ನಾಯಕತ್ವ ಬಿಕ್ಕಟ್ಟು ಬಗೆಹರಿಸಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದಾಗಿದೆ.
ಮೇಲ್ನೋಟಕ್ಕೆ ಮೊದಲ ದಿನಕ್ಕೆ ಸಿಕ್ಕಿರುವ ಆರಂಭಿಕ ರಿಸಲ್ಟ್ ಇಷ್ಟು;
*ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಇಲ್ಲ.
*ಎಲ್ಲರ ಖಾತೆಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನಲಾದ ಸಿಎಂ ಪುತ್ರ ವಿಜಯೇಂದ್ರಗೆ ಲಕ್ಷ್ಮಣ ರೇಖೆ.
*ಪಕ್ಷದಲ್ಲಿ ಕೆಲ ಬದಲಾವಣೆಗಳು ಆಗುತ್ತವೆ, ಜತೆಗೆ ಸಂಪುಟದಲ್ಲಿ ಕೆಲವರಿಗೆ ಕೊಕ್-ಹೊಸಬರಿಗೆ ಅವಕಾಶ.
*ಇವತ್ತು, ನಾಳೆ ಮತ್ತು ನಾಡಿದ್ದು ಪಕ್ಷಸಂಧಾನ ಕೈಂಕರ್ಯವನ್ನು ಮುಗಿಸಿದ ಮೇಲೆ ದಿಲ್ಲಿಗೆ ಹೋಗಿ ಇಡೀ ಬೆಳವಣಿಗೆಗಳ, ನಾಯಕರು ಸಚಿವರ & ಶಾಸಕರ ಅಭಿಪ್ರಾಯಗಳ, ಬೇಸರ-ಸಿಟ್ಟುಗಳ ಗಿಣಿಪಾಠವನ್ನು ಅಗ್ರನಾಯಕರಿಗೆ ಒಪ್ಪಿಸಲಿದ್ದಾರೆ.
ಶುಕ್ರವಾರ ಸಂಜೆ ದಿಲ್ಲಿಗೆ ಹೋದ ಮೇಲೆ ರಾಜ್ಯ ಬಿಜೆಪಿಗೆ ಸೂಚನೆಗಳು ರವಾನೆಯಾಗಲಿದ್ದು, ಅದರಲ್ಲಿ ಮುಖ್ಯಮಂತ್ರಿ ಬಣ ಹಾಗೂ ವಿರೋಧಿ ಬಣಕ್ಕೂ ಚುರುಕು ಮುಟ್ಟಿಸುವ ಅಂಶಗಳು ಇದ್ದೇ ಇರುತ್ತವೆ ಎನ್ನುವುದು ಖಚಿತ.
ಸದ್ಯಕ್ಕೆ ಬಿಜೆಪಿ ಬಿಕ್ಕಟ್ಟು ಶಮನ ಪ್ರಯತ್ನ ಕೈಗೂಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಬಿಕ್ಕಟ್ಟಿನಿಂದ ಸಿಎಂ ಯಡಿಯೂರಪ್ಪ ಪಾರಾಗುವುದು ಖಚಿತ. ಆದರೆ, ಸರಕಾರಕ್ಕೆ ಹೈಕಮಾಂಡ್ ಸರ್ಜರಿ ಮಾಡುವುದಂತೂ ಗ್ಯಾರಂಟಿ.
ಸಂಪುಟದಲ್ಲಿ ಕೆಲವರನ್ನು ಬದಲಾಯಿಸುವ ಹಾಗೂ ಕೆಲ ಆಯ್ದ ಹೊಸ ಮುಖಗಳಿಗೆ ಅವಕಾಶ ನೀಡುವ ಕೆಲಸ ನಡೆಯಲಿದೆ. ಸಚಿವರ ಖಾತೆಗಳಲ್ಲಿ ಮುಖ್ಯಮಂತ್ರಿ ಕುಟುಂಬದ ಯಾರೂ ಹಸ್ತಕ್ಷೇಪ ಮಾಡದಂತೆ ನಿಗಾ ಇರಿಸಲು ಹೈಕಮಾಂಡ್ ಹೊಸ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.
