು  (Indian Red Cross Society) 1920 ರಲ್ಲಿ ಸ್ಥಾಪಿಸಲಾಗಿದ್ದು ಅದು ದೇಶಾದ್ಯಂತ 166 ಬ್ಲಡ್ ಬ್ಯಾಂಕುಗಳನ್ನು ಹೊಂದಿದೆ. ಹಾಗೂ    ಅನೇಕ ನಗರ, ಪಟ್ಟಣಗಳಲ್ಲಿ ರಕ್ತದಾನ ಶಿಬಿರಗಳನ್ನು ಸಕ್ರಿಯವಾಗಿ ನಡೆಸುತ್ತಾ ಬರುತ್ತಿದೆ.
    • ಆರೋಗ್ಯವಂತ ಜನರನ್ನು ರಕ್ತದಾನಕ್ಕೆ ಪ್ರೋತ್ಸಾಹಿಸಲು  ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನಾಗಿ   (National Voluntary Blood Donation Day)  ಆಚರಿಸಲಾಗುತ್ತದೆ.
    • ಭಾರತೀಯ ಜನಸಂಖ್ಯೆಯಲ್ಲಿ ವಿವಿಧ ರಕ್ತ ಗುಂಪು ವ್ಯಕ್ತಿಗಳ ಶೇಕಡಾವಾರು ಪ್ರಮಾಣ ಹೀಗಿದೆ:

    O+ 32.53%; B+ 32.1%;  A+ 21.8%;  AB+  7.7%;  O− 2.03%; B−2.0%; A− 1.36%; AB− 0.48%.

    ದಾನಿಗಳ ಜನಸಂಖ್ಯೆಯ 94.61% ರಷ್ಟು Rh+ ಮತ್ತು ಉಳಿದವರು Rh-

    ರಕ್ತ ವರ್ಗಾವಣೆಗೆ ಸಂಬಂಧಿಸಿದ  ಸೇವೆಗಳು ಮತ್ತು ಸಂಪನ್ಮೂಲಗಳ ಮಾಹಿತಿ ಮತ್ತು ದಾನಿಗಳು ತಮ್ಮ ಅನುಭವಗಳನ್ನು ದಾಖಲಿಸಲು ಭಾರತ ಸರ್ಕಾರದ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಒಂದು ರಾಷ್ಟ್ರೀಯ ವೆಬ್ ಪೋರ್ಟಲ್ (ಜಾಲತಾಣ)ನ್ನು ಸ್ಥಾಪಿಸಿದೆ:     http://nbtc.naco.gov.in/. ಪ್ರಧಾನಿ ನರೇಂದ್ರ ಮೋದಿ ರಕ್ತದಾನವನ್ನು ಸಮಾಜಕ್ಕೆ ಮಾಡುವ ಬಹು ದೊಡ್ಡ ಸೇವೆ ಎಂದು ಹೇಳಿದ್ದಾರಲ್ಲದೆ ಪ್ರತಿ ರಕ್ತದಾನಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.

    ಭಾರತ ಸರ್ಕಾರದ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಸಚಿವಾಲಯವು  ರಕ್ತದಾನ ಮಾಡಲು  ಕೆಲವು   ಮಾರ್ಗಸೂಚಿಗಳನ್ನು ರೂಪಿಸಿವೆ.  ಅದರ ಪ್ರಕಾರ  ಬ್ಲಡ್  ಬ್ಯಾಂಕುಗಳು ಮತ್ತು ರಕ್ತದಾನ ಶಿಬಿರಗಳನ್ನು ನಡೆಸುವ ಸಂಸ್ಥೆಗಳು ಅನುಸರಿಸಬೇಕಾಗಿರುವ ಮಾನದಂಡಗಳು ಹೀಗಿವೆ:

    • ದಾನಿಯು  ಸದೃಢ ಮತ್ತು ಆರೋಗ್ಯವಂತನಾಗಿರಬೇಕು  ಹಾಗೂ   ಯಾವುದೇ ಸಾಂಕ್ರಾಮಿಕ ರೋಗಗಳಿಂದ  ಬಳಲುತ್ತಿರಬಾರದು.
    • ದಾನಿಯು  18 ರಿಂದ 65 ವರ್ಷ ವಯಸ್ಸಿನೊಳಗಿನವರಾಗಿರಬೇಕು  ಮತ್ತು ಕನಿಷ್ಠ 50 ಕೆ.ಜಿ.  ದೇಹ ತೂಕ ಹೊಂದಿರಬೇಕು. 
    • ನಾಡಿ ದರ (Pulse rate)  50  ಮತ್ತು  100 ರ ನಡುವೆ ಇರಬೇಕು.  
    • ಹಿಮೋಗ್ಲೋಬಿನ್ ಮಟ್ಟ ಕನಿಷ್ಠ 12.5 ಗ್ರಾಂ /ಡೆಸಿಲೀಟರ್  ಇರಬೇಕು. 
    • ರಕ್ತದೊತ್ತಡ:  ಡಯಾಸ್ಟೊಲಿಕ್: 50–100 mm Hg, ಸಿಸ್ಟೊಲಿಕ್: 100–180 mm Hg ಇರಬೇಕು. 
    • ದೇಹದ ಉಷ್ಣತೆ  ಸಾಮಾನ್ಯವಾಗಿರಬೇಕು, ಮೌಖಿಕ ತಾಪಮಾನವು 37.5º  C ಗಿಂತ ಮೀರಿರಬಾರದು.  
    • ಒಂದು ರಕ್ತದಾನದಿಂದ ಇನ್ನೊಂದರ  ನಡುವಿನ ಅವಧಿ 3 ತಿಂಗಳಿಗಿಂತ ಹೆಚ್ಚು ಇರಬೇಕು.

