21.2 C
Karnataka
Sunday, September 22, 2024

    ಕನ್ನಮಂಗಲದಲ್ಲಿ ಮಿನಿ ಲಾಲ್ ಬಾಗ್, ಕಾಡುಗೋಡಿಯಲ್ಲಿ ಟ್ರೀ ಪಾರ್ಕ್, ನಿಂಬೆಕಾಯಿಪುರದಲ್ಲಿ ಜನಪದರು ರಂಗಮಂದಿರ ಲೋಕಾರ್ಪಣೆ

    Must read

    ಬೆಂಗಳೂರಿನ ಜನರ ಜೀವನ ಮಟ್ಟದಲ್ಲಿ ಎಲ್ಲ ರೀತಿಯ ರೀತಿಯಲ್ಲಿಯೂ ಉತ್ಕೃಷ್ಟತೆಯನ್ನು ಸಾಧಿಸುವ ಮೂಲಕ ಬೆಂಗಳೂರನ್ನು ವಿಶ್ವದರ್ಜೆಯ ನಗರವಾಗಿ ರೂಪಿಸುವುದರ, ಜೊತೆಗೆ ಹಸಿರು ಬೆಂಗಳೂರು ಎಂಬ ಹೆಗ್ಗಳಿಕೆಯನ್ನು ಕಾಪಾಡಿಕೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಇಂದು ಕಾಡುಗೋಡಿಯಲ್ಲಿ ವೃಕ್ಷೋದ್ಯಾನ, ಕನ್ನಮಂಗಲದಲ್ಲಿ ಸಸ್ಯಶಾಸ್ತ್ರೀಯ ತೋಟ ,ಕನ್ನಮಂಗಲ ಕೆರೆ ಉದ್ಘಾಟನಾ ಕಾರ್ಯಕ್ರಮ ಹಾಗೂ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಪರಿವೀಕ್ಷಣೆ ಹಾಗೂ ಜನಪದರು ರಂಗ ಮಂದಿರ ಉದ್ಘಾಟನೆ ಸಮಾರಂಭಗಳಲ್ಲಿ ಪಾಲ್ಗೊಂಡ ಅವರು ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದ್ದು, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಹಸರೀಕರಣ, ಸ್ವಚ್ಚತೆ ಹಾಗೂ ಸುಗಮ ಸೇವಾ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

    ಪರಿಸರ ಸಂರಕ್ಷಣೆ, ಹಸಿರೀಕರಣಗಳ ಕಡೆ ಇಂದು ಬೆಂಗಳೂರು ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕಾಡುಗೋಡಿಯ ಟ್ರೀ-ಪಾರ್ಕ್, ಕನ್ನಮಂಗಲದ ಸಸ್ಯೋದ್ಯಾನ, ಅಭಿವೃದ್ಧಿ ಪಡಿಸಲಾದ ಕನ್ನಮಂಗಲ ಕೆರೆ, ನಿಂಬೆಕಾಯಿಪುರದ ಗ್ರಾಮದ “ಜನಪದರು” ರಂಗಮಂದಿರವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ.ಕಾಡುಗೋಡಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ 22 ಎಕರೆಯಲ್ಲಿ ನಿರ್ಮಾಣವಾಗಿರುವ ಟ್ರೀ ಪಾರ್ಕ್ ಹಸಿರು ಬೆಂಗಳೂರು ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.

    ಕಾಡುಗೋಡಿಯ ಟ್ರೀ-ಪಾರ್ಕ್

    ಬೆಂಗಳೂರು ಮಿಷನ್-2022ರಲ್ಲಿ ಬೆಂಗಳೂರು ನಾಗರಿಕರಿಗೆ ಉತ್ತಮ ಹಸಿರು ಪರಿಸರವನ್ನು ಒದಗಿಸುವ ನಮ್ಮ ವಚನಕ್ಕೆ ಬದ್ಧರಾಗಿರುವುದಕ್ಕೆ ಈ ವೃಕ್ಷೋದ್ಯಾನ ಸಾಕ್ಷಿಯಾಗಿದೆ. ಈ ವೃಕ್ಷೋದ್ಯಾನದಲ್ಲಿ ರಾಶಿವನ, ನಕ್ಷತ್ರವನ, ಹಾಗೂ ಔಷಧಿಯ ಸಸಿಗಳನ್ನು ನೆಡಲಾಗಿದ್ದು, ಸಾರ್ವಜನಿಕರ ವಿಹಾರಕ್ಕೆ ಅನುಕೂಲತೆಗಳು ಹಿರಿಯ ನಾಗರಿಕರಿಗೆ ಒಪನ್-ಜಿಮ್, ಮಕ್ಕಳಿಗೆ ಆಟದ ಅಂಗಳ ಹಾಗೂ ನೈಸರ್ಗಿಕ ಪಥಗಳ ನಿರ್ಮಾಣವಾಗಿರುವುದು ಈ ಭಾಗದ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಅಟಲ್ ಬಿಹಾರಿ ಸಸ್ಯಶಾಸ್ತ್ರೀಯ ತೋಟ

