21.5 C
Karnataka
Sunday, September 22, 2024

    ಆರ್ಥಿಕ ಪೇಟೆಯಲ್ಲಿ ಐಪಿಒ ಗಳ ತಾಂಡವ

    Must read

    ಷೇರುಪೇಟೆಯಲ್ಲಿ ಹಣವನ್ನು ಬಹಳ ಸರಳವಾಗಿ ಸಂಪಾದಿಸಬಹುದು. ಇಲ್ಲಿ‌ ಷೇರುಗಳನ್ನು ಖರೀದಿಸಿ ದೀರ್ಘಕಾಲೀನ ಹೂಡಿಕೆ ಮಾಡಬಹುದು. ಅಲ್ಪಕಾಲೀನದ ಮಾರ್ಜಿನ್ ಟ್ರೇಡಿಂಗ್‌, ಡೇ ಟ್ರೇಡಿಂಗ್‌, ಬೈಟುಡೇ- ಸೆಲ್‌ ಟುಮಾರೊ ಯೋಜನೆ, ಡೆರಿವೆಟಿವ್ಸ್‌ ನಲ್ಲಿ ಬ್ಯಾಂಕ್‌ ನಿಫ್ಟಿ, ಆಪ್ಷನ್ಸ್‌, ಫ್ಯೂಚರ್ಸ್‌, ಅಲ್ಲದೆ ನಿರಂತರ ಆದಾಯಕ್ಕೆ ಆಕರ್ಷಕ ಬಡ್ಡಿದರದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ ಗಳ ಬಾಂಡ್‌ ಗಳಲ್ಲಿ ವ್ಯವಹರಿಸಬಹುದು. ಸವರಿನ್‌ ಗೋಲ್ಡ್‌ ಬಾಂಡ್‌ ಗಳ ವಹಿವಾಟು ನಡೆಸಬಹುದು. ಇಷ್ಟೆಲ್ಲಾ ಅವಕಾಶಗಳಿದ್ದರೂ ನಮ್ಮ ದೇಶದ ಸುಮಾರು 7 ಕೋಟಿ ಜನರು ಮಾತ್ರ ಭಾಗವಹಿಸುತ್ತಿರುವುದು ನಮ್ಮ ಜನರಲ್ಲಿ ಮೂಡಿರುವ ಭಯ ಮತ್ತು ತಪ್ಪು ಕಲ್ಪನೆಯಾಗಿದೆ.

    ಇನ್ಫೋಸಿಸ್‌ ಷೇರುದಾರರ ವಿಜೃಂಭಣೆ:

    ಬೆಂಗಳೂರು ಇನ್ಫೋಸಿಸ್‌ಕಚೇರಿ ಕಟ್ಟಡ | ಚಿತ್ರ ಕೃಪೆ ವಿಕಿಪಿಡಿಯಾ

    ಸಾಮಾನ್ಯವಾಗಿ ಷೇರುಪೇಟೆಯ ಬಗ್ಗೆ ಮಾತನಾಡುವಾಗ ತೇಲಿಬರುವ ನುಡಿ ಮುತ್ತುಗಳೆಂದರೆ 1994 ರಲ್ಲಿ ಇನ್ಫೋಸಿಸ್‌ ಕಂಪನಿಯ 100 ಷೇರನ್ನು ರೂ.95 ರಂತೆ ಖರೀದಿಸಿದವರ ಹೂಡಿಕೆ ಇಂದು ಸುಮಾರು 1,02,400 ಷೇರುಗಳಾಗಿ ಬೆಳೆದಿದೆ2005 ಅಲ್ಲದೆ ಲಕ್ಷೋಪಲಕ್ಷ ರೂಪಾಯಿಗಳನ್ನು ಡಿವಿಡೆಂಡ್‌ ರೂಪದಲ್ಲಿ ವಿತರಿಸಿದ್ದಾರೆ ಎಂಬುದಾಗಿದೆ.