    ಇವಿಷ್ಟು ಅರ್ಹತೆ ಇದ್ದರೆ  ಯಾವುದೇ ವ್ಯಕ್ತಿಯು  ರಕ್ತದಾನ ಮಾಡಬಹುದು. ಈ ಎಲ್ಲಾ ಮಾನದಂಡಗಳನ್ನು  ಪರೀಕ್ಷಿಸಿ ವೈದ್ಯಕೀಯ ಸಿಬ್ಬಂದಿ ದಾನಿಗಳ ರಕ್ತವನ್ನು ಪಡೆಯುತ್ತಾರೆ.

    ಈ ಕೆಳಗಿನ ಗುಣಲಕ್ಷಣ /ಅಭ್ಯಾಸ / ಸಮಸ್ಯೆಗಳಿರುವ   ವ್ಯಕ್ತಿಗಳು ರಕ್ತದಾನ ಮಾಡಲು ಅನರ್ಹರಾಗಿರುತ್ತಾರೆ.  

    • ಎಚ್ಐವಿ (HIV) ಪಾಸಿಟಿವ್ ಎಂದು ಪರೀಕ್ಷಿಸಲ್ಪಟ್ಟ ವ್ಯಕ್ತಿ.
    • ಹೃದಯ ಸ್ತಂಭನ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಅಪಸ್ಮಾರ, ಮೂತ್ರಪಿಂಡದ ಕಾಯಿಲೆಗಳು ಮತ್ತು ಮಧುಮೇಹ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು.
    • ಕಳೆದ 6 ತಿಂಗಳುಗಳಲ್ಲಿ ಕಿವಿ / ದೇಹ ಚುಚ್ಚುವಿಕೆ ಅಥವಾ ಹಚ್ಚೆ ಹಾಕಿಸಿಕೊಂಡ  ವ್ಯಕ್ತಿ.
    • ಕಳೆದ 1 ತಿಂಗಳಲ್ಲಿ ರೋಗನಿರೋಧಕ ಶಕ್ತಿಯನ್ನು (ವ್ಯಾಕ್ಸಿನೇಷನ್) ಪಡೆದ ವ್ಯಕ್ತಿಗಳು.
    • ಕಳೆದ 6 ತಿಂಗಳುಗಳಲ್ಲಿ ರೇಬೀಸ್‌ಗೆ ಚಿಕಿತ್ಸೆ ಪಡೆದ ಅಥವಾ ಹೆಪಟೈಟಿಸ್ ಬಿ ಲಸಿಕೆ ಪಡೆದ ವ್ಯಕ್ತಿಗಳು.
    • ಕಳೆದ 24 ಗಂಟೆಗಳಲ್ಲಿ ಮದ್ಯ ಸೇವಿಸಿದ ವ್ಯಕ್ತಿ.
    • ಥಲಸ್ಸೆಮಿಯಾ ಮತ್ತು ಹಿಮೋಫಿಲಿಯಾದಂತಹ ಆನುವಂಶಿಕ ಕಾಯಿಲೆ ಇರುವ ವ್ಯಕ್ತಿಗಳು ಗರ್ಭಿಣಿಯರು ಅಥವಾ ಸ್ತನ್ಯಪಾನ ಮಾಡುವ ಮಹಿಳೆಯರು.
    • ಕಳೆದ 1 ತಿಂಗಳಲ್ಲಿ ಪ್ರಮುಖ ದಂತ ಅಥವಾ ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ವ್ಯಕ್ತಿಗಳು.
    • ಕಳೆದ 6 ತಿಂಗಳಲ್ಲಿ ಗರ್ಭಪಾತಕ್ಕೊಳಗಾದ ಮಹಿಳೆಯರು.
    • ಈ ಹಿಂದೆ ಅಪಸ್ಮಾರ, ಕ್ಷಯ, ಅಲರ್ಜಿಯ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು.
    • ಪ್ರಸ್ತುತ ಸಕ್ರಿಯ ರೋಗಲಕ್ಷಣಗಳೊಂದಿಗೆ ಆಸ್ತಮಾ ಹೊಂದಿರುವ ವ್ಯಕ್ತಿಗಳು, ಮತ್ತು ತೀವ್ರವಾದ ಆಸ್ತಮಾ ರೋಗಿಗಳು.

    ರಕ್ತದಾನದ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು:    

    • ರಕ್ತದಾನಕ್ಕೆ ದಿನವಿಡೀ ಆಸ್ಪತ್ರೆಯಲ್ಲಿ / ಶಿಬಿರದಲ್ಲಿ ಇರಬೇಕಾಗುತ್ತದೆ (ನಿಜಸಂಗತಿ: ರಕ್ತದಾನವು ಸುಮಾರು  ಅರ್ಧ ಘಂಟೆಯ ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಪ್ರಾಥಮಿಕ ತನಿಖೆಗಾಗಿ ಸ್ವಲ್ಪ ಸಮಯ ಬೇಕಾಗಬಹುದು).
    • ರಕ್ತದಾನ ಮಾಡುವುದರಿಂದ ಸೋಂಕು ಉಂಟಾಗುತ್ತದೆ (ನಿಜಸಂಗತಿ: ದಾನಿಗೆ ಯಾವುದೇ ಸೋಂಕು ಬರದಂತೆ ನೋಡಿಕೊಳ್ಳಲು ಎಲ್ಲಾ ಬ್ಲಡ್ ಬ್ಯಾಂಕ್‌ಗಳಲ್ಲಿ ಮತ್ತು ಶಿಬಿರಗಳಲ್ಲಿ ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ). 
    • ರಕ್ತದಾನ ಮಾಡುವಾಗ ತುಂಬಾ ನೋವು ಉಂಟಾಗುತ್ತದೆ (ನಿಜಸಂಗತಿ: ಸೂಜಿಯನ್ನು  ಚುಚ್ಚುವಾಗ ಸ್ವಲ್ಪ ಮಟ್ಟಿನ ನೋವು ಉಂಟಾಗಬಹುದು. ರಕ್ತ ವರ್ಗಾವಣೆಯಾಗುವಾಗ  ನೋವಿನ  ಅನುಭವ ಆಗುದಿಲ್ಲ).  
    • ರಕ್ತದಾನ ಮಾಡುವುದರಿಂದ ಪುರುಷರಲ್ಲಿ ಪುರುಷತ್ವ ಕಡಿಮೆಯಾಗುತ್ತದೆ ಮತ್ತು ಹೆಂಗಸರಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತದೆ (ನಿಜಸಂಗತಿ: ಈವರೆಗೆ ಈ  ನಂಬಿಕೆಗಳಿಗೆ  ಯಾವುದೇ ವೈಜ್ಞಾನಿಕ / ವೈದ್ಯಕೀಯ ಪುರಾವೆ   ಇಲ್ಲ). 
    • ರಕ್ತದಾನ ಮಾಡಿದ ನಂತರ ಒಂದು ದಿನ ಸಂಪೂರ್ಣ ವಿಶ್ರಾಂತಿ ಬೇಕಾಗುತ್ತದೆ (ನಿಜಸಂಗತಿ:  ರಕ್ತದಾನ ಮಾಡಿ ಸ್ವಲ್ಪ ವಿಶ್ರಾಂತಿ ಪಡೆದು ದೈನಂದಿನ ಕೆಲಸಕ್ಕೆ ಹಿಂತಿರುಗಬಹುದು. ರಕ್ತದಾನದ ನಂತರ 24 ಗಂಟೆಗಳ ಒಳಗೆ 8-10 ಗ್ಲಾಸ್ ನೀರು ಕುಡಿಯುವುದು, ನೇರ  ಸೂರ್ಯನ ಬೆಳಕಿನಿಂದ ದೂರವಿರುವುದು ಮುಂದಿನ 3-4 ಗಂಟೆಗಳ ಕಾಲ ವಾಹನ ಚಲಾಯಿಸುವುದು, ಧೂಮಪಾನ ಅಥವಾ ಮುಂದಿನ 24 ಗಂಟೆಗಳ ಕಾಲ ಮದ್ಯ ಸೇವನೆ ಮಾಡದಿರುವುದು  ಮುಂತಾದ ಕೆಲವು ಮುನ್ನೆಚ್ಚರಿಕೆಗಳು ತೆಗೆದುಕೊಳ್ಳಬೇಕು). 

