46 ವರ್ಷಗಳ ಹಿಂದೆ ಇದೇ ದಿನ ದೇಶದಲ್ಲಿ ಎಮರ್ಜೆನ್ಸಿ ಘೋಷಣೆ. ಆಗ ಒಂಭತ್ತು ವರ್ಷದ ಹುಡುಗನಾಗಿದ್ದ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಆ ನೆನಪುಗಳನ್ನು ಹಂಚಿಕೊಳ್ಳುವುದರ ಜೊತೆ ಈ ಎಮರ್ಜೆನ್ಸಿ ಮುಂದೆ ದೇಶದಲ್ಲಿ ಮಾಡಿದ ರಾಜಕೀಯ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ.
ಬಾಲ್ಯದ ನೆನಪುಗಳೆ ಹಾಗೇ. ಸಣ್ಣ ವಯಸ್ಸಿನಲ್ಲಿ ಸ್ಮೃತಿಪಟಲದಲ್ಲಿ ಕುಳಿತ ನೆನಪುಗಳು ಆಗಾಗ್ಗೆ ಕಾಡುತ್ತಲೇ ಇರುತ್ತವೆ. ಆ ನೆನಪುಗಳು ಮಾಸುವುದೇ ಇಲ್ಲ. ಅವುಗಳ ಪರಿಣಾಮವೂ ಗಾಢವಾಗಿಯೇ ಇರುತ್ತವೆ. ನನ್ನ ಬಾಲ್ಯದ ಅಂಥದ್ದೊಂದು ನೆನಪು ಎಮರ್ಜೆನ್ಸಿ. ಅರ್ಥಾತ್ ತುರ್ತುಪರಿಸ್ಥಿತಿ!
ದೇಶದಲ್ಲಿ25 ಜೂನ್ 1975ರಲ್ಲಿಎಮರ್ಜೆನ್ಸಿ ಘೋಷಣೆಯಾದಾಗ ನನಗೆ ಒಂಭತ್ತು ವರ್ಷ. ನಾನು ಆಗ ಮೈಸೂರಿನ ವಿಎಂವಿ ಬಾಲಬೋಧಿನಿ ಸರಕಾರಿ ಶಾಲೆಯ ವಿದ್ಯಾರ್ಥಿ. ಕರಾಳ ತುರ್ತು ಪರಿಸ್ಥಿತಿ ದೇಶದಲ್ಲಿಎರಡು ವರ್ಷಗಳ ಕಾಲ ಇತ್ತು. ತುರ್ತು ಪರಿಸ್ಥಿತಿಯ ದಿನಗಳು ಚೆನ್ನಾಗಿ ನೆನಪಿವೆ.
“ಲೋಕನಾಯಕ ಜಯಪ್ರಕಾಶ್
ಜಿಂದಾಬಾದ್, ಜಿಂದಾಬಾದ್
ಮೀಸಾ ಗೀಸಾ ಹೆದರೋದಿಲ್ಲ
ದೇಶಸೇವೆ ಬಿಡೋದಿಲ್ಲ
ಡಿಐಆರ್ ಡೋಂಟ್ ಕೇರ್
ಬಾಲ್ಯದಲ್ಲಿ ನಾನು ಕೇಳಿದ ಪ್ರತಿಭಟನೆಯ ಮೊದಲ ಸ್ಲೋಗನ್ ಇದು. ಹಾಗೂ ಈ ಹೊತ್ತಿನವರೆಗೂ ನನ್ನ ಮನಸ್ಸಿನಲ್ಲಿಅಚ್ಚೊತ್ತಿರುವ ಪವರ್‌ಫುಲ್ ಸ್ಲೋಗನ್ ಕೂಡಾ. ಜೆಪಿ ಚಳವಳಿಯ ಈ ಘೋಷಣೆ ನಮ್ಮ ಮನೆಯಿದ್ದ ಮೈಸೂರಿನ ವಿದ್ಯಾರಣ್ಯಪುರಂ ಬಡಾವಣೆಯ ಚಾಮುಂಡಿಪುರಂ ಸರ್ಕಲ್‌ನಲ್ಲಿ ಅನುರಣಿಸುತ್ತಿತ್ತು. ನಮ್ಮ ಸರಕಾರಿ ಶಾಲೆಗೆ ಬರುತ್ತಿದ್ದ ಪ್ರತಿಭಟನಾಕಾರರು ಇಂತಹ ಘೋಷಣೆಯನ್ನು ಮುಗಿಲೆತ್ತರಕ್ಕೆ ಆವೇಶಭರಿತರಾಗಿ ಕೂಗುತ್ತಿದ್ದರು. ಶಾಲೆ ಬಿಡಿಸುತ್ತಿದ್ದ ಪ್ರತಿಭಟನಾಕಾರರ ಮಧ್ಯೆ ನಾವು ಕೆಲವು ಹುಡುಗರು ಸೇರಿಕೊಂಡು ಬಿಡುತ್ತಿದ್ದೆವು. ನಮಗೆ ಪರಿಚಯವಿದ್ದ ನಮ್ಮ ಏರಿಯಾದ ಕೆಲವು ಯುವಕರು ನಮ್ಮನ್ನು ಕರೆಯುತ್ತಿದುದು ಇದಕ್ಕೆ ಕಾರಣ. ನಮಗೇನೂ ಎಮರ್ಜೆನ್ಸಿ ಅಂದ್ರೇನು? ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆ, ಜಯಪ್ರಕಾಶ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ಕರೆ ಇದ್ಯಾವುದೂ ಗೊತ್ತಿರಲಿಲ್ಲ. ಪ್ರತಿಭಟನೆ ನಮ್ಮ ಏರಿಯಾ ದಾಟುತ್ತಿದ್ದಂತೆ ಮನೆ ದಾರಿ ಹಿಡಿಯುತ್ತಿದ್ದೆವು. ಪ್ರತಿಭಟನಾ ಮೆರವಣಿಗೆಯಲ್ಲಿನಮಗೆಲ್ಲಾ ನಿಂಬೆಹುಳಿ ಪೇಪರ್‌ಮೆಂಟ್ ಕೊಡುತ್ತಿದುದು ಚೆನ್ನಾಗಿ ನೆನಪಿದೆ.
ತುರ್ತು ಪರಿಸ್ಥಿತಿ ಹೋರಾಟದಲ್ಲಿಮೈಸೂರಿನಲ್ಲಿ ಪ್ರೊ.ಎಂ.ಎಸ್.ವೇಣುಗೋಪಾಲ್, ಎಚ್.ಗಂಗಾಧರನ್, ವೇದಾಂತ ಹೆಮ್ಮಿಗೆ, ಎ.ವಿ.ರಾಮಕೃಷ್ಣ, ಎನ್.ಆರ್.ಚಂದ್ರಶೇಖರ್, ಎ.ರಾಮಣ್ಣ, ನಾ.ಶ್ರೀನಿವಾಸ್, ಈಚನೂರು ಕುಮಾರ್, ಎಚ್.ಕೆ.ಅನಂತ, ಪ್ರದ್ಯುಮ್ನ, ಭಾವಸಾರ್ ವಿಶ್ವನಾಥರಾವ್, ರಘು, ಶ್ರೀಕಂಠಯ್ಯ, ಗೋಪಾಲ್ , ಸುಬ್ರಮಣ್ಯ ಭಟ್, ಶಾಂತರಾಜು, ರಾಘವೇಂದ್ರ , ಶಾಂತಪ್ಪ ಹೀಗೆ ಅನೇಕರು ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು.
