ಕೋವಿಡ್ ಸಂದರ್ಭದಲ್ಲಿ ರಾಜ್ಯಾದ್ಯಂತ ನಮ್ಮ ಕಾರ್ಯಕರ್ತರು ತಮ್ಮ ಜೀವವನ್ನೇ ಪಣವಾಗಿಟ್ಟು 4,531 ಶವಸಂಸ್ಕಾರಗಳನ್ನು ಮಾಡಿದ್ದಾರೆ. ಅವರ ಸಮಾಜಮುಖಿ ಚಿಂತನೆ ಮತ್ತು ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಅವರನ್ನು ಮಂಡಲ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದ ಕಾರ್ಯಕಾರಿಣಿಯಲ್ಲಿ ಸನ್ಮಾನಿಸಲು ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ಸೂಚಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಸಮಾರೋಪ ಸಮಾರಂಭದ ಬಳಿಕ ಕ್ಯಾಪ್ಟನ್ ಕಾರ್ಣಿಕ್ ಅವರು ಮಾತನಾಡಿದರು.
ಬೆಳಿಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಾರ್ಯಕಾರಿಣಿಯನ್ನು ವರ್ಚುಯಲ್ ಸಭೆಯ ಮೂಲಕ ಉದ್ಘಾಟಿಸಿ ಮುಂಬರುವ ಜಿಲ್ಲಾ ಪಂಚಾಯ್ತ್, ತಾಲ್ಲೂಕು ಪಂಚಾಯ್ತ ಚುನಾವಣೆಗೆ ಸಿದ್ಧರಾಗಲು ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರಕಾರ ನೀಡುವ ಒಂದು ಲಕ್ಷ ರೂಪಾಯಿ ಮತ್ತು ಕೇಂದ್ರ ಸರಕಾರ ಘೋಷಿಸಿದ ಅನಾಥ ಮಕ್ಕಳ ರಕ್ಷಣೆಗಾಗಿ ಬ್ಯಾಂಕ್‍ನಲ್ಲಿ 10 ಲಕ್ಷ ರೂಪಾಯಿ ಠೇವಣಿ ಇಡುವ ಹಾಗೂ 21 ವರ್ಷಗಳವರೆಗೆ ಅವರನ್ನು ನೋಡಿಕೊಳ್ಳುವ ವಿಚಾರವನ್ನು ಜನಮಾನಸಕ್ಕೆ ತಿಳಿಸಬೇಕು ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ ಎಂದರು.
ವೈದ್ಯಕೀಯ ಸವಲತ್ತುಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಕೊಡುವುದರಲ್ಲಿ ವಿಫಲರಾದ ಕಾಂಗ್ರೆಸ್‍ನಿಂದಾಗಿ ನಾವು ಈ ಎರಡು ಅಲೆಗಳ ವೇಳೆ ಇದನ್ನು ಸಮರ್ಥವಾಗಿ ನಿಭಾಯಿಸಲು ಸ್ವಲ್ಪ ಎಡರುತೊಡರು ಉಂಟಾಗಿದೆ ಎಂದು ತಿಳಿಸಿದ್ದಾಗಿ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಮಧ್ಯಾಹ್ನದ ನಂತರದ ಅವಧಿಯಲ್ಲಿ ಪಕ್ಷವು ಮುಂದಿನ ಎರಡ್ಮೂರು ತಿಂಗಳುಗಳಲ್ಲಿ ಸಂಘಟನಾತ್ಮಕವಾಗಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದರ ಕುರಿತು ನಮ್ಮ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‍ಕುಮಾರ್ ಅವರು ಮಾಹಿತಿ ನೀಡಿದರು. ಸೇವಾ ಹೀ ಸಂಘಟನ್ ಅನ್ನು ಇನ್ನೂ ವಿಸ್ತರಿಸುವುದು, ಲಸಿಕಾ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದು, ಪ್ರತಿ ಬೂತ್ ಅನ್ನು ಲಸಿಕಾಯುಕ್ತ ಬೂತ್ ಆಗುವುದಕ್ಕಾಗಿ ಪ್ರಯತ್ನ ನಡೆಯಬೇಕು ಎಂದು ಮಾರ್ಗದರ್ಶನ ಮಾಡಿದರು ಎಂದು ತಿಳಿಸಿದರು.
