ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.ಉತ್ತರ ಪ್ರದೇಶ ಸರಕಾರದ ಅಧಿಕಾರಿಗಳು ಅಯೋಧ್ಯೆಯ ಅಭಿವೃದ್ಧಿಯ ವಿವಿಧ ವಿಷಯಗಳನ್ನು ಒಳಗೊಂಡ ಅಂಶಗಳ ಬಗ್ಗೆ ಪ್ರದರ್ಶಿಕೆಯನ್ನು ಮಂಡಿಸಿದರು.
ಅಯೋಧ್ಯೆಯನ್ನು ಆಧ್ಯಾತ್ಮಿಕ ಕೇಂದ್ರವಾಗಿ, ಜಾಗತಿಕ ಪ್ರವಾಸೀ ತಾಣವಾಗಿ ಮತ್ತು ಸುಸ್ಥಿರ ಅಭಿವೃದ್ಧಿಯ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ.
ಅಯೋಧ್ಯೆಯನ್ನು ಸಂಪರ್ಕಿಸುವ ಪ್ರಸ್ತಾವಿತ ವಿವಿಧ ಮೂಲಸೌಕರ್ಯಗಳ ಯೋಜನೆಗಳ ಬಗ್ಗೆ ಮತ್ತು ಬರಲಿರುವ ವಿವಿಧ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ಅವರಿಗೆ ಮಾಹಿತಿ ಒದಗಿಸಲಾಯಿತು. ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣದ ವಿಸ್ತರಣೆ, ಬಸ್ ನಿಲ್ದಾಣ, ರಸ್ತೆಗಳು, ಮತ್ತು ಹೆದ್ದಾರಿಗಳ ಬಗ್ಗೆ ಚರ್ಚಿಸಲಾಯಿತು.
ಹೊಸದಾಗಿ ರೂಪುಗೊಳ್ಳಲಿರುವ ಪಟ್ಟಣ (ಗ್ರೀನ್ ಫೀಲ್ಡ್ ಟೌನ್ ಶಿಪ್ ) ಬಗ್ಗೆ ಚರ್ಚಿಸಲಾಯಿತು. ಇದು ಭಕ್ತಾದಿಗಳಿಗೆ ವಸತಿಗೃಹಗಳ ಸೌಲಭ್ಯ, ಆಶ್ರಮಗಳಿಗೆ ಸ್ಥಳಾವಕಾಶ, ಮಠಗಳು, ಹೊಟೇಲುಗಳು, ವಿವಿಧ ರಾಜ್ಯಗಳಿಗೆ ಭವನಗಳಿಗೆ ಸ್ಥಳಾವಕಾಶವನ್ನು ಒಳಗೊಂಡಿದೆ. ಪ್ರವಾಸೀ ಸೌಲಭ್ಯ ಕೇಂದ್ರ, ವಿಶ್ವ ದರ್ಜೆಯ ಮ್ಯೂಸಿಯಂ ನಿರ್ಮಾಣವೂ ಆಗಲಿದೆ.
ಸರಯೂ ನದಿ ಸುತ್ತ ಮುತ್ತ ಮತ್ತು ಅದರ ಘಾಟ್ ಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸಲಾಗುವುದು. ಸರಯೂ ನದಿಯಲ್ಲಿ ಹಡಗು ಸಂಚಾರವನ್ನು ನಿಯಮಿತಗೊಳಿಸಲಾಗುವುದು.
ನಗರವನ್ನು ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಾಕಷ್ಟು ಸ್ಥಳಾವಕಾಶ ಲಭ್ಯವಾಗುವಂತೆ ಸುಸ್ಥಿರವಾಗಿ ಅಭಿವೃದ್ಧಿಪಡಿಸುವುದನ್ನು ಖಾತ್ರಿಗೊಳಿಸಲಾಗುವುದು. ಸಂಚಾರ ನಿರ್ವಹಣೆಯನ್ನು ಸ್ಮಾರ್ಟ್ ಸಿಟಿ ಮೂಲಸೌಕರ್ಯ ಬಳಸಿ ಆಧುನಿಕ ರೀತಿಯಲ್ಲಿ ಮಾಡಲಾಗುವುದು.
