ಎಂಬತ್ತು- ತೊಂಭತ್ತರ ದಶಕಗಳಲ್ಲಿ ಷೇರುಪೇಟೆಯ ಹೂಡಿಕೆ ಎಂದರೆ ಕಂಪನಿಗಳು ಘೋಷಿಸಿ – ವಿತರಿಸುವ ಕಾರ್ಪೊರೇಟ್ ಫಲಗಳಾದ ಡಿವಿಡೆಂಡ್, ಬೋನಸ್ ಷೇರುಗಳೇ ಹೂಡಿಕೆ ನಿರ್ಧಾರದ ಕೇಂದ್ರ ಬಿಂದುಗಳಾಗಿದ್ದವು. ಒಂದು ಕಂಪನಿ ವಿತರಿಸಬಹುದಾದ ಡಿವಿಡೆಂಡ್ ಪ್ರಮಾಣ, ಅದಕ್ಕನುಗುಣವಾಗಿ ಕಂಪನಿಗಳು ಪ್ರದರ್ಶಿಸುವ ಆಂತರಿಕ ಸಾಧನೆಗಳು ಮುಖ್ಯವಾಗಿರುತ್ತಿದ್ದವು.
ಅಂದಿನ ದಿನಗಳಲ್ಲಿ ಸುದ್ಧಿಸಮಾಚಾರಗಳು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ, ಕಾರಣ ತಾಂತ್ರಿಕತೆಯು ಸಂಪೂರ್ಣವಾಗಿ ಅಳವಡಿಕೆಯಾಗಿರಲಿಲ್ಲ, ಅದರ ಬೆಳವಣಿಗೆಯಿನ್ನೂ ಅಂಬೆಗಾಲಿಡುವ ಹಂತದಲ್ಲಿತ್ತು. ಕೇವಲ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ಧಿಯೇ ನಿರ್ಧಾರಗಳಿಗೆ ಮೂಲವಾಗುತ್ತಿತ್ತು. ಅಲ್ಲದೆ ಈಗಿನಂತೆ ಕಂಪನಿಗಳಲ್ಲುಂಟಾಗುವ ಪ್ರತಿಯೊಂದು ಸೂಕ್ಷ್ಮವಾದ ಬದಲಾವಣೆಯನ್ನು ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ತಿಳಿಸುವ ಮತ್ತು ಅದನ್ನು ತಕ್ಷಣದಲ್ಲಿಯೇ ಲಭ್ಯವಾಗುವಂತಹ ಅಂತರ್ಜಾಲ ವ್ಯವಸ್ಥೆ ಇರದ ಕಾರಣ ಮಾಹಿತಿಗಳು ಕೇವಲ ಕೆಲವೇ ವಹಿವಾಟುದಾರರಿಗೆ ಲಭ್ಯವಾಗುತ್ತಿದ್ದು, ಅವರು ಅದನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳಲು ಸಾಧ್ಯತೆ ಇತ್ತು. ಆಗಿನ ದಿನಗಳಲ್ಲಿ ಕಂಪನಿಗಳ ಆಂತರಿಕ ಸಾಧನೆಯೇ ಹೂಡಿಕೆಗೆ ಪೂರಕ ಅಂಶವಾಗಿತ್ತು. ಆದರೆ ಬದಲಾದ ವಾತಾವರಣ, ದೃಷ್ಟಿಕೋನ, ವಿದ್ಯಮಾನ, ಚಿಂತನೆಗಳೊಂದಿಗೆ ಬೃಹತ್ ಸಂಖ್ಯಾಗಾತ್ರದ ಹೂಡಿಕೆದಾರರ ಬೆಳವಣಿಗೆ, ವಿದೇಶಿ ವಿತ್ತೀಯ ಸಂಸ್ಥೆಗಳೊಂದಿಗೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು, ಸಾಹುಕಾರಿ ಹೂಡಿಕೆದಾರರ ಆಸಕ್ತಿ ಹೆಚ್ಚಿದ ಕಾರಣ, ಪೇಟೆಯೊಳಗೆ ಹರಿದು ಬರುತ್ತಿರುವ ಹಣದ ಹೊಳೆ ಎಲ್ಲವೂ ಷೇರುಪೇಟೆಯ ಹೂಡಿಕೆಯ ಶೈಲಿಯನ್ನೇ ಬದಲಿಸಿಬಿಟ್ಟಿದೆ.