     ಭಾರತದಲ್ಲಿ  ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆ 2006-2007ರಲ್ಲಿ 54.4% ರಿಂದ 2011–2012ರಲ್ಲಿ 83.1% ಕ್ಕೆ ಏರಿಕೆಯಾಗಿದೆ.  ರಕ್ತದ ಘಟಕಗಳ ಸಂಖ್ಯೆ 2006–2007ರಲ್ಲಿ 4.4 ಮಿಲಿಯನ್ ಯುನಿಟ್‌ಗಳಿಂದ 2012–2013ರಲ್ಲಿ 9.3 ಮಿಲಿಯನ್ ಯೂನಿಟ್‌ಗಳಿಗೆ ಏರಿಕೆ ಆಗಿದೆ.  ಆದಾಗ್ಯೂ,  ಇತ್ತೀಚಿನ ವರದಿಯ ಪ್ರಕಾರ  ಭಾರತವು ವಿಶ್ವದ ಅತಿದೊಡ್ಡ ರಕ್ತದ ಕೊರತೆಯನ್ನು ಹೊಂದಿರುವ ರಾಷ್ಟ್ರ ಎಂದು ಪರಿಗಣಿಸಲಾಗಿದೆ. ಎಲ್ಲಾ ರಾಜ್ಯಗಳು ಒಟ್ಟಾಗಿ 41 ಮಿಲಿಯನ್ ಯುನಿಟ್ಗಳ ಕೊರತೆಯನ್ನು ಎದುರಿಸುತ್ತಿವೆ ಮತ್ತು ಬೇಡಿಕೆಯನ್ನು 400% ಕ್ಕಿಂತ ಹೆಚ್ಚಿಸಿದೆ ಎಂದು ಸಂಶೋಧನಾ ವರದಿಯೊಂದು  ಹೇಳಿದೆ.

    2021ರ  ವಿಶ್ವ ರಕ್ತದಾನಿಗಳ ದಿನದ ಘೋಷವಾಕ್ಯ  “ರಕ್ತವನ್ನು ನೀಡಿ ಮತ್ತು ಜಗತ್ತು ಸದಾ ಮಿಡಿಯುವಂತೆ ಇಡಿ (Give blood and keep the world beating)”.  ಇದರ ಸಂದೇಶ ಇಷ್ಟೇ :  ಜೀವ ಉಳಿಸುವ ಮತ್ತು ಇತರರ ಆರೋಗ್ಯವನ್ನು ಸುಧಾರಿಸಲು   ರಕ್ತದಾನಿಗಳು  ನೀಡುವ ಅತ್ಯಮೂಲ್ಯ  ಸೇವೆಯು ಜಗತ್ತು   ಸದಾ  ಸ್ಪಂದಿಸುವಂತೆ ಮಾಡುತ್ತದೆ.  ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು,  ಮುಖ್ಯವಾಗಿ ಸದೃಢ ಆರೋಗ್ಯವಂತ ಯುವಕ ಯುವತಿಯರು ನಿಯಮಿತವಾಗಿ ರಕ್ತದಾನ ಮತ್ತು ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡುವ ಜಾಗತಿಕ ಈ ಕೋರಿಕೆಯನ್ನು ಈಡೇರಿಸಲು ಕೈಜೋಡಿಸಬಹುದು. 

    Photo by LuAnn Hunt on Unsplash

    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    6 COMMENTS

    1. ರಕ್ತದಾನದ‌ ಬಗ್ಗೆ ಉಪಯುಕ್ತ ಮಾಹಿತಿಗಳಗೊಂಡ ಉತ್ತಮ ಲೇಖನ. ಡಾ.‌ಪ್ರಶಾಂತ್ ಅವರಿಂದ ಜನಜಾಗ್ರತಿ ಮೂಡಿಸುವ ಉತ್ತಮ ಪ್ರಯತ್ನ. ಅಭಿನಂದನೆಗಳು ಡಾ. ಪ್ರಶಾಂತ್.

    2. ನಿಜವಾಗಿಯೂ ಪ್ರತಿಯೊಬ್ಬ ನಾಗರಿಕನೂ ಓದಲೇ ಬೇಕಾದ ವರದಿ, ಅತ್ಯುತ್ತಮ ವಾದ ಮಾಹಿತಿ ಧನ್ಯವಾದಗಳು ಸರ್..

    3. ರಕ್ತದಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾದ ವೈಜ್ಞಾನಿಕ ವಿವರಣೆಯನ್ನು ಮನಮುಟ್ಟುವಂತೆ ಸತ್ಯ-ಮಿಥ್ಯ ಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದೀರಿ ತಮಗೆ ಹೃದಯಪೂರ್ವಕ ಧನ್ಯವಾದಗಳು ಡಾ.ಪ್ರಶಾಂತ್ ನಾಯಕ್

    LEAVE A REPLY

    Please enter your comment!
    Please enter your name here

    Latest article

    error: Content is protected !!