ಕೋವಿಡ್ ಲಸಿಕೆ ಕುರಿತು ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬಂದ ಮೊದಲ ದಿನ ನಿನ್ನೆ ಸುಮಾರು 81 ಲಕ್ಷ ಲಸಿಕೆ ಡೋಸ್ ಗಳನ್ನು ಹಾಕಿರುವುದು ಭಾರತದ ಲಸಿಕೆ ಹಾಕುವ ಸಾಮರ್ಥ್ಯದ ಸಂಕೇತವಾಗಿದೆ ಎಂದು ನೀತಿ ಆಯೋಗದ [ಆರೋಗ್ಯ] ಸದಸ್ಯ ಡಾ. ವಿ.ಕೆ. ಪಾಲ್ ಹೇಳಿದ್ದಾರೆ. ಅವರು ಡಿಡಿ ನ್ಯೂಸ್ ಜೊತೆ ಮಾತನಾಡಿದರು.
ಮೊದಲ ದಿನದ ಲಸಿಕಾ ಅಭಿಯಾನದಲ್ಲಿ ಹಾಕಿರುವ ಸಂಖ್ಯೆಯನ್ನು ಗಮನಿಸಿದರೆ ಬರುವ ದಿನಗಳು ಮತ್ತು ವಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕುವ ಸಾಮರ್ಥ್ಯವನ್ನು ಇದು ಪ್ರದರ್ಶಿಸುತ್ತವೆ. “ ಇದೆಲ್ಲವೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಮತ್ತು ಸಮನ್ವಯತೆಯಿಂದ ಸಾಧ್ಯವಾಗಲಿದ್ದು, ಈ ಕಾರ್ಯವನ್ನು ಅಭಿಯಾನದ ಮಾದರಿಯಲ್ಲಿ ಕೊಂಡೊಯ್ಯಬೇಕಾಗುತ್ತದೆ “ ಎಂದು ಡಾ. ಪಾಲ್ ಹೇಳಿದರು.
ಮೂರನೇ ಅಲೆ ಸಂಭವವಿದೆಯೋ ಇಲ್ಲವೋ ಅದು ನಮ್ಮ ಕೈಯಲ್ಲಿದೆ
ಹೆಚ್ಚಿನ ಸಂಖ್ಯೆಯ ಜನತೆ ಲಸಿಕೆ ಹಾಕಿಸಿಕೊಂಡರೆ ಮತ್ತು ಕೋವಿಡ್ ನ ಸೂಕ್ತ ವರ್ತನೆಯನ್ನು ಅನುಸರಿಸಿದರೆ ಮೂರನೇ ಅಲೆಯನ್ನು ತಡೆಯಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಡಾ. ಪಾಲ್ ಹೇಳಿದರು.
“ಕೋವಿಡ್ ಸೂಕ್ತ ವರ್ತನೆಯನ್ನು ನಾವು ಅನುಸರಿಸಿದರೆ ಏಕೆ ಮೂರನೇ ಅಲೆಯಾದರೂ ಏಕೆ ಬರುತ್ತದೆ ? ಹಲವಾರು ದೇಶಗಳಿಗೆ ಎರಡನೇ ಅಲೆಯೂ ಬರಲಿಲ್ಲ. ನಾವು ಕೋವಿಡ್ ಸೂಕ್ತ ವರ್ತನೆ ಪರಿಪಾಲಿಸಿದರೆ ಈ ಪರಿಸ್ಥಿಯಿಂದ ಮುಂದೆ ಸಾಗಬಹುದು” ಎಂದರು.
ಬೇಗ ಸಾಮಾನ್ಯ ಸ್ಥಿತಿಗೆ ಮರಳಲು ತ್ವರಿತ ಲಸಿಕಾ ಆಂದೋಲನವೊಂದೆ ದಾರಿ
ಭಾರತದಲ್ಲಿ ಆರ್ಥಿಕತೆಯನ್ನು ಮುಕ್ತಗೊಳಿಸಲು ಮತ್ತು ಜನ ಜೀಲನ ಸಾಮಾನ್ಯವಾಗಸು ಮೊದಲು ಲಸಿಕೆ ಹಾಕಿಸಿಕೊಳ್ಳುವುದು ಪ್ರಮುಖವಾಗಿದೆ.