ದೇಶದಲ್ಲಿಒಂದು ತಲೆಮಾರಿನ ಅನೇಕರಿಗೆ ಕಾಂಗ್ರೆಸ್ ವಿರೋಧಿ ಭಾವನೆ ಹುಟ್ಟಿಕೊಂಡಿದ್ದೇ ಈ ಎಮರ್ಜೆನ್ಸಿ ಹಾಗೂ ನಂತರದ ವರ್ಷಗಳಲ್ಲಿಎಂಬುದು ನನ್ನ ಭಾವನೆ. ಕಾಂಗ್ರೆಸ್ಸಿನ ವಂಶಪಾರಂಪರ್ಯದ ಆಡಳಿತ, ಇಂದಿರೆಯ ಮಗ ಸಂಜಯ್ ಗಾಂಧಿ ಅವರ ಆಟೋಟೋಪ, ಕಾಂಗ್ರೆಸ್ಸಿನ ಜೀ ಹುಜೂರ್ ಸಂಸ್ಕೃತಿ, ಭ್ರಷ್ಟಾಚಾರದ ಹಗರಣಗಳು ಒಂದು ತಲೆಮಾರಿನವರಿಗೆ ಕಾಂಗ್ರೆಸ್ ವಿರೋಧಿ ಭಾವನೆ ಮನೆಮಾಡಲು ಕಾರಣವಾಯಿತು. ಇವತ್ತಿಗೂ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್ ವಿರೋಧಿ ವೋಟುಗಳು ಲಾಗಾಯ್ತಿನಿಂದಲೂ ಇರುವುದಕ್ಕೆ ಇವೇ ಮುಖ್ಯ ಕಾರಣಗಳು. ಕಾಂಗ್ರೆಸ್ ವಿರೋಧಿ ಕೆಲವು ಮತದಾರರು ಎಷ್ಟರಮಟ್ಟಿಗೆ ತಮ್ಮ ನಿಲುವನ್ನು ಹೊಂದಿದ್ದಾರೆ ಎಂದರೆ ಕಾಂಗ್ರೆಸ್-ಬಿಜೆಪಿ ಎರಡನ್ನೂ ದೂರ ಇಟ್ಟು ತೃತೀಯ ಪರ್ಯಾಯ ಶಕ್ತಿಯ ಕಡೆ ವಾಲುತ್ತಾರೆ. ತೃತೀಯ ಪರ್ಯಾಯ ಶಕ್ತಿ ಸಮರ್ಥವಾಗಿ ಕಂಡು ಬರದಿದ್ದರೆ ಬಿಜೆಪಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ವಿನಾ ಕಾಂಗ್ರೆಸ್ ಕೈ ಹಿಡಿಯುವುದಿಲ್ಲ.
ತುರ್ತು ಪರಿಸ್ಥಿತಿ ಹಾಗೂ ಮತ್ತಿತರ ಕಾರಣಗಳು ಈ ಮತದಾರರನ್ನು ಬಿಜೆಪಿ ಕಡೆ ವಾಲಿಸುತ್ತದೆ ವಿನಾ ಕಾಂಗ್ರೆಸ್‌ನತ್ತ ತಿರುಗಿಯೂ ನೋಡುವುದಿಲ್ಲ. ಕರ್ನಾಟಕದಲ್ಲಿ ತೃತೀಯ ಶಕ್ತಿಯಾಗಿದ್ದ ಜನತಾ ಪರಿವಾರ ತನ್ನ ಆಂತರಿಕ ಬೇಗುದಿಯಿಂದ ಕುಸಿದಾಗ ಇಲ್ಲಿನ ಬಹುತೇಕ ನಾಯಕರು ಕಮಲದ ತೆಕ್ಕೆಗೆ ಬಿದ್ದರೇ ವಿನಾ ಕಾಂಗ್ರೆಸ್ ಪಾಳಯಕ್ಕೆ ಜಿಗಿಯಲಿಲ್ಲ ಎಂಬುದನ್ನು ಗಮನಿಸಬಹುದು.
