23.2 C
Karnataka
Friday, November 22, 2024

    ಭಕ್ತಿಯಿದ್ದಲ್ಲಿ ಭಗವಂತ

    Must read

    ಜಯಶ್ರೀ ಅಬ್ಬೀಗೇರಿ

    ಒಂದೂರಲ್ಲಿ ಅಜ್ಜಿ ಮೊಮ್ಮಗ ಮಾತ್ರ ಒಂದು ಮನೆಯಲ್ಲಿ ವಾಸವಾಗಿದ್ದರು. ಒಂದು ದಿನ ಸತ್ಸಂಗದ ಪ್ರಭಾ ವಲಯಕ್ಕೆ ಒಳಗಾಗಿ ತನ್ನ ಮುಂದಿನ ಜೀವನವನ್ನೆಲ್ಲ ಸಂತರ ಸಾನಿಧ್ಯದಲ್ಲಿ ಕಳೆಯಬೇಕೆಂದು ಅಜ್ಜಿ ನಿರ್ಧರಿಸಿದಳು. ಆದರೆ ಈ ನಿರ್ಧಾರಕ್ಕೆ ಅಡ್ಡಿಯಾಗುವ ಸಮಸ್ಯೆಯೊಂದು ಆಕೆಯನ್ನು ಕಾಡತೊಡಗಿತು.

    ಮನೆಯಲ್ಲಿದ್ದ ಮೊಮ್ಮಗನ ವಯಸ್ಸು ಕೇವಲ ಐದಾರು ವರ್ಷ ಆತನ ತಂದೆ ತಾಯಿ ತೀರಿ ಹೋಗಿದ್ದರಿಂದ ಆಕೆಯೇ ಸಾಕಿ ಸಲುಹುತ್ತಿದ್ದಳು. ಆತನನ್ನು ಬಿಟ್ಟು ಹೋಗಲು ಮನಸ್ಸು ಒಪ್ಪುತ್ತಿಲ್ಲ. ಸಮಸ್ಯೆಯನ್ನು ಹೇಗಾದರೂ ಬಗೆಹರಿಸಿ ಸಂತರ ಸಾನಿಧ್ಯದಲ್ಲಿರಬೇಕೆಂದು ಯೋಚಿಸಿದಳು. ಕೊನೆಗೆ ಧೈರ್ಯ ಮಾಡಿ ನೆರೆಯ ಮನೆಯವರಿಗೆ ಮೊಮ್ಮಗನನ್ನು ಒಪ್ಪಿಸಿದಳು. ಪೋಷಣೆಗೆ ಬೇಕಾದ ಹಣದ ವ್ಯವಸ್ಥೆಯನ್ನೂ ಮಾಡಿದಳು.

    ಇದೆಲ್ಲ ಮುಗಿದ ಸಂಜೆಯೇ ‘ನಾನು ಇನ್ನು ಮುಂದೆ ತಮ್ಮ ಸಾನಿಧ್ಯದಲ್ಲಿಯೇ ಇರುತ್ತೇನೆ. ಆಶೀರ್ವದಿಸಿ. ಪೂಜ್ಯರೆ.’ ಎಂದಳು. ಸಂತರು ‘ಆಗಲಿ ನಾಳೆ ನೋಡೋಣ. ಈಗ ತಾವು ಸಾಧಕಿಯರ ಆಶ್ರಮದಲ್ಲಿ ವಿಶ್ರಮಿಸಿ.’ ಎಂದರು. ಉಳಿದೆಲ್ಲ ಸಾಧಕಿಯರು ಸಂಜೆಯ ಪ್ರಾರ್ಥನೆ ಮಾಡಿ ವಿಶ್ರಮಿಸಿದರು. ಆದರೆ ಅಜ್ಜಿ ಮಾತ್ರ ಕಣ್ಣಿಗೆ ಕಣ್ಣು ಹಚ್ಚಲಿಲ್ಲ.! ರಾತ್ರಿಯೆಲ್ಲ ತನ್ನ ಮೊಮ್ಮಗನದೇ ಚಿಂತೆ. ನನ್ನ ಬಿಟ್ಟು ಹೇಗಿದ್ದಾನೇನೋ ಎಂಬ ಆತಂಕ. ಆತನದೇ ಚಿತ್ರ ಕಣ್ಮುಂದೆ ಪದೇ ಪದೇ ಬಂದಂತೆ. ಅಜ್ಜಿ, ಅಜ್ಜಿ ಎಂದು ಕೂಗಿ ಕರೆದಂತೆ ಭಾಸವಾಗುತ್ತಿತ್ತು.

