18.6 C
Karnataka
Friday, November 22, 2024

    ಲಸಿಕೆ ನಂತರ ಕೋವಿಡ್ ತೀವ್ರವಾಗಿ ಕಾಡುವುದಿಲ್ಲ; ಸಧ್ಯದ ಮಟ್ಟಿಗೆ ಒಂದು ವರ್ಷದವರಗೆ ಸುರಕ್ಷಿತ

    Must read


    ಲಸಿಕೆ ಕುರಿತಾದ ಸಾಮಾನ್ಯ ಪ್ರಶ್ನೆಗಳಿಗೆ ʻಎನ್‌ಟಿಎಜಿಐʼಯ ಕೋವಿಡ್-19 ಕಾರ್ಯಪಡೆ ಅಧ್ಯಕ್ಷ ಡಾ. ಎನ್.ಕೆ. ಅರೋರಾ ಅವರು ಉತ್ತರಿಸಿದ್ದಾರೆ.


    ಶೀಘ್ರದಲ್ಲೇ ನಾವು ಭಾರತದಲ್ಲೇ ತಯಾರಿಸಿದ ಝೈಡಸ್ ಕ್ಯಾಡಿಲ್ಲಾ ಸಂಸ್ಥೆಯ ವಿಶ್ವದ ಮೊದಲ ʻಡಿಎನ್ಎ-ಪ್ಲಾಸ್ಮಿಡ್ʼ ಲಸಿಕೆಯನ್ನು ಪಡೆಯಲಿದ್ದೇವೆ. ಶೀಘ್ರದಲ್ಲೇ ನಿರೀಕ್ಷಿಸಬಹುದಾದ ಮತ್ತೊಂದು ಲಸಿಕೆಯೆಂದರೆ ʻಬಯೋಲಾಜಿಕಲ್‌ ಇʼ. ಇದೊಂದು ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದೆ ಎಂದು ʻರಾಷ್ಟ್ರೀಯ ಲಸಕೀಕರಣದ ತಾಂತ್ರಿಕ ಸಲಹಾ ಗುಂಪಿನʼ (ಎನ್‌ಟಿಎಜಿಐ) ಕೋವಿಡ್-19 ಕಾರ್ಯಪಡೆಯ ಅಧ್ಯಕ್ಷ ಡಾ. ನರೇಂದ್ರ ಕುಮಾರ್ ಅರೋರಾ ಮಾಹಿತಿ ನೀಡಿದ್ದಾರೆ.

    “ಈ ಲಸಿಕೆ ಸೆಪ್ಟೆಂಬರ್ ವೇಳೆಗೆ ಲಭ್ಯವಾಗುವ ವಿಶ್ವಾಸವನ್ನು ನಾವು ಹೊಂದಿದ್ದೇವೆ. 2 – 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬಹುದಾದ ಭಾರತ ಮೂಲದ ʻಎಂ-ಆರ್‌ಎನ್‌ಎ ಲಸಿಕೆಯೂ ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ. ಸೀರಮ್ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ಮತ್ತು ಜಾನ್ಸನ್ & ಜಾನ್ಸನ್ ಅವರ ʻನೊವ್ಯಾಕ್ಸ್ʼ ಎಂಬ ಇತರ ಎರಡು ಲಸಿಕೆಗಳನ್ನು ಸಹ ಶೀಘ್ರದಲ್ಲೇ ನಿರೀಕ್ಷಿಸಬಹುದು. ಜುಲೈ ಮೂರನೇ ವಾರದ ವೇಳೆಗೆ ಭಾರತ್ ಬಯೋಟೆಕ್ ಮತ್ತು ʻಎಸ್‌ಐಐʼ ನ ಉತ್ಪಾದನಾ ಸಾಮರ್ಥ್ಯವನ್ನು ಅಗಾಧವಾಗಿ ಹೆಚ್ಚಿಸಲಾಗುವುದು. ಇದರಿಂದ ದೇಶದಲ್ಲಿ ಲಸಿಕೆಯ ಪೂರೈಕೆ ಹೆಚ್ಚಾಗಲಿದೆ. ಆಗಸ್ಟ್ ವೇಳೆಗೆ ನಾವು ಒಂದು ತಿಂಗಳಲ್ಲಿ 30-35 ಕೋಟಿ ಡೋಸ್‌ಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ”. ಇದರಿಂದ ಒಂದು ದಿನದಲ್ಲಿ ಒಂದು ಕೋಟಿ ಜನರಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತದೆ ಎಂದು ಡಾ.ಅರೋರಾ ಹೇಳಿದ್ದಾರೆ.

    ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ʻಒಟಿಟಿʼ ವೇದಿಕೆ – ʻಇಂಡಿಯಾ ಸೈನ್ಸ್ ಚಾನೆಲ್ʼಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹಾಗೂ ಭಾರತದ ಕೋವಿಡ್-19 ಲಸಿಕೆ ಅಭಿಯಾನದ ವಿವಿಧ ಆಯಾಮಗಳ ಬಗ್ಗೆ ಮಾತನಾಡಿದರು.

    ಹೊಸ ಲಸಿಕೆಗಳು ಎಷ್ಟು ಪರಿಣಾಮಕಾರಿಯಾಗಿರುತ್ತವೆ?

    ಒಂದು ನಿರ್ದಿಷ್ಟ ಲಸಿಕೆಯು ಶೇಕಡ 80ರಷ್ಟು ಪರಿಣಾಮಕಾರಿ ಎಂದು ನಾವು ಹೇಳಿದಾಗ, ಲಸಿಕೆಯು ಕೋವಿಡ್-19 ರೋಗದ ಸಾಧ್ಯತೆಗಳನ್ನು ಶೇಕಡ80 ರಷ್ಟು ಕಡಿಮೆ ಮಾಡುತ್ತದೆ ಎಂದರ್ಥ. ಸೋಂಕು ಮತ್ತು ರೋ ಗದ ನಡುವೆ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿಯು ಕೋವಿಡ್ ಸೋಂಕಿಗೆ ಒಳಗಾದರೂ ಲಕ್ಷಣ ರಹಿತನಾಗಿದ್ದರೆ, ಈ ವ್ಯಕ್ತಿಗೆ ಸೋಂಕು ಮಾತ್ರ ಇರುತ್ತದೆ. ಆದಾಗ್ಯೂ, ಸೋಂಕಿನಿಂದ ವ್ಯಕ್ತಿಯು ರೋಗಲಕ್ಷಣಗಳನ್ನು ಹೊಂದಿದ್ದರೆ, ಈ ವ್ಯಕ್ತಿಗೆ ಕೋವಿಡ್ ಕಾಯಿಲೆ ಇದೆ ಎಂದರ್ಥ. ವಿಶ್ವದ ಎಲ್ಲಾ ಲಸಿಕೆಗಳು ಕೋವಿಡ್ ರೋಗವನ್ನು ತಡೆಯುತ್ತವೆ. ಲಸಿಕೆಯ ನಂತರ ತೀವ್ರ ರೋಗದ ಸಾಧ್ಯತೆ ಬಹಳ ಕಡಿಮೆ, ಲಸಿಕೆಯ ನಂತರ ಸಾಯುವ ಸಾಧ್ಯತೆಗಳೂ ಅತ್ಯಲ್ಪ. ಲಸಿಕೆಯ ಪರಿಣಾಮಕಾರಿತ್ವವು 80% ಆಗಿದ್ದರೆ, ಲಸಿಕೆ ಪಡೆದವರಲ್ಲಿ 20% ಜನರು ಸೌಮ್ಯ ಕೋವಿಡ್‌ಗೆ ತುತ್ತಾಗಬಹುದು ಎಂದರ್ಥ.

    ಭಾರತದಲ್ಲಿ ಲಭ್ಯವಿರುವ ಲಸಿಕೆಗಳು ಕೊರೊನಾ ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. 60%-70% ಜನರಿಗೆ ಲಸಿಕೆ ಹಾಕಿದರೆ, ವೈರಸ್ ಹರಡುವಿಕೆಯನ್ನು ತಡೆಯಬಹುದು.