    ಪ್ರವರ್ತಕರ ಉದ್ದೇಶ:

    ಇದೇ ರೀತಿ ಹೂಡಿಕೆದಾರರ ಬಂಡವಾಳವನ್ನು ಹಲವು ಪಟ್ಟು ಹೆಚ್ಚಿಸಿದ ಅನೇಕ ಕಂಪನಿಗಳಿವೆ. ವಿಪ್ರೊ, ಎಚ್‌ ಡಿ ಎಫ್‌ ಸಿ, ಟಿಸಿಎಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಂತಾದವುಗಳು ಸಹ ಹೂಡಿಕೆದಾರರನ್ನು ಆಕರ್ಷಕ ಕಾರ್ಪೊರೇಟ್‌ ಫಲಗಳನ್ನು ವಿತರಿಸುವ ಮೂಲಕ ಹರ್ಷೋಲ್ಲಾಸಗಳಲ್ಲಿ ತೇಲಿಸಿವೆ. ಅವರ ಬಂಡವಾಳವನ್ನು ಹಲವು ಪಟ್ಟು ಹೆಚ್ಚಸಿವೆ. ಅಂದರೆ ಹೂಡಿಕೆ ಮಾಡಿದವರು ತಮ್ಮ ಹೂಡಿಕೆಯನ್ನು ಹತ್ತಾರು ವರ್ಷಗಳ ಕಾಲ ಮುಂದುವರೆಸಬೇಕು, ಹಾಗಿದ್ದಾಗ ಮಾತ್ರ ಉತ್ತಮ ಫಲ, ಫಲಿತಾಂಶ ಪಡೆಯಲು ಸಾಧ್ಯ ಎಂಬುದು ನಿರ್ವಿವಾದ.

    ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಷೇರು ವಿತರಿಸಿದ ಕಂಪನಿಯ ಮೂಲ ಉದ್ದೇಶ. ವಿತರಣೆಯ ಸಮಯದಲ್ಲಿ ಕಂಪನಿಯ ಪ್ರವರ್ತಕರಿಗೆ ಕೇವಲ ಕಂಪನಿಗ ಅವಶ್ಯವಿರುವ ಸಂಪನ್ಮೂಲ ಸಂಗ್ರಹಿಸಿ, ಆಶ್ವಾಸನೆ ನೀಡಿದ ಅಂಶಗಳನ್ನು ಈಡೇರಿಸುವುದಾಗಿತ್ತು. ಹಾಗಾಗಿ ಐಪಿಒ ವಿತರಣೆ ಬೆಲೆಗಳನ್ನು ಕಡಿಮೆ ಬೆಲೆಯಲ್ಲಿ ನಿಗದಿಪಡಿಸಿದ್ದವು. ಹಾಗಾಗಿ ಷೇರುದಾರರನ್ನು ಸಂತೋಷಪಡಿಸುವ ಮಟ್ಟದಲ್ಲಿ ಕಾರ್ಪೊರೇಟ್‌ ಫಲಗಳನ್ನು ಹಂಚಿವೆ.

    ಎಲ್ಲಾ ಐಪಿಒಗಳು ಅನುಕೂಲಕರವಲ್ಲ. ಕೆಲವು ಉದಾಹರಣೆಗಳು ಇಂತಿವೆ.

    ಜೆಟ್‌ ಏರ್ವೇಸ್‌:2005 ರಲ್ಲಿ ಪ್ರತಿ ಷೇರಿಗೆ ರೂ.1.100 ರಂತೆ ವಿತರಿಸಿದ ಜೆಟ್‌ ಏರ್ವೇಸ್‌ ಷೇರು ರೂ.90 ರ ಸಮೀಪ, Z ಗುಂಪಿನಲ್ಲಿ ವಹಿವಾಟಾಗುತ್ತಿದೆ.

    ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌:2016 ರಲ್ಲಿ ಪ್ರತಿ ಷೇರಿಗೆ ರೂ.775 ರಂತೆ ವಿತರಿಸಿದ ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ನವೆಂಬರ್‌ 2018 ರಲ್ಲಿ ರೂ.1,000 ದಾಟಿ ಇಳಿದ ಮೇಲೆ, ಇತ್ತೀಚೆಗೆ ಕಂಪನಿಯ ಸ್ಟೇಕ್‌ ಸೇಲ್‌ ಆದ ನಂತರ ರೂ.924 ರವರೆಗೂ ಏರಿಕೆ ಕಂಡು ಕೇವಲ 8-10 ದಿನಗಳಲ್ಲಿ ರೂ.700 ರ ಸಮೀಪಕ್ಕೆ ಕುಸಿದು, ಈಗಲೂ ವಿತರಣೆ ಬೆಲೆ ತಲುಪದಾಗಿದೆ.