    ಬೆಳಿಗ್ಗೆ ಆಗುವುದನ್ನೇ ಕಾಯುತ್ತಿದ್ದ ಅಜ್ಜಿ ಸಂತರಲ್ಲಿಗೆ ಹೋಗಿ ನನ್ನ ಮೊಮ್ಮಗನನ್ನು ಮರೆಯಲಾಗುತ್ತಿಲ್ಲ ಏನು ಮಾಡಲಿ ಪೂಜ್ಯರೆ? ಎಂದಳು. ‘ಚಿಂತಿಸಬೇಡಿ, ನೀವು ಮನೆಗೆ ಹೋಗಿ ನಿಮ್ಮ ಮೊಮ್ಮಗನನ್ನು ಬಾಲಕೃಷ್ಣ ಎಂದು ತಿಳಿದು ಆತನ ಸೇವೆಯಲ್ಲಿಯೇ ಇರಿ.’ ಸಂತರ ಆಜ್ಞೆಯಂತೆ ಅಜ್ಜಿ ಮನೆಗೆ ಹೋದಳು ಮುದ್ದು ಮೊಮ್ಮಗ ಬಾಲಕೃಷ್ಣನಂತೆ ಕಂಡ. ಮನೆ ನಂದಗೋಕುಲವಾಯಿತು.ಭಕ್ತಿ ಗೀತೆಗಳನ್ನು ಹೇಳಿಕೊಳ್ಳುತ್ತ ಮೊಮ್ಮಗನಲ್ಲಿ ಬಾಲ ಕೃಷ್ಣನನ್ನು ಕಾಣುತ್ತ ಲಾಲಿಸಿ ಪಾಲಿಸಿದಳು. ಆ ಬಾಲ ಗೋಪಾಲನ ಸೇವೆಯಲ್ಲಿ ನಿತ್ಯವೂ ಆಡಿ ಹಾಡಿ ಕುಣಿದು ಧನ್ಯತಾ ಭಾವ ಹೊಂದಿದಳು. ಪರಮ ಸತ್ಯ ಪರಮಾತ್ಮ ಎಲ್ಲೆಲ್ಲೂ ಇದ್ದಾನೆ. ಎಂಬ ಅರಿವು ಆಕೆಯಲ್ಲಿ ಮೂಡಿತು. ಹೀಗಾಗಿ ಪ್ರಪಂಚವೇ ಪರಮಾತ್ಮನ ಪವಿತ್ರ ಸದನವೆನಿಸಿತು.

    ಮೇಲಿನ ದೃಷ್ಟಾಂತದಲ್ಲಿರುವಂತೆ ಈ ಪ್ರಪಂಚ ಪರಮಾತ್ಮನ ಪವಿತ್ರ ಸದನ. ಆದರೆ ಸಂಸಾರದ ವ್ಯಾಮೋಹದಲ್ಲಿರುವ ನಮಗೆ ಭಕ್ತಿಯ ಬಗೆಗೆ ಮುಕ್ತಿಯ ಬಗೆಗೆ ಎಳ್ಳಷ್ಟೂ ವಿಚಾರವೇ ಇಲ್ಲ ಎನ್ನುವವರೇ ಅಧಿಕ ಸಂಖ್ಯೆಯಲ್ಲಿ ಸಿಗುತ್ತಾರೆ ‘.ನನ್ನೊಳಗಿನ ನನ್ನನ್ನು ನಾನು ಕಂಡುಕೊಳ್ಳಲು ಇರುವ ಮಾರ್ಗವೇ ಆಧ್ಯಾತ್ಮ.’ ಆತ್ಮನೊಂದಿಗೆ ನಿರಂತರ ಅನುಸಂದಾನ ಮಾಡಿಕೊಳ್ಳುವ ಮಾರ್ಗ. ಇದು ಮನಃಶಾಂತಿಗೆ ರಾಜಮಾರ್ಗವೆನ್ನುವವರು ಆ ಪಥದಲ್ಲಿ ಸಾಗುತ್ತಿದ್ದಾರೆ. ಕೆಲವರು ಡಾಂಭಿಕ ಭಕ್ತಿ ಮೆರೆಯುತ್ತ ತಿರುಗುತ್ತಾರೆ. ಇನ್ನೂ ಕೆಲವರು ತಮಗೆ ಕಷ್ಟ ಕಾರ್ಪಣ್ಯ ಬಂದಾಗ ಮಾತ್ರ ದೇವರನ್ನು ಸಂಪರ್ಕಿಸುತ್ತಾರೆ.