    ಅತ್ಯಂತ ಸುಲಭವಾಗಿ ಸೋಂಕಿಗೆ ತುತ್ತಾಗಬಹುದಾದ ಜನಸಮುದಾಯಕ್ಕೆ ಮೊದಲು ಲಸಿಕೆ ಹಾಕುವ ಸಲುವಾಗಿ ಹಾಗೂ ಆ ಮೂಲಕ ಸಾವು ಮತ್ತು ನಮ್ಮ ಆರೋಗ್ಯ ವ್ಯವಸ್ಥೆ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಸರಕಾರವು ವಯೋವೃದ್ಧರಿಗೆ ಮೊದಲ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತು.

    ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಸಾಕಷ್ಟು ತಪ್ಪು ಮಾಹಿತಿಗಳಿವೆ. ದಯವಿಟ್ಟು ಈ ಬಗ್ಗೆ ಸ್ಪಷ್ಟನೆ ನೀಡಬಹುದೇ?

    ಇತ್ತೀಚೆಗೆ, ನಾನು ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಲಸಿಕೆ ಬಗ್ಗೆ ಜನರಲ್ಲಿ ಇರುವ ಹಿಂಜರಿಕೆಯ ಕಾರಣ ಅರಿಯಲು ಅಲ್ಲಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರೊಂದಿಗೆ ಮಾತನಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಜನರು ಕೋವಿಡ್ ಅನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದನ್ನು ಸಾಮಾನ್ಯ ಜ್ವರವೆಂದು ತಿಳಿಯುತ್ತಾರೆ. ಅನೇಕ ಸಂದರ್ಭಗಳಲ್ಲಿ ಕೋವಿಡ್ ಸೌಮ್ಯವಾಗಿರಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಆದರೆ ಅದು ತೀವ್ರ ಸ್ವರೂಪ ಕ್ಕೆ ಬಂದಾಗ, ಅದು ಆರ್ಥಿಕ ಹೊರೆಗೆ ಮತ್ತು ಜೀವಹಾನಿಗೂ ಕಾರಣವಾಗಬಹುದು.

    ಲಸಿಕೆಯ ಮೂಲಕ ಕೋವಿಡ್‌ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ನಿಜಕ್ಕೂ ತುಂಬಾ ಉತ್ತೇಜನಕಾರಿ ವಿಷಯ. ಭಾರತದಲ್ಲಿ ಲಭ್ಯವಿರುವ ಕೋವಿಡ್-19 ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂಬುದನ್ನು ನಾವೆಲ್ಲರೂ ದೃಢವಾಗಿ ನಂಬಬೇಕು. ಎಲ್ಲಾ ಲಸಿಕೆಗಳೂ ಚಿಕಿತ್ಸಾತ್ಮಕ ಪ್ರಯೋಗಗಳು ಸೇರಿದಂತೆ ಜಾಗತಿಕವಾಗಿ ಗುರುತಿಸಲ್ಪಟ್ಟ ಎಲ್ಲಾ ರೀತಿಯ ಕಠಿಣ ಪರೀಕ್ಷೆಗಳಿಗೆ ಒಳಗಾಗಿವೆ ಎಂದು ಪ್ರತಿಯೊಬ್ಬರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ.

    ಅಡ್ಡ ಪರಿಣಾಮಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಎಲ್ಲಾ ಲಸಿಕೆಗಳು ಸೌಮ್ಯ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಇದರಲ್ಲಿ ಸೌಮ್ಯ ಜ್ವರ, ಆಯಾಸ, ಚುಚ್ಚುಮದ್ದಿನ ಸ್ಥಳದಲ್ಲಿ ನೋವು ಇತ್ಯಾದಿಗಳು ಒಂದೆರಡು ದಿನ ಇರುತ್ತವೆ. ಇದು ಯಾವುದೇ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ.