.ನಾವು ದೈನಂದಿನ ಕೆಲಸಕ್ಕೆ ತೆರಳಲು, ನಮ್ಮ ಸಾಮಾಜಿಕ ಜೀವನವನ್ನು ನಿರ್ವಹಿಸಲು, ಶಾಲೆಗಳನ್ನು ತೆರೆಯಲು, ವ್ಯಾಪಾರ, ಆರ್ಥಿಕ ಚಟುವಟಿಕೆ ಬಗ್ಗೆ ಗಮನಕೊಡಲು : ಇದೆಲ್ಲವನ್ನೂ ಮಾಡಲು ತ್ವರಿತ ವೇಗದಲ್ಲಿ ಲಸಿಕೆ ಹಾಕಿಸಿಕೊಂಡಾಗ ಮಾತ್ರ ಸಾಧ್ಯ.
.ಲಸಿಕೆಗಳು ಜೀವಗಳನ್ನು ರಕ್ಷಿಸುತ್ತವೆ, ಲಸಿಕೆ ಪಡೆಯಲು ಈಗ ಉತ್ತಮ ಸಮಯ.
ನಮ್ಮ ಲಸಿಕೆಗಳು ಸುರಕ್ಷಿತವಲ್ಲ ಎಂದು ಯೋಚಿಸುವುದು ನಾವು ಮಾಡುವ ದೊಡ್ಡ ತಪ್ಪು ಎಂದು ಡಾ. ಪಾಲ್ ಹೇಳಿದರು. “ ಜಗತ್ತಿನ ಎಲ್ಲಾ ಲಸಿಕೆಗಳನ್ನು ನಮ್ಮ ದೇಶದಲ್ಲಿನ ಲಸಿಕೆಗಳಂತೆಯೇ ತುರ್ತು ಬಳಕೆಗಾಗಿನ ಅಧಿಕಾರವನ್ನು ಅನುಮೋದಿಸಲಾಗಿದೆ. ಸಮಾಜದ ವಿವಿಧ ವರ್ಗಗಳ ಜನತೆ ಇವುಗಳನ್ನು ಪಡೆದಿದ್ದಾರೆ. ಎರಡನೇ ಅಲೆಯನ್ನು ಹಿಮ್ಮೆಟ್ಟಿಸಲಾಗಿದೆ ಮತ್ತು ಕೋವಿಡ್ – 19 ಲಸಿಕೆ ಪಡೆಯಲು ಇದು ಉತ್ತಮ ಸಮಯ” ಎಂದು ಹೇಳಿದರು.
ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕಿದ ಪರಿಣಾಮ ಎರಡನೇ ಅಲೆಯಿಂದ ಅವರನ್ನು ರಕ್ಷಿಸಲಾಗಿದೆ. “ಕೇವಲ ಕೆಲವೇ ಕೆಲವು ಆರೋಗ್ಯ ಕಾರ್ಯಕರ್ತರು ಮಾತ್ರ ಸೋಂಕಿಗೆ ಒಳಗಾಗಿದ್ದಾರೆ. ಇಲ್ಲವಾಗಿದ್ದಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ನಮ್ಮ ಆಸ್ಪತ್ರೆ ವ್ಯವಸ್ಥೆ ತಾನಾಗಿಯೇ ಕುಸಿದು ಬೀಳುತ್ತಿತ್ತು. ಹೀಗಾಗಿಯೇ ಲಸಿಕೆಯಿಂದ ಜನರನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯವಾಗುತ್ತಿದೆ ಎಂಬುದನ್ನು ದಯವಿಟ್ಟು ಗಮನಿಸಿ” ಎಂದರು.
ಭಾರತಕ್ಕೆ ಪ್ರತಿದಿನ 1.25 ಕೋಟಿ ಡೋಸ್ ಲಸಿಕೆ ಹಾಕುವ ಸಾಮರ್ಥ್ಯವಿದೆ
ಭಾರತದಲ್ಲಿ ಲಸಿಕಾ ಕಾರ್ಯಕ್ರಮ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹೆಗಾರರ ಗುಂಪಿನ ಅಧ‍್ಯಕ್ಷ [ಎನ್.ಟಿ.ಎ.ಜಿ.ಐ], ಡಾ. ಎನ್.ಕೆ. ಅರೋರ ಸಹ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅವರು ಮಾತನಾಡಿ, ಇಂದು ನೀಡಿದ ಲಸಿಕಾ ಡೋಸ್ ಗಳು ಅತಿ ದೊಡ್ಡ ಸಾಧನೆ. “ ಇಂದು ನಾವೇನು ಮಾಡಿದ್ದೇವೆಯೋ ಅದು ಅತಿ ದೊಡ್ಡ ಸಾಧನೆ, ಪ್ರತಿದಿನ ಒಂದು ಕೋಟಿ ಜನರಿಗೆ ಲಸಿಕೆ ಹಾಕುವುದು ನಮ್ಮ ಗುರಿ. ನಮಗೆ ಪ್ರತಿದಿನ ಸುಲಭವಾಗಿ 1.25 ಕೋಟಿ ಡೋಸ್ ಲಸಿಕೆ ಹಾಕುವ ಸಾಮರ್ಥ್ಯವಿದೆ” ಎಂದರು.
ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬಂದ ಮೊದಲ ದಿನ ನಾವು ಇದನ್ನು ಸಾಧಿಸಿದ್ದೇವೆ ಮತ್ತು ಖಾಸಗಿ ವಲಯದಿಂದ ಉತ್ತಮ ಬೆಂಬಲ ದೊರೆತಲ್ಲಿ ವಿಶೇಷವಾಗಿ ಈ ಗುರಿ ಸಾಧಿಸಬಹುದು ಎಂದು ಡಾ. ಅರೋರ ಹೇಳಿದರು.
ಈ ಹಿಂದೆಯೂ ಭಾರತ ಹೇಗೆ ಯಶಸ್ವಿಯಾಗಿದೆ ಎನ್ನುವ ಕುರಿತು ಮಾತನಾಡಿದ ಡಾ. ಅರೋರ, “ಇದು ಹಿಂದೆಂದೂ ಕಂಡಿದ್ದೇನು ಅಲ್ಲ. ನಾವು ಪೊಲೀಯೋ ಲಸಿಕೆಯನ್ನು 17 ಕೋಟಿ ಜನರಿಗೆ ಹಾಕಿದ್ದೇವೆ. ಭಾರತ ಏನಾದರೂ ಸಾಧಿಸಬೇಕು ಎಂದು ಬಯಸಿದರೆ ಅದನ್ನು ಸಾಧಿಸಿಯೇ ತೀರುತ್ತದೆ.” ಎಂದರು.
ಸಾರ್ವಜನಿಕ ಮತ್ತು ಖಾಸಗಿ ವಲಯ ಕೈಜೋಡಿಸಿದರೆ ಉತ್ತಮ ಕೆಲಸ ಮಾಡಬಹುದು ಮತ್ತು ದೇಶದ ಸಮಸ್ಯೆಗಳನ್ನು ಬಗೆಹರಿಸಬಹುದು ಎನ್ನುವುದಕ್ಕೆ ಭಾರತದ ಕೋವಿಡ್ – 19 ಲಸಿಕೆ ಅಭಿಯಾನ ಒಂದು ಪ್ರಮುಖ ಉದಾಹರಣೆಯಗಿದೆ ಎಂದು ಅಭಿಪ್ರಾಯಪಟ್ಟರು.
ಲಸಿಕೆ ಕುರಿತ ಹಿಂಜರಿಕೆ ತೊಡೆದುಹಾಕಲು ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿ ಅಗತ್ಯ
ಲಸಿಕೆ ಕುರಿತ ತಪ್ಪು ಕಲ್ಪನೆ ಮತ್ತು ಊಹಾಪೋಹಗಳನ್ನು ನಿಯಂತ್ರಿಸಲು ಜನರ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿ ಅತ್ಯಂತ ಮಹತ್ವ ಪಡೆದಿದೆ ಎಂದು ಎನ್.ಟಿ.ಎ.ಜಿ.ಐ ಅಧ‍್ಯಕ್ಷರು ಪ್ರತಿಪಾದಿಸಿದರು.
“ಲಸಿಕೆ ಕುರಿತ ಭೀತಿ ನಿರ್ಮೂಲನೆ ಮಾಡಲು ಜನರ ಸಹಭಾಗಿತ್ವ ಮತ್ತು ಜನ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಅಂತಿಮವಾಗಿ ಇದು ಜನರ ಕೈಯಲ್ಲಿದ್ದು, ಜನತೆ ಮುಂದೆ ಬರಬೇಕು ಮತ್ತು ಲಸಿಕೆಯನ್ನು ಹಾಕಿಸಿಕೊಳ್ಳಬೇಕು” ಎಂದರು.