    ದೇವರ ಸ್ವರೂಪಕ್ಕೆ ನಿರ್ಧಿಷ್ಟ ಆಕಾರವಿಲ್ಲ. ದೇವರನ್ನು ನಂಬುವುದಿಲ್ಲ ಎನ್ನುವ ನಾಸ್ತಿಕರೂ ಇದ್ದಾರೆ.ದೇವರು ಅಂದರೆ ನಂಬಿಕೆ ಅಂಥದ್ದರಲ್ಲಿ ದೇವರನ್ನು ನಂಬದೇ ಇರಲು ಸಾಧ್ಯವೇ? ಆ ನಂಬಿಕೆಯ ಮೇಲೆಯೇ ಜಗತ್ತು ನಿಂತಿದೆ. ಜಗತ್ತಿನಿಂದ ನಾನು ಬೇರೆಯಲ್ಲ ‘ವಿಶ್ವಾಸೋ ಫಲದಾಯಕಃ’ಎನ್ನುವ ಉಕ್ತಿಯ ನಂಬಿದವರು ಹಲವರು. ಒಟ್ಟಿನಲ್ಲಿ ಅವರವರ ಭಾವಕ್ಕೆ ಅವರವರ ಭಕುತಿಗೆ ದೇವರಿದ್ದಾನೆ. ಕಾಯಕವೇ ಕೈಲಾಸವೆನ್ನುವಂತೆ ಕೆಲವರು ದುಡಿಮೆಯಲ್ಲೇ ದೇವರನ್ನು ಕಾಣುತ್ತಾರೆ.

    ಮೂರ್ತಿಪೂಜೆಯಲ್ಲಿ ನಂಬಿಕೆಯಿಲ್ಲ ಎನ್ನುವವರು ಒಂದೆಡೆಯಾದರೆ ಚಂಚಲ ಮನಸ್ಸನ್ನು ಒಂದೆಡೆ ನಿಲ್ಲಿಸಲು ಒಂದು ಬಾಹ್ಯ ಉಪಾಧಿ ಬೇಕು ಹೀಗಾಗಿ ಹಿರಿಯರು ಕಂಡುಕೊಂಡ ದಾರಿಯಾದ ಮೂರ್ತಿಗೆ ಪ್ರಾಣ ಪ್ರತಿಷ್ಟೆ ಮಾಡಿ ಗರ್ಭಗುಡಿಯಲ್ಲಿಟ್ಟು ಆರಾಧಿಸುವುದರಿಂದ ಅದನ್ನು ದೇವರೆಂದೇ ಪರಿಭಾವಿಸುತ್ತೇವೆ.ದೇವರ ಸನ್ನಿಧಿಯಲ್ಲಿ ನಾವಿದ್ದೇವೆ ಎಂಬ ನಂಬಿಕೆ ಬಲಗೊಳ್ಳುತ್ತದೆ ಹೀಗಾಗಿ ಮೂರ್ತಿಪೂಜೆಯೇ ಶ್ರೇಷ್ಠವೆನ್ನುವ ಆಸ್ತಿಕರು ಆ ದಾರಿಯಲ್ಲಿ ನಡೆಯುವರು.

    ಇಡೀ ಸೃಷ್ಟಿ ದೈವಸೃಷ್ಟಿಯಾಗಿದೆ. ಜಗವೇ ದೇವರ ರಾಜ್ಯವಾಗಿದೆಯೆಂದು ಎಲ್ಲ ಧರ್ಮಗಳು ಸಾರುತ್ತಿರುವಾಗ ದೇವರಿಲ್ಲದ ಜಗವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.ಆತನ ಬಲದಿಂದಲೇ ಜಗತ್ತು ಸುಂದರವಾಗಿದೆ. ಬದುಕು ಆ ದೇವನಿತ್ತ ಅಮೂಲ್ಯ ಕಾಣಿಕೆ. ಆತನಿಗೆ ಕೃತಜ್ಞರಾಗದಿದ್ದರೆ ಹೇಗೆ?

