18 C
Karnataka
Friday, November 22, 2024

    ಸಹಕಾರಿ ಅಧಿಕಾರಿಗಳಿಂದ ರೈತರಿಗೆ ಅನುಕೂಲವಾಗಲಿ

    Must read

    ಸಹಕಾರ ಸಂಘಗಳಿಗೂ ರೈತರಿಗೂ ನೇರ ಸಂಬಂಧವಿದೆ. ಹೀಗಾಗಿ ಇಲ್ಲಿ ಕೆಲಸ ಮಾಡುವವರು ನೇರವಾಗಿ ಅನ್ನದಾತರಿಗೆ ಸಂಬಂಧಿಸಿದ, ಅವರಿಗೆ ಅನುಕೂಲವನ್ನು ಮಾಡಿಕೊಡುವ ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆ. ಹೀಗಾಗಿ ಇಲ್ಲಿ ಸಮಯ ಪರಿಪಾಲನೆ, ಶಿಸ್ತು, ಪಾರದರ್ಶಕತೆ ಬಹಳ ಮುಖ್ಯವಾಗುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪ್ರೊಬೆಷನರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಕಿವಿಮಾತು ಹೇಳಿದರು.

    ವಿಕಾಸಸೌಧದಲ್ಲಿ ಪ್ರೊಬೆಷನರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಆಡಳಿತಾತ್ಮಕ ವಿಷಯಗಳ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರ ಸಭೆಯಲ್ಲಿ ಮಾತನಾಡಿದ ಸಚಿವರು, ಇಲ್ಲಿ ಈಗ ನೂತನವಾಗಿ ಸೇರ್ಪಡೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇನ್ನೂ 30 ವರ್ಷಗಳ ಕಾಲ ಇಲ್ಲಿಯೇ ಕಾರ್ಯ ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಸಹಕಾರ ಕ್ಷೇತ್ರ ಮತ್ತು ಇಲಾಖೆಗಳಲ್ಲಿ ಆರಂಭದ 2 ವರ್ಷಗಳಲ್ಲಿ ಕಲಿಯುವ ಕೆಲಸದ ಮೇಲೆ ಮುಂದಿನ ಯಶಸ್ಸು ನಿಂತಿರುತ್ತದೆ ಎಂದು ಸಚಿವರಾದ ಸೋಮಶೇಖರ್ ಅವರು ಹೇಳಿದರು.

    ಸಹಕಾರಿಗಳಿಗೆ ಗೌರವ ಕೊಡಿ
    ಇಲ್ಲಿ ಪ್ರಮುಖವಾಗಿ ಸಹಕಾರಿಗಳಿಗೆ ಗೌರವವನ್ನು ಕೊಡಬೇಕು. 45 ಸಾವಿರ ಸಹಕಾರ ಸಂಘಗಳು ಇದ್ದು, ಬಹುತೇಕ ಸಂಘಗಳು ರೈತರಿಗೆ ಸಂಬಂಧಪಟ್ಟ ಸಹಕಾರಿ ಸಂಘಗಳೇ ಆಗಿವೆ. ಹೀಗಾಗಿ ಇಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಸೇವಾ ಮನೋಭಾವವನ್ನು ಉಳ್ಳವರಾಗಿರಬೇಕು. ಇಂದಿನ ಕೆಲಸವನ್ನು ಇಂದೇ ಮಾಡಿ ಮುಗಿಸಬೇಕು. ಆಗ ಹೆಚ್ಚಿನ ಹೊರೆ ಯಾರ ಮೇಲೂ ಬೀಳದು ಎಂದು ಸಚಿವರಾದ ಎಸ್ ಟಿ ಎಸ್ ಸಲಹೆ ನೀಡಿದರು.

    ಕುಟುಂಬಕ್ಕೂ ಕೊಡಿ ಸಮಯ
    ಇಲ್ಲಿ ನೀವು ದಕ್ಷತೆಯಿಂದ ಕಾರ್ಯನಿರ್ವಹಣೆಯನ್ನು ಮಾಡಬೇಕು ನಿಜ. ಸಹಕಾರ ಕೆಲಸದ ಜೊತೆ ಜೊತೆಯಲ್ಲಿಯೇ ನೀವು ನಿಮ್ಮ ಕುಟುಂಬದವರಿಗೂ ಸಮಯವನ್ನು ಮೀಸಲಿಡಬೇಕು. ಮತ್ತು ಅವರ, ನಿಮ್ಮ ಆರೋಗ್ಯದ ಕಡೆಯೂ ಗಮನಹರಿಸಿಕೊಳ್ಳಬೇಕು. 100 ವರ್ಷಗಳ ಇತಿಹಾಸ ಇರುವ ಸಹಕಾರಿ ಕ್ಷೇತ್ರಕ್ಕೆ ಇಂದು ಹೊಸದಾಗಿ ಸೇರ್ಪಡೆಗೊಂಡಿರುವ ಯುವ ಸಮೂಹ ನೀವಾಗಿದ್ದೀರಿ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ದಕ್ಷ ಸೇವೆಯನ್ನು ನೀಡಿ. ನಿಮ್ಮ ಅತ್ಯುತ್ತಮ ಸೇವೆಯು ಸಹಕಾರಿ ಇಲಾಖೆಗೆ ಮುಂದಿನ ದಾರಿದೀಪವಾಗಲಿ ಎಂದು ಆಶಿಸುತ್ತೇನೆ ಎಂಬುದಾಗಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ಮಾಜಿ ಸಹಕಾರ ಸಚಿವರಾದ ಜಿ.ಟಿ.ದೇವೇಗೌಡ , ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ತುಷಾರ್ ಗಿರಿನಾಥ್, ಸಹಕಾರ ಇಲಾಖೆಯ ನಿಬಂಧಕರಾದ ಜಿಯಾವುಲ್ಲ, ಅಪೆಕ್ಸ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ದೇವರಾಜ್ , ಕೆಎಂಎಫ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ , ಇಲಾಖೆ ಹಿರಿಯ ಅಧಿಕಾರಿಗಳಾದ ದಿವಾಕರ್, ವೆಂಕಟಸ್ವಾಮಿ, ಗೋಪಾಲಕೃಷ್ಣ ರವರು, ಆಪ್ತ ಕಾರ್ಯದರ್ಶಿಗಳಾದ ಶ್ರೀನಿವಾಸ ಗೌಡ , ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ದಿನೇಶ್ ಗೂಳಿಗೌಡ ರವರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!