26.2 C
Karnataka
Thursday, November 21, 2024

    ಹಳ್ಳಿ ಹಕ್ಕಿ ಸಿಡಿಸಿದ ಬಾಂಬ್ ಗೆ ಬೆಚ್ಚಿ ಬಿತ್ತೆ ಹೈಕಮಾಂಡ್

    Must read

    ಬೃಹತ್‌ ನೀರಾವರಿ ಇಲಾಖೆಯಲ್ಲಿ 20,000 ಕೋಟಿ ರೂ. ಟೆಂಡರ್‌ ವ್ಯವಹಾರವನ್ನು ಹಣಕಾಸು ಇಲಾಖೆ ಕ್ಲಿಯರೆನ್ಸ್‌ ಇಲ್ಲದೆ ಅಂತಿಮಗೊಳಿಸಲಾಗಿದೆ. ಇದರಲ್ಲಿ 10% ಕಿಕ್‌ಬ್ಯಾಕ್‌ ವ್ಯವಹಾರವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ನೇರ ಪಾತ್ರವಿದೆ ಎಂದು ಬಿಜೆಪಿ ಹಿರಿಯ ನಾಯಕ ಎಚ್.ವಿಶ್ವನಾಥ್‌ ಮಾಡಿರುವ ಆರೋಪ ಗುರುವಾರ ಕತ್ತಲಾಗುವ ಮುನ್ನವೇ ಹೈಕಮಾಂಡ್‌ ಕಿವಿಗೆ ಬಿದ್ದಿದೆ.ಇದರ ಬೆನ್ನ ಹಿಂದೆಯೇ ವಿಜಯೇಂದ್ರ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತು ಕತೆ ನಡೆಸಿದ್ದಾರೆ.

    ಅಲ್ಲದೆ, ಬಳ್ಳಾರಿಯಲ್ಲಿ ಜಿಂದಾಲ್‌ಗೆ 3,600 ಎಕರೆ ಪ್ರದೇಶವನ್ನು ಪರಭಾರೆ ಮಾಡುವುದರಲ್ಲೂ ಭರ್ತಿ ಭ್ರಷ್ಟಾಚಾರ ನಡೆದಿದೆ. ಹೈಕಮಾಂಡ್‌ಗೆ ಹಣ ನೀಡಬೇಕು ಎಂದು ಹೇಳುವ ಮೂಲಕ ಇಲ್ಲಿನ ಗಲೀಜನ್ನು ವರಿಷ್ಠರಿಗೂ ಮೆತ್ತಿಸುವ ಕೆಲಸ ನಡೆಯುತ್ತಿದೆ ಎಂದು ವಿಶ್ವನಾಥ್‌ ಹೇಳಿರುವ ಮಾತು ಗಂಭೀರ ಸ್ವರೂಪ ಪಡೆದುಕೊಂಡಿದೆ

    ಅರುಣ್‌ ಸಿಂಗ್‌ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಶಾಸಕರ ಅಭಿಪ್ರಾಯ ಆಲಿಸುತ್ತಿದ್ದ ಸಮಯದಲ್ಲೇ ವಿಶ್ವನಾಥ್‌ ಸಿಡಿಸಿದ ಬಾಂಬ್‌ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಹಳ್ಳಿಹಕ್ಕಿ ಹೇಳಿಕೆಗಳು ಭಿನ್ನಮತೀಯರ ಗುಂಪಿಗೆ ದೊಡ್ಡ ಲೀಡ್‌ ಕೊಟ್ಟಿದ್ದರೆ ಅತ್ತ ಸಿಎಂ ನಿಷ್ಠರ ಪಾಳೆಯದಲ್ಲಿ ಆತಂಕ ಉಂಟಾಗಿದೆ. ಜತೆಗೆ, ಮುಖ್ಯಮಂತ್ರಿ ನಿಷ್ಠರ ಗುಂಪಿನ ರೇಣುಕಾಚಾರ್ಯ ಹಾಗೂ ಎಸ್.ಆರ್.‌ವಿಶ್ವನಾಥ್‌ ವಿರುದ್ಧ ʼಕೆಲ ಶಬ್ದʼಗಳನ್ನು ಬಳಸಿ ಹಳ್ಳಿಹಕ್ಕಿ ಹರಿಹಾಯ್ದಿರುವುದು ಸ್ವತಃ ಮುಖ್ಯಮಂತ್ರಿಗೂ ತೀವ್ರ ಮುಜುಗರ ಉಂಟು ಮಾಡಿದೆ.

