ಕುಂದಾಪುರ ಮೂಲದ ರಂಜಿತ್ ರಾವ್ ನಿರ್ದೇಶಿಸಿದ ರಾಹುಲ್, ಕೃಷ್ಣಾ ಭಟ್, ಬಿಗ್ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಮುಂತಾದವರು ನಟಿಸಿರುವ ಮೊದಲ ಚಿತ್ರ ಪ್ರಾಯಶಃ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಯುವ ನಿರ್ದೇಶಕ ರಂಜಿತ್ ರಾವ್ ಅವರನ್ನು ಕವಯತ್ರಿ ಮಾಲಿನಿ ಗುರುಪ್ರಸನ್ನ ಮಾತನಾಡಿಸಿದ್ದಾರೆ.
ಪ್ರಾಯಶಃ ಏನು?
ನೀವು ನೋಡುವ ದೃಷ್ಟಿಕೋನವೇ ಬೇರೆ, ಸತ್ಯವೇ ಬೇರೆ ಆಗಿರಬಹುದು .. ಯಾವುದು ಸತ್ಯ ಯಾವುದು ಸುಳ್ಳು . ಒಂದು ಘಟನೆಯ ಹಿಂದೆ ಅದೆಷ್ಟು ತಯಾರಿ ಇರುತ್ತದೆ ಅದೆಷ್ಟು ಸತ್ಯಗಳು ಅಡಗಿರುತ್ತವೆ, ಅದೆಷ್ಟು ಸುಳ್ಳುಗಳು ಎದುರಾಗುತ್ತವೆ .. ಇದರ ಒಟ್ಟು ಚಿತ್ರಣವೇ ಪ್ರಾಯಶಃ ..
ಇದರ ಪಯಣದ ಕುರಿತು ಹೇಳುವ ಮುನ್ನ ಈ ಹೊಸ ನಿರ್ದೇಶಕನ ಪಯಣದ ಕುರಿತು ಹೇಳಬಹುದೇ
ನನ್ನ ಬಾಲ್ಯದಲ್ಲಿಯೇ ನಿರ್ದೇಶನದ ಕುರಿತು ನೂರು ಕನಸು ಕಟ್ಟಿಕೊಂಡವನು ನಾನು .. ನಿಮಗೆ ಅಚ್ಚರಿಯಾಗಬಹುದು ಇದನ್ನು ಮೊದಲು ಗುರುತಿಸಿದ್ದು ಮತ್ತು “ಇವ ಚಿತ್ರರಂಗಕ್ಕೆ ಹೋಗಬಹುದು ” ಎಂದು ಹೇಳಿದ್ದು ನನ್ನ ತಂದೆ . ಶಾಲಾ ಕಾಲೇಜಿನಲ್ಲಿ ನಾನು ನಾಟಕಗಳಲ್ಲಿ ನಟಿಸುತ್ತಿದ್ದರೂ ನಾನು ನಟನಾಗಲು ಬಂದವನಲ್ಲ ಎಂಬ ಸ್ಪಷ್ಟ ಅರಿವು ನನ್ನಲ್ಲಿತ್ತು. ಇದು ಮತ್ತೂ ಸ್ಪಷ್ಟವಾಗಿದ್ದು ನಾನು ಎಂಜಿನಿಯರಿಂಗ್ ಪ್ರವೇಶಿಸಿದ ಮೇಲೆ . ನಾನು ಮೊದಲ ವರ್ಷದಲ್ಲಿದ್ದಾಗಲೇ ಮನೋಹರ್ ವಿ. ಸರ್ ಅವರನ್ನು ಭೇಟಿಯಾಗಿದ್ದೆ . ಮತ್ತೊಂದು ಭೈರವಿ ಯಂತ್ರ ಎಂಬ ಜಾಹೀರಾತು ಚಿತ್ರ ಮಾಡಿದೆ. ಒಂದಿಷ್ಟು ದುಡ್ಡು, ಅನುಭವ ದಕ್ಕಿತು. ನಂತರ ಆ ತುಡಿತಗಳನ್ನು ತಾಳಲಾರದ ಹೊತ್ತಲ್ಲಿ ಕಿರುತೆರೆ ಪ್ರವೇಶ ಮಾಡಿದ್ದು. ನನಗೆ ಬಹಳ ಒಳ್ಳೆಯ ಗುರುಗಳೇ ಸಿಕ್ಕಿದರು. ಎಂ. ಎನ್. ಜಯಂತ್ ಸರ್ ನನಗೆ ಒಂದೇ ವರ್ಷದಲ್ಲಿ ಎಪಿಸೋಡ್ ಡೈರೆಕ್ಟರ್ ಜವಾಬ್ದಾರಿ ವಹಿಸಿದರು.. ಆ ನಂಬಿಕೆ , ಪ್ರೀತಿ ಬಹಳ ದೊಡ್ಡದು.. ಚುಕ್ಕಿ, ಪುನರ್ವಿವಾಹ,ಅಂಬಾರಿ , ಜೊತೆಜೊತೆಯಲಿ ಹೀಗೆ ಹಲವು ಧಾರಾವಾಹಿಗಳಿಗೆ ನಿರ್ದೇಶನ ಮಾಡುತ್ತಿದ್ದಾಗ ಮತ್ತೆ ಮರುಕಳಿಸಿದ್ದು ಈ ಹಿರಿತೆರೆಯ ಹುಚ್ಚು .. ಆ ಸೆಳೆತ ಬಿಡಲಾರದೆ ಕಿರುತೆರೆಯ ನಿರ್ದೇಶನಕ್ಕೆ ವಿದಾಯ ಹೇಳಿದೆ.