    ಆಂಜನೇಯ ಲೈಫ್‌ ಕೇರ್‌ ಲಿಮಿಟೆಡ್:2011‌ ರಲ್ಲಿ ಪ್ರತಿ ಷೇರಿಗೆ ರೂ.240 ರಂತೆ ಷೇರು ವಿತರಣೆ ಮಾಡಿ ಷೇರುಪೇಟೆಯಲ್ಲಿ ಲಿಸ್ಟಿಂಗ್‌ ಮಾಡಿಕೊಂಡ ಈ ಕಂಪನಿ ಷೇರು 2013 ರಲ್ಲಿ ರೂ.700 ರ ಗಡಿದಾಟಿತಾದರೂ ಚೇತರಿಸಿಕೊಳ್ಳಲಾಗದೆ ಕುಸಿಯ ತೊಡಗಿತು. ನಂತರ ಕಂಪನಿಯು ತನ್ನ ಹೆಸರನ್ನು ಡಾಕ್ಟರ್‌ ಡಾಟ್ಸನ್ಸ್‌ ಲ್ಯಾಬ್‌ ಎಂದು ಬದಲಿಸಿಕೊಂಡರೂ ಸುಧಾರಣೆಗೊಳ್ಳಲು ವಿಫಲವಾಗಿ, ಡಿಲೀಸ್ಟ್‌ ಆಗಿ ನಿರ್ಗಮಿಸಿದೆ. ಈ ಕಂಪನಿಯ ವಿತರಣೆಯ ಸಮಯದಲ್ಲಿ ಈ ವಿತರಣೆಗೆ ಅತ್ಯುತ್ತಮ ಕಂಪನಿ ರೇಟಿಂಗ್‌ ಸಹ ನೀಡಲಾಗಿತ್ತು.

    ನಾರಾಯಣ ಹೃದಯಾಲಯ ಲಿಮಿಟೆಡ್:‌2015 ರಲ್ಲಿ ಪ್ರತಿ ಷೇರಿಗೆ ರೂ.250 ರಂತೆ ಐಪಿಒ ಮೂಲಕ ವಿತರಣೆ ಮಾಡಿದ ನಂತರ 2018 ರಲ್ಲಿ ರೂ.191, 2019 ರಲ್ಲಿ ರೂ.181 ರವರೆಗೂ ಕುಸಿದ ನಂತರ 2021 ರಲ್ಲಿ ರೂ.566 ರವರೆಗೂ ಏರಿಕೆ ಕಂಡು ರೂ.458 ರ ಸಮೀಪವಿದೆ. ಈ ಕಂಪನಿಯು ಉತ್ತಮ ಬ್ರಾಂಡ್‌ ಹೊಂದಿದ್ದು ಚೇತರಿಕೆ ಕಾಣಲು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದೆ.

    ಹೆಲ್ತ್‌ ಕೇರ್‌ ಗ್ಲೋಬಲ್‌ ಎಂಟರ್‌ ಪ್ರೈಸಸ್‌ :2016 ರಲ್ಲಿ ಪ್ರತಿ ಷೇರಿಗೆ ರೂ.218 ರಂತೆ ಐಪಿಒ ಮೂಲಕ ವಿತರಣೆ ಮಾಡಿ ಸಧ್ಯ ರೂ.193 ರ ಸಮೀಪ ವಹಿವಾಟಾಗುತ್ತಿದೆ.