    ಮಕ್ಕಳು ಇತರೆ ಸಾಮಾನ್ಯ ಲಸಿಕೆಗಳನ್ನು ಪಡೆದಾಗಲೂ ಅವರಲ್ಲಿ ಜ್ವರ, ಊತ ಮುಂತಾದ ಕೆಲವು ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಅಡ್ಡ ಪರಿಣಾಮಗಳ ಹೊರತಾಗಯೂ ಲಸಿಕೆಯಿಂದ ಮಗುವಿಗೆ ಒಳಿತಾಗುತ್ತದೆ ಎಂಬುದು ಕುಟುಂಬದ ಹಿರಿಯರಿಗೆ ಅರಿವಿರುತ್ತದೆ. ಅದೇ ರೀತಿ, ಕೋವಿಡ್ ಲಸಿಕೆಯು ನಮ್ಮ ಕುಟುಂಬಕ್ಕೆ ಮತ್ತು ನಮ್ಮ ಸಮಾಜಕ್ಕೆ ಮುಖ್ಯ ಎಂದು ಹಿರಿಯರು ಅರ್ಥಮಾಡಿಕೊಳ್ಳುವ ಸಮಯ ಇದು. ಆದ್ದರಿಂದ, ಸೌಮ್ಯ ಅಡ್ಡ ಪರಿಣಾಮಗಳು ಲಸಿಕೆ ಪಡೆಯದಂತೆ ನಮ್ಮನ್ನು ತಡೆಯಬಾರದು.

    ಲಸಿಕೆ ಪಡೆದ ನಂತರ ಒಬ್ಬ ವ್ಯಕ್ತಿಗೆ ಜ್ವರ ಕಾಣಿಸಿಕೊಳ್ಳದಿದ್ದರೆ ಲಸಿಕೆ ಕೆಲಸ ಮಾಡುತ್ತಿಲ್ಲ ಎಂಬ ವದಂತಿಗಳಿವೆ. ಅದು ಎಷ್ಟರಮಟ್ಟಿಗೆ ನಿಜ?

    ಕೋವಿಡ್ ಲಸಿಕೆಯ ನಂತರ ಹೆಚ್ಚಿನ ಜನರು ಯಾವುದೇ ಅಡ್ಡ ಪರಿಣಾಮವನ್ನು ಎದುರಿಸುವುದಿಲ್ಲ, ಹಾಗೆಂದ ಮಾತ್ರಕ್ಕೆ ಆ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂದು ಅರ್ಥವಲ್ಲ. ಲಸಿಕೆಯ ನಂತರ ಕೇವಲ 20% – 30% ಜನರಲ್ಲಿ ಮಾತ್ರ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಮೊದಲ ಡೋಸ್ ನಂತರ ಜ್ವರ ಬರಬಹುದು ಮತ್ತು ಎರಡನೇ ಡೋಸ್ ನಂತರ ಯಾವುದೇ ಜ್ವರ ಕಾಣಿಸಿಕೊಳ್ಳದಿರಬಹುದು. ಅಥವಾ ಇದಕ್ಕೆ ತದ್ವಿರುದ್ಧವಾಗಿಯೂ ಇರಬಹುದು. ಈ ಪರಿಣಾಮಗಳು ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ ಮತ್ತು ಅತ್ಯಂತ ಅನಿರೀಕ್ಷಿತ.

    ಎರಡೂ ಲಸಿಕೆಗಳನ್ನು ತೆಗೆದುಕೊಂಡ ನಂತರವೂ ಜನರು ಕೋವಿಡ್-19 ಸೋಂಕಿಗೆ ಒಳಗಾದ ಕೆಲವು ಪ್ರಕರಣಗಳು ವರದಿಯಾಗಿವೆ. ಆದ್ದರಿಂದ, ಕೆಲವರು ಲಸಿಕೆಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸುತ್ತಿದ್ದಾರೆ.

    ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ನಂತರವೂ ಸೋಂಕು ಉಂಟಾಗಬಹುದು. ಆದರೆ, ಅಂತಹ ಸಂದರ್ಭಗಳಲ್ಲಿ, ರೋಗದ ತೀವ್ರತೆ ಖಂಡಿತವಾಗಿಯೂ ಸೌಮ್ಯವಾಗಿರುತ್ತದೆ. ಗಂಭೀರ ಕಾಯಿಲೆಯ ಸಾಧ್ಯತೆಗಳು ಬಹುತೇಕ ಶೂನ್ಯ. ಇದಲ್ಲದೆ, ಅಂತಹ ಘಟನೆಯ ಸಂಭವನೀಯತೆಯನ್ನು ತಪ್ಪಿಸಲು, ಲಸಿಕೆಯ ನಂತರವೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಜನರಿಗೆ ಹೇಳಲಾಗುತ್ತದೆ. ಜನರು ವೈರಸ್ ಅನ್ನು ಹರಡಬಹುದು, ಅಂದರೆ ವೈರಸ್ ನಿಮ್ಮ ಮೂಲಕ ಕುಟುಂಬ ಸದಸ್ಯರು ಮತ್ತು ಇತರರಿಗೆ ಹರಡಬಹುದು. 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಿದದ್ದರೆ, ಆಗ ಸಾವಿನ ಪ್ರಮಾಣ ಮತ್ತು ಆಸ್ಪತ್ರೆಗಳ ಮೇಲಿನ ಹೊರೆ ಊಹಿಸಲಾಗುತ್ತಿರಲಿಲ್ಲ. ಈಗ, ಎರಡನೇ ಅಲೆಯೂ ಇಳಿಮುಖವಾಗಿದೆ. ಇದರ ಶ್ರೇಯಸ್ಸು ಲಸಿಕೆಗೆ ಸಲ್ಲುತ್ತದೆ.

    ದೇಹದಲ್ಲಿ ಪ್ರತಿಕಾಯಗಳು ಎಷ್ಟು ಕಾಲ ಉಳಿಯುತ್ತವೆ? ಸ್ವಲ್ಪ ಸಮಯದ ನಂತರ ನಾವು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕೇ?

    ಲಸಿಕೆಯ ನಂತರ, ದೇಹದಲ್ಲಿ ಅಭಿವೃದ್ಧಿಯಾಗುವ ರೋಗ ನಿರೋಧಕ ಶಕ್ತಿಯನ್ನು ಗೋಚರಿಸುವಂತಹ ಮತ್ತು ಅಳೆಯಬಹುದಾದ ಪ್ರತಿಕಾಯಗಳ ಮೂಲಕ ಕಂಡುಹಿಡಿಯಬಹುದು ಎಂಬುದು ಸಹಜ ವಿಚಾರ. ಇದರ ಹೊರತಾಗಿಯೂ ಅಗೋಚರ ರೋಗ ನಿರೋಧಕ ಶಕ್ತಿಯೂ ಅಭಿವೃದ್ಧಿಹೊಂದುತ್ತದೆ. ಇದನ್ನು ಸ್ಮರಣೆ ಶಕ್ತಿಯನ್ನು ಹೊಂದಿರುವ ʻಟಿ-ಸೆಲ್ಸ್ʼ ಎಂದು ಕರೆಯಲಾಗುತ್ತದೆ. ಲಸಿಕೆ ನಂತರ ಈ ವೈರಸ್ ದೇಹ ಪ್ರವೇಶಿಸಲು ಪ್ರಯತ್ನಿಸಿದಾಗಲೆಲ್ಲಾ, ಇಡೀ ದೇಹವು ಜಾಗೃತಗೊಳ್ಳುತ್ತದೆ ಮತ್ತು ಅದರ ವಿರುದ್ಧ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಹೀಗಾಗಿ, ಪ್ರತಿಕಾಯವನ್ನು ಹೊಂದಿರುವುದು ಮಾತ್ರವೇ ನಮ್ಮ ದೇಹದ ರೋಗನಿರೋಧಕ ಶಕ್ತಿಯ ಏಕೈಕ ಸಂಕೇತವಲ್ಲ. ಆದ್ದರಿಂದ, ಲಸಿಕೆಯ ನಂತರ ಪ್ರತಿಕಾಯ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ, ಈ ಬಗ್ಗೆ ಚಿಂತೆಮಾಡಿ ನಿದ್ರೆಯನ್ನು ದೂರ ಮಾಡಿಕೊಳ್ಳಬೇಡಿ.

