20.3 C
Karnataka
Sunday, November 24, 2024

    ಸ್ಯಾಂಕಿ ಕೆರೆ ರಸ್ತೆ & ಮೇಕ್ರಿ ವೃತ್ತ- ಯಶವಂತಪುರ ರಸ್ತೆ ಶೀಘ್ರ ಅಗಲೀಕರಣಕ್ಕೆ ಸೂಚನೆ

    Must read


    ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಯಾಂಕಿ ಕೆರೆ ರಸ್ತೆ, ಮೇಕ್ರಿ ವೃತ್ತದಿಂದ ಯಶವಂತಪುರಕ್ಕೆ ಹೋಗುವ ರಸ್ತೆ ಹಾಗೂ ಮೇಕ್ರಿ ವೃತ್ತದಿಂದ ಬಿಡಿಎ ವರೆಗಿನ ರಸ್ತೆಗಳನ್ನು ಅಗಲೀಕರಣ ಮಾಡುವ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದರು.

    ಬೆಂಗಳೂರಿನಲ್ಲಿ ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹಾಗೂ ಬೃಹತ್‌ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

    ಮೇಕ್ರಿ ವೃತ್ತದಿಂದ ಯಶವಂತಪುರದ ಕಡೆ ಹೋಗುವ ರಸ್ತೆ ಅಗಲೀಕರಣ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಅಗತ್ಯ ಜಾಗ ನೀಡದ ಕಾರಣಕ್ಕೆ ಅಗಲೀಕರಣ ವಿಳಂಬವಾಗಿತ್ತು. ತ್ವರಿತವಾಗಿ ಐಐಎಸ್ಸಿಯಿಂದ ಭೂಮಿ ಪಡೆಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಡಿಸಿಎಂ ಸೂಚಿಸಿದರು.

    ಈ ಬಗ್ಗೆ ಏನಾದರೂ ಆಡಳಿತಾತ್ಮಕ ಅಥವಾ ಕಾನೂನಾತ್ಮಕ ಸಮಸ್ಯೆಗಳಿದ್ದರೆ ತಕ್ಷಣ ಬಗೆಹರಿಸಿಕೊಳ್ಳಿ ಎಂದು ಗೌರವ ಗುಪ್ತ ಅವರಿಗೆ ತಿಳಿಸಿರುವುದಾಗಿ ಅವರು ಮಾಹಿತಿ ನೀಡಿದರು.

    ಬಳ್ಳಾರಿ ರಸ್ತೆಯ ಮೇಕ್ರಿ ವೃತ್ತದಿಂದ ಬಿಡಿಎವರೆಗೂ ರಸ್ತೆ ಅಗಲೀಕರಣದ ಬಗ್ಗೆಯೂ ಚರ್ಚೆ ನಡೆಸಲಾಯಿತಲ್ಲದೆ, ಈ ಯೋಜನೆಗೆ 56 ಕೋಟಿ ರೂ. ಮೀಸಲು ಇಡಲಾಗಿದೆ. ಟೆಂಡರ್‌ ಕೂಡ ಆಗಿದೆ. ಕಾನೂನು ತೊಡಕು ಇರುವ ಕಾರಣಕ್ಕೆ ಕೈಗೆತ್ತಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇದಕ್ಕೆ ಮೀಸಲಿಟ್ಟ ಹಣವನ್ನು ಸ್ಯಾಂಕಿ ಕೆರೆ ರಸ್ತೆ ಅಗಲ ಮಾಡಲು ಉಪಯೋಗಿಸಿ ಎನ್ನುವ ಸಲಹೆ ಕೂಡ ಡಿಸಿಎಂ ನೀಡಿದರು.

    ಸ್ಯಾಂಕಿ ಕೆರೆ ರಸ್ತೆಯ ಅಗಲೀಕರಣದ ಬಗ್ಗೆ 10 ವರ್ಷಗಳ ಹಿಂದೆಯೇ ಹೈಕೋರ್ಟ್‌ ವಿಭಾಗೀಯ ಪೀಠದಿಂದಲೇ ಸ್ಪಷ್ಟ ಆದೇಶ ಬಂದಿತ್ತು. ಆದರೂ ಕಾಮಗಾರಿ ಶುರು ಆಗಿರಲಿಲ್ಲ. ನಿರ್ದಿಷ್ಟ ಕಾಲಾವಧಿಯೊಳಗೇ ಕಾಮಗಾರಿ ಮುಗಿಸಬೇಕು ಎಂದು ನ್ಯಾಯಾಲಯದ ಆದೇಶವಿತ್ತು. ಆದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ತಕ್ಷಣ ಈ ರಸ್ತೆಯ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೃಹತ್‌ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ, ಮಲ್ಲೇಶ್ವರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಾಪರೆಡ್ಡಿ ಸೇರಿದಂತೆ ಪಾಲಿಕೆಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!