    • 2011 ರಲ್ಲಿ ಪ್ರತಿ ಷೇರಿಗೆ ರೂ.100 ರಂತೆ ವಿತರಣೆ ಮಾಡಿದ ಬ್ರೂಕ್ಸ್‌ ಲ್ಯಾಬೊರೇಟರೀಸ್‌ ಷೇರು ರೂ.95 ರ ಸಮೀಪ ವಹಿವಾಟಾಗುತ್ತಿದೆ.
    • ಅದೇ ವರ್ಷ ರೂ.150 ರಂತೆ ವಿತರಣೆಯಾದ ತಕ್ಷೀಲ್‌ ಸೊಲುಷನ್ಸ್ ಕಂಪನಿ ಷೇರು ವಹಿವಾಟಿನಿಂದ ಡಿಲೀಸ್ಟ್‌ ಆಗಿದೆ.
    • ಅದೇ ಸಮಯದಲ್ಲಿ ಪ್ರತಿ ಷೇರಿಗೆ ರೂ.60 ರಂತೆ ವಿತರಣೆಯಾದ ತಿಜಾರಿಯಾ ಪೊಲಿಪೈಪ್ಸ್‌ ಷೇರಿನ ಬೆಲೆ ಈಗ ರೂ.9 ರ ಸಮೀಪವಿದೆ.
    • 2010 ರಲ್ಲಿ ಪ್ರತಿ ಷೇರಿಗೆ ರೂ.355 ರಂತೆ ವಿತರಣೆ ಮಾಡಿ ಪೇಟೆ ಪ್ರವೇಶಿಸಿದ ಟೆಕ್‌ ಪ್ರೋ ಸಿಸ್ಟಮ್ಸ್‌ ಷೇರು ಈಗ ಡಿಲೀಸ್ಟ್‌ ಆಗಿ ಷೇರುದಾರರ ಬಂಡವಾಳ ಕರಗಿಸಿದೆ.
    • ಪ್ರತಿ ಷೇರಿಗೆ ರೂ.175 ರಂತೆ ವಿತರಣೆ ಮಾಡಿದ ಎರೊಸ್‌ ಇಂಟರ್‌ ನ್ಯಾಶನಲ್‌ ಮೀಡಿಯಾ ಕಂಪನಿ ಷೇರಿನ ಬೆಲೆ ಪ್ರಸ್ತುತ ರೂ.29 ರಲ್ಲಿದೆ.

    ಅಂದರೆ ಯಾವುದಾದರೂ ಒಂದು ವಿಶ್ಲೇಷಣೆ ಬಂದಾಗ ಕೇವಲ ಆ ಅಂಶಗಳಿಗೆ ಅಂಟಿಕೊಂಡು ನಿರ್ಧರಿಸುವ ಮುನ್ನ ಅದರ ಹಿಂದೆ ಅಡಕವಾಗಿರುವ ಅಪಾಯ ಮತ್ತು ಅನುಕೂಲಗಳನ್ನೂ ಸಹ ಪರಿಶೀಲಿಸಿ, ತೂಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳವುದು ಬಂಡವಾಳ ಸುರಕ್ಷತೆಗೆ ಅತಿ ಮುಖ್ಯ.