ಫಂಡಮೆಂಟಲ್ಸ್ ಮತ್ತು ಟೆಕ್ನಿಕಲ್ಸ್ ಮಿಶ್ರಣ ಅನಿವಾರ್ಯ
ಟೆಕ್ನಿಕಲ್ಸ್ ಎಂಬ ಮಾದರಿಯು ಎಷ್ಠು ಅಗಾಧವಾಗಿ ಬೆಳೆದಿದೆ ಎಂದರೆ ಕಂಪನಿಗಳ ಸಾಮರ್ಥ್ಯವನ್ನರಿಯಲು ಕೇಂದ್ರ ಬಿಂದುವಾದ ಆಂತರಿಕ ಸಾಧನೆಗಳನ್ನು ಹೊರತು ಪಡಿಸಿ ಎಲ್ಲಾ ಕೋನಗಳನ್ನೂ ಇದು ಒಳಗೊಂಡಿದೆ. ಈ ದಿಶೆಯಲ್ಲಿ ಒಂದು ಹೂಡಿಕೆ ಯಶಸ್ಸುಕಾಣಬೇಕಾದಲ್ಲಿ ಈ ಎರಡೂ ವಿಧಗಳಾದ ಫಂಡಮೆಂಟಲ್ಸ್ ಮತ್ತು ಟೆಕ್ನಿಕಲ್ಸ್ ವಿಧಗಳ ಮಿಶ್ರಣವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಈಗಿನ ದಿನಗಳಲ್ಲಿ ನಾವುಗಳು ಮೂಲವಾದ ಅಂಶಗಳನ್ನು ಕಡೆಗಣಿಸಿ, ಹೊರಗಿನದಕ್ಕೆ ಹೆಚ್ಚಿನ ಆದ್ಯತೆ ನೀಡುವ ಕಾರಣ ಗೊಂದಲಕ್ಕೊಳಗಾಗುವ ಸಂದರ್ಭಗಳೇ ಹೆಚ್ಚು. ಅಲಂಕಾರಿಕ ವಿಶ್ಲೇಷಣೆಗಳಿಗೆ ಹೆಚ್ಚು ಹೆಚ್ಚು ವೇಟೇಜ್ ನೀಡುವ ಪ್ರವೃತ್ತಿಯು ಯಶಸ್ಸಿನಿಂದ ವಂಚಿತರನ್ನಾಗಿಸುತ್ತಿದೆ. ನಮ್ಮಲ್ಲಿ ಹೆಚ್ಚುತ್ತಿರುವ ದುರಾಸೆಗಳೇ ಮೂಲ ಕಾರಣವಾಗಿದೆ. ಕೆಲವು ಉದಾಹರಣೆಗಳನ್ನು ಗಮನಿಸೋಣ.ಈ ಆಪ್ ನಲ್ಲಿ ವಿಮೆ ಮಾಡಿದಲ್ಲಿ ನೀವು ಕಮೀಷನ್ ಕೊಡಬೇಕಾಗಿಲ್ಲ ಎಂಬುದನ್ನೇ ಹೈಲೈಟ್ ಮಾಡುವ ಜಾಹಿರಾತಿಗೆ ಹೆಚ್ಚು ಸ್ಪಂದಿಸುವ ನಾವು, ಮೂಲತ: ಅವಶ್ಯವಿರುವ ವಿಮಾ ಯೋಜನೆಗೆ ಹೆಚ್ಚಿನ ಆದ್ಯತೆ ನೀಡದೆ ಕೇವಲ ಹೊರಗಿನ ಕಮಿಷನ್ ಎಂಬ ವೆಚ್ಚದ ಮೇಲೆ ಗಮನಹರಿಸುತ್ತೇವೆ. ವಿಮಾ ಯೋಜನೆಯನ್ನಾಧರಿಸಿ ನಿರ್ಧರಿಸಿದಲ್ಲಿ ಕೊಡಬೇಕಾದ ಕಮಿಷನ್ ಕೊಟ್ಟರೂ ಸಹ ಲಾಭದಾಯಕವಾಗಬಹುದು ಎಂಬ ಅಂಶವನ್ನು ಕಡೆಗಣಿಸುತ್ತೇವೆ. ಇದು ಆರ್ಥಿಕ ಸಾಕ್ಷರತೆಯನ್ನು ಮೂಲೆಗುಂಪಾಗಿಸಿದಂತಾಗಿದೆ.
