ಸಂತೇಬೆನ್ನೂರಿನ ನಿವೃತ್ತ ಶಿಕ್ಷಕರು ಮತ್ತು ವಿಜಯ ಯುವಕ ಸಂಘದ ಸ್ಥಾಪಕ ಸದಸ್ಯರು ಆಗಿದ್ದ ಎಸ್. ಮೇಘರಾಜ್ (77) ಅವರು ಕೆಲ ಕಾಲದ ಅಸ್ವಸ್ಥತೆಯ ನಂತರ ಇಂದು ಮುಂಜಾನೆ ದಾವಣಗರೆಯೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರಿ ಮತ್ತು ಇಬ್ಬರು ಪುತ್ರರು ಇದ್ದಾರೆ.
ಮೃದು ಭಾಷಿಯಾಗಿದ್ದ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲರ ಒಲವನ್ನು ಗಳಿಸಿದ್ದರು. ಶಿಕ್ಷಕರಾಗಿ ಅಪಾರ ಶಿಷ್ಯ ಕೋಟಿಯನ್ನು ಹೊಂದಿದ್ದರು.ಪರಿಸರ ಪ್ರೇಮಿಯೂ ಆಗಿದ್ದ ಅವರು ಸ್ಥಳೀಯವಾಗಿ ಆಯುರ್ವೇದ ಔಷಧಿಯನ್ನು ನೀಡುತ್ತಿದ್ದರು. ಜಾನಪದ ಗೀತೆಗಳನ್ನು ಸೊಗಸಾಗಿ ಹಾಡುತ್ತಿದ್ದರು. ಮೃತರ ಅಂತ್ಯಕ್ರಿಯೆ ಇಂದು ಸಂತೇಬೆನ್ನೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ
ತನ್ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಮೇಘರಾಜ್ ಅವರ ನಿಧನಕ್ಕೆ ವಿಜಯ ಯುವಕ ಸಂಘದ ಆಡಳಿತ ಮಂಡಳಿ ಕಂಬನಿ ಮಿಡಿದಿದೆ. ಸಂಘ ಒಬ್ಬ ಸಹೃದಯಿ ಕಾರ್ಯಕರ್ತನನ್ನು ಕಳೆದುಕೊಂಡಂತಾಗಿದೆ ಎಂದು ಗೌರವಾಧ್ಯಕ್ಷ ಸತ್ಯನಾರಾಯಣ ನಾಡಿಗ್ ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಸಂಘದ ಕಾರ್ಯಧ್ಯಕ್ಷ ಕೆ ಮೂರ್ತಿ, ಕಾರ್ಯದರ್ಶಿ ಕೆ. ಸಿದ್ಧಲಿಂಗಪ್ಪ, ಕಾರ್ಯನಿರ್ವಹಣಾಧಿಕಾರಿ ಸುಮತೀಂದ್ರ ನಾಡಿಗ್, ಸಹ ಕಾರ್ಯದರ್ಶಿ ಎಂ ಜಯಪ್ಪ ಸೇರಿದಂತೆ ಶಿಕ್ಷಣ ಸಂಸ್ಥೆಯ ಅನೇಕರು ಸಂತಾಪ ಸೂಚಿಸಿದ್ದಾರೆ.
ಸಂತೇಬೆನ್ನೂರು ಒಬ್ಬ ಪರಿಸರ ಕಾರ್ಯಕರ್ತರನ್ನು ಕಳೆದುಕೊಂಡಂತಾಗಿದೆ ಎಂದು ಪಂಚಾಯಿತಿ ಸದಸ್ಯ ಅಸೀಫ್ ಖಾನ್ ದುಃಖಿಸಿದ್ದಾರೆ. ಹಿತೈಷಿಯೊಬ್ಬರನ್ನು ಕಳೆದುಕೊಂಡಿರುವುದಾಗಿ ಪತ್ರಕರ್ತ ಕೆ. ಎಸ್ ವೀರೇಶ ಪ್ರಸಾದ್ ಕಂಬನಿ ಮಿಡಿದಿದ್ದಾರೆ. ಸಂತೇಬೆನ್ನೂರು ನಾಗರಿಕ ಸಮಿತಿಯ ಪರವಾಗಿ ಪ್ರಕಾಶ್ ಅಗಲಿದ ಹಿರಿಯರಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ.
ಮೇಘರಾಜ್ ಅವರು ಕನ್ನಡಪ್ರೆಸ್ .ಕಾಮ್ ನ ಅಭಿಮಾನಿ ಓದುಗರು ಮತ್ತು ಹಿತೈಷಿಗಳು ಆಗಿದ್ದರು. ಅವರ ನಿಧನ ದೊಡ್ಡ ನಷ್ಟ ಎಂದು ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಸಂತಾಪ ವ್ಯಕ್ತಪಡಿಸಿದ್ದಾರೆ.
Om shanthi 🙏