46 ವರ್ಷಗಳ ಹಿಂದೆ ದೇಶದಲ್ಲಿ ಎಮರ್ಜೆನ್ಸಿ ಘೋಷಣೆ. ಆಗ ಕೊಪ್ಪಳದಲ್ಲಿ ಹೈಸ್ಕೂಲ್ ಓದುತ್ತಿದ್ದ ಹಿರಿಯ ಪತ್ರಕರ್ತ ವಾದಿರಾಜ ದೇಸಾಯಿ ಆ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಆಪತ್ಕಾಲೀನ ಪರಿಸ್ಥಿತಿ ಅಥವಾ ತುರ್ತು ಪರಿಸ್ಥಿತಿ (1975ರ ಜೂನ್ ತಿಂಗಳ 25) ಜಾರಿಯಾದಾಗ ನಾನು ಕೊಪ್ಪಳದ ಸರಕಾರಿ ಹೈಸ್ಕೂಲ್ ವಿದ್ಯಾರ್ಥಿ. ನಮಗೆ ತುರ್ತು ಪರಿಸ್ಥಿತಿ ಎಂದರೇನು ಎಂಬುದು ಗೊತ್ತಿರಲಿಲ್ಲ . ಆದರೆ ನಮ್ಮ ಮನೆಯಲ್ಲಿ ಹಿರಿಯರು ” ಯಾವುದೇ ಕಾರಣಕ್ಕೂ ಇಂದಿರಾ ಗಾಂಧಿಯ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಬೇಡಿ” ಎಂದು ಎಚ್ಚರಿಕೆಯ ಕಿವಿಮಾತು ಹೇಳುತ್ತಿದ್ದರು. ನಮ್ಮ ಊರಿನಲ್ಲಿ ಈ ಸಂಬಂಧ ಯಾವುದೇ ಪ್ರತಿಭಟನೆ ನಡೆದದ್ದು ಕಂಡು ಬರಲಿಲ್ಲ, ಕೇಳಲೂ ಇಲ್ಲ.
ಆದರೆ ನಮ್ಮ ಸುತ್ತಮುತ್ತಲಿನ ನಿವಾಸಿಗಳಾದ ಕೆಲವು ನಾಗರಿಕರನ್ನು ಪೊಲೀಸರು ಬಂಧಿಸಿ, ಸೆರೆಮನೆಗೆ ಕಳುಹಿಸಿದ್ದು ಮಾತ್ರ ಗೊತ್ತಾಯಿತು.ಇವೆಲ್ಲ ಪೊಲೀಸರ ಮಧ್ಯರಾತ್ರಿಯ ಪೌರುಷಗಳಾಗಿದ್ದವು. ಆಗಾಗ್ಗೆ ಅವರನ್ನು ಊರಿನ ಪ್ರಮುಖ ಬೀದಿಯಲ್ಲಿ ಸಾರ್ವಜನಿಕರೆದುರಿಗೆ, ಅದರಲ್ಲಿಯೂ, ಕಾಲ್ನಡಿಗೆಯಲ್ಲಿ ಕೋರ್ಟಿಗೆ ಕರೆತರುತ್ತಿದ್ದರು. “ಇವರೇನು ಕ್ರಿಮಿನಲ್ ಗಳಾ?” ಎಂದು ನಾವು ಅನುಮಾನದಂತೆ ನೋಡುವಂತಿತ್ತು ಆ ನೋಟ. ಈ ರೀತಿ ಬಂಧಿತರಲ್ಲಿ ನನ್ನ ಬಾಲ್ಯದ ಸ್ನೇಹಿತನ ತಂದೆ (ಉತ್ತರ ಕರ್ನಾಟಕದ ಪ್ರಸಿದ್ಧ ಪತ್ರಿಕೆಯ ವರದಿಗಾರರೂ ಆಗಿದ್ದರು ) ಕೂಡ ಸೇರಿದ್ದರು. ಇನ್ನು ನಾಲ್ಕೈದು ಜನ ಯುವಕರು ಸಹ ನನಗೆ ಚಿರಪರಿಚಿತರಾಗಿದ್ದರು. ಇವರೆಲ್ಲ ಸಭ್ಯ, ಒಳ್ಳೆಯ ಮನೆತನದ ಹಿನ್ನೆಲೆಯ ವರೇ ಆಗಿದ್ದರು.ನಮ್ಮ ಮನೆಗೆ ಹತ್ತಿರದಲ್ಲಿದ್ದ ಖಾಸಗಿ ವೈದ್ಯರನ್ನೂ ಬಂಧಿಸಲಾಗಿತ್ತು.