    ದೇಗುಲವೆಂಬುದು ಒಂದು ಪವಿತ್ರ ತಾಣವೆಂಬ ಭಾವ ಸಂಸ್ಕೃತಿ ಸಂಸ್ಕಾರದಿಂದ ಬೇರೂರಿದೆ. ಹೀಗಾಗಿ ಕೆಟ್ಟದ್ದನ್ನೆಲ್ಲ ಹೊರಗಿಟ್ಟು ಭಕ್ತಿಯಿಂದ ದೇವಸ್ಥಾನದೊಳಗೆ ಹೋಗಬೇಕೆಂಬ ಎಚ್ಚರ ನಮ್ಮಲ್ಲಿ ಜಾಗೃತಗೊಳ್ಳುತ್ತದೆ. ಆದ್ದರಿಂದಲೇ ದೈವ ಸನ್ನಿಧಿಯಲ್ಲಿ ಸುರಕ್ಷಿತ ಭಾವ ಒಡಮೂಡುತ್ತದೆ. ಭಕ್ತಿಯಿದ್ದರೆ ಕಲ್ಲೂ ದೇವರಾಗುತ್ತದೆ. ಇಲ್ಲದಿದ್ದರೆ ದೇವರ ಮೂರ್ತಿಯೂ ಕಲ್ಲು ಎನಿಸುತ್ತದೆ. ಸಂಪಾದನೆ ವೃತ್ತಿಯಲ್ಲಿ ಕಳೆದು ಹೋಗುವ, ಎಷ್ಟೋ ಸಲ ಬಿಡುವಿಲ್ಲದ, ನಾವು ಎಂದೋ ಒಂದು ದಿನ, ದಿನಾಂಕ ನಿಗದಿ ಮಾಡಿ ಹಾಗೆ ನಿಗದಿಪಡಿಸಿದ ದಿನದಂದು ಭೇಟಿ ಇಲ್ಲವಾಗುವ ಸಂಭವವೂ ಉಂಟು. ಮರೆತು ಕೂತಿದ್ದಕ್ಕೆ ನಮ್ಮನ್ನು ನಾವೇ ಹಳೆದುಕೊಳ್ಳುವ ಹಾಗಾಗುತ್ತದೆ. ದೈವಭಕ್ತಿಯನ್ನೆಲ್ಲ ಹಗುರವಾಗಿ ಭಾವಿಸುವಂತಿಲ್ಲ ಎಂಬ ಅರಿವು ಜೀವಂತಿಕೆಯಿಂದ ಸ್ಪಂದನಶೀಲತೆಯಿಂದ ಭಕ್ತಿಯಲ್ಲಿ ತೊಡಗಿದವರನ್ನು ಕಂಡಾಗ ಆಗದೇ ಇರದು. ದೈವಲೀಲೆಗಳ ವಿಸ್ತಾರದ ಅರಿವು ಪುರಾಣ ಪುಣ್ಯ ಕತೆಗಳಲ್ಲಿ ಕೇಳಿದ ಮೇಲೆ ಮನೆಯಲ್ಲಿಯ ಹಿರಿಯರು ಗುರುಗಳು ಪೂಜ್ಯರು ಸಾಧು ಸಂತರು ಭಕ್ತಿಯಲ್ಲಿ ತನ್ಮಯತೆ ಕಂಡ ಅನುಭವಿಗಳು ನಾನು ಮಾತ್ರ ಅದೇನೂ ಇಲ್ಲದ ಕುರಿಮರಿ! ಎಂದೆನಿಸದೇ ಇರದು.

    ಭಕ್ತಿ ಇಲ್ಲದ ಬಡವ ನಾನಯ್ಯ
    ಕಕ್ಕಯ್ಯನ ಮನೆಯಲ್ಲೂ ಬೇಡಿದೆ
    ಚೆನ್ನಯ್ಯನ ಮನೆಯಲ್ಲೂ ಬೇಡಿದೆ
    ದಾಸಯ್ಯನ ಮನೆಯಲ್ಲೂ ಬೇಡಿದೆ
    ಎಲ್ಲ ಪುರಾತರು ನೆರೆದು
    ಭಕ್ತಿ ಭಿಕ್ಷವನಿಕ್ಕಿದೆಡೆ ಎನ್ನ ಪಾತ್ರೆ ತುಂಬಿತ್ತು
    ಕೂಡಲಸಂಗಮ ದೇವ

