ಜುಲೈ1ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ಆರಂಭವಾಗುತ್ತಿಲ್ಲ. ನಮ್ಮ ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲು ಕ್ರಿಯಾ ಯೋಜನೆಯನ್ನು ರೂಪಿಸಬೇಕೆನ್ನುವುದು ಎಲ್ಲರ ಒಲವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಈ ಕುರಿತು ಶಿಕ್ಷಣ ತಜ್ಞರ ಜೊತೆ ಸುದೀರ್ಘ ಸಭೆ ನಡೆಸಲಾಗಿದೆ. ಡಾ.ದೇವಿಶೆಟ್ಟಿ ಅವರ ವರದಿಯನ್ನು ಸಹ ಸಭೆಯಲ್ಲಿ ಅವಲೋಕಿಸಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ನಮ್ಮ ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲು ಕ್ರಿಯಾಯೋಜನೆಯನ್ನು ರೂಪಿಸಬೇಕೆನ್ನುವುದು ಎಲ್ಲರ ಒಲವಾಗಿದೆ ಎಂದು ತಿಳಿಸಿದರು.
ವಿದ್ಯಾಗಮ 2.0
ಕಳೆದ ಸಾಲಿನಲ್ಲಿ ನಾವು ಜಾರಿಗೆ ತಂದ ಯಶಸ್ವಿ ಉಪಕ್ರಮವಾದ ವಿದ್ಯಾಗಮ 2.0 ಅನುಷ್ಠಾನ ಮಾಡಬೇಕೆನ್ನುವುದು ಎಲ್ಲರ ಅಪೇಕ್ಷೆಯಾಗಿದೆ. ಆರೋಗ್ಯ ಇಲಾಖೆ ಹಲವಾರು ಆಯಾಮಗಳನ್ನು ಅವಲೋಕಿಸಿ ಶಾಲೆ ತೆರೆಯಲು ಅನುಮತಿಯನ್ನು ನೀಡಬೇಕಾಗುತ್ತದೆ. ಅದಕ್ಕಾಗಿಯೇ, ವಿಷಯ ಪರಿಣಿತರು, ಸರ್ಕಾರದ ತಾಂತ್ರಿಕಸಲಹಾ ಸಮಿತಿ ಸದಸ್ಯರು, ಮಕ್ಕಳ ತಜ್ಞರು ಸೇರಿದಂತೆ ಈ ಬಗ್ಗೆ ನಿರಂತರವಾದ ಸಲಹೆಗಳನ್ನು ನೀಡುವ ಶಿಕ್ಷಣ ಟಾಸ್ಕ್ ಫೋರ್ಸ್ ರಚನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನೆರಡು ಮೂರು ದಿನಗಳಲ್ಲಿ ಈ ಕುರಿತಂತೆ ಅಧಿಕೃತ ಆದೇಶ ಹೊರಬೀಳಲಿದೆ ಎಂದರು.
ಈ ಸಮಿತಿ ವರ್ಷ ಪೂರ್ತಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಅವಲೋಕಿಸಲಿದೆ. ಕಾಲಕಾಲಿಕ ವರದಿಗಳನ್ನು ಸಲ್ಲಿಸಲಿದೆ. ಇಂದಿನ ಸಂದರ್ಭದಲ್ಲಿ ಕೇಂದ್ರೀಕೃತ ನಿರ್ಧಾರಗಳಿಗಿಂತಾ ಸ್ಥಳೀಯ ಅವಶ್ಯಕತೆಗೆ ಅನುಗುಣವಾದ ನಿರ್ಧಾರಗಳು ಮುಖ್ಯವಾಗುತ್ತವೆ. ಉದ್ದೇಶಿತ ಟಾಸ್ಕ್ ಫೋರ್ಸ್ ಈ ರೀತಿಯ ನಿರಂತರತೆಗೆ, ಶಿಕ್ಷಣ ಉತ್ತರ ದಾಯಿತ್ವಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಕಲಿಕೆಯ ಮಟ್ಟವನ್ನು ಅಳೆಯುವುದು, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತರಬಹುದಾದ ಸುಧಾರಣೆಗಳನ್ನು ಅವಲೋಕಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಈ ಸಮಿತಿ ನಿರ್ವಹಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಚಂದನ ಮತ್ತು ದೀಕ್ಷಾ ಪೋರ್ಟಲ್ ನಲ್ಲಿ ಪಾಠಗಳು ಲಭ್ಯ
ಇನ್ನು ಇದೇ ಜುಲೈ ಒಂದರಿಂದ 1-10 ನೇ ತರಗತಿಗಳ ಮಕ್ಕಳ ಉಪಯೋಗಕ್ಕಾಗಿ ದೂರದರ್ಶನದ ಚಂದನ ವಾಹಿನಿಯ ಮೂಲಕ ಪಾಠಗಳನ್ನು ನಾವು ಪ್ರಾರಂಭಿಸುತ್ತಿದ್ದೇವೆ. ದೀಕ್ಷಾ ಪೋರ್ಟಲ್ ನಲ್ಲಿ ಎಲ್ಲ ಪಾಠಗಳ ವಿಡಿಯೋಗಳು, ಆಡಿಯೋಗಳು ಲಭ್ಯವಾಗುವಂತೆ ಮಾಡಿದ್ದೇವೆ. ಸುಮಾರು 22000 ಇ-ಕಂಟೆಂಟ್ ಅಲ್ಲಿ ಲಭ್ಯವಿದೆ ಎಂದು ಸಚಿವರು ಹೇಳಿದರು.
ಮಕ್ಕಳ ವಾಣಿ- ಯೂ ಟ್ಯೂಬ್ ಚಾನೆಲ್ ನಲ್ಲಿಯೂ ಪಾಠಗಳು ಲಭ್ಯವಿರಲಿದೆ. ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಿ ಅವರ ಕಲಿಕೆಯನ್ನು ಪರಾಮರ್ಶೆ ಮಾಡಲಿದ್ದಾರೆ. ಕಳೆದ ಸಾಲಿನಲ್ಲಿ ಆದ ಕಲಿಕೆಯ ನಷ್ಟವನ್ನು ಸರಿತೂಗಿಸುವ ಜವಾಬ್ದಾರಿಯನ್ನು ನಾವು ಹೊರಲಿದ್ದೇವೆ. ಕೋವಿಡ್ ಸಮಯದಲ್ಲಿ ವಾರ್ಷಿಕ ಪರೀಕ್ಷೆಯೆನ್ನುವ ಪರಿಕಲ್ಪನೆಯ ಆಚೆಯೂ ನಾವು ಆಲೋಚನೆ ಮಾಡಬೇಕಾಗಿದೆ. ಅದಕ್ಕಾಗಿ, ಈಗಿನಿಂದಲೇ ಶಿಕ್ಷಕರು ಸಿದ್ಧತೆಗಳನ್ನು ಪ್ರಾರಂಭಿಸಿಕೊಳ್ಳಲಿದ್ದಾರೆ. ನಿರಂತರ ಮೌಲ್ಯಮಾಪನ ಈ ಬಾರಿ ಹಿಂದೆಂದಿಗಿಂತಲೂ ಪರಿಣಾಮಕಾರಿಯಾಗಿರಲಿದೆ ಎಂದು ಸಚಿವರು ಹೇಳಿದರು.