ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ರುಚಿಯಾದ ʼಹಣ್ಣಿನ ರಾಜʼ ಮಾವಿಗೆ ಶುಕ್ರದೆಸೆ ಬಂದಿದೆ.ಇಸ್ರೇಲ್ ನೆರವಿನಿಂದ ಜಿಲ್ಲೆಯಲ್ಲಿ ಮಾವು ಕೃಷಿಗೆ ಉತ್ತೇಜನ ನೀಡಲು ಉಷ್ಕೃಷ್ಟತಾ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ಜಿಲ್ಲೆಯಿಂದ ಕಿಸಾನ್ ರೈಲಿನ ಮೂಲಕ ಸ್ವಾದಿಷ್ಟ ಮಾವಿನ ಹಣ್ಣನ್ನು ರಾಜಧಾನಿ ದೆಹಲಿಗೆ ಕಳಿಸಲಾಯಿತು.
ಶ್ರೀನಿವಾಸಪುರ ತಾಲೂಕಿನ ದೊಡ್ಡನತ್ತ ರೈಲು ನಿಲ್ದಾಣದಿಂದ ನವದೆಹಲಿಯ ಆದರ್ಶ ನಗರಕ್ಕೆ ಮಾವು ತುಂಬಿಕೊಂಡು ಹೊರಟ ಮೊದಲ ರೈಲಿಗೆ ಕೋಲಾರದ ಸಂಸದ ಮುನಿಸ್ವಾಮಿ ಶನಿವಾರ ಚಾಲನೆ ನೀಡಿದರು.
ರಾಜ್ಯದಲ್ಲಿ ಈ ಬಾರಿ ಮಾವಿನ ಫಸಲು ವಿಪುಲವಾಗಿ ಬಂದಿದ್ದು, ಕೋವಿಡ್‌ನಿಂದ ಉತ್ತಮ ಬೆಲೆ ಸಿಗದಂಥ ಪರಿಸ್ಥಿತಿ ಉಂಟಾಗಿತ್ತು. ಇದೇ ವೇಳೆಯಲ್ಲಿ ಸಂಸದ ಮುನಿಸ್ವಾಮಿ ಅವರ ಒತ್ತಾಸೆಯಿಂದ ಕಿಸಾನ್ ರೈಲಿನ ಮೂಲಕ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲ ಪ್ರದೇಶಗಳಿಗೆ ಕೋಲಾರದ ಮಾವನ್ನು ರವಾನೆ ಮಾಡಲಾಗುತ್ತಿದೆ. ಆ ಕಾರ್ಯ ಇಂದಿನಿಂದ ಆರಂಭವಾಗಿದೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿರುವ ಕಿಸಾನ್ ವಿಶೇಷ ಸರಕು ಸಾಗಣೆ ರೈಲಿನಲ್ಲಿ ತರಕಾರಿ ಮತ್ತು ಹಣ್ಣನ್ನು ಎಲ್ಲೆಡೆ ಸಾಗಿಸಲಾಗುತ್ತಿದೆ. ಅದೂ ಈಗ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಬಂದಿದೆ. ವಾರಕ್ಕೊಮ್ಮೆ ಸಂಚರಿಸುವ ಈ ರೈಲಿನಲ್ಲಿ ಬೇಡಿಕೆಯ ಆಧಾರದ ಮೇಲೆ ಮಾವಿನ ಹಣ್ಣನ್ನು ತುಂಬಿ ಕಳಿಸಲಾಗುವುದು ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.
ಹಣ್ಣು ಹಾಳಾಗುವುದು ತಪ್ಪುತ್ತದೆ
ಕಿಸಾನ್ ರೈಲು ಮೂಲಕ ಮಾವು ಸಾಗಣೆ ಮಾಡುವುದು ಉತ್ತಮ ಹಾಗೂ ರೈತರಿಗೆ ಲಾಭದಾಯ ಕೂಡ. ಈವರೆಗೆ ದಿಲ್ಲಿ ಸೇರಿದಂತೆ ಉತ್ತರ ಭಾರತದ ನಾನಾ ರಾಜ್ಯಗಳಿಗೆ ಲಾರಿಗಳ ಮೂಲಕವೇ ಮಾವು ಸಾಗಣೆಯಾಗುತ್ತಿತ್ತು. ಮೇಲಾಗಿ, ಮಾವು ಫಸಲು ಬರುವ ಹಂಗಾಮಿನಲ್ಲಿಯೇ ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಮುಂಗಾರು ಮಳೆ ತೀವ್ರವಾಗಿರುತ್ತದೆ. ಹೀಗಾಗಿ ಸಾಗಾಣೆ ಸಮಯ ಹೆಚ್ಚಾಗಿ ಹಣ್ಣು ಹಾಳಾಗುತ್ತಿತ್ತು.