ಈಚಿನ ದಿನಗಳಲ್ಲಿ ಬರುತ್ತಿರುವ ಐಪಿಒ ಗಳು ವಿತರಣೆಯ ಬೆಲೆ ಅತಿ ಹೆಚ್ಚಾಗಿದ್ದು, ವಿತರಣೆಯಲ್ಲಿ ಪಡೆದ ರೀಟೇಲ್ ಗ್ರಾಹಕರಲ್ಲಿ ಹೆಚ್ಚಿನವರಲ್ಲಿ ದೀರ್ಘಕಾಲೀನ ಹೂಡಿಕೆ ಎಂಬ ಚಿಂತನೆಯನ್ನು ಹೊಂದಿರುವುದು ಸಹಜವಾಗಿದೆ. ಇನ್ಫೋಸಿಸ್ ನಂತಹ ಕಂಪನಿಗಳು ನೀಡಿರುವ, ಅವು ವೃದ್ಧಿಸಿರುವ ಬಂಡವಾಳದ ಪ್ರಮಾಣವನ್ನಾಧರಿಸಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಈಗ ಹೂಡಿಕೆ ಎಂಬುದು ಒಂದು ವ್ಯವಹಾರಿಕ ಪ್ರಕ್ರಿಯೆ ಎಂಬುದನ್ನು ಮರೆತುಬಿಡುತ್ತಾರೆ.
ಇನ್ಫೋಸಿಸ್ ಕಂಪನಿಯ ಐಪಿಒ ಬಂದಾಗ ಈಗಿನ ಪ್ರಮಾಣದಲ್ಲಿ ಎಫ್ ಐ ಐ ಗಳು ಭಾಗವಹಿಸುತ್ತಿರಲಿಲ್ಲ. ಆ ಸಂದರ್ಭದಲ್ಲಿ ಷೇರುಗಳು ಭೌತಿಕ ಪತ್ರಗಳಾಗಿದ್ದು, ಡಿಮ್ಯಾಟ್ ನಲ್ಲಿರದ ಕಾರಣ ಚಟುವಟಿಕೆಯು ಒತ್ತಾಯಪೂರ್ವಕವಾಗಿ ದೀರ್ಘಕಾಲೀನ ಹೂಡಿಕೆ ಮಾಡಲೇಬೇಕಿತ್ತು. ಖರೀದಿಸಿದ ಷೇರುಗಳು ವರ್ಗಾವಣೆಗೆ ಕಳುಹಿಸಿದರೆ ಅದು ಹಿಂದಿರುಗಿ ಬರಲು ಅಧಿಕ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಮೊದಲಿನಿಂದಲೂ ಡಿಮ್ಯಾಟ್ ನಲ್ಲಿ ದೊರೆಯುವ ಷೇರುಗಳು ವಹಿವಾಟಿಗೆ ಸಿದ್ದವಾಗಿರುತ್ತವೆ. ಅಲ್ಲದೆ ಈಗಿನಂತೆ ಆಂಕರ್ ಇನ್ವೆಸ್ಟರ್ಸ್ ಯೋಜನೆ ಇರಲಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಲಿಸ್ಟಿಂಗ್ ಆದ ಕಂಪನಿಗಳು ಆರಂಭಿಕ ಶೂರತ್ವದಿಂದ ಮಿಂಚಿ ನಂತರ ಮೂಲೆಗುಂಪಾಗಿ ನೀರಸಮಯವಾಗಿರುತ್ತವೆ.