ಕಿರುತೆರೆ ಜೀವನ ಭದ್ರತೆಯನ್ನು ಕೊಟ್ಟಿತ್ತು ಅಲ್ಲವಾ..
ಖಂಡಿತಾ.. ಆ ಮಟ್ಟಿಗಿನ ಭದ್ರತೆ ಕಿರುತೆರೆ ಕೊಟ್ಟಿತ್ತು .ಹಿರಿತೆರೆ ಒಂದು ರೀತಿಯಲ್ಲಿ ಜೂಜು ಎಂಬುದೂ ಗೊತ್ತಿತ್ತು .. ಕೇವಲ ಭದ್ರತೆಯೇ ಬೇಕೆಂದಿದ್ದರೆ ನಾನು ಎಂಜಿನಿಯರ್ ಆಗಿಯೇ ಬದುಕು ಕಟ್ಟಿಕೊಳ್ಳಬಹುದಿತ್ತು. ಬದುಕು ಇನ್ನೂ ಸುಭದ್ರವಾಗಿರುತ್ತಿತ್ತು . ಅದು ನನ್ನ ದಾರಿ ಅಲ್ಲ ಎಂಬುದನ್ನು ನಾನು ಕಂಡುಕೊಂಡ ಮೇಲೆ ಹಿರಿತೆರೆಯ ಮೇಲೆ ನನ್ನ ಗಮನವನ್ನು ಕೇಂದ್ರೀಕರಿಸಿದೆ..
ಈಗ ಈ ಚಿತ್ರದ ಪಯಣದ ಬಗ್ಗೆ ಹೇಳಬಹುದೇ?
ಇದು ಅಪ್ಪಟ ಪ್ಯಾಶನ್ ಚಿತ್ರ. ನಮ್ಮಲ್ಲಿ “ಇಲ್ಲ” ಗಳೇ ಹೆಚ್ಚಿತ್ತು . ಈ ಕಥೆ ಹಲವು ವರ್ಷಗಳಿಂದ ನನ್ನ ತಲೆಯಲ್ಲಿತ್ತು. ಈ ಕಂಟೆಂಟ್ ಮಾಡಿದ್ದೂ ನಾನು ಚಿತ್ರ ಮಾಡಲೆಂದು ಅಲ್ಲ .. ಈ ಕಥೆಯನ್ನು ಯಾರಾದರೂ ನಿರ್ದೇಶಕರಿಗೆ ಹೇಳುವ ಹುಮ್ಮಸ್ಸಿನಲ್ಲಿದ್ದೆ . ಇದನ್ನು ಬೇರೆಯವರೆದುರಿಗೆ ಹೇಳುವಾಗ ನಾನೇ ಇದನ್ನು ಚೆನ್ನಾಗಿ ಹೇಳಬಲ್ಲೆ ಎನ್ನಿಸಲಾರಂಭಿಸಿತು. ಈ ಕಥೆ ನನ್ನಲ್ಲಿ ಹುಟ್ಟಿದ್ದು .. ನಾನಷ್ಟೇ ಇದನ್ನು ಬೇರೆಬೇರೆ ರೀತಿಯಲ್ಲಿ ಹೇಳಬೇಕು ಎನ್ನಿಸಿತು. ಸ್ಕ್ರಿಪ್ಟ್ ಮಾಡಲು ಕೂತೆ. ಮೊದಲ ಸ್ಕ್ರಿಪ್ಟ್ ಮಾಡಿದ್ದು ನಾನೇ. ನಂತರ ಎರಡನೆಯ ಸ್ಕ್ರಿಪ್ಟ್ ಸಮಯದಲ್ಲಿ ರಾಹುಲ್, ಪವನ್ ಮುಂತಾದವರು ಸೇರಿಕೊಂಡು ಇದೇ ಫೈನಲ್ ಡ್ರಾಫ್ಟ್ ಅಂತ ಮಾಡಿ ಜಯಂತ್ ಸರ್ ಕಡೆ ಕಳಿಸಿದ್ವಿ.. ಅವರು ಇದರಲ್ಲಿ ಎಷ್ಟು ತಪ್ಪುಗಳಿವೆ ಅಂತ ಮಾರ್ಕ್ ಮಾಡಿ ಕಳಿಸಿ ನಮ್ಮ ಜೊತೆ ಕೂತು ಪ್ರತಿಯೊಂದು ಕಡೆಯೂ ಫೈನಲ್ ಓಕೆ ಮಾಡಿದ್ದು ಜಯಂತ್ ಸರ್.