ಲಸಿಕಾಕರಣ ಬಗ್ಗೆ ಅರಿವು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಬೇಕು ಮತ್ತು ಲಸಿಕೆ ಕುರಿತ ಹಿಂಜರಿಕೆಯನ್ನು ತೊಡೆದುಹಾಕಲು ತಳಮಟ್ಟದಲ್ಲಿ ಆಶಾ ಮತ್ತು ಮಂಚೂಣಿ ಕಾರ್ಯಕರ್ತರು ಈಗಾಗಲೇ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದರು.
.ಲಸಿಕೆ ಪೂರೈಕೆಗೆ ಯಾವುದೇ ಸಮಸ್ಯೆಯಾಗದು
ಲಸಿಕೆ ಲಭ್ಯತೆ ಕುರಿತಂತೆ ಯಾವುದೇ ಸಮಸ್ಯೆಯಾಗದು ಎಂದು ಅಧ್ಯಕ್ಷರು ಆಶ್ವಾಸನೆ ನೀಡಿದ್ದಾರೆ. “ ಮುಂದಿನ ತಿಂಗಳು 20 ರಿಂದ 22 ಕೋಟಿ ಲಸಿಕೆ ದೊರೆಯಲಿದೆ.” ಎಂದರು. ದೇಶದ ಪ್ರತಿಯೊಂದು ಮೂಲೆ ಮೂಲೆಗೆ, ಗುಡ್ಡಗಾಡು ಪ್ರದೇಶ, ಬುಡಕಟ್ಟು ಮತ್ತು ಬಹಳ ವಿರಳ ಜನಸಂಖ್ಯೆ ಹೊಂದಿರುವ ಪ್ರದೇಶಗಳಿಗೂ ಲಸಿಕೆ ದೊರೆಯುವಂತೆ ಮಾಡಲಾಗಿದ್ದು, ಆರೋಗ್ಯ ಮೂಲ ಸೌಕರ್ಯ ಉತ್ತಮವಾಗಿ ವಿಸ್ತರಿಸಿದೆ ಎಂದು ಡಾ. ಅರೋರ ಹೇಳಿದರು.
ಪ್ರಸ್ತುತ ಕೋವಿಶೀಲ್ಡ್ ಲಸಿಕೆಯ ಡೋಸೆಜ್ ಗಳ ನಡುವಿನ ಅವಧಿಯಲ್ಲಿ ಬದಲಾವಣೆ ಅಗತ್ಯವಿಲ್ಲ
ಕೋವಿಶೀಲ್ಡ್ ಲಸಿಕೆಯ ಡೋಸೆಜ್ ಗಳ ನಡುವಿನ ಅಂತರದ ಅವಧಿಯನ್ನು ಬದಲಾಯಿಸುವ ಕುರಿತಾದ ಪ್ರಶ್ನೆಗೆ ಅಧ್ಯಕ್ಷರು ಪ್ರತಿಕ್ರಿಯೆ ನೀಡಿ, ಮಧ್ಯಂತರ ಅವಧಿಯನ್ನು ಬದಲಾಯಿಸಲು ಈ ಸಮಯದಲ್ಲಿ ಯಾವುದೇ ಅಗತ್ಯವಿಲ್ಲ ಎಂದು ಹೇಳಿದರು.
“ನಾವು ರಾಷ್ಟ್ರೀಯ ಲಸಿಕಾ ಜಾಡುಪತ್ತೆ ಕುರಿತ ವ್ಯವಸ್ಥೆಯಿಂದ ದತ್ತಾಂಶ ಸಂಗ್ರಹಿಸುತ್ತಿದ್ದೇವೆ ಮತ್ತು ಲಸಿಕೆಯ ಪರಿಣಾಮಕಾರಿತ್ವ, ಡೋಸ್ ಗಳ ಮಧ್ಯಂತರ ಅವಧಿ, ಪ್ರದೇಶವಾರು ಪರಿಣಾಮ, ರೂಪಾಂತರ ಕುರಿತು ಸೂಕ್ತ ಸಮಯದಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದರು.
ಲಸಿಕೆಯ ಪ್ರತಿಯೊಂದು ಡೋಸ್ ನಿಂದ ಜನತೆ ಗರಿಷ್ಠ ಲಾಭ ಪಡೆಯಬೇಕು ಎನ್ನುವುದು ನಮ್ಮ ಮೂಲ ತತ್ವವಾಗಿದೆ. ಪ್ರಸ್ತುತ ನಮ್ಮ ಡೋಸೆಜ್ ನಿಂದ ಹೆಚ್ಚಿನ ಲಾಭ ಪಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ.” ಎಂದರು.
.