    ಇಷ್ಟಕ್ಕೂ ವಿಶ್ವನಾಥ್‌ ಹೇಳಿದ್ದೇನು?

    “ಜೆಡಿಎಸ್‌ನಲ್ಲಿ ಇದ್ದ ಕೆಟ್ಟ ಪರಿಸ್ಥಿತಿ ಈಗ ಬಿಜೆಪಿಯಲ್ಲೂ ಇದೆ. ಅಲ್ಲಿಂದ ಇಲ್ಲಿ ಬಂದರೆ, ಇಲ್ಲಿಯೂ ಅದೇ ಕುಟುಂಬ ರಾಜಕಾರಣ ಮನೆ ಮಾಡಿದೆ. ಕರ್ನಾಟಕದ ಬಿಜೆಪಿ ಘಟಕ ನರೇಂದ್ರ ಮೋದಿ ಸಾಧನೆ, ಕೆಲಸಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇವರಿಗೆಲ್ಲ ʼವ್ಯವಹಾರವೇʼ ಮುಖ್ಯವಾಗಿಬಿಟ್ಟಿದೆ. ಇನ್ನು ಯಡಿಯೂರಪ್ಪ ಅವರಿಗೆ ವಯಸ್ಸು ಸಹಕರಿಸುತ್ತಿಲ್ಲ. ಆಡಳಿತದಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪ ಅತಿಯಾಗಿದೆ. ಲಂಚಗುಳಿತನ, ಭ್ರಷ್ಟಾಚಾರ ಮಿತಿ ಮೀರಿಬಿಟ್ಟಿದೆ. ಮುಖ್ಯವಾಗಿ ವಿಜಯೇಂದ್ರ ಹಸ್ತಕ್ಷೇಪದಿಂದ ಎಲ್ಲರಿಗೂ ಕಷ್ಟವಾಗುತ್ತಿದೆ. ನೀರಾವರಿ ಇಲಾಖೆಯಲ್ಲಿ 20,000 ಕೋಟಿ ರೂ. ಟೆಂಡರ್‌ ಫೈನಲ್‌ ಮಾಡಲಾಗಿದೆ. ಈ ಟೆಂಡರ್‌ಗೆ ಹಣಕಾಸು ಇಲಾಖೆ ಒಪ್ಪಿಗೆಯನ್ನೇ ನೀಡಿಲ್ಲ. ಅಧಿಕಾರಿಗಗಳನ್ನು ಕಡೆಗಣಿಸಲಾಗಿದೆ. ಇದೆಲ್ಲದರ ಹಿಂದೆ ವಿಜಯೇಂದ್ರ ಇದ್ದಾರೆ. 10% ಕಮೀಷನ್‌ ವ್ಯವಹಾರವಿದೆ. ಹೈಕಮಾಂಡ್‌ಗೂ ಹಣ ನೀಡಬೇಕೆಂದು ಇವರೆಲ್ಲ ಹೇಳಿಕೊಂಡು ಓಡಾಡುತ್ತಿದ್ದಾರೆ. ಇದರಿಂದ ವರಿಷ್ಠರಿಗೂ ಕೆಟ್ಟ ಹೆಸರು ಬರುತ್ತಿದೆ” ಎಂದು ವಿಶ್ವನಾಥ್‌ ಹೇಳಿದ್ದಾರೆ.