ಯಾವ ಇಲ್ಲ ಗಳು?
ಅವೇ ಹೆಚ್ಚು. ನಾವು ಪ್ರೊಡಕ್ಷನ್ ಮಾಡುತ್ತೇವೆ.. ಶೂಟಿಂಗ್ , ವಸತಿ, ನಟನೆ ಇದಕ್ಕೆಲ್ಲ ಆಗುವ ವೆಚ್ಚ ಭರಿಸುತ್ತೇವೆ ಎಂಬ ಕಲ್ಪನೆಯೇ ಇರಲಿಲ್ಲ. ನಮ್ಮನ್ನು ನಂಬಿ ಹಣ ಹಾಕುವ ನಿರ್ಮಾಪಕರು ಸಿಕ್ಕರೆ ಚಿತ್ರದ ಅರ್ಧ ಜವಾಬ್ದಾರಿ ಮುಗಿದಂತೆ.. ಅವರು ನಮಗೆ ವ್ಯವಸ್ಥೆ ಮಾಡಿಕೊಟ್ಟರೆ ನಮ್ಮ ಸಂಪೂರ್ಣ ಗಮನವನ್ನು ನಿರ್ದೇಶನದ ಕಡೆ ತೊಡಗಿಸಿಕೊಳ್ಳಬಹುದು. ಆದರೆ ಹಾಗಾಗಲಿಲ್ಲ. ಒಂದು ವೇಳೆ ಅರ್ಧಕ್ಕೆ ಕೈ ಕೊಟ್ಟರೆ ? ಹೀಗಾಗಿ ಹಣ ಹೊಂದಿಸುವ ಜವಾಬ್ದಾರಿ ನಮ್ಮ ಮೇಲೇ ಬಿತ್ತು. ಒಂದಿಷ್ಟು ಹಣ ಕೈಗೆ ಬಂದ ಕೂಡಲೇ ಅದು ಮುಗಿಯುವವರೆಗೆ ಶೂಟಿಂಗ್ ಮಾಡುವುದು , ನಂತರ ಬ್ರೇಕ್ ಮಾಡುವುದು .. ಮತ್ತೆ ದುಡ್ಡು ಹೊಂದಿಸುವುದು .. ಈ ನಿರ್ದೇಶನ , ದುಡ್ಡು ಹೊಂದಿಸುವುದು ಎರಡೂ ಏಕಕಾಲಕ್ಕೆ ನಿರ್ವಹಿಸಬೇಕಿದ್ದು ನನಗೆ ಬಹಳ ಚಾಲೆಂಜಿಂಗ್ ಆಗಿತ್ತು .
ನಾಯಕಿಯ ಹುಡುಕಾಟವೇ ಒಂದು ಎಪಿಸೋಡ್ .. ಕೃಷ್ಣಾ ಎಲ್ಲ ರೀತಿಯಲ್ಲೂ ಪಾತ್ರಕ್ಕೆ ಹೇಳಿಮಾಡಿಸಿದ ಆಯ್ಕೆ. ಅವರು ನಮಗೆ ಒಂದು ವರ್ಷದ ಹುಡುಕಾಟದ ನಂತರ ಸಿಕ್ಕಿದ್ದು .
ಚಿತ್ರದ ಮೊದಲ ಹೆಜ್ಜೆ ?