ಬುಧವಾರದಂದು ಕೆಲವರನ್ನಷ್ಟೇ ಹೊರತುಪಡಿಸಿದರೆ ಬಹುತೇಕ ಶಾಸಕರು ಮತ್ತು ಸಚಿವರು ಯಡಿಯೂರಪ್ಪ ಅವರಲ್ಲಿ ʼಪರಮ ನಿಷ್ಠೆʼ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ನಡೆಸುವ ಮಾತುಕತೆ ಕೇವಲ ಔಪಚಾರಿಕ ಎನ್ನಲಾಗಿದೆ.
ಇದೇ ವೇಳೆ, ವೀರಶೈವ ಲಿಂಗಾಯತ ಮಹಾಸಭೆ ಬಿಕ್ಕಟ್ಟಿನೊಳಕ್ಕೆ ನೇರವಾಗಿ ಎಂಟ್ರಿ ಕೊಟ್ಟಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಪದವಿಯಲ್ಲಿ ಕೂತಿರುವ ಯಡಿಯೂರಪ್ಪ ಅವರನ್ನು ಟಚ್ ಮಾಡಬಾರದು ಎಂದು ಹೇಳಿದೆ.
ಜತೆಗೆ, ರಾಜ್ಯದ ವೀರಶೈವ ಲಿಂಗಾಯತ ಸಮುದಾಯದ ಅನೇಕ ಸ್ವಾಮೀಜಿಗಳು ಈಗಾಗಲೇ ಯಡಿಯೂರಪ್ಪ ಪರ ಹೇಳಿಕೆಗಳನ್ನು ಕೊಟ್ಟು, ಸಮುದಾಯದ ಅಗ್ರನಾಯಕನಿಗೆ ಅನ್ಯಾಯವಾದರೆ ಸಹಿಸುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಹೈಕಮಾಂಡ್ ಸದರಿ ಬಿಕ್ಕಟ್ಟನ್ನು ಹಾಗೆಯೇ ʼಜೀವಂತʼ ಇಟ್ಟು ತಾತ್ಕಾಲಿಕವಾಗಿ ತೇಪೆ ಹಚ್ಚುವ ಕೆಲಸ ಮಾಡಲಿದೆ ಎನ್ನುತ್ತಿದೆ ಪಕ್ಷದ ಉನ್ನತ ಮೂಲವೊಂದು.
ಇವೆಲ್ಲ ಅಂಶಗಳನ್ನು ಬಿಜೆಪಿ ವರಿಷ್ಠರು ಪಟ್ಟಿ ಮಾಡಿದ್ದಾರೆ. ಈ ಪಟ್ಟಿ ಇಟ್ಟುಕೊಂಡೇ ಸಿಂಗ್ ಬೆಂಗಳೂರಿಗೆ ಧಾವಿಸಿದ್ದು, ಸದ್ಯಕ್ಕೆ ಆತುರದ ಕ್ರಮ ಬೇಡ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ. ಎಲ್ಲಾ ಸಚಿವರಿಂದ ಅರುಣ್ ಸಿಂಗ್ ಮಾಹಿತಿ ಸಂಗ್ರಹ ಮಾಡಲಿದ್ದಾರೆ, ನಿಜ. ಪ್ರತ್ಯೇಕವಾಗಿ ಅಥವಾ ಸಿಎಂ ಸಮ್ಮುಖದಲ್ಲೇ ಸಚಿವರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಗುರುವಾರ ಬೆಳಗ್ಗೆಯಿಂದ ಈ ಸರ್ಕಸ್ ಶುರುವಾಗಲಿದೆ. ಹೀಗಾಗಿ ಅಭಿಪ್ರಾಯ ಸಂಗ್ರಹ ಕಣ್ಣೊರೆಸುವ ತಂತ್ರವಷ್ಟೇ ಎನ್ನುತ್ತಾರೆ ಪಕ್ಷದ ಹಿರಿಯ ನಾಯಕರೊಬ್ಬರು.