    • ವಿತರಣೆಯಲ್ಲಿ ಪ್ರವರ್ತಕರು ಹೊಂದಿರುವ ಭಾಗಿತ್ವದ ಬೆಲೆಯನ್ನು ಸಹ ಪ್ರಕಟಿಸುವರು. ಉದಾಹರಣೆಗೆ
    1. ಸೋನಾ ಬಿ ಎಲ್‌ ಡಬ್ಲು ಪ್ರಿಸಿಷನ್‌ ಫೋರ್ಜಿಂಗ್ಸ್‌ ಲಿ ಕಂಪನಿಯ ವಿತರಣೆ ಬೆಲೆ ಬ್ಯಾಂಡ್‌ ರೂ.285 ರಿಂದ ರೂ.291. ಇಲ್ಲಿ ಕಂಪನಿಯ ಪ್ರವರ್ತಕರಾದ ಸಿಂಗಪೂರ್ VIIಟಾಪ್ಕೊ III PTE ಲಿ 52‌,500 ದಶಲಕ್ಷ ಷೇರುಗಳನ್ನು ಮಾರಾಟವು ಸೇರಿದ್ದು ಹೊಸದಾಗಿ ವಿತರಣೆಯಾಗುತ್ತಿರುವುದು ಮಾತ್ರ 3,000 ದಶಲಕ್ಷ ಷೇರುಗಳು ಮಾತ್ರ. ಮತ್ತೊಂದು ಪ್ರಮುಖ ಅಂಶ ಎಂದರೆ ಪ್ರವರ್ತಕರ ಭಾಗಿತ್ವದ ಷೇರಿನ ಖರೀದಿ ಬೆಲೆ ಪ್ರತಿ ಷೇರಿನ ಬೆಲೆ(Cost of acquisition) ರೂ.32.34 ಮಾತ್ರ. ಅಂದರೆ ರೂ.32.34 ರ ಷೇರನ್ನು ಪ್ರವರ್ತಕರು ರೂ.291 ರಲ್ಲಿ ಮಾರಾಟಮಾಡುತ್ತಿರುವ ಪ್ರಕ್ರಿಯೆಯಲ್ಲಿ ಸಂಪಾದನೆಯಾಗುತ್ತಿರುವುದು ಯಾರಿಗೆ ಎಂದು ತಿಳಿಯುತ್ತದೆ. ಈ ಬೆಲೆಯಲ್ಲಿ ಖರೀದಿ ಮಾಡಿದಲ್ಲಿ ಲಾಭ ಗಳಿಕೆ ಸಾಧ್ಯವೇ ಎಂಬ ಅಂಶವನ್ನು ವಿಶ್ಲೇಷಿಸಿಕೊಂಡು ನಿರ್ಧರಿಸಬೇಕು.
    2. ಕೃಷ್ಣ ಇನ್ಸ್‌ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಲಿ. ಕಂಪನಿಯು ರೂ.815 ರಿಂದ ರೂ.825 ರ ಬ್ಯಾಂಡ್‌ ನಲ್ಲಿ ವಿತರಿಸಿದೆ. ಇದರಲ್ಲಿ ಪ್ರವರ್ತಕರಾದ ಡಾ.ಭಾಸ್ಕರ್‌ ರಾವ್‌ ರವರಾದಿಯಾಗಿ ಇತರೆ ಪ್ರವರ್ತಕರೂ ಸೇರಿ 60 ಲಕ್ಷ ಷೇರುಗಳನ್ನು ಮಾರಾಟಮಾಡುತ್ತಿದ್ದು, ಇತರೆ ಷೇರುದಾರರೂ ಸೇರಿ ಒಟ್ಟು 2.35 ಕೋಟಿ ಷೇರನ್ನು ಆಫರ್‌ ಫಾರ್‌ ಸೇಲ್‌ ಮಾಡುತ್ತಿದ್ದು ಹೊಸದಾಗಿ ಕೇವಲ ರೂ.200 ಕೋಟಿ ಮೌಲ್ಯದ್ದಾಗಿದೆ. 200 ಕೋಟಿ ರೂಪಾಯಿ ಅಂದರೆ ಸುಮಾರು 25 ಲಕ್ಷ ಷೇರುಗಳು ಮಾತ್ರ. ಪ್ರವರ್ತಕರು / ಷೇರುದಾರರು ಪಡೆದ ಷೇರಿನ ಬೆಲೆ (Cost of acquisition) ರೂ.5.15 ರಿಂದ ರೂ.360 ರವರೆಗೂ ಇದ್ದು, ಈ ಬೆಲೆಯ ಷೇರನ್ನು ರೂ.825 ರಲ್ಲಿ ವಿತರಿಸಿದಲ್ಲಿ ಆರಂಭದಲ್ಲಿಯೇ ಲಾಭ ಯಾರಿಗೆ ಮತ್ತು ಲೀಸ್ಟಿಂಗ್‌ ಆದ ಮೇಲೆ ದೊರೆಯಬಹುದಾದ ಬೆಲೆ ಏನು? ಎಂಬುದನ್ನು ತುಲನಾತ್ಮಕವಾಗಿ ಪರಿಶೀಲಿಸಿ ನಿರ್ಧರಿಸಬೇಕಲ್ಲವೇ?
    3. ಡೋಡ್ಲ ಡೈರಿ ಲಿ ಕಂಪನಿಯು ವಿತರಣೆ ಮಾಡಿದ ಬ್ಯಾಂಡ್‌ ರೂ.421 ರಿಂದ ರೂ.428. ಪ್ರವರ್ತಕರು / ಷೇರುದಾರರು 1.09 ಕೋಟಿ ಷೇರನ್ನು ಮಾರಾಟಮಾಡುತ್ತಿದ್ದರೆ ಹೊಸದಾಗಿ ವಿತರಣೆಯಾಗುತ್ತಿರುವುದು ಮಾತ್ರ ಸುಮಾರು 11.7 ಲಕ್ಷ ಷೇರು ಮಾತ್ರ. ಪ್ರವರ್ತಕರು ಮತ್ತು ಷೇರುದಾರರು ಹೊಂದಿರುವ ಷೇರಿನ ಬೆಲೆ (Cost of acquisition) ರೂ.0.37 ರಿಂದ ರೂ.213.39 ಮಾತ್ರ.