ಮೊದಲು ಆರಂಭವಾಗಿದ್ದೇ ಹಾಡುಗಳ ಸಂಯೋಜನೆ.. ನಮಗೆ ಯಾವುದೇ ಸಮಯದ ಮಿತಿ ಇಲ್ಲದಿದ್ದರಿಂದ ಸಾಂಗ್ ಕಂಪೋಸಿಶನ್ ಅರಾಮಾಗಿ ಕೂತು ಮಾಡಿದ್ವಿ..ದೊಡ್ಡ ದೊಡ್ಡ ಆರ್ಟಿಸ್ಟ್ಗಳು ಬಂದ್ರು.. ಅದರ ಮಿಕ್ಸಿಂಗ್ ಮಾಸ್ಟರಿಂಗ್ ಲಂಡನ್ನಿನಲ್ಲಿ ಆಗಿದ್ದು.. ಅದನ್ನು ನಾವು ನಿರೀಕ್ಷಿಸಿಯೇ ಇರಲಿಲ್ಲ. ಅದೇನು ಬೇಕು ಆ ಹಾಡುಗಳೇ ಮಾಡಿಸಿಕೊಂಡವು. ನಮ್ಮವರೇ ಆದ ವಿಜಯ ಕೃಷ್ಣ ಬಹಳ ಎಫರ್ಟ್ ಹಾಕಿದ್ರು…
ಶೂಟಿಂಗ್ ಶುರುವಾದ ನಂತರ ?
ಶೂಟಿಂಗ್ ಸಮಯದಲ್ಲಿಯೂ ಕೆಲವು ಮರೆಯಲಾಗದ ಘಟನೆಗಳಿವೆ.. ನಮ್ಮ ಚಿತ್ರದ ನಾಯಕ ರಾಹುಲ್, ಶೋಭರಾಜ್, ವಿನೀತ್ ಮತ್ತಿತರ ಅನೇಕ ನಟರು ಮಂಗಳೂರಿನವರೇ ಆಗಿದ್ದರಿಂದ ಆ ಊರಿನಲ್ಲಿ ಶೂಟಿಂಗ್ ನಮಗೆ ಬಹಳ ಸುಲಭವಾಯಿತು. ಅಲ್ಲಿನ ಲೊಕೇಶನ್ಸ್ ನಮ್ಮ ಕತೆಗೆ ಪೂರಕವಾಗಿತ್ತು…
ಒಮ್ಮೆ ಇಲ್ಲಿ ಬ್ಯಾಂಬೂ ಬಜಾರಿನಲ್ಲಿ ರಾತ್ರಿ ಶೂಟಿಂಗ್ ನಡೆಯಬೇಕಿತ್ತು . ತುಂಬಾ ರಿಯಲಿಸ್ಟಿಕ್ ಆಗಿ ತೋರಿಸಬೇಕಿತ್ತು. ಅಲ್ಲಿದ್ದ ಮುಸ್ಲಿಂ ಬಂಧುಗಳು ಮಧ್ಯರಾತ್ರಿಯವರೆಗೂ ಊಟ ನಿದ್ರೆಯ ಯೋಚನೆ ಬಿಟ್ಟು ನಮ್ಮೊಡನೆ ಸಹಕರಿಸಿದ್ದು, ಅರ್ಧ ರಾತ್ರಿಯ ನಂತರವೇ ಮನೆಗೆ ಹೋಗುತ್ತಿದ್ದುದು ಈಗಲೂ ಆಗಾಗ ನೆನಪಾಗುವ ಮಧುರ ನೆನಪು. ನನಗೂ ಅವ್ರಿಗೂ ಯಾವ ನಂಟು.. ನನ್ನ ಚಿತ್ರದ ಶಾಟ್ಸ್ ಚೆನ್ನಾಗಿ ಬರಲಿ ಎಂದು ಅವರು ಏಕೆ ಅಷ್ಟು ಶ್ರಮ ತೆಗೆದುಕೊಂಡಿದ್ದು ? ಯಾವ ಬಂಧ ಇದು? ಗೊತ್ತಿಲ್ಲ.. ನನ್ನ ಅದೃಷ್ಟ .. ನಾಯಕ , ನಾಯಕಿ ಸೇರಿದಂತೆ ಚಿತ್ರದ ನಟನಟಿಯರೆಲ್ಲರೂ ತಮ್ಮ ಬೆಸ್ಟ್ ತೆಗೆದುಕೊಟ್ಟರು. ಪ್ರತಿಯೊಬ್ಬ ಕಲಾವಿದರೂ ಅತ್ಯುತ್ತಮವಾಗಿ ಅಭಿನಯಿಸಿದರು.