ಇಂಡಿಗೋ ಪೇಂಟ್ಸ್, ನಝಾರಾ ಟೆಕ್ನಾಲಜೀಸ್, ರೇಲ್ ಟೆಲ್ ಕಾರ್ಪೊರೇಷನ್, ಸೂರ್ಯೋದಯ ಸ್ಮಾಲ್ ಫೈನಾನ್ಸ್, ಹಿಂದಿನ ವಾರ ಲಿಸ್ಟಿಂಗ್ ಆದ ಸೋನಾ ಬಿ ಎಲ್ ಡಬ್ಲು ಪ್ರಿಸಿಷನ್ ಫೋರ್ಜಿಂಗ್ಸ್ ಷೇರು ಎರಡನೇ ದಿನದ ಮಧ್ಯಂತರದಲ್ಲಿ ರೂ.414 ರ ಗರಿಷ್ಠ ತಲುಪಿ ದಿನದ ಅಂತ್ಯದಲ್ಲಿ ರೂ.364 ಕ್ಕೆ ಕುಸಿಯುವಂತಹುದು ವ್ಯವಹಾರಿಕ ಬೆಳವಣಿಗೆಯಾಗಿದ್ದು ಕಂಪನಿಯ ಆಂತರಿಕ ಬೆಳವಣಿಗೆಯಲ್ಲ. ಇಲ್ಲಿ ಅಲ್ಪ ಸಮಯದಲ್ಲಿ ಲಭ್ಯವಿರುವ ಅಸಹಜ ಲಾಭವು ಹೆಚ್ಚಿನ ನಿರೀಕ್ಷೆಯನ್ನು ಬಿತ್ತಿ ಅವಕಾಶ ವಂಚಿತರನ್ನಾಗಿಸುತ್ತದೆ.
ಕ್ಲಾರಿಯಂಟ್ ಕೆಮಿಕಲ್ಸ್ (ಇಂಡಿಯಾ) ಲಿ:
ಈ ಕಂಪನಿಯು ಹಿಂದಿನ ತಿಂಗಳು ಪ್ರತಿ ಷೇರಿಗೆ ರೂ.15 ರಂತೆ ಡಿವಿಡೆಂಡ್ ಘೊಷಿಸಿದೆ. ಇದನ್ನು ವಿತರಿಸಲು ಆಗಸ್ಟ್ ನಲ್ಲಿ ರಿಕಾರ್ಡ್ ಡೇಟನ್ನು ಪ್ರಕಟಿಸಿದೆ. ಆದರೆ ಈ ತಿಂಗಳಲ್ಲಿ ಷೇರಿನ ಬೆಲೆಯು ರೂ.481 ರ ಸಮೀಪದಿಂದ ರೂ.612 ರವರೆಗೂ ಏರಿಳಿತ ಪ್ರದರ್ಶಿಸಿದೆ. ಶುಕ್ರವಾರ 25 ರಂದು ರೂ.577 ರ ಸಮೀಪದಿಂದ ರೂ.612 ರವರೆಗೂ ಏರಿಕೆ ಕಂಡು ರೂ.583 ರಲ್ಲಿ ಕೊನೆಗೊಂಡಿದೆ. ಇದೇ ರೀತಿ ಈ ತಿಂಗಳ 7 ರಂದು ರೂ.60 ರಷ್ಟು, 8 ರಂದು ರೂ.30 ರಷ್ಟು, 14 ರಂದು ಷೇರಿನ ಬೆಲೆ ರೂ.538 ರಿಂದ ರೂ.605 ರವರೆಗೂ ಏರಿಕೆ ಪ್ರದರ್ಶಿಸಿ ರೂ.584 ರಲ್ಲಿ ಕೊನೆಗೊಂಡಿದೆ. 16 ರಂದು ಸುಮಾರು ರೂ.30 ರಷ್ಟು, 18 ರಂದು ಸುಮಾರು ರೂ.35 ರಷ್ಟು ಏರಿಳಿತಗಳನ್ನು ಪ್ರದರ್ಶಿಸಿರುವುದರ ಹಿಂದೆ ಕಂಪನಿ ವಿತರಿಸಲಿರುವ ಡಿವಿಡೆಂಡ್ ಪ್ರಮಾಣವೇ ಮೂಲವಾಗಿದೆ.