ತುರ್ತು ಪರಿಸ್ಥಿತಿಯ ಹೋರಾಟ ಬಿಹಾರ, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಪ್ರಖರವಾಗಿತ್ತು. ಕರ್ನಾಟಕದಲ್ಲೂ ತುರ್ತುಪರಿಸ್ಥಿತಿ ಹೋರಾಟ ಕಾವು ಪಡೆದಿತ್ತು. ಜೆಪಿ ಚಳವಳಿಗಾರರು ಮೇಲೆ ಪೊಲೀಸ್ ದೌರ್ಜನ್ಯದ ಪ್ರಕರಣಗಳೂ ಇಲ್ಲಿಯೂ ನಡೆಯಿತು. ತುರ್ತು ಪರಿಸ್ಥಿತಿಯ ಹೋರಾಟಗಳು, ಚಳವಳಿಗಾರರಿಗೆ ಸಂದೇಶ ನೀಡುವ ಮಾಹಿತಿಗಳನ್ನು ಒಳಗೊಂಡ ಅನೇಕ ಭೂಗತ ಪತ್ರಿಕೆಗಳು ಪೊಲೀಸರ ಕಣ್ತಪ್ಪಿಸಿ ಚಳವಳಿಗಾರರ ಕೈಸೇರಿದವು. ಅಂತಹ ಒಂದು ಪತ್ರಿಕೆಯ ಹೆಸರು ಕಹಳೆ. ಮೈಸೂರಿನಲ್ಲಿಇಂತಹ ಒಂದು ಪತ್ರಿಕೆ ಟಾಬ್ಲಾಯ್ಡ್ ಆಕಾರದಲ್ಲಿ ಸ್ಟೇನ್‌ಸ್ಟಿಲ್‌ನಲ್ಲಿ ಮುದ್ರಣವಾಗಿ ಹೋರಾಟಗಾರರ ಕೈಸೇರುತ್ತಿತ್ತು.
ತುರ್ತು ಪರಿಸ್ಥಿತಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಖಶಿಖಾಂತ ವಿರೋಧಿಸಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಜನಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಮಾಜವಾದಿಗಳು, ಸಂಸ್ಥಾ ಕಾಂಗ್ರೆಸ್ ನಾಯಕರು ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿ ಬೀದಿಗಿಳಿದು ಹೋರಾಡಿ ಜೈಲು ಸೇರಿದರು. ಅನೇಕ ಸಾಹಿತಿಗಳು, ಕಲಾವಿದರು ಇಂದಿರಾ ಗಾಂಧಿ ಅವರ ಈ ನಡೆಯನ್ನು ಪ್ರತಿಭಟಿಸಿ ಕಾರಾಗೃಹವಾಸ ಅನುಭವಿಸಿದರು. ಅದು ಯಾವುದೇ ಪ್ರಚಾರಕ್ಕಾಗಿ ನಡೆದ ಚಳವಳಿ ಅಲ್ಲ. ಜನರ ಅಂತರಾಳದಿಂದ ಹೊರಹೊಮ್ಮಿದ ಪ್ರತಿಭಟನೆ ಅದು.
ಜೆಪಿ ಚಳವಳಿ ಎರಡು ಮಾರ್ಗದಲ್ಲಿ ನಡೆದಿತ್ತು. ಒಂದು-ಬೀದಿಗಿಳಿದು ಹೋರಾಟ ನಡೆಸಿ ಜೈಲು ಸೇರುವುದು. ಮತ್ತೊಂದು-ಭೂಗತರಾಗಿ ಚಟುವಟಿಕೆ ನಡೆಸುವುದು. ಆದರೆ, ಕಮ್ಯುನಿಸ್ಟರು ತುರ್ತು ಪರಿಸ್ಥಿತಿಯನ್ನು ವಿರೋಧಿಸಲಿಲ್ಲ. ಕಾಂಗ್ರೆಸ್ಸಿಗರು ತಮ್ಮ ಅಧಿನಾಯಕಿ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿ ಮಾತಾಡಿದರು. ದೇಶದಲ್ಲಿಇಂದಿರಾ ಗಾಂಧಿ ಸರಕಾರದ 20 ಅಂಶಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೆ ಬಂದಿದ್ದೇ ಈ ಅವಧಿಯಲ್ಲಿ ಎಂಬುದು ಕಾಂಗ್ರೆಸ್ಸಿಗರ ವಾದವಾಯಿತು. ಜೆಪಿ ಚಳವಳಿಯ ಹೋರಾಟಗಾರರು ಆ ಕಾಲದಲ್ಲಿತುರ್ತು ಪರಿಸ್ಥಿತಿ ಬಗ್ಗೆ ಪ್ರಶ್ನಿಸಿದಾಗ ಮೈಸೂರಿನ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೀಗೆ ಉತ್ತರಿಸಿದ್ದರು- ನಮಗೆಲ್ಲಿದೆ (ಕಾಂಗ್ರೆಸ್) ತುರ್ತು ಪರಿಸ್ಥಿತಿ? ಅದು ಇರೋದು ನಿಮಗೆ (ಹೋರಾಟಗಾರರಿಗೆ).