ಬಿಗ್ಬಾಸ್ ಖ್ಯಾತಿಯ ಶೈನ್ ಶೆಟ್ಟಿಯನ್ನು ಹಾಕಿಕೊಂಡಿದ್ದೀರಿ…?
ಶೂಟಿಂಗ್ ಸಂದರ್ಭದಲ್ಲಿ ಅವರಿನ್ನೂ ಬಿಗ್ಬಾಸ್ಗೆ ಹೋಗಿರಲಿಲ್ಲ..ಅದರ ಮೊದಲೇ ನಟನೆಯ ಹಂತ ಮುಗಿದಿತ್ತು. ಬಿಗ್ಬಾಸ್ ನಂತರ ಅವರು ಡಬ್ಬಿಂಗ್ ಮಾಡಿಕೊಟ್ಟರು. ಶೈನ್ ಶೆಟ್ಟಿಯವರದು ಬಹಳ ವಿಶಿಷ್ಠವಾದ ಪಾತ್ರ. ಚಿತ್ರ ನೋಡುವವರಿಗೆ ಅದೊಂದು ವಿಭಿನ್ನ ಅನುಭವ ನೀಡುವುದು ಖಂಡಿತಾ.
ಕಡಿಮೆ ಸವಾಲು ಅನ್ನಿಸಿದ್ದು ? ಖುಷಿ ಅನ್ನಿಸಿದ್ದು?
ಸವಾಲುಗಳನ್ನು ಹಗುರಾಗಿಸಿದ್ದು ಈ ಚಿತ್ರದೊಳಗೆ ಯಾವ ಯಾವ ಟೆಕ್ನಿಷಿಯನ್ಸ್ ಒಳಬರುತ್ತಾ ಹೋದರೋ ಅವರೆಲ್ಲ ಚಿತ್ರದ ಭಾಗವೇ ಆಗುತ್ತಾ ಹೋದರು. ಯಾರೂ ಹಣಕ್ಕಾಗಿ ಕೆಲಸ ಮಾಡಲಿಲ್ಲ. ಈ ಚಿತ್ರವನ್ನು ಮಾಡೇ ಮಾಡುತ್ತೇವೆ ಎಂದು ಪಣ ತೊಟ್ಟು ಕುಳಿತರು. ಈ ಚಿತ್ರದೊಟ್ಟಿಗೆ ಎಮೋಷನಲಿ ಕನೆಕ್ಟ್ ಆಗ್ತಾ ಹೋದರು. ನಿಜ ಹೇಳಬೇಕೆಂದರೆ ಅನೇಕ ಟೆಕ್ನಿಷಿಯನ್ಸ್ , ಆರ್ಟಿಸ್ಟ್ಗಳು ಒಂದು ಪೈಸೆಯನ್ನೂ ಮುಟ್ಟಿಲ್ಲ. ಮೂರು ವರ್ಷದಿಂದ ಈ ಕನಸಿನಲ್ಲಿ ನಾವೆಲ್ಲರೂ ಒಟ್ಟಿಗಿದ್ದೇವೆ. ಈಗ ಇದು ರಂಜಿತ್ ಚಿತ್ರವೋ, ರಾಹುಲ್ ಚಿತ್ರವೋ ಆಗಿ ಉಳಿದಿಲ್ಲ … ಎಲ್ಲರ ಚಿತ್ರವಾಗಿಬಿಟ್ಟಿದೆ. ಒಂದು ಕಲರ್ ಗ್ರೇಡಿಂಗ್ ಆಗ್ತಿದೆ ಅಂದ್ರೆ ಆ ಫ್ರೇಮ್ ನೋಡಲು ಇಡೀ ಟೀಮಿನವರು ಓಡೋಡಿ ಬರುತ್ತಾರೆ .. ಅದೇ ಒಂದು ಖುಷಿ.. ಲಾಕ್ಡೌನ್ ನಮಗೆ ಒಂದು ರೀತಿಯಲ್ಲಿ ಅನುಕೂಲವೇ ಆಯಿತು. ಫ್ರೀ ಇದ್ದ ಟೆಕ್ನಿಷಿಯನ್ಸ್ ಕೆಲಸಗಳನ್ನು ಸರಾಗವಾಗಿ ಮಾಡಿಕೊಟ್ಟರು.. ತುಂಬಾ ಸಮಯ ನಾವು ವಿನಿಯೋಗಿಸಲು ಲಾಕ್ಡೌನ್ ಕಾರಣವಾಯಿತು. ಮತ್ತು ಈ ಚಿತ್ರದ ಜರ್ನಿ ಯನ್ನೇ ನಾನು ಎಂಜಾಯ್ ಮಾಡುತ್ತಿದ್ದೇನೆ .. ಇದು ಗೆಲ್ಲುತ್ತದೆಯಾ? ಸೋಲುತ್ತದೆಯಾ? ಹಣ ತಂದುಕೊಡುತ್ತದೆಯಾ ನನಗೆ ಗೊತ್ತಿಲ್ಲ.. ಇನ್ನೊಂದು ಚಿತ್ರದ ಪಯಣವನ್ನು ನಾನು ಇಷ್ಟು ಎಂಜಾಯ್ ಮಾಡ್ತೀನಾ ಇಲ್ಲವಾ ಗೊತ್ತಿಲ್ಲ ..