ಟಾಟಾ ಸ್ಟೀಲ್ ಲಿ:
ಟಾಟಾ ಸ್ಟೀಲ್ ಕಂಪನಿಯ ತ್ರೈಮಾಸಿಕ ಫಲಿತಾಂಶವು ಅತ್ಯುತ್ತಮವಾಗಿದ್ದ ಕಾರಣ ಷೇರಿನ ಬೆಲೆಯು ರೂ.1,246 ರ ವಾರ್ಷಿಕ ಗರಿಷ್ಠತಲುಪಿತು. ಕಂಪನಿಯು ಪ್ರತಿ ಷೇರಿಗೆ ರೂ.25 ರಂತೆ ಡಿವಿಡೆಂಡ್ ನ್ನು ಘೋಷಿಸಿತು. ಮೇ ತಿಂಗಳಲ್ಲಿ ಘೋಷಿಸಿದ ಫಲಿತಾಂಶ ಮತ್ತು ಡಿವಿಡೆಂಡ್ ವಿತರಣೆಗೆ ಜೂನ್ 17 ನಿಗಧಿತ ದಿನವಾಗಿಸಿತ್ತು. ಮೇ ತಿಂಗಳ ಕೊನೆವಾರದಲ್ಲಿ ಷೇರಿನ ಬೆಲೆ ರೂ.1,070 ರವರೆಗೂ ಕುಸಿಯಿತು. ಈ ದರವು ಕಂ-ಡಿವಿಡೆಂಡ್ ಸೌಲಭ್ಯದ್ದಾಗಿದ್ದು, ಎಕ್ಸ್ ಡಿವಿಡೆಂಡ್ ದಿನದವರೆಗೂ ಚಟುವಟಿಕೆ ಭರಿತವಾಗಿದ್ದು ಜೂನ್ 16 ರಂದು ಷೇರಿನ ಬೆಲೆ ರೂ.1,180 ರವರೆಗೂ ಏರಿಕೆ ಕಂಡಿತು. ಎಕ್ಸ್ ಡಿವಿಡೆಂಡ್ ದಿನವಾದ 17 ರಂದು ರೂ.1,096 ವರೆಗೂ ತಲುಪಿತ್ತು ಅಲ್ಲಿಂದ ಶುಕ್ರವಾರ 25 ರಂದು ರೂ.1,170 ರವರೆಗೂ ಏರಿಕೆ ಪಡೆದುಕೊಂಡಿತು. ಆಂದರೆ ಕಂ- ಡಿವಿಡೆಂಡ್ ದರದ ಗರಿಷ್ಠ ರೂ.1,246 ರಿಂದ ರೂ.1,070 ರವರೆಗೂ ಕುಸಿದ ನಂತರ ಎಕ್ಸ್ ಡಿವಿಡೆಂಡ್ ರೂ.1,096 ರಿಂದ ರೂ.1,170 ಕ್ಕೆ ಜಿಗಿದಿರುವುದಕ್ಕೆ ಕಾರಣ ಕಾರ್ಪೊರೇಟ್ ಫಲದ ಪ್ರಭಾವವಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಖರೀದಿಸಿದವರಿಗೆ ಡಬಲ್ ದಮಾಕಾ, ಕ್ಯಾಪಿಟಲ್ ವೃದ್ಧಿಯೊಂದಿಗೆ ಡಿವಿಡೆಂಡ್ ಸಹ ಲಭ್ಯ.