    ಎರಡನೆಯದಾಗಿ, ಕೋವಿಡ್-19 ಒಂದು ಹೊಸ ರೋಗ. ಇದು ಕೇವಲ ಒಂದೂವರೆ ವರ್ಷಗಳ ಹಿಂದಷ್ಟೇ ಕಾಣಿಸಿಕೊಂಡಿದೆ. ಲಸಿಕೆ ನೀಡಿಕೆಯೂ ಕೇವಲ 6 ತಿಂಗಳಿಂದ ಈಚೆಗಷ್ಟೇ ಶುರುವಾಗಿದೆ. ಇತರ ಎಲ್ಲಾ ಲಸಿಕೆಗಳಂತೆ, ಇದರ ರೋಗನಿರೋಧಕತೆಯೂ ಕನಿಷ್ಠ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಇರುತ್ತದೆ ಎಂದು ತೋರುತ್ತದೆ. ಕಾಲ ಕಳೆದಂತೆ ಕೋವಿಡ್-19 ರ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಾಗುತ್ತದೆ. ಅಲ್ಲದೆ, ʻಟಿ-ಸೆಲ್ʼ ಗಳಂತಹ ಕೆಲವು ಅಂಶಗಳನ್ನು ಅಳೆಯಲು ಸಾಧ್ಯವಿಲ್ಲ. ಲಸಿಕೆಯ ನಂತರ ಎಷ್ಟು ಸಮಯದವರೆಗೆ ಜನರನ್ನು ಗಂಭೀರ ಕಾಯಿಲೆ ಮತ್ತು ಮರಣದಿಂದ ಕಾಪಾಡಬಹುದು ಎಂಬುದನ್ನು ಇನ್ನೂ ಕಾದು ನೋಡಬೇಕು. ಆದರೆ, ಸದ್ಯದ ಮಟ್ಟಿಗೆ, ಲಸಿಕೆ ಪಡೆದ ಎಲ್ಲಾ ವ್ಯಕ್ತಿಗಳು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಸುರಕ್ಷಿತವಾಗಿರುತ್ತಾರೆ ಎಂಬುದಂತೂ ನಿಜ.

    ಒಮ್ಮೆ ನಾವು ಒಂದು ನಿರ್ದಿಷ್ಟ ಕಂಪನಿಯ ಲಸಿಕೆಯನ್ನು ತೆಗೆದುಕೊಂಡ ನಂತರ, ನಾವು ಆ ನಿರ್ದಿಷ್ಟ ಲಸಿಕೆಯನ್ನು ಮಾತ್ರ ಪುನರಾವರ್ತಿಸಬೇಕೆ? ನಾವು ಭವಿಷ್ಯದಲ್ಲಿ ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಳ್ಳಬೇಕಾದರೆ, ನಾವು ಅದೇ ಕಂಪನಿಯ ಲಸಿಕೆಯನ್ನು ಪಡೆಯಬೇಕೇ?