ತುರ್ತು ಪರಿಸ್ಥಿತಿಯಲ್ಲಿಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಪತ್ರಿಕೆಗಳ ಮೇಲೆ ದಿಗ್ಭಂಧನವಿತ್ತು. ಪತ್ರಿಕೆಗಳು ಮುದ್ರಣವಾಗುವ ಮುನ್ನ ಅಧಿಕಾರಿಯೊಬ್ಬರು ಪತ್ರಿಕಾ ಕಚೇರಿಗೆ ಬಂದು ಅವುಗಳನ್ನು ಪರಿಶೀಲಿಸಿ ಅನುಮತಿಸಿದರೆ ಮಾತ್ರ ಪ್ರಿಂಟ್ ಆಗಬೇಕಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಸಂಪಾದಕೀಯ ಸ್ಥಳವನ್ನು ಖಾಲಿ ಬಿಟ್ಟು ಪ್ರತಿಭಟಿಸಿದ್ದು ಭಾರತೀಯ ಪತ್ರಿಕೋದ್ಯಮದಲ್ಲಿದಾಖಲಾಯಿತು.
ಎಮರ್ಜೆನ್ಸಿಯಲ್ಲಿಮುಖ್ಯವಾಗಿ ಕೇಳಿ ಬಂದ ಹೆಸರು ಮೀಸಾ ಹಾಗೂ ಡಿಐಆರ್. ಮೀಸಾ ಅಂದರೆ ಮೇಂಟೆನೆನ್ಸ್ ಆಫ್ ಇಂಟರ್‌ನಲ್ ಸೆಕ್ಯೂರಿಟಿ ಆ್ಯಕ್ಟ್. ಡಿಐಆರ್ ಅಂದರೆ ಡಿಫೆನ್ಸ್ ಆಫ್ ಇಂಡಿಯಾ ರೂಲ್. ಈ ಎರಡು ಕಾಯ್ದೆಗಳಡಿಯಲ್ಲಿಹೋರಾಟಗಾರರನ್ನು ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿತ್ತು.
ನಮ್ಮ ಮನೆಗೆ ಸಮೀಪವಿದ್ದ ಚಾಮುಂಡಿಪುರಂ ಸರ್ಕಲ್ ತುರ್ತು ಪರಿಸ್ಥಿತಿ ಹಾಗೂ ನಂತರ ಕಾಂಗ್ರೆಸ್ ವಿರೋಧಿ ಹೋರಾಟಗಳಲ್ಲಿ ಮೈಸೂರಿನ ಪ್ರಮುಖ ಸ್ಥಳಗಳಲ್ಲಿಒಂದು. ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶವಿದು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ, ವಿಜಯರಾಜೇ ಸಿಂಧಿಯಾ, ಸಿಕಂದರ್ ಭಕ್ತ್ ಹೀಗೆ ಆಗಿನ ಜನಸಂಘ ಹಾಗೂ ನಂತರದ ಬಿಜೆಪಿಯ ರಾಷ್ಟ್ರೀಯ ನಾಯಕರು ಮೈಸೂರಿಗೆ ಆಗಮಿಸಿದಾಗ ಇಲ್ಲಿಯೂ ಅವರ ಬಹಿರಂಗ ಸಭೆ ನಡೆಯುತ್ತಿತ್ತು. ನಮ್ಮ ಬಾಲ್ಯದ ದಿನಗಳಲ್ಲಿನಮ್ಮ ಏರಿಯಾದ ಹುಡುಗರು ಈ ರಾಷ್ಟ್ರೀಯ ನಾಯಕರ ಭಾಷಣ ಕೇಳಲು ಮುಂದಿನ ಸಾಲಿನ ಜಮಖಾನೆ ಮೇಲೆ ಕುಳಿತು ಬಿಡುತ್ತಿದ್ದೆವು.
