21.5 C
Karnataka
Sunday, September 22, 2024

    ಒಂದು ವಚನ ಎರಡು ದೃಷ್ಠಿ

    Must read

    ಸುಮಾ ವೀಣಾ

    ಮನ ಮನ ಬೆರೆಸಿದಲ್ಲಿ ತನು ಕರಗದಿದ್ದಡೆ | ಸೋಂಕಿನಲ್ಲಿ ಪುಳಂಕಗಳು ಹೊರಹೊಮ್ಮದಿದ್ದಡೆ | ಕಂಡಾಗಳಶ್ರುಜಲಗಳು ಸುರಿಯದಿದ್ದಡೆ | ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ|  ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ?|ಎನ್ನಲ್ಲಿ ಇವಿಲ್ಲವಾಗಿ, ಆನು ಡಂಬಕ ಕಾಣಿರೇ!

    ಮಹಾನ್ ಮಾನವತಾವಾದಿ ಬಸವಣ್ಣನವರ ವಚನಗಳು ಮನುಷ್ಯನ ವ್ಯಕ್ತಿತ್ವ ವಿಕಸನದ ಸದಾಶಯವನ್ನು ಹೊಂದಿವೆ. ಪ್ರಸ್ತುತ  ಒಂದೇ ವಚನದ ಮೂಲಕ ದೈವ ಹಾಗು ಮಾನವನ ಜೊತೆಗೆ ಸಾಮಾಜಿಕರಿಗೆ ಇರಬೇಕಾದ ಅವಿನಾಭಾವ ಸಂಬಂಧದ ಕುರಿತು ಅನನ್ಯವಾಗಿ ಮಾತಾನಾಡಿದ್ದಾರೆ. ನಾಣ್ಯಕ್ಕೆ ಎರಡು ಮುಖಗಳಿದ್ದಂತೆ ಪ್ರಸ್ತುತ ವಚನದಲ್ಲಿ ಒಂದೆಡೆ ದೈವೀ ಸಂಬಂಧ ಇನ್ನೊಂದು ಮಾನವ ಸಂಬಂಧ  ಎಂಬ ಎರಡೂ ಆಯಾಮಗಳಲ್ಲೂ ಪರಿಶುದ್ಧತೆ ಹಾಗು ಆರೋಗ್ಯ ಬದುಕನ್ನು  ಓದುಗರು ಅಧ್ಯಾಹಾರ ಮಾಡಿಕೊಳ್ಳಬಹುದಾಗಿದೆ.

    ದೇವಾಲಯವನ್ನು ಪ್ರವೇಶಿಸಿದಾಗ ಚಿತ್ತಶುದ್ಧಿ ಅಹಂಕಾರ ಇರಬಾರದು. ಆತನನ್ನು ನೋಡಿದಾಗ ತನಗರಿವಿಲ್ಲದಂತೆ ತನು ಬಾಗಬೇಕು.  ಭಗವಂತನನ್ನು ಸ್ಪರ್ಶಿಸಿದ ಕೂಡಲೆ ವರ್ಣನಾತೀತವಾದ ರೋಮಾಂಚನಾ  ಭಾವ ಸ್ಫುರಿಸಬೇಕು. ಲಿಂಗರೂಪಿ ರೂಪಿ ಭಗವಂತನನ್ನು ನೋಡಿದ ಕೂಡಲೆ ದೇಹ ಬಗ್ಗಿಸಿ ಮನ ತಗ್ಗಿಸಿ ತನಗರಿವಿಲ್ಲದಂತೆ ಆನಂದ ಭಾಷ್ಪ ಸುರಿಸಬೇಕು.  ತನಗನ್ನಿಸಿದ    ಭಾವನೆಗಳನ್ನು ಗದ್ಗದಿತ ಮಾತುಗಳಲ್ಲಿ ಹಂಚಿಕೊಳ್ಳಬೇಕು. ಭಗವಂತನ ಆರಾಧನೆಗೆ ಮಂತ್ರಗಳ ಅವಶ್ಯಕತೆಯಿಲ್ಲ ಪ್ರೀತಿ ತುಂಬಿದ  ಮುಗ್ಧ ಮಾತುಗಳ  ಸಿಂಚನವಾದರೆ ಸಾಕು. ಇವೆಲ್ಲವೂ ನಡೆದಾಗಲೇ ಆತನಲ್ಲ್ಲಿರುವುದು ನಿಷ್ಕಲ್ಮಶ ಭಕ್ತಿ ಎಂದು ವೇದ್ಯವಾಗುತ್ತದೆ. ಇಲ್ಲದೆ ಹೋದರೆ ಆತ ಧೃಢ ಭಕ್ತಿ ಇಲ್ಲದ ಬೂಟಾಟಿಕೆಯ ಭಕ್ತಿಯುಳ್ಳವನೆಂದು ಅರಿಯುವುದು ಎಂದಿದ್ದಾರೆ.