    ಕಂಪನಿಗಳ ಬದಲಿಗೆ, ನಾವು ವೇದಿಕೆಗಳ ಬಗ್ಗೆ ಮಾತನಾಡೋಣ. ಒಂದೇ ರೋಗಕ್ಕೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ವಿಭಿನ್ನ ಪ್ರಕ್ರಿಯೆಗಳು ಮತ್ತು ವೇದಿಕೆಗಳನ್ನು ಬಳಸಿರುವುದು ಇಡೀ ಮಾನವನ ಇತಿಹಾಸದಲ್ಲಿ ಇದೇ ಮೊದಲು. ಈ ಲಸಿಕೆಗಳಿಗೆ ಉತ್ಪಾದನಾ ಪ್ರಕ್ರಿಯೆಗಳು ವಿಭಿನ್ನವಾಗಿರುವುದರಿಂದ, ದೇಹದ ಮೇಲೆ ಅವುಗಳ ಪರಿಣಾಮವೂ ಒಂದೇ ರೀತಿಯಾಗಿರುವುದಿಲ್ಲ. ಎರಡು ಡೋಸ್‌ಗಳಲ್ಲಿ ಬೇರೆ ಬೇರೆ ಲಸಿಕೆಯನ್ನು ಪಡೆಯುವ ಪ್ರಕ್ರಿಯೆಯನ್ನು, ಅಥವಾ ಮತ್ತೆ ಬೂಸ್ಟರ್ ಡೋಸ್‌ನಲ್ಲಿ (ಅಗತ್ಯವಿದ್ದರೆ) ವಿಭಿನ್ನ ಲಸಿಕೆ ಪಡೆಯುವುದನ್ನು ಪರಸ್ಪರ ವಿನಿಮಯ ಎಂದು ಕರೆಯಲಾಗುತ್ತದೆ. ಈ ರೀತಿ ಮಾಡಬಹುದೇ ಎಂಬುದು ಒಂದು ಪ್ರಮುಖ ವೈಜ್ಞಾನಿಕ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನ ಮುಂದುವರಿದಿದೆ. ವಿವಿಧ ರೀತಿಯ ಕೋವಿಡ್-19 ಲಸಿಕೆಗಳನ್ನು ನೀಡಲಾಗುತ್ತಿರುವ ಅಪರೂಪದ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ರೀತಿಯ ಪರಸ್ಪರ ವಿನಿಮಯವನ್ನು ಕೇವಲ ಮೂರು ಕಾರಣಗಳಿಗಾಗಿ ಮಾತ್ರ ಸ್ವೀಕರಿಸಬಹುದು ಅಥವಾ ಗುರುತಿಸಬಹುದು: 1) ಇದು ರೋಗನಿರೋಧಕ ಶಕ್ತಿ ಹೆಚ್ಚಳ ಅಥವಾ ಉತ್ತಮಗೊಳಿಸುವುದು, 2) ಲಸಿಕೆ ವಿತರಣೆಯ ಕಾರ್ಯಕ್ರಮವನ್ನು ಸುಲಭಗೊಳಿಸುವುದು; 3) ಸುರಕ್ಷತೆಯ ಖಾತರಿ. ಆದರೆ ಲಸಿಕೆಗಳು ಸಂಪೂರ್ಣವಾಗಿ ವೈಜ್ಞಾನಿಕ ವಿದ್ಯಮಾನವಾಗಿರುವುದರಿಂದ ಲಸಿಕೆಗಳ ಕೊರತೆಯ ಕಾರಣದಿಂದಾಗಿ ಅವುಗಳ ಪರಸ್ಪರ ವಿನಿಮಯವನ್ನು ಪ್ರೋತ್ಸಾಹಿಸಬಾರದು.

    ಕೆಲವು ದೇಶಗಳಲ್ಲಿ ಲಸಿಕೆಗಳ ಮಿಶ್ರಣ ಮತ್ತು ಹೊಂದಾಣಿಕೆ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಭಾರತವೂ ಅಂತಹ ಯಾವುದೇ ಸಂಶೋಧನೆಯಲ್ಲಿ ತೊಡಗಿದೆಯೇ?

    ಈ ರೀತಿಯ ಸಂಶೋಧನೆ ಅಗತ್ಯವಾಗಿದ್ದು, ಭಾರತದಲ್ಲಿ ಇಂತಹ ಕೆಲವು ಸಂಶೋಧನೆಗಳನ್ನು ಶೀಘ್ರದಲ್ಲೇ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಕೆಲವೇ ವಾರಗಳಲ್ಲಿ ಇದು ಪ್ರಾರಂಭವಾಗಬಹುದು.

    ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಅಧ್ಯಯನಗಳನ್ನು ನಡೆಸಲಾಗುತ್ತಿದೆಯೇ? ಮಕ್ಕಳಿಗೆ ಲಸಿಕೆಯನ್ನು ಯಾವಾಗ ನಿರೀಕ್ಷಿಸಬಹುದು?

