19.9 C
Karnataka
Sunday, September 22, 2024

    ರಾಜ್ಯದಲ್ಲಿ ಸದ್ಯಕ್ಕಂತು ನಾಯಕತ್ವ ಬದಲಿಲ್ಲ

    Must read

    ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ಕೊಟ್ಟವರ ವಿರುದ್ಧ ಕೆಲವೇ ದಿನಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಿರ್ಧರಿಸಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರು ಪತ್ರಕರ್ತರಿಗೆ ತಿಳಿಸಿದರು.

    ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಅವರು ಮಾತನಾಡಿದರು.

    ನಾಯಕತ್ವದ ಪ್ರಶ್ನೆ ಚರ್ಚೆ ಆಗಿಲ್ಲ ಎಂದ ಅವರು, ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅದರಲ್ಲಿ ಯಾವುದೇ ಬದಲಾವಣೆ ಇಲ್ಲವೇ ಇಲ್ಲ ಎಂದು ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್ ಅವರು ತಿಳಿಸಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು ಇದೇ ಮಾತನ್ನು ತಿಳಿಸಲು ಹೇಳಿದ್ದಾರೆ ಎಂದರು.

    ಸಂಪುಟ ಪುನಾರಚನೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದು ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಯಷ್ಟೇ ಎಂದು ಸ್ಪಷ್ಟಪಡಿಸಿದರು.
    ಜೂನ್ 26ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಜಿಲ್ಲಾ ಕಾರ್ಯಕಾರಿಣಿಯನ್ನು ಜುಲೈ 1ರಿಂದ 15ರವರೆಗೆ ಮತ್ತು 16ರಿಂದ ಮಂಡಲ ಕಾರ್ಯಕಾರಿಣಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ರಾಜ್ಯದ ಬಿಜೆಪಿ ಸರಕಾರ ಮತ್ತು ಪಕ್ಷದ ಇಮೇಜ್ ಜಾಸ್ತಿ ಮಾಡಲು ಪಕ್ಷ ಮತ್ತು ಸರಕಾರ ಜೊತೆಜೊತೆಯಾಗಿ ಕೆಲಸ ಮಾಡಲು ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
    ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ದ್ರೋಹ ಬಗೆದಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಜೂನ್ 25ರಂದು ತುರ್ತು ಪರಿಸ್ಥಿತಿಯ ನೆನಪಿಗಾಗಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕರಾಳ ದಿನಾಚರಣೆ ಮಾಡಲು ಪಕ್ಷ ನಿರ್ಧರಿಸಿದೆ. ಆ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದವರನ್ನು ಗುರುತಿಸುವ ಕಾರ್ಯ ನಡೆಯಲಿದೆ ಎಂದ ಅವರು, ನಾನೂ ಕೂಡ ಆಗ ಜೈಲಿನಲ್ಲಿದ್ದೆ ಎಂದು ನೆನಪಿಸಿದರು. ಆಗ ಪತ್ರಿಕಾ ಮುದ್ರಣವೂ ಬ್ಯಾನ್ ಆಗಿತ್ತು ಎಂದರು.

    ಜೂನ್ 21ರಂದು ಯೋಗ ದಿನಾಚರಣೆ ನಡೆಯಲಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಪ್ರತಿ ತಾಲ್ಲೂಕಿನಲ್ಲೂ ಯೋಗ ದಿನ ಆಚರಿಸಬೇಕು. ಅದರಲ್ಲಿ ಕಲಾವಿದರು, ಪ್ರಮುಖ ವ್ಯಕ್ತಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಭಾಗವಹಿಸಲು ಅವರಿಗೆ ಆಹ್ವಾನ ಕೊಡಬೇಕು ಎಂದು ನಿರ್ಧರಿಸಲಾಗಿದೆ ಎಂದರು.

    ಜೂನ್ 23ರಂದು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಮತ್ತು ಜುಲೈ 6ರಂದು ಅವರ ಜನ್ಮ ದಿನ ಇದ್ದು, ಈ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಚಿಂತನೆಗಳು, ಜೀವನಸ್ಫೂರ್ತಿ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಸಂಕಿರಣಗಳನ್ನು ಆಯೋಜಿಸಲಾಗುವುದು ಎಂದರು.

    ಅನಾಥ ಮಕ್ಕಳಿಗೆ 10 ಲಕ್ಷ ರೂಪಾಯಿ ನೀಡುವ ಕೇಂದ್ರ ಸರಕಾರದ ಯೋಜನೆ ಮತ್ತು 80 ಕೋಟಿ ಜನರಿಗೆ ಉಚಿತ ಪಡಿತರ ಕೊಡುವ ಕಾರ್ಯಕ್ರಮ, ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಒಂದು ಲಕ್ಷ ನೀಡುತ್ತಿರುವುದು- ಇದಕ್ಕಾಗಿ ಪಕ್ಷವು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ತಿಳಿಸಿದರು.
    ಮಂಬರುವ ಜಿಲ್ಲಾ ಪಂಚಾಂಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾ ಘಟಕಗಳಿಗೆ ಸೂಚಿಸಲು ನಿರ್ಧರಿಸಲಾಗಿದೆ. ಕೋವಿಡ್‍ನಿಂದ ಮೃತಪಟ್ಟ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ ಎಂದರು.


    ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್


    ಪಕ್ಷದ ವಿರುದ್ಧ ಯಾರೂ ಮಾತನಾಡಬಾರದು. ಪಕ್ಷಕ್ಕೆ ನಷ್ಟ ಉಂಟಾಗುವ ರೀತಿಯಲ್ಲಿ ಎರಡರಿಂದ ಮೂರು ಜನರು ಕೆಲಸ ಮಾಡುತ್ತಿದ್ದಾರೆ. ಅಂಥ ಕೆಲವರ ವಿರುದ್ಧ ಪಕ್ಷವು ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಬಿಜೆಪಿ ಉಸ್ತುವಾರಿಗಳೂ ಆದ ಅರುಣ್ ಸಿಂಗ್ ಅವರು ಇಂದು ತಿಳಿಸಿದರು.

    ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಪಕ್ಷದ ವಿರುದ್ಧ ಮಾತನಾಡುವವರಿಗೆ ಹಾಗೆ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿದೆ. ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಬೇಕು. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರ ವಿಫಲತೆಗಳ ಕುರಿತು ಮಾತನಾಡಬೇಕು ಎಂದರು.
    ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಶ್ರೀ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ನಮ್ಮ ಪಕ್ಷದ ಮುಖಂಡರು ಮುಂದಾಗಬೇಕು ಎಂದು ಅವರು ಸೂಚಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!