ಕೋವಿಡ್-19 ಸಾಂಕ್ರಾಮಿಕದಿಂದ ಇಡೀ ವಿಶ್ವವು ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಅದರ ಮಹತ್ವವನ್ನು ಎತ್ತಿ ತೋರಿದೆ. ಇಮ್ಯುನಿಟಿ ಹೆಚ್ಚಿಸಲು ಎಷ್ಟೇ ಔಷಧಿ ಇರಲಿ, ಬಹುತೇಕರು ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡಿ ಆರೋಗ್ಯ ಕಾಪಾಡಿಕೊಂಡ ಉದಾಹರಣೆಗಳಿವೆ.
ಶ್ವಾಸದ ಶಕ್ತಿಯನ್ನು ಪರೀಕ್ಷೆಗೆ ಒಡ್ಡಿದಂತಹ ರೋಗವಿದು. ಯೋಗವು ಶ್ವಾಸದ ಶಕ್ತಿಯನ್ನೇ ಉತ್ತಮಪಡಿಸುವಂತಹುದು. ದೇಹವನ್ನು ಸಮಗ್ರವಾಗಿ ಸದೃಢಗೊಳಿಸುವ ಹಾಗೂ ಅದಕ್ಕೆ ಪೂರಕವಾಗಿ ಶ್ವಾಸದ, ಮನಸ್ಸಿನ ಶಕ್ತಿಯನ್ನು ಅಪಾರವಾಗಿ ಹೆಚ್ಚಿಸುವ ಯೋಗ ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಾಗಿದೆ.
ಪತಂಜಲಿ ಮಹರ್ಷಿ ಕ್ರಿ.ಪೂ.200ರಲ್ಲಿ ಯೋಗಸೂತ್ರಗಳನ್ನು ರಚಿಸಿದರು. ಇಂದು ಅದು ಅಸಂಖ್ಯ ಪ್ರಭಾವಗಳಿಗೆ ಒಳಗೊಂಡು ವಿವಿಧಾರ್ಥಗಳನ್ನು ಪಡೆದುಕೊಂಡು ಬಳಕೆಯಲ್ಲಿದೆ. ಆದಾಗ್ಯೂ ಪ್ರಸ್ತುತ ಕಾಲಘಟ್ಟದಲ್ಲಿ ಯೋಗದ ಮಹತ್ವವನ್ನು ಜಗತ್ತಿಗೆ ಸಾರಿ ಕೋಟ್ಯಂತರ ಮಂದಿಗೆ ಯೋಗವನ್ನು ಜೀವನ ವಿಧಾನವನ್ನಾಗಿಸಲು ಶ್ರಮಿಸಿದ ಹಲವರಿದ್ದಾರೆ.
ಕರ್ನಾಟಕದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಬಿ.ಕೆ.ಎಸ್.ಅಯ್ಯಂಗಾರ್ಯರು ತಮ್ಮದೇ ಆದ ರೀತಿಯಲ್ಲಿ ಯೋಗ ಪ್ರಚಾರಕ್ಕೆ ಜೀವನ ಮುಡಿಪಾಗಿಸಿದರು. ಅಯ್ಯಂಗಾರ್ಯರು ವಿಶ್ವದಾದ್ಯಂತ ಯೋಗದ ಮಹತ್ವ ಸಾರಿ ಹೇಳಿದರು. ಅದಕ್ಕಾಗಿ ಅವರು ರಚಿಸಿದ “ಯೋಗದೀಪಿಕಾ” ಇಂದು ವಿಶ್ವದಲ್ಲಿ ಅಸಂಖ್ಯ ಯೋಗಾಭ್ಯಾಸಿಗಳಿಗೆ ಮಾರ್ಗದರ್ಶನ ನೀಡುವ ಮಹತ್ವದ ಗ್ರಂಥವಾಗಿದೆ.
ಯೋಗವೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂದು ಪತಂಜಲಿಯ ಯೋಗಸೂತ್ರಗಳು ಹೇಳುತ್ತವೆ. ಇವೆಲ್ಲವೂ ಅಂತಿಮವಾಗಿ ಪರಮಾತ್ಮನನ್ನು ತನ್ನಲ್ಲೇ ಕಂಡುಕೊಳ್ಳುವ ಸಾಧನಗಳಷ್ಟೇ ಎಂದು ಪತಂಜಲಿಯು ವಿವರಿಸುತ್ತಾನೆ. ಇವುಗಳಲ್ಲಿ ಶ್ರೀಸಾಮಾನ್ಯರಲ್ಲಿ ಅತ್ಯಂತ ಜನಪ್ರಿಯವಾಗಿರುವುದು ಆಸನ ಮತ್ತು ಪ್ರಾಣಾಯಾಮ.
ಯೋಗವೆನ್ನುವುದು ಒಂದು ಜೀವನಶೈಲಿ, ಒಂದು ಆಧ್ಯಾತ್ಮಿಕ ಸ್ಥಿತಿ, ತನ್ನಲ್ಲೇ ಪರಮಾತ್ಮನನ್ನು ಕಂಡುಕೊಳ್ಳುವ ಉನ್ನತ ಸ್ಥಿತಿ. ಆದರೆ ಅದೇನೇ ಇರಲಿ, ಇಂದು ಯೋಗವು ಒಂದು ಶರೀರದ ಆರೋಗ್ಯ ಕಾಪಾಡುವ ಸಾಧನವಾಗಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿರುವುದು ಅಷ್ಟೇ ಸತ್ಯ.