    ಎರಡನೆ ಆಯಾಮದಲ್ಲಿ ಮನುಷ್ಯ ಎಂದರೆ ಆತನಲ್ಲಿ ಮಾನವೀಯ ಮೌಲ್ಯಗಳು ಹರಳುಗಟ್ಟಿರಬೇಕು. ತನ್ನ ಸಂಬಂಧಿಯನ್ನೋ, ಸ್ನೇಹಿತನನ್ನೋ ಕಂಡಾಗ ಅವರನ್ನು ನಮಸ್ಕರಿಸಲೋ, ಆಲಿಂಗಿಸಲೋ, ಹಸ್ತಲಾಘವ ಮಾಡಲೋ ಆತನ ಶರೀರ ಮುಂದೆ ಹೋಗಬೇಕು. ಪರಸ್ಪರ ದೇಹಗಳು ಸ್ಪರ್ಶಕ್ಕೊಳಗಾದಾಗ ಆತ್ಮೀಯತೆಯ, ಸ್ವಂತಿಕೆಯ ಭವ ಉಂಟಾಗಬೇಕು. ಅಂತಹ ಆತ್ಮೀಯರನ್ನು ಕಂಡ ಸವಿನೆನಪಿಗೆ ಆನಂದ ಭಾಷ್ಪ ಧಾರಾಕಾರವಾಗಿ ಸುರಿಯಬೇಕು. ಪ್ರೀತಿಯ ಸಲುವಾಗಿ ಆತ್ಮಬಂಧುರತೆ ಹೆಚ್ಚಾಗಿ ನುಡಿವ ಮಾತುಗಳು ಗದ್ಗದಿತವಾಗಬೇಕು. ಇದು ನಿಜವಾದ ಅಂತಃಕರಣವುಳ್ಳ ಮನುಷ್ಯನ ಲಕ್ಷಣವಾಗಿರುತ್ತದೆ.

    ಬಂಧುವನ್ನೋ, ಸ್ನೇಹಿತರನ್ನೋ ಕಂಡಾಗ ಆತ್ಮಬಂಧುವನ್ನೇ ಕಂಡ ಭಾವನಾ ತೀವ್ರತೆಗೆ ಒಳಗಾಗಬೇಕು ಇಲ್ಲವಾದರೆ ಒಳ್ಳೆಯ ಬಂಧು,ಸ್ನೇಹಿತ, ವ್ಯಕ್ತಿ ಎಂದು ಕರೆಸಿಕೊಳ್ಳದೆ ವಂಚಕನೆಂದು ತನ್ನ ಬಣ್ಣವನ್ನು ತಾನೇ ಬಯಲು ಮಾಡಿಕೊಳ್ಳುತ್ತಾನೆ ಎಂದು ಬಸವಣ್ಣ ಹೇಳಿದ್ದಾರೆ. ಮನಸ್ಸು ಹೂವಿನ ಮಕರಂದದಂತೆ ಮಧುರವಾಗಿರಬೇಕು.ಅದು ಬಿಟ್ಟು ಮನಸ್ಸು ಮೆಣಸಿನ ಹಾಗೆ ಖಾರವಾಗಿ,ಸಿಡುಕು,ದುಡುಕುಗಳಿಂದ ಆವಕವಾಗದ್ದರೆ   ಆ ವ್ಯಕ್ತಿ ಆತ್ಮಬಂಧುರತೆಯ ಅನುಭೂತಿಯನ್ನು ಪಡೆಯಲಾರ ಎಂದು ಭಕ್ತಿ ಭಂಡಾರಿ ಬಸವಣ್ಣನವರು ಪ್ರಸ್ತುತ ವಚನದಲ್ಲಿ ಓದುಗರಿಗೆ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!