    ಇದೇ ವಿಷಯವನ್ನು ಅರುಣ್‌ ಸಿಂಗ್‌ಗೂ ನೇರವಾಗಿ ಹೇಳಿದ್ದೇನೆ ಎಂದ ಅವರು ಮಾಧ್ಯಮಗಳ ಮುಂದೆಯೂ ವಿವರವಾಗಿ ಮಾತನಾಡಿದರು.

    ಯಡಿಯೂರಪ್ಪ ಅವರನ್ನು ಬದಲಿಸಿ

    ವೀರಶೈವ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿ ಎಂದು ವಿಶ್ವನಾಥ್ ಹೇಳಿದ್ದಾರೆ.
    ಪಂಚಮಸಾಲಿ ಸಮುದಾಯಕ್ಕೆ ಸೇರಿದ ಮೂವರು ಶಾಸಕರಿದ್ದಾರೆ. ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್. ಈ ಮೂವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದರು.

    ಯಡಿಯೂರಪ್ಪನವರಿಗೆ ಮೊದಲಿದ್ದ ಶಕ್ತಿ, ಸ್ಪಿರಿಟ್, ಆರೋಗ್ಯ ಈಗ ಇಲ್ಲ. ಹೀಗಾಗಿ ಕಾಮನ್ ಸೆನ್ಸ್ ಇರುವ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಇನ್ನು, ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಬಸವ ತತ್ತ್ವವನ್ನು ಮರೆಯಬಾರದು ಎಂದರು.

    ಸ್ವಲ್ಪ ಮೆತ್ತಗಾದರಾ ಸೈನಿಕ

    ಯೋಗೇಶ್ವರ್‌ ಉಸ್ತುವಾರಿ ಅರುಣ್‌ ಸಿಂಗ್‌ ಮುಂದೆ ಇದ್ದದ್ದೆಲ್ಲವನ್ನೂ ಬಿಚ್ಚಿಟ್ಟರು ಎಂದು ಅವರ ಆಪ್ತರೊಬ್ಬರು ಹೇಳಿದರು. ರಾಜ್ಯದಲ್ಲಿ ಮೂರು ಪಕ್ಷಗಳ ಸರಕಾರ ಇದೆ. ರಾಮನಗರ ಜಿಲ್ಲೆಯಲ್ಲೂ ಅದರಲ್ಲೂ ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಹೇಳಿದ ಕೆಲಸಗಳು ಆಗುತ್ತಿಲ್ಲ. ಆದರೆ ಜೆಡಿಎಸ್‌ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳುವ ಕೆಲಸಗಳೆಲ್ಲ ಆಗುತ್ತಿವೆ” ಎಂದು ದೂರಿದರು.

    ಈ ಮಾತು ಕೇಳುತ್ತಿದ್ದಂತೆ, “ಹೇ ಸಚ್ಛಾ ಹೈ ಕ್ಯಾ” ಎಂದು ತಿರುಗಾ ಯೋಗಿಯನ್ನೇ ಪ್ರಶ್ನೆ ಮಾಡಿದ್ದಾರೆ. ಯೋಗಿ, ತಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ವಿಷಯಗಳನ್ನು ಬಿಡಿಸಿ ಬಿಡಿಸಿ ಹೇಳಿದ್ದಾರೆ ಎನ್ನಲಾಗಿದೆ.

    ಫೋನ್‌ ಕದ್ದಾಲಿಕೆ ಬಾಂಬ್

    ಉಳಿದಂತೆ ಭಿನ್ನರು ಸ್ಫೋಟಿಸಿದ ಇನ್ನೊಂದು ಭಾರೀ ಬಾಂಬ್‌ ಎಂದರೆ ಮೊಬೈಲ್‌ ಕರೆ ಕದ್ದಾಲಿಕೆ. ಭುನ್ನಮತೀಯರ ಗ್ಯಾಂಗ್‌ ಲೀಡರ್‌ ಎಂದೇ ಗುರುತಿಸಿಕೊಂಡಿರುವ ಅರವಿಂದ ಬೆಲ್ಲದ್‌ ತಮ್ಮ ಫೋನ್‌ ಕರೆಗಳ ಕದ್ದಾಲಿಕೆ ಆಗುತ್ತಿದೆ. ಪಕ್ಷದಲ್ಲಿಯೇ ಈ ಬಗ್ಗೆ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ್ಯ ನಡೆಯುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.‌