    ಈ ಮಟ್ಟದ ಪ್ರೀಮಿಯಂ ನಲ್ಲಿ ಷೇರು ವಿತರಣೆಯಾದಲ್ಲಿ ಷೇರು ಅಲ್ಲಾಟ್‌ ಅದವರು ಯಾವ ರೀತಿ ಲಾಭ ಗಳಿಸಬಹುದು ಎಂಬುದನ್ನು ವಾಸ್ತವವಾಗಿ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಲ್ಲಿ ಷೇರುಗಳು ಲಿಸ್ಟಿಂಗ್‌ ಆದಾಗ ಮಾತ್ರ ಅರಿವಾಗುವುದು. ಲಿಸ್ಟಿಂಗ್‌ ದಿನದ ಪೇಟೆಯ ವಾತಾವರಣವೂ ಸಹ ಮುಖ್ಯ ಕಾರಣವಾಗಿರುತ್ತದೆ.

    ಐಪಿಒ ಗಳಲ್ಲಿ ಷೇರುದಾರರು ಮಾರಾಟಮಾಡುವ ಆಫರ್‌ ಫಾರ್‌ ಸೇಲ್‌ ಅಂದರೆ ಹೆಚ್ಚಿನ ಪ್ರಕರಣಗಳಲ್ಲಿ ಅದು ವೆಂಚರ್‌ ಕ್ಯಾಪಿಟಲ್‌ ಅಥವಾ ಪ್ರೈವೇಟ್‌ ಈಕ್ವಿಟಿ ಇನ್ವೆಸ್ಟರ್‌ ಸಂಸ್ಥೆಗಳಾಗಿರುತ್ತವೆ. ಈ ಸಂಸ್ಥೆಗಳು ಕಂಪನಿಗಳು ತಮ್ಮ ಕಾರ್ಯ ನಿರ್ವಹಿಸುತ್ತಿರುವಾಗ ಅಥವಾ ಸ್ಟಾರ್ಟ್‌ ಅಪ್‌ ಸಂದರ್ಭದಲ್ಲಿ ಅವುಗಳಿಗೆ ಅವಶ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಒದಗಿಸಿ ಬೆಂಬಲಿಸಿರುತ್ತಾರೆ. ಐಪಿಒ ಸಂದರ್ಭದಲ್ಲಿ ಆ ಷೇರು ಮಾರಾಟಮಾಡಿ ತಮ್ಮ ಹಣವನ್ನು ಹಿಂಪಡೆಯುತ್ತವೆ.

    ಮತ್ತೊಂದು ಪ್ರಮುಖವಾದ ಅಂಶವೆಂದರೆ, ಕಂಪನಿಗಳು ಐಪಿಒ ಗಳಿಗೂ ಮುಂಚೆ ಅನಧಿಕೃತವಾದ ಅಂದರೆ ಲಿಸ್ಟಿಂಗ್‌ ಆಗದೆ ಇರುವ ಕಂಪನಿಗಳ ಷೇರಿನ ದರಗಳನ್ನು ಬಿಂಬಿಸುವ ʼ ಗ್ರೇ ಮಾರ್ಕೆಟ್‌ʼ ವೇದಿಕೆ. ಇದಕ್ಕೆ ಯಾವುದೇ ನಿಯಮಗಳು ಅನ್ವಯವಾಗದ ವೇದಿಕೆ. ಆದರೆ ಇತ್ತೀಚೆಗೆ ಗ್ರೇ ಮಾರ್ಕೆಟ್‌ ದರಗಳಿಗೆ ಹೆಚ್ಚು ಹೆಚ್ಚು ಪ್ರಚಾರ ನೀಡಿ ಸಂಬಂಧಿತ ಐಪಿಒ ಗಳಿಗೆ ಅರ್ಜಿ ಸಲ್ಲಿಸಲು ಪ್ರೇರೇಪಿಸಲಾಗುತ್ತಿದೆ. ಇದಕ್ಕೆ ಯಾವ ರೀತಿಯ ಲಂಗು ಲಗಾಮು ಇಲ್ಲದೆ ಇದ್ದು, ಇಲ್ಲಿ ವ್ಯವಹರಿಸಿದಲ್ಲಿ ಉಂಟಾಗುವ ತಗಾದೆಗಳಿಗೆ ಪರಿಹಾರವೇ ಇರದೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕೇವಲ ಪ್ರೇರೇಪಿಸುವ ಧ್ಯೇಯದಿಂದ ಹೊರಬರುವ ಪ್ರೀಮಿಯಂ ದರಗಳಿಗೆ ಹೆಚ್ಚಿನ ಗಮನ ನೀಡುವುದು ಸರಿಯಲ್ಲ.