ಇದಕ್ಕೆ ಪೂರಕ ಎನ್ನುವಂತೆ, ಬಂದ ದಿನವೇ ಅರುಣ್ ಸಿಂಗ್ ಕೊಟ್ಟ ಹೇಳಿಕೆ ಇದಕ್ಕೆ ಪುಷ್ಠಿ ನೀಡುತ್ತಿದೆ. “ನಾಯಕತ್ವದ ಬಗ್ಗೆ ಈಗಾಗಲೇ ಹೇಳಿದ್ದೇನೆ. ಹೊಸದಾಗಿ ಹೇಳುವುದೇನೂ ಇಲ್ಲ. ಇನ್ನು, ಯಡಿಯೂರಪ್ಪ ಅವರು ಕೋವಿಡ್ ಬಿಕ್ಕಟ್ಟನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಕುಟುಂಬದ ಒಬ್ಬರಿಗೆ ಒಂದು ಲಕ್ಷ ಪರಿಹಾರವನ್ನೂ ಸಿಎಂ ಘೋಷಣೆ ಮಾಡಿದ್ದಾರೆ” ಎಂದು ಹೇಳಿದ್ದಾರೆ ಅರುಣ್ ಸಿಂಗ್. ಈ ಹೇಳಿಕೆ ವಿರೋಧಿ ಪಾಳಯದಲ್ಲಿ ನಿರಾಶೆಯ ಕಾರ್ಮೋಡ ಕವಿಯುವಂತೆ ಮಾಡಿದೆ. ಮೊದಲ ದಿನವೇ ಹೀಗಾದರೆ, ನಾಳೆ, ನಾಡಿದ್ದರ ಕಾರ್ಯತಂತ್ರದ ಕಥೆಯೇನು ಎನ್ನುವ ಗೊಂದಲದಲ್ಲಿದ್ದಾರೆ ಭಿನ್ನಮತೀಯರು.
ವಿಜಯೇಂದ್ರ ವಿರುದ್ಧವೇ ಸಿಡಿಯಲಿವೆಯೇ ದೂರು ಕ್ಷಿಪಣಿಗಳು?
ಮೂರು ದಿನಗಳ ಅರುಣ್ ಸಿಂಗ್ ರಾಯಭಾರದಲ್ಲಿ ಹೊರಬೀಳುವ ಪ್ರಮುಖ ಫಲಿತಾಂಶವೆಂದರೆ, ಎಲ್ಲರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನಲ್ಲಾದ ಬಿಜೆಪಿ ಉಪಾಧ್ಯಕ್ಷ ಹಾಗೂ ಬಿಎಸ್ ವೈ ಪುತ್ರ ವಿಜಯೇಂದ್ರ ಅವರಿಗೆ ಸೂಕ್ತ ಎಚ್ಚರಿಕೆ ಕೊಡುವ ಸಾಧ್ಯತೆಯೂ ಇಲ್ಲದಿಲ್ಲ. ಗುರುವಾರ ಬೆಳಗ್ಗೆಯಿಂದ ಕುಮಾರಕೃಪ ವಸತಿ ಗೃಹದಲ್ಲಿ ನಡೆಯಲಿರುವ ಶಾಸಕರ ಸಭೆಯಲ್ಲಿ ಬಹಳಷ್ಟು ನಾಯಕರ ʼದೂರು ಕ್ಷಿಪಣಿಗಳುʼ ವಿಜಯೇಂದ್ರ ವಿರುದ್ಧವೇ ಸಿಡಿಯಲಿವೆ ಎನ್ನಲಾಗಿದೆ.
ಅರುಣ್ ಸಿಂಗ್ ಜತೆ ಮುಖ್ಯಮಂತ್ರಿ ಎದುರಿಗೇ ಕೂತಿರಲಿ, ಬಿಡಲಿ; ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್, ವಿಶ್ವನಾಥ್, ಅರವಿಂದ ಬೆಲ್ಲದ್, ಸುನೀಲ್ ಕುಮಾರ್ ಮುಂತಾದವರು ನೇರವಾಗಿ ಹೇಳಬೇಕಾದ್ದನ್ನು ಹೇಳದೇ ಬಿಡುವುದಿಲ್ಲ. ಇನ್ನು ಜೂ.೧೮ರಂದು ರಾಜ್ಯ ಪದಾಧಿಕಾರಿಗಳ ಸಭೆಯೂ ಇದೆ.