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ:
ಈ ಕಂಪನಿಯು ಜೂನ್ 17 ರಂದು ಡಿವಿಡೆಂಡ್ ನೊಂದಿಗೆ ಬೋನಸ್ ಷೇರು ಪ್ರಕಟಿಸುವುದೆಂದು ಷೇರಿನ ಬೆಲೆ ರೂ.251 ರವರೆಗೂ ಏರಿಕೆ ಕಂಡಿತು. ಆದರೆ ಡಿವಿಡೆಂಡ್ ಮತ್ತು ಬೋನಸ್ ಘೋಷಿಸಿದ ನಂತರ ಷೇರಿನ ಬೆಲೆ ರೂ.228 ಕ್ಕೆ ಕುಸಿದು ಈಗ ರೂ.230 ರ ಸಮೀಪವಿದೆ. ಜುಲೈ 20 ರ E G M ಮುಗಿದ ನಂತರ ಬೋನಸ್ ಷೇರಿಗೆ ನಿಗದಿತ ದಿನ ಪ್ರಕಟವಾಗಬಹುದು. ಅಲ್ಲಿಯವರೆಗೂ ಷೇರಿನ ಬೆಲೆ ಏರಿಳಿತಗಳನ್ನು ಪ್ರದರ್ಶಿಸುವ ಸಾಧ್ಯತೆ ಇದೆ.
ಗುಡ್ ಇಯರ್ ಇಂಡಿಯಾ ಲಿ :
ಈ ಕಂಪನಿಯು ತನ್ನ ಸ್ಥಿರತೆಯ ಸಾಧನೆಯನ್ನು ಪ್ರದರ್‌ಶಿಸಿದೆ. ಪ್ರತಿ ಷೇರಿಗೆ ರೂ.18 ರಂತೆ ಡಿವಿಡೆಂಡ್ ನೊಂದಿಗೆ ಸ್ಪೆಷಲ್ ಡಿವಿಡೆಂಡ್ ಎಂದು ರೂ.80 ನ್ನು ಘೋಷಿಸಿದೆ. ಅಂದರೆ ಒಂದು ಷೇರಿಗೆ ರೂ.98 ರಂತೆ ಡಿವಿಡೆಂಡ್ ವಿತರಿಸಲು ಆಗಷ್ಠ್ 6 ನಿಗದಿತ ದಿನವಾಗಿದೆ. ಡಿವಿಡೆಂಡ್ ಘೋಷಣೆಯಾದ ನಂತರ ಷೇರಿನ ಬೆಲೆಯು ರೂ.950 ರವರೆಗೂ ಕುಸಿದಿದ್ದು ಶುಕ್ರವಾರ ರೂ.1,070 ನ್ನು ದಾಟಿದೆ. ಆಗಸ್ಠ್ 6 ರವರೆಗೂ ಡಿವಿಡೆಂಡ್ ಗೆ ಅವಕಾಶವಿದ್ದು ಬೆಲೆ ಕುಸಿತವು ಹೂಡಿಕೆಗೆ ಯೋಗ್ಯವಾಗಬಹುದು.
ಇದೇ ರೀತಿ ಪ್ರಮುಖ ಕಂಪನಿಗಳಾದ ಟೆಕ್ ಮಹೀಂದ್ರ, ಹೆಚ್ ಸಿ ಎಲ್ ಟೆಕ್, ಲಾರ್ಸನ್ ಅಂಡ್ ಟೋಬ್ರೊ, ಸಿ ಇ ಎಸ್ ಇ, ಹ್ಯಾಪಿಯೆಸ್ಟ್ ಮೈಂಡ್ಸ್, ಪಿರಮಲ್ ಎಂಟರ್ ಪ್ರೈಸಸ್, ಗಳು ಹೆಚ್ಚಿನ ಏರಿಳಿತಗಳನ್ನು ಡಿವಿಡೆಂಡ್ ಘೋಷಿಸಿದ ನಂತರದಲ್ಲಿ ಪ್ರದರ್ಶಿಸಿವೆ.
