ಮುಂಗಾರು ಹಂಗಾಮು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಬುಧವಾರ ಪೂರ್ವಸಿದ್ಧತಾ ಸಭೆ ನಡೆಸಿ, ಪರಿಶೀಲಿಸಿದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜವು ರೈತರಿಗೆ ಸರಿಯಾದ ಸಮಯದಲ್ಲಿ ದೊರೆಯಬೇಕು. ಯಾವ ರೈತರಿಗೂ ಬಿತ್ತನೆ ಬೀಜದ ಕೊರತೆಯಾಗಬಾರದು. ಹಾಗೂ ಬಿತ್ತನೆ ಬೀಜಗಳ ಬಗ್ಗೆ ಹೆಚ್ಚು ಪ್ರಚಾರ ನೀಡಿ ಎಂದು ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಿಳಿಸಿದರು.
ಜಿಲ್ಲೆಯ ಕೃಷಿ ಕೇಂದ್ರಗಳಲ್ಲಿ ಎಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಇದೆ ಎಂಬುದರ ಬಗ್ಗೆ ರೈತರಿಗೆ ಮಾಧ್ಯಮದ ಮುಖಾಂತರ ತಿಳಿಸಿ. ಇದರಿಂದ ರೈತರಿಗೆ ಅನುಕೂಲಕರವಾಗಲಿದೆ. ಇಲ್ಲದಿದ್ದರೆ ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ತಪ್ಪು ಸುದ್ದಿ ಹೋಗುತ್ತದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಪ್ರಚಾರ ನೀಡಿ ಎಂದು ಹೇಳಿದರು.
ರೈತರಿಗೆ ಬಿತ್ತನೆ ಬೀಜಗಳು ಸೂಕ್ತ ಬೆಲೆಯಲ್ಲಿ ನಿಗದಿತ ಸಮಯಕ್ಕೆ ಸಿಗಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಕೃತಕವಾಗಿ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಹಾಗೂ ಸಾಧ್ಯವಾದರೆ ಅಂತಹ ಅಂಗಡಿಗಳನ್ನು ಜಪ್ತಿ ಮಾಡಿ ಎಂದರು.
ಮೈಸೂರು ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ. ಬಿತ್ತನೆ ಬೀಜಕ್ಕೆ 39798 ಕ್ವಿಂಟಾಲ್ ಬೇಡಿಕೆ ಇದ್ದು, 45275 ಕ್ವಿಂಟಾಲ್ ಲಭ್ಯತೆ ಇದೆ. ರಸಗೊಬ್ಬರ 44,209 ಮೆಟ್ರಿಕ್ ಟನ್ ದಾಸ್ತಾನು ಇತ್ತು. ಈಗಾಗಲೇ 26,459 ಮೆಟ್ರಿಕ್ ಟನ್ ಮಾರಾಟ ಮಾಡಲಾಗಿದೆ. ಇನ್ನೂ 17,749 ಮೆಟ್ರಿಕ್ ಟನ್ ದಾಸ್ತಾನು ಉಳಿದಿದೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಶಾಸಕರಾದ ಕೆ.ಮಹದೇವ್, ಹರ್ಷವರ್ಧನ್, ಅನೀಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಧರ್ಮಸೇನ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.