ಈಗ ಚಿತ್ರ ಬಿಡುಗಡೆ? ಹೇಗೆ?
ಓ ಟಿ ಟಿ ಗೆ ಕಳಿಸಿದ್ದೇವೆ ಕ್ವಾಲಿಟಿ ಚೆಕಿಂಗ್ ಗೆ. .. ಥೀಯೇಟರ್ ಕನಸು ಹೋಗಿಲ್ಲ. ಅಷ್ಟರಲ್ಲಿ ಎಲ್ಲ ಕಳೆಯಲಿ ಎಂಬ ಆಸೆ, ಕಳೆದಿರುತ್ತದೆ ಎಂಬ ಕನಸು.. ಎರಡೂ ನಮ್ಮ ಗುರಿ ..
ಯಾರಿಗಾದರೂ ಧನ್ಯವಾದ ಹೇಳುವುದಿದೆಯಾ?
ಎಷ್ಟು ಜನಕ್ಕೆ ಹೇಳಲಿ..
ರಾಹುಲ್, ಶೈನ್ ಶೆಟ್ಟಿ, ಕೃಷ್ಣಾ ಭಟ್, ಶೋಭರಾಜ್ ಪವೂರ್ , ಮಧು ಹೆಗಡೆ, ಸುನೀಲ್ ಸಾಗರ್, ವಿನೀತ್, ಅನನ್ಯ ಶೆಟ್ಟಿ,
ಪ್ರಶಾಂತ್ ಪಾಟೀಲ್, ಅಶೋಕ್, ವಿಜಯ್ ಕೃಷ್ಣ, ದಯಾ ಎಂ.ಬಿ., ನಿಖಿಲ್, ದೀಪಕ್ ಕೃಷ್ಣ ಹೀಗೇ
ನನ್ನ ಇಡೀ ಟೀಮ್ ಗೆ ಮತ್ತು ಏನು ಮಾಡಿದರೂ ನನ್ನ ಬೆಂಬಲಿಸುವ ಮನೆ ಮಂದಿಗೆ, ಇವನಿಗೆ ಒಳ್ಳೆಯದಾಗಲಿ ಎಂದು ನನ್ನನ್ನು ನಂಬಿ ಹಣ ಕೊಟ್ಟವರಿಗೆ .. ಎಷ್ಟು ಜನಕ್ಕೆ ಹೇಳಲಿ .. ಎಲ್ಲರಿಗೂ ಧನ್ಯವಾದ , ಕೃತಜ್ಞತೆ..
ಈ ಚಿತ್ರವನ್ನು ನೋಡಿ , ಈ ಚಿತ್ರದಲ್ಲಿ ಸತ್ವವಿದೆ ಎಂದು ಅನ್ನಿಸಿದರೆ ಗೆಲ್ಲಿಸಿ .. ಮತ್ತೆ ಇಲ್ಲಿಗೇ ಬರುತ್ತೇನೆ.. ಮತ್ತೊಂದು ಚಿತ್ರವನ್ನೇ ಮಾಡಲು.. ಏಕೆಂದರೆ ಇದನ್ನು ಬಿಟ್ಟರೆ ನನಗೆ ಬೇರೆ ಬದುಕಿಲ್ಲ… ಬದುಕಿನಲ್ಲಿ ಬೇರೆ ಬಣ್ಣಗಳಿಲ್ಲ..
ಸೂಪರ್ ರಂಜಿತ್. ಒಳ್ಳೆಯದಾಗಲಿ.