    ಬೆಂಗಳೂರು ಪೂರ್ವದ ಕನ್ನಮಂಗಲದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ನಿರ್ಮಿಸಿರುವ 70ಎಕರೆ ಸಸ್ಯಶಾಸ್ತ್ರೀಯ ತೋಟ (ಮಿನಿ ಲಾಲ್‍ಬಾಗ್) ಇನ್ನು ಮುಂದೆ ಮಾಜಿ ಪ್ರದಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಯವರ ಸ್ಮರಣಾರ್ಥ ಅಟಲ್ ಬಿಹಾರಿ ಸಸ್ಯಶಾಸ್ತ್ರೀಯ ತೋಟ ಎಂದು ಕರೆಯಲ್ಪಡುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.ಉತ್ಕೃಷ್ಟ ತಳಿಯ ಹಲವು ಹಣ್ಣುಗಳ ಔಷಧಿಗಳ ಗಿಡಗಳು, ಅಲಂಕಾರಿಕಾ ಹಾಗೂ ಸುಗಂಧಿತ ಸಸ್ಯಗಳನ್ನು ಒಳಗೊಂಡ ಈ ಸಸ್ಯ ತೋಟವು ಜೀವ ವೈವಿಧ್ಯತೆಯ ತಾಣವಾಗಿದೆ ಎಂದು ಅವರು ಹೇಳಿದರು.

    ಈಗಾಗಲೇ ಇರುವ ಸಸ್ಯ ಸಂಪತ್ತಿನ ಜೊತೆ, ನಾಗರಿಕರ ಅನುಕೂಲಕ್ಕಾಗಿ ಹಲವಾರು ಸೌಕರ್ಯಗಳನ್ನು ಅಭಿವ್ರದ್ಧಿ ಪಡಿಸಲಾಗಿದೆ. ವಾಯುವಿಹಾರಿಗಳ ಪಥ, ಕುಡಿಯುವ ನೀರಿನ ಘಟಕ, ಶೌಚಾಲಯಗಳು ಒಳಗೊಂಡಂತೆ ಹಲವು ಅಭಿವೃದ್ಧಿ ಕಾರ್ಯಗಳು ಹಮ್ಮಿಕೊಳ್ಳಲಾಗಿದೆ.

    ಮುಂದಿನ ದಿನಗಳಲ್ಲಿ ಈ ಸಸ್ಯಶಾಸ್ತ್ರೀಯ ತೋಟವು ಸಸ್ಯಕಾಶಿಯಾಗಿ ಸಾರ್ವಜನಿಕರಿಗೆ ಶುದ್ದ ಹವೆ, ಆರೋಗ್ಯವಾದ ಬದುಕು ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅರಣ್ಯ ಇಲಾಖೆ ಸಿದ್ಧ ಮಾಡಿರುವ ಟ್ರೀ ಸೆನ್ಸಸ್ ಆಪ್ ಬಿಡುಗಡೆ ಮಾಡಿದರು.

    ಕನ್ನಮಂಗಲ ಕೆರೆ

    ಮಹದೇವಪುರದ ಬಿದರಹಳ್ಳಿ ಹೋಬಳಿಯಲ್ಲಿರುವ ಕನ್ನಮಂಗಲ ಕೆರೆಯನ್ನು ಉದ್ಘಾಟನೆ ಮಾಡಿರುವುದು ನನಗೆ ಸಂತೋಷ ತಂದಿದೆ ಎಂದ ಅವರು ಹದಿನೆಂಟು ಎಕರೆ ಪ್ರದೇಶದಲ್ಲಿರುವ ಕನ್ನಮಂಗಲ ಕೆರೆಯು ಸುಂದರವಾಗಿ ರೂಪುಗೊಂಡಿದೆ, ಸಚಿವರು ಅರವಿಂದ ಲಿಂಬಾವಳಿಯವರ ನೇತೃತ್ವದಲ್ಲಿ ಸ್ಥಳೀಯ ಸ್ವಯಂ ಸೇವಕ ನಿವಾಸಿಗಳ ಗುಂಪಿನ ಸಹಕಾರದೊಂದಿಗೆ ಹೊಸ ರೂಪ ಹೊಂದಿದೆ. ಸ್ಥಳೀಯ ನಿವಾಸಿಗಳು ಹಾಗೂ ಹಲವು ಸಂಸ್ಥೆಗಳು ಇಡೀ ಕೆರೆಯನ್ನು ಸ್ವಚ್ಚಗೊಳಿಸಿ ಅತಿಕ್ರಮಣವನ್ನು ನಿವಾರಿಸಿ ಅಂತರ್ಜಲ ಮಟ್ಟವನ್ನು ಏರಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
    ಹಳ್ಳಿಗಳಿಗೆ ಅಂತರ್ಜಲದ ಮರುಪೂರಣವನ್ನು ಹೆಚ್ಚಸಲು ಈ ಕೆರೆ ನೆರವಾಗಲಿದೆ ಎಂದರು.