    2 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೊವಾಕ್ಸಿನ್ ಪ್ರಯೋಗಗಳನ್ನು ಪ್ರಾರಂಭಿಸಲಾಗಿದೆ. ದೇಶಾದ್ಯಂತ ಅನೇಕ ಕೇಂದ್ರಗಳಲ್ಲಿ ಮಕ್ಕಳ ಮೇಲಿನ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ವರ್ಷದ ಸೆಪ್ಟೆಂಬರ್‌-ಅಕ್ಟೋಬರ್ ವೇಳೆಗೆ ನಾವು ಫಲಿತಾಂಶಗಳನ್ನು ಪಡೆಯಲಿದ್ದೇವೆ. ಮಕ್ಕಳಿಗೆ ಸೋಂಕು ಉಂಟಾಗಬಹುದು, ಆದರೆ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಆದಾಗ್ಯೂ, ಮಕ್ಕಳು ವೈರಸ್‌ ಹರಡಲು ಮಾಧ್ಯಮವಾಗಬಹುದು. ಆದ್ದರಿಂದ, ಮಕ್ಕಳಿಗೂ ಲಸಿಕೆ ಹಾಕಬೇಕು.

    ಲಸಿಕೆಗಳು ಬಂಜೆತನಕ್ಕೆ ಕಾರಣವಾಗುತ್ತವೆಯೇ?

    ಪೋಲಿಯೊ ಲಸಿಕೆ ಬಂದಾಗ ಮತ್ತು ಭಾರತ ಹಾಗೂ ವಿಶ್ವದ ಇತರ ಭಾಗಗಳಲ್ಲಿ ಆ ಲಸಿಕೆಯನ್ನು ನೀಡುತ್ತಿದ್ದ ಸಮಯದಲ್ಲಿಯೂ ಇದೇ ರೀತಿಯ ವದಂತಿ ಹರಡಿತ್ತು. ಪೋಲಿಯೊ ಲಸಿಕೆ ಪಡೆಯುವ ಮಕ್ಕಳು ಭವಿಷ್ಯದಲ್ಲಿ ಬಂಜೆತನವನ್ನು ಎದುರಿಸಬಹುದು ಎಂಬ ತಪ್ಪು ಮಾಹಿತಿಯನ್ನು ಆ ಸಮಯದಲ್ಲಿ ಸೃಷ್ಟಿಸಲಾಯಿತು. ಈ ರೀತಿಯ ತಪ್ಪು ಮಾಹಿತಿಯು ಲಸಿಕೆ ವಿರೋಧಿ ಲಾಬಿಯ ಕೆಲಸ. ಎಲ್ಲಾ ಲಸಿಕೆಗಳು ತೀವ್ರ ವೈಜ್ಞಾನಿಕ ಸಂಶೋಧನೆಗಳ ಫಲವಾಗಿ ಸೃಷ್ಟಿಯಾಗಿವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಯಾವುದೇ ಲಸಿಕೆಗಳು ಈ ರೀತಿಯ ಅಡ್ಡ ಪರಿಣಾಮವನ್ನು ಹೊಂದಿಲ್ಲ. ಈ ರೀತಿಯ ಪ್ರಚಾರವು ಜನರನ್ನು ದಾರಿತಪ್ಪಿಸುತ್ತದೆ ಎಂದು ನಾನು ಬಲವಾಗಿ ಪ್ರತಿಪಾದಿಸಲು ಬಯಸುತ್ತೇನೆ. ಕೊರೊನಾ ವೈರಸ್‌ನಿಂದ ನಮ್ಮನ್ನು, ಕುಟುಂಬವನ್ನು ಮತ್ತು ಸಮಾಜವನ್ನು ರಕ್ಷಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ, ಪ್ರತಿಯೊಬ್ಬರೂ ಮುಂದೆ ಬಂದು ಲಸಿಕೆ ಪಡೆಯಬೇಕು.(PIB)


    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!