    ಈ ಹಿಂದಿನ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕೂಡ ಫೋನ್‌ ಕದ್ದಾಲಿಕೆ ಆರೋಪ ಬಂದು ದೊಡ್ಡ ಗದ್ದಲವಾಗಿತ್ತು. ಈಗ ಸ್ವಪಕ್ಷೀಯರಿಂದಲೇ ಸಿಎಂ ವಿರುದ್ಧ ಈ ಗಂಭೀರ ಆರೋಪ ಬಂದಿದೆ. ಜತೆಗೆ, ನನ್ನನ್ನು ಯಾರೋ ಅಪರಿಚಿತರು ಫಾಲೋ ಮಾಡುತ್ತಿದ್ದಾರೆಂದು ಬೆಲ್ಲದ್‌ ಅವರು ಕಾಣದ ವ್ಯಕ್ತಿಗಳತ್ತ ಬೆರಳು ತೋರಿಸಿದ್ದಾರೆ.

    ಇವತ್ತಿನ ಮತ್ತೊಂದು ಮಹತ್ತ್ವದ ಬೆಳವಣಿಗೆ ಎಂದರೆ ನಿಗದಿಯಾಗದ್ದ ರೆಬೆಲ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಅರುಣ್‌ ಸಿಂಗ್‌ ಭೇಟಿ ರದ್ದಾಗಿದೆ. ಬಿಜೆಪಿ ಮೂಲಗಳ ಪ್ರಕಾರ ಯತ್ನಾಳ್‌ ಭೇಟಿಗೆ ಸಿಂಗ್‌ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹಿಂದೆ ಇದೇ ಯತ್ನಾಳ್‌ ಅವರು ಅರುಣ್‌ ಸಿಂಗ್‌ ವಿರುದ್ಧ ಹರಿಹಾಯ್ದಿದ್ದರು. ಸಿಂಗ್‌ ಮುಖ್ಯಮಂತ್ರಿಗೆ ಫೇವರ್‌ ಮಾಡುತ್ತಿದ್ದಾರೆಂದು ದೂರಿದ್ದರು. ಬಹುಶಃ ಈ ಭೇಟಿ ಕ್ಯಾನ್ಸಲ್‌ಗೆ ಹಳೆಯ ಜಿದ್ದು ಕಾರಣ ಎನ್ನಬಹುದು.

    ಫೈನಲಿ, ಇವತ್ತು 10 ಶಾಸಕರನ್ನಷ್ಟೇ ಭೇಟಿಯಾಗಿದ್ದಾರೆ. ನಾಳೆ ಅಬ್ಬಾ ಎಂದರೂ 20 ಶಾಸಕರ ಅಭಿಪ್ರಾಯ ಕೇಳಬಹುದು. ಇದು ಪಕ್ಕಾ ಕಾಟಾಚಾರದ ಮಾತುಕತೆ ಎನ್ನುವುದು ಯಾರಿಗಾದರೂ ಅನಿಸುತ್ತದೆ ಎನ್ನುವುದು ವಿರೋಧಿ ಬಣದ ಗೊಣಗಾಟ. ಶುಕ್ರವಾರ ಸಂಜೆ ದಿಲ್ಲಿ ಫ್ಲೈಟ್‌ ಹತ್ತುವ ಮುನ್ನ ಅವರು ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯನ್ನೂ ನಡೆಸಲಿದ್ದಾರೆ.-cknewsnow.com

    ಚನ್ನಕೃಷ್ಣ ಪಿ ಕೆ
    ಚನ್ನಕೃಷ್ಣ ಪಿ ಕೆhttps://cknewsnow.com/
    ಸಿಕೆ ನ್ಯೂಸ್ ನೌ.ಕಾಮ್ ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!