ಯಾವುದೇ ವಯಸ್ಸಿರಲಿ, ಯಾವುದೇ ಸ್ಥಳದಲ್ಲಿರಲಿ ಯೋಗಾಭ್ಯಾಸ ಮಾಡಿ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಬಲ ಅಸ್ತ್ರವಾಗಿದೆ. ಪ್ರಸ್ತುತ ಸಾಂಕ್ರಾಮಿಕದ ಸಂದರ್ಭದಲ್ಲಿ ಯೋಗಾಭ್ಯಾಸದ ಮಹತ್ವವನ್ನು ಇಡೀ ವಿಶ್ವವು ಪುನರುಚ್ಛರಿಸುತ್ತಿರುವುದು ಶತಮಾನಗಳಿಂದ ನಡೆದುಬಂದ ಅದರ ಶಕ್ತಿಗೆ ಸಾಕ್ಷಿಯಾಗಿದೆ.
ಹಲವು ಕಾಯಿಲೆಗಳಿದ್ದು ಯೋಗಾಭ್ಯಾಸದಿಂದ ಅವುಗಳಿಂದ ಮುಕ್ತರಾದವರನ್ನು ನಾವು ಕಂಡಿದ್ದೇವೆ. ರೋಗಕ್ಕೆ ರೋಗ ಬಂದ ಜಾಗದಲ್ಲಿ ಚಿಕಿತ್ಸೆ ನೀಡಬೇಕು ಎನ್ನುವುದು ಆಧುನಿಕ ವೈದ್ಯ ಪದ್ಧತಿಯ ವಿಧಾನ. ಆದರೆ ದೇಹ, ಮನಸ್ಸು ಹಾಗೂ ಶ್ವಾಸಗಳ ಸಮೀಕರಣದಿಂದ ರೋಗವನ್ನು ದೂರವಿರಿಸಬೇಕು ಎನ್ನುವುದು ಯೋಗದ ಮೂಲತತ್ವ.
ಬಿ.ಕೆ.ಎಸ್.ಅಯ್ಯಂಗಾರ್ಯರು ತಮ್ಮ ಕೃತಿಯಲ್ಲಿ ದೇಹದ ಪ್ರತಿಯೊಂದು ಕಾಯಿಲೆಯನ್ನು ನಿಯಂತ್ರಿಸಲು ವಿವಿಧ ಯೋಗಾಭ್ಯಾಸಗಳನ್ನು ಸಲಹೆ ಮಾಡಿದ್ದಾರೆ. ಕೆಲವು ಕಾಯಿಲೆಗಳನ್ನು ಯೋಗಾಭ್ಯಾಸದಿಂದ ಶಾಶ್ವತವಾಗಿ ದೂರ ಮಾಡಲು ಸಾಧ್ಯ. ಆದರೆ ಸರಿಯಾದ ಗುರುವಿನ ಮಾರ್ಗದರ್ಶನವಿಲ್ಲದೆ ಯೋಗಾಭ್ಯಾಸ ಮಾಡುವುದು ಒಳ್ಳೆಯದಲ್ಲ. ದೇಹವನ್ನು ವಿವಿಧ ಭಂಗಿಗಳಿಗೆ ಬಾಗಿಸುವ ಆಸನಗಳು, ಪ್ರಾಣಾಯಾಮಗಳನ್ನು ಮಾರ್ಗದರ್ಶನದಲ್ಲಿ ನಿರ್ವಹಿಸುವುದು ಅತ್ಯಗತ್ಯ.
ಯೋಗಾಭ್ಯಾಸದ ಸ್ಪರ್ಧೆಗಳು ನಡೆಯುತ್ತಿರುವುದರಿಂದ ಖ್ಯಾತಿ ಪಡೆಯಲು ಒಂದು ಮಾರ್ಗವೂ ಆಗಿದೆ. ಯೋಗ ಸ್ಪರ್ಧೆಗಳ ವಿಜೇತರನ್ನು ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಂತೆ ಕಾಣಲಾಗುತ್ತಿದೆ. ಹೀಗಾಗಿ ಇದು ಇಂದು ಒಂದು ಕ್ರೀಡೆಯೂ ಹೌದು.
ಒಟ್ಟಿನಲ್ಲಿ ಈ ವಿಶ್ವ ಯೋಗ ದಿನದಂದು ನೀವು ಯೋಗಾಭ್ಯಾಸ ಮಾಡುತ್ತಿದ್ದಲ್ಲಿ ಮತ್ತಷ್ಟು ಆಳವಾಗಿ ವಿಸ್ತರಿಸಿ ಅಥವಾ ಯೋಗಾಭ್ಯಾಸಿಗಳಲ್ಲದೇ ಇದ್ದಲ್ಲಿ ಹೊಸದಾಗಿ ಯೋಗಾಭ್ಯಾಸ ಪ್ರಾರಂಭಿಸಿ. ನಿಮ್ಮ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಿ.
ವಿಶ್ವ ಯೋಗದ ದಿನದ ಶುಭಾಶಯಗಳು!
ಚಿತ್ರ: ಯೋಗಪಟು ದೊಡ್ಡಬಳ್ಳಾಪುರದ ಹಲವು ಪುರಸ್ಕಾರಗಳನ್ನು ಪಡೆದಿರುವ ಯೋಗಪಟು ಡಿ.ಸಿ. ಬಾಬು