ಒಂದಾದ ಸಮುದಾಯ
ಯಡಿಯೂರಪ್ಪ ಅವರ ಕುರ್ಚಿ ಅಲ್ಲಾಡುತ್ತಿರುವ ಬಗ್ಗೆ ಸಿಟ್ಟಾಗಿರುವ ವೀರಶೈವ ಲಿಂಗಾಯಿತ ಸಮುದಾಯ ಪುನಾ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ. ಹಿಂದೆ, ವೀರೇಂದ್ರ ಪಾಟೀಲರಿಗೆ ಆಗಿರುವ ಅನ್ಯಾಯವನ್ನೇ ಮರೆಯದ ಸಮುದಾಯ, ಈಗ ನಡೆಯುತ್ತಿರುವ ಬೆಳವಣಿಗೆಗಳಿಂದ ಕೊತ ಕೊತ ಕುದಿಯುತ್ತಿದೆ. ಜತೆಗೆ, ಅಧಿಕಾರದಲ್ಲಿರುವ ಯಡಿಯೂರಪ್ಪ ಅವರನ್ನೇ ಉಳಿಸಿಕೊಳ್ಳುವುದು ಅತ್ಯಂತ ಜಾಣ ನಡೆ ಎಂಬ ಲೆಕ್ಕಾಚಾರಕ್ಕೂ ಬಂದು ಇಡೀ ಸಮುದಾಯ ಪಕ್ಷಾತೀತವಾಗಿ ಒಗ್ಗಟ್ಟಿಗೆ ಬಂದಿದೆ. ವಿವಿಧ ಮಠಾಧೀಶರು ಈಗಿರುವ ನಾಯಕತ್ವವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಹಾಗೆ ಆಗಲು ಬಿಡುವಂತಿಲ್ಲ ಎಂದು ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಪರಿಸ್ಥಿತಿಯನ್ನು ಮೊದಲೇ ಊಹಿಸಿದ್ದ ವಿಜಯೇಂದ್ರ ವಾರಕ್ಕೆ ಮೊದಲೇ ಇಡೀ ರಾಜ್ಯವನ್ನು ಮಿಂಚಿನಂತೆ ರೌಂಡ್ ಹಾಕಿ ಬಂದಿದ್ದರು. ಬಿಕ್ಕಟ್ಟು ಕಾಲದಲ್ಲೇ ಬಹುತೇಕ ಮಠಗಳಿಗೆ ಭೇಟಿ ನೀಡಿದ್ದರು. ಸಮುದಾಯದ ವಿವಿಧ ಶ್ರೀಗಳ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದರು. ಸುಮಾರು ಐವತ್ತಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮಠಗಳ ಶ್ರೀಗಳೆಲ್ಲರೂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆಂಬ ಮಾಹಿತಿ ವಿಜಯೇಂದ್ರ ಕ್ಯಾಂಪಿನಿಂದಲೇ ಹೊರಬಿದ್ದಿದೆ.
ಫೈನಲಿ, ಏನಾಗುತ್ತದೆ?
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ. ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಅಸಮರ್ಥ ಸಚಿವರನ್ನು ಕೈಬಿಟ್ಟು ಪಕ್ಷನಿಷ್ಠ ಹೊಸ ಮುಖಗಳಿಗೆ ಅವಕಾಶ ನೀಡಲು ಹೈಕಮಾಂಡ್ ನಿರ್ಧರಿಸಿರುವುದು ಪಕ್ಕ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಬದಲಾವಣೆ ಮಾಡುವುದು ರಿಸ್ಕ್ ಎನ್ನುವುದನ್ನು ವರಿಷ್ಠರು ಮನಗಂಡಿದ್ದಾರೆ. ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆ ಬಳಿಕ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡಿದೆ ಹೈಕಮಾಂಡ್. ಈಗ ಅಭಿಪ್ರಾಯ ಸಂಗ್ರಹಕ್ಕೆ ಮಾತ್ರ ಅರುಣ್ ಸಿಂಗ್ ಭೇಟಿ ಸೀಮಿತ.
ಯಡಿಯೂರಪ್ಪ ಬದಲಾವಣೆ ಬದಲು ಪಕ್ಷಕ್ಕೆ-ಸರಕಾರಕ್ಕೆ ಚಿಕಿತ್ಸೆ ನೀಡುವುದು ಹೈಕಮಾಂಡ್ ಲೆಕ್ಕಾಚಾರ. ಕೆಲ ಹಿರಿಯ ಸಚಿವರನ್ನು ಸಂಘಟನೆಗೆ ನಿಯೋಜಿಸಿ ಯುವಮುಖಗಳಿಗೆ ಸಂಪುಟದಲ್ಲಿ ಆದ್ಯತೆ ನೀಡಲಿದೆ. ರಾಮದಾಸ್, ತಿಪ್ಪಾರೆಡ್ಡಿ, ಸುನೀಲ್ ಕುಮಾರ್ ಅವರಂಥ ಪಕ್ಷನಿಷ್ಠರಿಗೆ ಅವಕಾಶ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯರಂಥವರಿಗೆ ಚಾನ್ಸ್ ಕಡಿಮೆ. ಯೋಗೇಶ್ವರ್ ಬಗ್ಗೆ ಏನಾಗುತ್ತದೋ ಸದ್ಯಕ್ಕೆ ಗೊತ್ತಿಲ್ಲ. ಆದರೆ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಬಗ್ಗೆ ಪಕ್ಷಕ್ಕೆ ನಂಬಿಕೆ- ಸಿಂಪಥಿ ಇದೆ.