    ನಿಂಬೆಕಾಯಿಪುರದ ಗ್ರಾಮದ “ಜನಪದರು” ರಂಗಮಂದಿರ

    ಈ ಭಾಗದ ಸಂಸ್ಕøತಿಯ ಪ್ರತೀಕವಾಗಿ ಸಿದ್ದಗೊಂಡು ನಿಂತಿರುವ ನಿಂಬೆಕಾಯಿಪುರದ ಗ್ರಾಮದ “ಜನಪದರು” ರಂಗಮಂದಿರವು ಈ ಭಾಗದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯಲಿ ಎಂದು ತಿಳಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರೂ.3.5 ಕೋಟಿ ವೆಚ್ಚದಲ್ಲಿ ಒಂದು ಎಕರೆ ವಿಶಾಲ ಜಾಗದಲ್ಲಿ ನಿರ್ಮಿಸಿರುವ ಈ ರಂಗಮಂದಿರ ಅತ್ಯಂತ ವಿಶಿಷ್ಟವಾದದ್ದು, ಏಕೆಂದರೆ ಭಾರತೀಯ ರಂಗಭೂಮಿ ಮಟ್ಟಿಗೆ ತಿರುಗು ರಂಗಮಂದಿರವನ್ನು (ರಿವಾಲ್ವಿಂಗ್ ಸ್ಟೇಜ್) ಹೊಂದಿರುವ ಏಕೈಕ ರಂಗಮಂದಿರ ಎಂಬ ಹೆಗ್ಗಳಿಕೆ ಇದರದ್ದಾಗಿದೆ ಎಂದು ಅವರು ರಂಗಮಂದಿರ ನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಭಾ ಕಾರ್ಯಕ್ರಮದ ನಂತರ ಮಹದೇವಪುರ ಕ್ಷೇತ್ರದ ಮತ್ತೊಂದು ಹಳೆಯ ಮತ್ತು ಇತಿಹಾಸ ಪ್ರಸಿದ್ದವಾದ “ಎಲೆ ಮಲ್ಲಪ್ಪ ಶೆಟ್ಟಿ ಕೆರೆ” ಪರಿವೀಕ್ಷಣೆ ಮಾಡಿದ ಮುಖ್ಯಮಂತ್ರಿಗಳು 508 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬೆಂಗಳೂರು – ಮಿಷನ್-2022 ರ ಅಡಿಯಲ್ಲಿ ಅಭಿವೃದ್ಧಿ ಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಸಮಗ್ರವಾದ ಅಭಿವೃದ್ಧಿ ನೀಲ ನಕ್ಷೆ ಸಿದ್ಧಪಡಿಸಿ, ಶೀಘ್ರದಲ್ಲಿಯೇ ಕಾರ್ಯ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

    ಸಚಿವ ಅರವಿಂದ ಲಿಂಬಾವಳಿ ಮಾತನಾಡಿ ಮಹದೇವಪುರ ಕ್ಷೇತ್ರವನ್ನು ಅಭಿವೃದ್ಧಿಯ ಜೊತೆಗೆ ಹಸಿರೀಕರಣ ಮಾಡಲು ನಿರ್ಧಾರ ಮಾಡಿದ್ದೇವೆ ಕನ್ನಮಂಗಲ ಸಸ್ಯ ತೋಟ, ಕಾಡುಗೋಡಿ ವೃಕ್ಷೋದ್ಯಾನ ಹೇಗೆ ಇದಕ್ಕೆ ಪೂರಕವಾಗಿದೆ ಯೊ ಹಾಗೆಯೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಜನಪದರು ರಂಗಮಂದಿರ ನೆರವಾಗಲಿದೆ ಎಂದರು. ಬೆಂಗಳೂರಿನ ಅತಿ ದೊಡ್ಡ ಕೆರೆಗಳಲ್ಲಿ ಎರಡನೆಯದು ಎಂದು ಹೆಸರು ಪಡೆದ ಎಲ್ಲೇ ಮಲ್ಲಪ್ಪ ಶೆಟ್ಟಿಕೆರೆ ಅಭಿವೃದ್ಧಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್.ಶಂಕರ್ ಅವರು ಸಹ ಭಾಗವಹಿಸಿದ್ದರು.

    ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ , ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್,ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಮಂಜುಳಾ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ , ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ಕುಮಾರ್ ಗೋಗಿ, ಬಿಬಿಎಂಪಿ ಮುಖ್ಯ ಆಡಳಿತಾಧಿಕಾರಿ ಗೌರವ್ ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೇ. ಮಂಜುನಾಥ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಸೇರಿದಂತೆ ಹಲವಾರು ಗಣ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!