ಜೆಪಿ ಚಳವಳಿ ನಂತರ ಕೇಂದ್ರದಲ್ಲಿಅಧಿಕಾರಕ್ಕೆ ಬಂದ ಜನತಾಪಕ್ಷದ ಸರಕಾರ ತನ್ನ ಒಳಜಗಳ, ಪ್ರತಿಷ್ಠೆಯಿಂದ ಎರಡೇ ವರ್ಷಗಳಲ್ಲಿ ಪತನಗೊಂಡಿದ್ದು ಮತ್ತೊಂದು ರಾಜಕೀಯ ಇತಿಹಾಸವಾಗಿದೆ.
ಗಾಂಧೀಜಿ ಅವರ ನೇತೃತ್ವದಲ್ಲಿಹೋರಾಟ ನಡೆದು ದೇಶ ಸ್ವಾತಂತ್ರ್ಯ ಪಡೆಯಿತು. ಆದರೆ, ಗಾಂಧೀಜಿ ಯಾವುದೇ ಅಧಿಕಾರಕ್ಕೆ ಆಸೆಪಡಲಿಲ್ಲ. ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲಾದ ತುರ್ತು ಪರಿಸ್ಥಿತಿ ಹೋರಾಟದ ನಾಯಕತ್ವ ವಹಿಸಿದ್ದ ಜಯಪ್ರಕಾಶ್ ನಾರಾಯಣ್ ಅವರು ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದು ತಾವು ಮಾತ್ರ ಯಾವ ಅಧಿಕಾರಕ್ಕೂ ಹಂಬಲಿಸಲಿಲ್ಲ.
ಜೆಪಿ ಚಳವಳಿ ದೇಶದಲ್ಲಿಅಂದಿನ ಯುವ ತಲೆಮಾರಿನವರಲ್ಲಿ ನಾಯಕತ್ವ ಹುಟ್ಟು ಹಾಕಿತು. ಋುತುಮಾನಗಳು ಉರುಳಿದಂತೆ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದವರೇ ರಾಜಕೀಯವಾಗಿ ಕಾಂಗ್ರೆಸ್ ಮನೆ ಬಾಗಿಲು ಬಡಿದರು. ಯಾರು ನೆಹರೂ, ಇಂದಿರಾ ಗಾಂಧಿ ಅವರ ವಂಶಪಾರಂಪರ್ಯದ ರಾಜಕಾರಣವನ್ನು ವಿರೋಧಿಸಿದ್ದರೋ ಅವರೇ ಮುಂದೆ ತಮ್ಮ ಮಕ್ಕಳಿಗೂ ರಾಜಕೀಯ ಭವಿಷ್ಯ ಕಲ್ಪಿಸಿಕೊಟ್ಟರು. ತುರ್ತು ಪರಿಸ್ಥಿತಿಯ ಕೂಸಾದ ಜನತಾ ಪರಿವಾರವೇ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿತು.
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್, ಕೇಂದ್ರದಲ್ಲಿ ಸಚಿವರಾಗಿದ್ದ ದಿವಂಗತ ರಾಮವಿಲಾಸ ಪಾಸ್ವಾನ್ ಜೆಪಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರು. ಲಾಲೂ ಅವರು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜನಿಸಿದ ತಮ್ಮ ಮಗಳಿಗೆ ಮೀಸಾ ಭಾರತಿ ಎಂದೇ ಹೆಸರಿಟ್ಟಿದ್ದಾರೆ. ಇದೇ ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರದಲ್ಲಿ ಸಚಿವರೂ ಆಗಿದ್ದರು.
ಹೀಗೆ ನನ್ನ ಬಾಲ್ಯದ ಅನೇಕ ನೆನಪುಗಳಲ್ಲಿ ನಮ್ಮ ಏರಿಯಾದಲ್ಲಿನಡೆದ ಎಮರ್ಜೆನ್ಸಿಯ ಹೋರಾಟವೂ ಒಂದು.