ದೆಹಲಿ ಮಟ್ಟಿಗೆ ಹೇಳುವುದಾದರೆ ರಸ್ತೆ ಮೂಲಕ ಸಾಗಣೆಗೆ ಕೊನೆಪಕ್ಷ 4ರಿಂದ 5 ದಿನ ಬೇಕಾಗುತ್ತಿತ್ತು. ಈಗ ಕಿಸಾನ್ ರೈಲು ಮೂಲಕ ಕೇವಲ 40 ಗಂಟೆಗಳ ಒಳಗಾಗಿ, ಆಂದರೆ, ಸೋಮವಾರ ಬೆಳಗಿನಜಾವಕ್ಕೆಲ್ಲ ಕೋಲಾರದ ಮಾವು ದಿಲ್ಲಿಯ ಮಾರುಕಟ್ಟೆ ಸೇರಲಿದೆ. ಹಣ್ಣು ತಾಜಾ ಇರುತ್ತದೆ ಮಾತ್ರವಲ್ಲದೆ ಕೆಡುವುದೂ ಇಲ್ಲ. ಇದರಿಂದ ರೈತರಿಗೆ ಹೆಚ್ಚು ಲಾಭ ಸಿಗುತ್ತದೆ ಎಂದು ಸಂಸದ ಮುನಿಸ್ವಾಮಿ ಮಾಹಿತಿ ನೀಡಿದರು.
ರೈತ, ಗ್ರಾಹಕನಿಗೆ ಲಾಭದಾಯಕ
ರೈಲು ಮೂಲಕ ಹಣ್ಣು ಸಾಗಿಸಿದರೆ ಸಾಗಣೆ ವೆಚ್ಚವೂ ಕಡಿಮೆ ಆಗುತ್ತದೆ. ರಸ್ತೆಯ ಮೂಲಕ ಸಾಗಣೆ ಮಾಡಿದರೆ ಪ್ರತೀ ಕೆ.ಜಿ. ಮಾವಿಗೆ ಕೊನೆಪಕ್ಷ 6ರಿಂದ 7 ರೂ. ವೆಚ್ಚ ಆಗುತ್ತದೆ. ಅದೇ ಈ ಕಿಸಾನ್ ರೈಲಿನಲ್ಲಿ ಕೇವಲ 2.50 ರೂ.ಗಳಿಂದ 3 ರೂ. ಮಾತ್ರ ಖರ್ಚಾಗುತ್ತದೆ. ಇದರಿಂದ ರೈತನಿಗೂ, ಗ್ರಾಹಕನಿಗೂ ಏಕಕಾಲದಲ್ಲಿ ಲಾಭವಾಗುತ್ತದೆ ಎಂದು ಮುನಿಸ್ವಾಮಿ ಹೇಳಿದರು.
ಒಂದು ವೇಳೆ ಹೆಚ್ಚೆಚ್ಚು ಬೇಡಿಕೆ ಬಂದರೆ, ಇನ್ನೂ ಹೆಚ್ಚಿನ ಕಿಸಾನ್ ರೈಲುಗಳನ್ನು ಓಡಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ನೈರುತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿ.ಆರ್.ಎಂ.) ಅಶೋಕ್ ವರ್ಮ, ವಾಣಿಜ್ಯ ವಿಭಾಗದ ಡಿ.ಆರ್.ಎಂ ಕೃಷ್ಣಾರೆಡ್ಡಿ, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ರೈತರ ಬೇಡಿಕೆಯೂ ಇತ್ತು
ಕೋಲಾರ ಜಿಲ್ಲೆಯ ಶ್ರೀನಿವಾಸಪಪುರ, ಮುಳಬಾಗಿಲು ತಾಲೂಕುಗಳಲ್ಲಿ ವ್ಯಾಪಕವಾಗಿ ಮಾವು ಬೆಳೆಯಲಾಗುತ್ತದೆ. ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಂಥ ಹಿರಿಮೆ ಇದ್ದರೂ ನಾನಾ ಕಾರಣಗಳಿಂದ ರೈತರು ಫಸಲು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ. ಕೀಟಬಾಧೆ, ರೋಗಬಾಧೆಯಿಂದ ಕೈಸುಟ್ಟುಕೊಳ್ಳುತ್ತಿದ್ದಾರೆ. ಉತ್ತಮ ಫಸಲು ಬಂದರೂ ಸೂಕ್ತ ಮಾರುಕಟ್ಟೆಗಾಗಿ ಒದ್ದಾಡುತ್ತಿದ್ದರು ರೈತರು. ಈ ಹಿನ್ನೆಲೆಯಲ್ಲಿ ಕಿಸಾನ್ ರೈಲು ಬೆಳೆಗಾರನಿಗೆ ವರದಾನವಾಗಿದೆ.
ಇಡೀ ಕರ್ನಾಟಕದಲ್ಲಿ ಮಾವು ಬೆಳೆಗೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಮಾವಿಗೆ ಬಹಳ ವಿಶೇಷ ಇದೆ. ಇಲ್ಲಿ ಬಹಳ ರುಚಿಕರವಾದ ಬಂಗಿನಪಲ್ಲಿ, ತೋತಾಪುರಿ, ರಸಪುರಿ, ಅಲ್ಫಾನ್ಸೋ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ಮಲಗೋವಾ, ರಾಜಗಿರಾ, ನೀಲಂ ತಳಿಯ ಮಾವು ಬೆಳೆಯಲಾಗುತ್ತದೆ. ಈಗ ಉತ್ತರ ಭಾರತೀಯರು ಈ ತಳಿಗ ತಾಜಾ ಹಣ್ಣಿನ ರುಚಿಯನ್ನು ಸವಿಯಬಹುದಾಗಿದೆ