ನಮ್ಮ ಬೂತ್‍ನಲ್ಲಿ ಇರುವ ಕಾರ್ಯಕರ್ತರನ್ನು ಜೋಡಿಸಿಕೊಂಡು ಒಟ್ಟು 2 ಲಕ್ಷ ಕಾರ್ಯಕರ್ತರಿಗೆ ಆರೋಗ್ಯ ಸಂಬಂಧ ಮೂಲ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆಕ್ಸಿಮೀಟರ್ ಬಳಕೆ ಹೇಗೆ, ರಕ್ತದೊತ್ತಡ ತಿಳಿಯುವುದು ಹೇಗೆ, ಕೋವಿಡ್ ಕಿಟ್ ಬಳಕೆ, ಏನಾದರೂ ಆರೋಗ್ಯ ಸಮಸ್ಯೆ ಬಂದರೆ ತುರ್ತು ಪರಿಹಾರ ಹೇಗೆ ಎಂಬಂಥ ತರಬೇತಿ ಕೊಡಲು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಅವರು ಉಲ್ಲೇಖಿಸಿದರು. ಇವತ್ತು ನಡೆದ ಹೈಬ್ರಿಡ್ ಕಾರ್ಯಕಾರಿಣಿ ಮಾದರಿಯಲ್ಲೇ ಜುಲೈ 1ರಿಂದ ಜುಲೈ 15ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಹೈಬ್ರಿಡ್ ಕಾರ್ಯಕಾರಿಣಿ ಮಾಡಲು ಸೂಚಿಸಿದ್ದಾರೆ ಎಂದು ವಿವರಿಸಿದರು.
ಜುಲೈ 16ರಿಂದ ಜುಲೈ 30ರವರೆಗೆ ಮಂಡಲ ಮಟ್ಟದ ಹೈಬ್ರಿಡ್ ಕಾರ್ಯಕಾರಿಣಿಗಳನ್ನು ನಡೆಸಲು ಉಲ್ಲೇಖಿಸಿದ್ದಾರೆ. ಇ ಚಿಂತನ್ ಪ್ರಶಿಕ್ಷಣ ವರ್ಗವನ್ನು ಮಂಡಲ- ಜಿಲ್ಲಾ- ರಾಜ್ಯ ಮಟ್ಟದಲ್ಲಿ ಆಯ್ದ ಏಳೆಂಟು ವಿಷಯಗಳನ್ನು ಜೋಡಿಸಿಕೊಂಡು ನಡೆಸಲು ಸೂಚನೆ ನೀಡಿದ್ದಾರೆ ಎಂದರು.
ಪಕ್ಷದ ಬೂತ್ ಅಧ್ಯಕ್ಷರಿಗೆ ನಾಮಫಲಕ ಹಂಚುವ ಕಾರ್ಯವನ್ನು ನಡೆಸಲಾಗುವುದು. ಡಿಸೆಂಬರ್ ನಲ್ಲಿ ನಡೆಯಬಹುದಾದ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಸಮಾವೇಶ ನಡೆಸುವುದು, ರಾಜ್ಯ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಾವೇಶ ಏರ್ಪಡಿಸುವುದರ ಕುರಿತು ಚರ್ಚಿಸಲಾಗಿದೆ ಎಂದರು.
ಜೂನ್ 25, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾರ್ಯಕರ್ತರು ಅನುಭವಿಸಿದ ಚಿತ್ರಹಿಂಸೆ, ಪ್ರಜಾಪ್ರಭುತ್ವದ ರಕ್ಷಣೆ ಕುರಿತು ಪಕ್ಷದ ರಾಜ್ಯ ಪ್ರಕೋಷ್ಠಗಳ ಸಂಚಾಲಕರು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಭಾನುಪ್ರಕಾಶ್ ಅವರು ಸಮಾರೋಪ ಸಮಾರಂಭದಲ್ಲಿ ಮಾಹಿತಿ ನೀಡಿದ್ದಾರೆ.
ದೇಶದಲ್ಲಿನ ಸರ್ವಾಧಿಕಾರಿ ಪ್ರವೃತ್ತಿ, ನಿರಂಕುಶ ಪ್ರಭುತ್ವ ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸಿದ ಮಾಧ್ಯಮ ಮಿತ್ರರು, ಸಾಮಾಜಿಕ ಸಂಘಟಕರನ್ನು, ಧುರೀಣರನ್ನು ಹಾಗೂ ರಾಜಕೀಯ ಮುಖಂಡರನ್ನು ಚಿತ್ರಹಿಂಸೆಗೆ ಒಳಪಡಿಸಿದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು ಎಂದು ವಿವರಿಸಿದರು.
ಕಾಂಗ್ರೆಸ್‍ನ ಮಾನಸಿಕತೆಯಲ್ಲೇ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಚಿಂತನೆ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಇಂಥ ವಾತಾವರಣ ಬರದಂತೆ ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದು ಸೂಚಿಸಿದರು ಎಂದರು.