    ಕಮಿಷನ್‌ ಇಲ್ಲದೆ ವಿಮೆ ಮಾಡಿ, ಬ್ರೋಕರೇಜ್‌ ಇಲ್ಲದೆ ಷೇರು ವ್ಯವಹಾರ ಮಾಡಿ, ಲಾಭ ಗಳಿಸಿದಲ್ಲಿ ಮಾತ್ರ ಬ್ರೋಕರೇಜ್‌ ನೀಡಿ, ಮುಂತಾದವುಗಳಿಂದ ದೂರವಿದ್ದರೆ ಮಾತ್ರ ಸುರಕ್ಷತೆ. ಕಮೀಷನ್‌ ಬಗ್ಗೆ ಹೆಚ್ಚು ಯೋಚಿಸದೆ ಆ ವಿಮಾ ಯೋಜನೆಯಲ್ಲಿರುವ ಅನುಕೂಲಕರ ಅಂಶಗಳನ್ನು ವಿಮರ್ಶಿಸಿ ನಿರ್ಧರಿಸಬೇಕು. ಬ್ರೋಕರೇಜ್‌ ನೀಡುವುದು ಅವರಿಂದ ಪಡೆಯಬಹುದಾದ ಸೇವೆಗೆ ನೀಡುವ ಶುಲ್ಕವೇ ಹೊರತು ಅದು ಹೊರೆಯಾಗುವುದಿಲ್ಲ. ಅಲ್ಲದೆ ಬ್ರೋಕರೇಜ್‌ / ಕಮೀಷನ್‌ ಗಳು ನಮ್ಮ ಬೇಕಾಬಿಟ್ಟಿ ನಿರ್ಧಾರಗಳಿಗೆ ಬ್ರೆಕ್‌ ಹಾಕುತ್ತದೆ. ಬಂಡವಾಳ ಸುರಕ್ಷತೆಗೆ ಪೂರಕವಾಗಿರುತ್ತದೆ. ಹೆಚ್ಚಿನ ಅನುಕೂಲಗಳು ದೊರೆಯಬೇಕಾದರೆ, ವೃತ್ತಿಪರ ಶುಲ್ಕ ನೀಡುವುದು ತೃಪ್ತಿಕರವಾಗಿರುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಐಪಿಒಗಳ ಬಗ್ಗೆ ಬರಬಹುದಾದ ವಿಶ್ಲೇಷಣೆಗಳನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕಾಗಿರುವುದು ಸೂಕ್ತ. ಕೇವಲ ವರ್ಣರಂಜಿತ ವಿವರಣೆಗಳಿಗೆ ಸ್ಪಂದಿಸುವುದು ಅಪಾಯಕ್ಕೆ ಅಹ್ವಾನ.ಅಂದು ಜನ ಸಾಮಾನ್ಯರ ಹೂಡಿಕೆ ಬಗ್ಗೆ ಅತಿಯಾದ ಕಾಳಜಿ ಇತ್ತು, ಆದರೆ ಈಗ ಪ್ರವರ್ತಕರ ಮತ್ತು ಫಂಡಿಂಗ್ ಷೇರುದಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಹೂಡಿಕೆದಾರರಾಗಿ ನಮ್ಮ ಸುರಕ್ಷಾ ಚಕ್ರವನ್ನು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    3 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!