    ಜೇನುಹುಳುಗಳು ಹೂವಿಂದ ಹೂವಿಗೆ ಹಾರಿ ಅವುಗಳ ಮಕರಂದವನ್ನು ಹೀರಿ ತಮ್ಮ ದೇಹದೊಳಗಿನ ರಾಸಾಯನಿಕ ಅಂಶವನ್ನು ಎಲ್ಲ ಹೂಗಳ ಮಕರಂದದ ಜೊತೆ ಬೆರೆಸಿ ಜೇನುಗೂಡಲ್ಲಿ ಸಂಗ್ರಹಿಸುವುದರ ಮೂಲಕ ಜೇನು ತುಪ್ಪವನ್ನು ಸೃಷ್ಟಿಸುತ್ತವೆ. ಅಂತೆಯೇ ಸರ್ವ ಶರಣರ ಮನೆಯಲ್ಲಿ ಬೇಡಿದ ಭಕ್ತಿಯ ಮಕರಂದದಿಂದ ಭಕ್ತಿಯ ಜೇನು ಸಂಗ್ರಹಿಸಿದರು ಅಣ್ಣ ಬಸವಣ್ಣ. ಸರ್ವ ಸಮತ್ವ ಭಾವದಿಂದ ಕೂಡಿದ ಭಕ್ತಿಯನ್ನು ಲಿಂಗತತ್ವ ಬಯಸುತ್ತದೆ. ಮಾನವ ವಿಮೋಚನೆಯ ತತ್ವವೇ ಲಿಂಗತತ್ವ. ಹೇಗೆ ಜೇನು ಹುಳುಗಳಿಂದ ಮಾತ್ರ ಜೇನು ತುಪ್ಪ ಪಡೆಯಲು ಸಾಧ್ಯವೋ ಹಾಗೆಯೇ ಪ್ರಖರವಾದ ಮಾನವೀಯ ಪ್ರಜ್ಞೆಯಿಂದ ಕೂಡಿದ ಭಕ್ತಿ ಮಾರ್ಗದಿಂದ ಮಾತ್ರ ಸಕಲ ಜೀವಿಗಳಿಗೆ ಲೇಸನ್ನು ತಲುಪಿಸಲು ಸಾಧ್ಯವೆಂದ ಬಸವಣ್ಣ.. ಭಕ್ತಿ ಭಿಕ್ಷೆಯಿಂದ ಅವರ ಅನುಭವದ ಪಾತ್ರೆ ತುಂಬಿಸಿಕೊಂಡರು.ಸತ್ಯ ನ್ಯಾಯದ ಅಂತರಂಗ ಕಂಡುಕೊಂಡರು.

    ಹೀಗಾಗಿ ವರ್ಗ ವರ್ಣ ಜಾತಿ ಮತ ಪಂಥ ಲಿಂಗ ಭೇದಗಳಿಂದ ಮಾನವ ಕುಲವನ್ನು ಮೇಲಕ್ಕೆತ್ತುವ ಸಿದ್ಧಾಂತವನ್ನು ರೂಪಿಸಲು ಸಾಧ್ಯವಾಯಿತು. . ನಾಗರಿಕ ಸಂಸ್ಕೃತಿಯಲ್ಲಿ ವಿಶ್ವಮಾನವನ ಉದಯವಾಗುವುದು. ಮಾನವೀಯ ಪ್ರಜ್ಞೆಯಿಲ್ಲದವನೇ ನಿಜವಾದ ಬಡವ ಎಂದಿದ್ದಾರೆ ಬಸವಣ್ಣ. ಯಾವುದೇ ಕಾಯಕ ದೊಡ್ಡದಲ್ಲ ಚಿಕ್ಕದಲ್ಲ. ಸತ್ಯಶುದ್ಧ ಕಾಯಕಗಳೆಲ್ಲ ಪವಿತ್ರವಾದವುಗಳು ಎಂಬ ಆತ್ಮವಿಶ್ವಾಸ ಕಾಯಕಜೀವಿಗಳಲ್ಲಿ ತುಂಬಿದರು. ಎಲ್ಲಿಯವರೆಗೆ ಕಾಯಕ ಜೀವಿಗಳಿಗೆ ಬೆಲೆ ಕೊಡುವುದಿಲ್ಲವೋ ಅಲ್ಲಿಯವರೆಗೆ ನಾಗರಿಕ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲವೆಂಬುದನ್ನು ಭಕ್ತಿಯ ಪರಿಕಲ್ಪನೆಯ ಮೂಲಕ ತೋರಿಸಿಕೊಟ್ಟರು.