ನನಗೆ ತಿಳಿದಂತೆ ಆಗ ಈ ಎಲ್ಲ ಬಂಧಿತರು ಯಾರೂ ಯಾವ ತಪ್ಪನ್ನು ಸಹ ಮಾಡಿರಲಿಲ್ಲ. ಅಂತಹ ವಿಷಯ ನನ್ನ ಕಿವಿಗೂ ಬಿದ್ದಿರಲಿಲ್ಲ. ಆದರೂ ಜೈಲಿಗೆ ಹೋಗಿ ಬಂದರು. ಉಳಿದಂತೆ ಆಗ ಕಾಂಗ್ರೆಸ್ಸಿನ ಮುಖಂಡರು ಅಥವಾ ನಮ್ಮೂರಿನ ಸೋ ಕಾಲ್ಡ್ ಸ್ವಾತಂತ್ರ್ಯಯೋಧರು, ಬುದ್ಧಿಜೀವಿಗಳು ಯಾರೂ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದುದು ನನ್ನ ಕಿವಿಗೆ ಬೀಳಲಿಲ್ಲ.
ಇನ್ನು ಕನ್ನಡಪ್ರಭ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಗಳು ಆ ಅವಧಿಯಲ್ಲಿ, ಸರಕಾರದ ಅವಕೃಪೆಗೆ ಒಳಗಾಗಿ, ತುಂಬಾ ಕಡಿಮೆ ಅಂದರೆ ಆರೆಂಟು ಪುಟಗಳಲ್ಲಿ ಮಾತ್ರ ಪ್ರಕಟವಾಗುತ್ತಿದ್ದುದು ನೆನಪಿದೆ.
ಅಲ್ಲದೇ ರಾಯಚೂರಿನಿಂದ ಪ್ರಕಟವಾಗುವ, “ರಾಯಚೂರ ವಾಣಿ ” ದಿನಪತ್ರಿಕೆಯೂ ಜೂನ್ 26ರ ಸಂಚಿಕೆಯಲ್ಲಿ ಸಂಪಾದಕೀಯ ಸ್ಥಳವನ್ನು ಖಾಲಿ ಬಿಟ್ಟು ಮುದ್ರಣಗೊಂಡಿತ್ತು. ಈ ಮೂಲಕ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ವಿರೋಧಿಸಿತ್ತು. ತುರ್ತುಪರಿಸ್ಥಿತಿಯ ಅವಧಿ ಮುಗಿದ ನಂತರವೇ ನಮಗೆ ಆ ದಿನಗಳ ಕರಾಳ ಮುಖದ ಪರಿಚಯವಾಗಿದ್ದು. ಅಷ್ಟರ ಮಟ್ಟಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಆಗಿದ್ದು ಮಾತ್ರ ಸುಳ್ಳಲ್ಲ. .
ಇನ್ನು ಕಡೆಯದಾಗಿ ಒಂದು ಮಾತು. ಆ ಬಂಧಿತರ ಕುಟುಂಬದವರ ಮನಸ್ಸುಗಳಲ್ಲಿ , ಆ ಕರಾಳ ದಿನಗಳು ಕಹಿ ನೆನಪುಗಳಾಗಿ ಇಂದಿಗೂ ಹಚ್ಚ ಹಸುರಾಗಿ ಉಳಿದಿರುವುದೂ ಅಷ್ಟೇ ಸತ್ಯ.
ಕನ್ನಡಪ್ರಭ , ವಿಜಯ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ವಾದಿರಾಜ ದೇಸಾಯಿ ನಾಡಿನ ಹಿರಿಯ ಪತ್ರಕರ್ತರು.
.