ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಮೊಟಕುಗೊಳಿಸುವ ಯಾವುದೇ ಚಿಂತನೆ ಅಥವಾ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮನ್ನಣೆ ನೀಡಿ ಆ ಭಾಷೆಗಳಲ್ಲೇ ವೃತ್ತಿಪರ ಶಿಕ್ಷಣ ಸೇರಿ ಎಲ್ಲ ವಿಭಾಗದ ಉನ್ನತ ಶಿಕ್ಷಣವನ್ನು ಬೋಧಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಈ ಅಂಶಕ್ಕೆ ಶಿಕ್ಷಣ ನೀತಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ” ಎಂದಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಪದವಿ ಶಿಕ್ಷಣ ಸಂರಚನೆ ಹೀಗಿರುತ್ತದೆ. ಮೂರು ವರ್ಷ ವ್ಯಾಸಂಗ ಮಾಡಿದರೆ ಪದವಿ ಮುಗಿಯುತ್ತದೆ. ನಾಲ್ಕು ವರ್ಷ ಓದಿದರೆ ಅದನ್ನು ʼಡಿಗ್ರಿ ಆನರ್ಸ್ʼ ಎಂದು ಪರಿಗಣಿಸಲಾಗುತ್ತದೆ, ಮತ್ತೂ ಐದು ವರ್ಷ ವ್ಯಾಸಂಗ ಮಾಡಿದರೆ ಸ್ನಾತಕೋತ್ತರ ಪದವಿಯೇ ಪೂರ್ಣಗೊಳಿಸಿದಂತೆ ಆಗುತ್ತದೆ. ಇದು ಪೂರ್ವ ವ್ಯವಸ್ಥೆಯ ಸುಧಾರಣಾ ಕ್ರಮವಷ್ಟೇ ಎಂದು ಡಿಸಿಎಂ ವಿವರಿಸಿದ್ದಾರೆ.
ಈ ವಿಷಯ ಇನ್ನು ಕರಡು ತಯಾರಿಕೆ ಹಂತದಲ್ಲಿದೆ. ಈಗಲೇ ಅದರ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಮುಖ್ಯವಾಗಿ ಪದವಿ ಶಿಕ್ಷಣದಲ್ಲಿ ಎರಡು ವರ್ಷ ಕನ್ನಡ ಬೋಧನೆ ಆಗುತ್ತಿರುವ ಹಾಲಿ ವ್ಯವಸ್ಥೆಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಮಾತೃಭಾಷೆ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಸ್ಪಷ್ಟವಾಗಿ ಪುನುರುಚ್ಛರಿಸಿದ್ದಾರೆ.
ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಜಾಗತಿಕ ದೃಷ್ಟಿ ಇಟ್ಟುಕೊಂಡು ಅತ್ಯಂತ ಪುರಾತನ ಭಾಷೆಯಾದ ಕನ್ನಡದ ಭೋಧನೆ ಮತ್ತು ಕಲಿಕೆಯನ್ನು ಮತ್ತಷ್ಟು ವಿಸ್ತೃತಗೊಳಿಸುವ ಉದ್ದೇಶ ಸರಕಾರಕ್ಕೆ ಇದೆಯೇ ವಿನಾ, ಅದಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಚಿಂತನೆ ಹೊಂದಿಲ್ಲ. ಈ ಬಗ್ಗೆ ಯಾವುದೇ ತಪ್ಪು ಅಭಿಪ್ರಾಯ ಉಂಟಾಗುವುದು ಬೇಡ ಎಂದು ಡಿಸಿಎಂ ಮನವಿ ಮಾಡಿದ್ದಾರೆ.
ಈ ವರ್ಷದಿಂದಲೇ ಶಿಕ್ಷಣ ನೀತಿ ಜಾರಿ ಆಗುತ್ತದೆ. ಅಂದರೆ, ಮೊದಲ ವರ್ಷವನ್ನು ಶೂನ್ಯವರ್ಷ ಎಂದು ಪರಿಗಣಿಸಲಾಗಿದೆ. ಆಡಳಿತಾತ್ಮಕ-ಕಾನೂನಾತ್ಮಕ ಸಿದ್ಧತೆಗಳನ್ನು ಪ್ರಸಕ್ತ ವರ್ಷದಲ್ಲಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅದರ ರೂಪುರೇಶೆಯಷ್ಟೇ ಸದ್ಯಕ್ಕೆ ಸಿದ್ಧವಾಗುತ್ತಿದೆ. ಕನ್ನಡ ಕಲಿಕೆಯನ್ನು ಮೊಟಕುಗೊಳಿಸಲಾಗುತ್ತದೆ ಎಂದು ಈಗಲೇ ಆತಂಕಪಡುವುದು ಬೇಡ. ಸೂಕ್ತ ಮಾಹಿತಿ ಪಡೆದುಕೊಂಡು ಗೊಂದಲ ಬಗೆಹರಿಸಿಕೊಳ್ಳಬಹುದು ಎಂದು ಡಿಸಿಎಂ ಮನವಿ ಮಾಡಿದರು.