    ಒಂದು ಲಕ್ಷ ಕೋಟಿಯಷ್ಟು ಲೆಕ್ಕಾಚಾರವನ್ನು ಒಂದೇ ಕ್ಷಣದಲ್ಲಿ ಮಾಡಬಲ್ಲ ಕಂಪ್ಯೂಟರ್‌ನ್ನು ಮನುಷ್ಯ ಕಂಡು ಹಿಡಿದಿದ್ದಾನೆ. ಸಾವಿರಾರು ಮೈಲಿ ದೂರದ ನೂರಾರು ಉಪಗ್ರಹಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಹುಲುಮಾನವನಾದ ಮನುಷ್ಯನಲ್ಲೇ ಇಂಥ ಯೋಗ್ಯತೆಯಿದ್ದರೆ ಆ ದೇವರು ಇನ್ನೆಷ್ಟು ಶಕ್ತಿವಂತನಾಗಿರಬಹುದು ಯೋಚಿಸಿ! ನಾವು ಕಲ್ಪಿಸಲಾಗಲಿ ಅಳೆಯಲಾಗಲಿ ಅಸಾಧ್ಯವಾದಷ್ಟು ಬಲ ಜ್ಞಾನ ಬುದ್ಧಿಶಕ್ತಿ ದೇವರಲ್ಲಿದೆ ಎಂಬುದನ್ನು ಮನಗಾಣಬೇಕು. ದೇವರ ಬುದ್ಧಿಶಕ್ತಿ ಮತ್ತು ಜ್ಞಾನವನ್ನು ಅಲ್ಪವೆಂದು ಭಾವಿಸದೇ ಭಕ್ತಿ ಮಾರ್ಗದಲ್ಲಿ ನಡೆದು ಜೀವನ ಪಾವನಗೊಳಿಸಿಕೊಳ್ಳುವುದು ಒಳ್ಳೆಯದಲ್ಲವೇ?

    ಜಯಶ್ರೀ ಅಬ್ಬೀಗೇರಿ
    ಜಯಶ್ರೀ ಅಬ್ಬೀಗೇರಿ
    ಜಯಶ್ರೀ ಅಬ್ಬಿಗೇರಿ ಮೂಲತಃ ಗದಗ ಜಿಲ್ಲೆಯವರು. ವ್ಯಕ್ತಿತ್ವ ವಿಕಸನ, ಪ್ರಸ್ತುತ ವಿದ್ಯಮಾನ, ಹಾಸ್ಯ ಭಾವನಾತ್ಮಕ, ಆದ್ಯಾತ್ಮಿಕ,ಮಹಿಳಾ ಪರ, ಚಿಂತನ ಪರ ಲೇಖನಗಳುಳ್ಳ ೧೨ ಕೃತಿಗಳನ್ನು ರಚಿಸಿದ್ದಾರೆ. ಸದ್ಯ ಬೆಳಗಾವಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ.
    spot_img

    More articles

    3 COMMENTS

    1. ದೇವರ ಪರಿಕಲ್ಪನೆ ಬಗ್ಗೆ ಇತ್ತಮ ಲೇಖನ ಮೇಡಂ

    2. ಭಕ್ತಿ ಮಾರ್ಗದ ಬಗ್ಗೆ ಜಯಶ್ರೀ ಅಬ್ಬಿಗೇರಿ ಅವರು ಒಳ್ಳೆಯ ದೃಷ್ಟಾಂತ ಗಳನ್ನು ಕೊಟ್ಟಿದ್ದಾರೆ. ಭಕ್ತಿ ಮನುಷ್ಯನಿಗೆ ನೆಮ್ಮದಿ, ಕೊಡುತ್ತದೆ. ಲೇಖಕರಿಗೆ ಧನ್ಯವಾದಗಳು 👏

    3. ನಮನಗಳು ಓದುವ ಪ್ರೀತಿಗೆ & ಪ್ರೋತ್ಸಾಹಕ್ಕೆ

    LEAVE A REPLY

    Please enter your comment!
    Please enter your name here

    Latest article

    error: Content is protected !!