ಈ ಯು-ಟರ್ನ್‌ಗೆ ಕಾರಣವೇನು?
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ನಂತರ ಒಳ್ಳೆಯ ಕ್ಯಾಂಡಿಡೇಟುಗಳೇನೋ ಇದ್ದಾರೆ. ಅವರೆಲ್ಲರೂ ಎರಡ್ಮೂರು ಅವಧಿಯಿಂದ ಗೆಲ್ಲುತ್ತಲೇ ಇದ್ದಾರೆ, ಸರಿ. ಆದರೆ ಅವರು ಕೇವಲ ʼಮ್ಯಾನೇಜರುʼಗಳಷ್ಟೇ. ಯಾವುದಾದರೂ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಿದರೆ, ಅವರ ಶಕ್ತಿ ಅಷ್ಟಕ್ಕೆ ಸೀಮಿತ. ಅವರಲ್ಲಿ ಹಣಬಲ ಇರಬಹುದು, ಆದರೆ ಪಕ್ಷದ ವೋಟ್ ಬ್ಯಾಂಕ್ ಕಾಪಾಡಿಕೊಳ್ಳುವ ಅಥವಾ ಹೊಸ ವೋಟ್ ಬ್ಯಾಂಕ್ ಸೃಷ್ಟಿ ಮಾಡುವ ಶಕ್ತಿ ಇಲ್ಲ. ಎಂಥ ರಾಜಕೀಯ ಬಿಕ್ಕಟ್ಟು ಎದುರಾದರೂ ಬಂಡೆಯಂತೆ ಎದುರಿಸಿ ನಿಲ್ಲಬಲ್ಲ ಅಚಲ ಶಕ್ತಿ ಯಡಿಯೂರಪ್ಪ ಅವರಿಗೆ ಮಾತ್ರ ಸಿದ್ಧಿಸಿದೆ. ಅಂಥ ತಾಕತ್ತು ಉಳ್ಳ ಇನ್ನೊಬ್ಬ ನಾಯಕ ಇನ್ನೊಬ್ಬರಿಲ್ಲ. ಯಾರನ್ನೇ ಭವಿಷ್ಯದ ನಾಯಕಕನ್ನಾಗಿ ಮುನ್ನೆಲೆಗೆ ತಂದರೂ ಅವರಿಗೆ ಹೈಕಮಾಂಡ್ ಆಸರೆ ಇರಲೇಬೇಕು. ಸ್ಪೂನ್ ಫೀಡಿಂಗ್ ತಪ್ಪುವುದಿಲ್ಲ. ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ಅಶೋಕ್, ಈಶ್ವರಪ್ಪ ಮುಂತಾದವರನ್ನು ಪ್ರಯೋಗಕ್ಕೆ ಒಡ್ಡಿ ಈ ಸತ್ಯವನ್ನು ಪಕ್ಷ ಕಂಡುಕೊಂಡಿದೆ.
ಹೀಗಾಗಿ ಪಕ್ಷಕ್ಕೆ ಸದ್ಯಕ್ಕೆ ರಿಸ್ಕ್ ಬೇಕಿಲ್ಲ, ಇಷ್ಟವೂ ಇಲ್ಲ. ಕಬ್ಬಿಣ ಕಾದು ಬೆಂಡಾಗುವ ತನಕ ಬಿಜೆಪಿ ವರಿಷ್ಠರಿಗೆ ಕಾಯದೆ ಬೇರೆ ದಾರಿ ಇಲ್ಲ. ಸದ್ಯಕ್ಕೆ ಹೈಕಮಾಂಡ್ ಮುಂದೆ 2024 ಬಿಟ್ಟರೆ ಬೇರೆ ಏನೂ ಇಲ್ಲ.(CKNEWSNOW.COM)