ಡಿವಿಡೆಂಡ್ ವಿತರಣೆ ಬಾಕಿ ಇರುವ ಕಂಪನಿಗಳು:
ಪ್ರತಿ ಷೇರಿಗೆ ರೂ.58 ರಂತೆ ಡಿವಿಡೆಂಡ್ ಘೋಷಿಸಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ರೂ.22.75 ರ ಡಿವಿಡೆಂಡ್ ಪ್ರಕಟಿಸಿರುವ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಪ್ರತಿ ಷೇರಿಗೆ ರೂ.10 ರಂತೆ ಡಿವಿಡೆಂಡ್ ಪ್ರಕಟಿಸಿರುವ ರೂಪಾ ಅಂಡ್ ಕಂಪನಿ, ಯುನಿ ಅಬೆಕ್ಸ್ ಅಲಾಯ್, ಪ್ರತಿ ಷೇರಿಗೆ ರೂ.200 ರಂತೆ ಲಾಭಾಂಶ, 1:1 ಅನುಪಾತದ ಬೋನಸ್ ಮತ್ತು ರೂ.5 ರಿಂದ ರೂ.2 ಕ್ಕೆ ಮುಖಬೆಲೆ ಸೀಳಿಕೆ ಪ್ರಕಟಿಸಿರುವ ಟೈಡ್ ವಾಟರ್ ಹೌಸ್, ಅಮರರಾಜ ಬ್ಯಾಟರೀಸ್, ನಂತಹ ಅನೇಕ ಕಂಪನಿಗಳು ಮುಂದಿನ ದಿನಗಳಲ್ಲಿ ಹೂಡಿಕೆದಾರರಿಗೆ ಲಾಭದಾಯಕವಾಗಬಹುದು. ನೆನಪಿರಲಿ, ಷೇರಿನ ಮೌಲ್ಯಕ್ಕೆ ಹೋಲಿಕೆ ಮಾಡಿದಾಗ ಡಿವಿಡೆಂಡ್ ಪ್ರಮಾಣ ಆಕರ್ಷಕವಲ್ಲದಿದ್ದರೂ, ಅದು ಏರಿಳಿತಗಳಿಗೆ ಪೂರಕ ಅಂಶವಾಗಿರುತ್ತದೆ.
ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಅಲ್ಪ ಮೌಲ್ಯದ ಷೇರುಗಳ ಆಯ್ಕೆಗೆ ಮುನ್ನ ಗಮನಿಸಿರಿ:
ಪೇಟೆಯ ಇಂಡೆಕ್ಸ್ ಗಳು ಗರಿಷ್ಠದಲ್ಲಿರುವಾಗ ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಅಲ್ಪ ಮೌಲ್ಯದ ಷೇರುಗಳನ್ನು ಹೆಚ್ಚು ಹೆಚ್ಚು ಶಿಫಾರಸುಮಾಡಲಾಗುತ್ತಿದೆ. ಇಲ್ಲಿ ಹೂಡಿಕೆದಾರರು ಗಮನದಲ್ಲಿರಿಸಿ ನಿರ್ಧರಿಸಲು ಕೆಲವು ಉದಾಹರಣೆಗಳನ್ನು ನೀಡಲಾಗಿದೆ.
