ಕೋವಿಡ್ ಲಸಿಕೆ ಪಡೆದ ತಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಜುಲೈ 15ರನಂತರ ಭೌತಿಕ ತರಗತಿಗಳನ್ನು ಆರಂಭಿಸುವುದಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.
ಎಂ ರಾಮಚಂದ್ರ ಗೌಡ ಅವರು ಪ್ರಕಟಿಸಿದರು.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಇಂದು ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಎಲ್ಲಾ ನಾಗರಿಕರಿಗೂ ಉಚಿತವಾಗಿ ಲಸಿಕೆ ಸಿಗಬೇಕೆಂಬುದು ನಮ್ಮ ಪ್ರಧಾನ ಮಂತ್ರಿಗಳ ಆಶಯ. ಅದರಂತೆ ಸರಕಾರ ಎಲ್ಲೆಡೆಯೂ ಉಚಿತ ಲಸಿಕೆಯ ವ್ಯವಸ್ಥೆ ಮಾಡಿದೆ. ಈ ಸೌಲಭ್ಯವನ್ನು ಬಳಸಿಕೊಂಡು ರಾಜ್ಯದಲ್ಲಿಯೇ ಮೊಟ್ಟ ಮೊದಲನೆಯದಾಗಿ ಸರಕಾರಿ ಕಾಲೇಜೊಂದು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಮುಂದಾಗಿದ್ದು ಪ್ರಶಂಸನೀಯ ಎಂದರು. ಇದಕ್ಕೆ ಸಹಕಾರ ನೀಡಿದ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಸಿಬ್ಬಂದಿ ವರ್ಗವನ್ನು ಅವರು ಅಭಿನಂದಿಸಿದರು.

ತಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಮೂರು ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು, ಸಂಗೊಳ್ಳಿ ರಾಯಣ್ಣ ಕಾಲೇಜಿನ ಮೇಲ್ಪಂಕ್ತಿಯನ್ನು ಅನುಸರಿಸಿ ತಮ್ಮ ತಮ್ಮ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಿಸಲು ಕಾರ್ಯಪ್ರವೃತ್ತರಾಗುವಂತೆ ಅವರು ಕರೆ ನೀಡಿದರು.ಕೋವಿಡ್ ಲಸಿಕೆಯ ಬಗ್ಗೆ ಯಾವುದೇ ಭೀತಿ ಇಲ್ಲದೆ ವಿದ್ಯಾರ್ಥಿಗಳು ಲಸಿಕೆ ಪಡೆದು ತಮ್ಮ ಮನೆಯವರಿಗೂ ಲಸಿಕೆ ಪಡೆಯಲು ಪ್ರೇರೇಪಿಸುವಂತೆ ಅವರು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಜಯಪ್ಪ,ಸರ್ಕಾರದ ಆದೇಶದಂತೆ ನಾವು ಮೊದಲ ಹಂತದಲ್ಲಿ 215 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನು ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಮಹಾವಿದ್ಯಾಲಯದ ಒಟ್ಟು 1450 ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುವುದು ಎಂದರು. ಈ ಕಾರ್ಯದಲ್ಲಿ ನೆರವಾದ ವಂಟಮೂರಿ ಕಾಲೋನಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಅವರು ಅಭಿನಂದನೆ ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ . ಬಸರಾಜ ಪದ್ಮಶಾಲಿ,
ವಾಣಿಜ್ಯ ಪ್ರಾಧ್ಯಾಪಕರ ಸಂಘದ ರಾಜ್ಯ ಅಧ್ಯಕ್ಷರಾದ ಪ್ರೊ. ಸಿ ಆರ್ ಗುಡಸಿ ಹಾಗೂ ವಿಶ್ವವಿದ್ಯಾಯಲದ ವೈದ್ಯಾಧಿಕಾರಿ ಡಾ. ಯಶೋಧಾ ಪೋತದಾರ ಅವರು ಉಪಸ್ಥಿತರಿದ್ದರು.ವೈದ್ಯಾಧಿಕಾರಿಗಳಾದ ಡಾ. ಜಯಾನಂದ ಡಿ ಅವರು ಮಾತನಾಡಿ ಲಸಿಕೆ ಹಾಕಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.
ಉಪಪ್ರಾಚಾರ್ಯರಾದ ಅನಿಲ ರಾಮದುರ್ಗ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಡಾ ಮಲ್ಲೇಶ ದೊಡ್ಡಲಕ್ಕಣ್ಣವರ ವಂದಿಸಿದರು.ಡಾ ಜ್ಯೋತಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.