ಅಯೋಧ್ಯಾವು ಪ್ರತಿಯೊಬ್ಬ ಭಾರತೀಯರ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸಿದಂತಹ ನಗರ ಎಂದು ವಿವರಿಸಿದ ಪ್ರಧಾನ ಮಂತ್ರಿ ಅವರು ಅಯೋಧ್ಯಾವು ನಮ್ಮ ಸಂಪ್ರದಾಯದ ಅತ್ಯುತಮವಾದುದನ್ನು ಮತ್ತು ನಮ್ಮ ಅಭಿವೃದ್ಧಿ ಪರಿವರ್ತನೆಯ ಶ್ರೇಷ್ಟವಾದ ಅಂಶಗಳನ್ನು ಸ್ಪಷ್ಟಪಡಿಸುವಂತಿರಬೇಕು ಎಂದರು.
ಅಯೋಧ್ಯೆ ಆಧ್ಯಾತ್ಮಿಕವಾದುದು ಮತ್ತು ಮಹೋನ್ನತವಾದುದು. ಈ ನಗರಕ್ಕೆ ಸಂಬಂಧಿಸಿ ಮಾನವ ನಂಬಿಕೆಗಳು ಭವಿಷ್ಯದ ಮೂಲಸೌಕರ್ಯಗಳ ಜೊತೆ ಸರಿಹೊಂದುವಂತಿರಬೇಕು, ಅದು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಸಹಿತ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿರಬೇಕು.
ಬರಲಿರುವ ತಲೆಮಾರಿನ ಜನರು ಅವರ ಜೀವಿತ ಕಾಲದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡುವ ಆಶಯವನ್ನು ಹೊಂದಿರುವಂತಾಗಬೇಕು ಎಂದು ಪ್ರಧಾನ ಮಂತ್ರಿ ಹೇಳಿದರು.
ಅಯೋಧ್ಯೆಯಲ್ಲಿಯ ಅಭಿವೃದ್ಧಿ ಕಾರ್ಯಗಳು ಸದ್ಯೋಭವಿಷ್ಯದಲ್ಲಿ ಅಸ್ತಿತ್ವ ಕಾಣುವಂತೆ ಮುಂದುವರೆಯಬೇಕು ಎಂಬುದರತ್ತ ಬೆಟ್ಟು ಮಾಡಿದ ಪ್ರಧಾನ ಮಂತ್ರಿ ಅವರು ಇದೇ ಸಮಯದಲ್ಲಿ ಅಯೋಧ್ಯೆಯ ಪ್ರಗತಿಯ ಮುಂದಿನ ನೆಗೆತಕ್ಕಾಗಿ ಅಯೋಧ್ಯೆಯನ್ನು ಕೊಂಡೊಯ್ಯುವ ಕಾರ್ಯವೂ ಆರಂಭಗೊಳ್ಳಬೇಕು. ಅಯೋಧ್ಯೆಯ ಗುರುತಿಸುವಿಕೆಯನ್ನು ಆಚರಿಸುವುದು ನಮ್ಮ ಸಾಮೂಹಿಕ ಪ್ರಯತ್ನವಾಗಬೇಕು ಮತ್ತು ಅದರ ಸಾಂಸ್ಕೃತಿಕ ಕಂಪನವನ್ನು ನವೀನ ರೀತಿಯಲ್ಲಿ ಜೀವಂತವಾಗಿಡಬೇಕು ಎಂದೂ ಹೇಳಿದರು.
ಶ್ರೀ ರಾಮ ಜನರನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದ್ದಂತೆ, ಅಯೋಧ್ಯೆಯ ಅಭಿವೃದ್ಧಿ ಕಾರ್ಯವೂ ಯುವಕರನ್ನು ಒಳಗೊಂಡಂತಹ ಆರೋಗ್ಯ ಪೂರ್ಣ ಸಾರ್ವಜನಿಕ ಸಹಭಾಗಿತ್ವದ ಸ್ಫೂರ್ತಿಯಲ್ಲಿ ಸಾಗಬೇಕು ಎಂದು ಪ್ರಧಾನ ಮಂತ್ರಿ ಹೇಳಿದರು. ನಗರದ ಈ ಅಭಿವೃದ್ಧಿ ಕೆಲಸದಲ್ಲಿ ಪ್ರತಿಭಾವಂತ ಯುವಜನತೆಯ ಕೌಶಲ್ಯಗಳ ಬಳಕೆಯಾಗಬೇಕು ಎಂದು ಅವರು ಕರೆ ನೀಡಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಮತ್ತು ಉತ್ತರ ಪ್ರದೇಶ ಸರಕಾರದ ಇತರ ಸಚಿವರು ಸಭೆಯಲ್ಲಿ ಹಾಜರಿದ್ದರು.