- ಈಗ ರೂ.32 ಸಮೀಪವಿರುವ ಜಿ ಎಂ ಆರ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಯ ಷೇರಿನ ಬೆಲೆ 2008 ರಲ್ಲಿ ರೂ.250 ರ ಸಮೀಪವಿತ್ತು. 2009 ರಲ್ಲಿ ಷೇರಿನ ಮುಖಬೆಲೆಯನ್ನು ರೂ.2 ರಿಂದ ರೂ.1 ಕ್ಕೆ ಸೀಳಲಾಯಿತಾದರೂ ಷೇರಿನ ಬೆಲೆ ರೂ.125 ತಲುಪದಾಗಾದೆ, ಆಗ ಹೂಡಿಕೆ ಮಾಡಿದವರು 12 ವರ್ಷವಾದರೂ ತಮ್ಮ ಹೂಡಿಕೆ ಹಣವನ್ನು ಹಿಂಪಡೆಯಲು ಅಸಾಧ್ಯವಾಗಿದೆ.
- ಬಾಂಬೆ ರೇಯಾನ್ ಫ್ಯಾಷನ್ಸ್ ಕಂಪನಿಯ ಷೇರಿನ ಬೆಲೆ 2018 ರಲ್ಲಿ ರೂ.130 ರಲ್ಲಿದ್ದು ಇಂದು ರೂ.11 ರ ಸಮೀಪವಿದೆ. ಕಂಪನಿಯು ಹೆಚ್ಚಿನ ಹಾನಿಯಲ್ಲಿದೆ.
- 2014 ರಲ್ಲಿ ಷೇರಿನ ಬೆಲೆ ರೂ.560 ರಲ್ಲಿದ್ದ ಅಬ್ಬಾನ್ ಆಫ್ ಷೋರ್ ಈಗ ರೂ.45 ರ ಸಮೀಪವಿದೆ.
- 2008 ರಲ್ಲಿ ರೂ.122 ರ ಸಮೀಪವಿದ್ದ ಜಯಪ್ರಕಾಶ್ ಪವರ್ ವೆಂಚರ್ಸ್ ಷೇರಿನಬೆಲೆ ರೂ.5.60 ರ ಸಮೀಪವಿದೆ.
- 2014 ರಲ್ಲಿ ರೂ.700 ರಲ್ಲಿದ್ದ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಷೇರಿನ ಬೆಲೆ ರೂ.83 ರ ಸಮೀಪವಿದೆ. ಈ ವರ್ಷ ರೂ.19ರ ಕನಿಷ್ಠ ಬೆಲೆಗೆ ಕುಸಿದಿದ್ದನ್ನು ಮರೆಯುವಂತಿಲ್ಲ.
ಇಂತಹ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಹೂಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವುದು ಅವಶ್ಯಕ. ಇಂದಿನ ಷೇರುಪೇಟೆಯಲ್ಲಿ ಯಶಸ್ಸು ಕಾಣಲು ಸದಾ ಎಚ್ಚರವಾಗಿರುವಂತಹ ಶ್ವಾನ ನಿದ್ದೆ, ಸದಾ ಲಾಭಗಳಿಕೆಯ ಅವಕಾಶ ಕೈಗೆಟುಕಿಸಿ ಕೊಳ್ಳಬಹುದಾದ ಬಕ ಧ್ಯಾನ, ಇವುಗಳು ಅಳವಡಿಕೆಯಾದರೆ ಗಜ ಸ್ನಾನದ ತೃಪ್ತಿ ದೊರೆಯುತ್ತದೆ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ತಮ್ಮ ಸರಳಸುಂದರವಾದ ಅತ್ಯಮೂಲ್ಯವಾದ ಮಾಹಿತಿಗಳನ್ನೊಳಗೊಂಡ ಲೇಖನಕ್ಕಾಗಿ ತುಂಬ ಧನ್ಯವಾದಗಳು. ತುಂಬ ಉಪಯುಕ್ತ ಲೇಖನ
ಧನ್ಯವಾದಗಳು ಮಾನ್ಯ ಶಾಂತಕುಮಾರ್ ರವರೇ
Dear Krupal Sir,
From where all you dig out these details, hats off to you!
N S Srinivasa Murthy