ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮ ಪಂಚಾಯಿತಿಗೆ ಬಹುತೇಕ ಯುವ ಸದಸ್ಯರು ಆರಿಸಿ ಬಂದಿದ್ದಾರೆ. ಸದಾ ಪ್ರಯೋಗಾತ್ಮಕ ಸಾಮಾಜಿಕ ಕಳಕಳಿ ಜಾಗೃತ ಕಾರ್ಯಕ್ರಮಗಳಿಂದ ಗಮನ ಸೆಳೆದಿದ್ದಾರೆ. ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರೇರಣೆ ನೀಡಲು ಸಸಿಗಳನ್ನು ನೀಡಿ ವಿಶಿಷ್ಟತೆ ಮೆರೆದಿದ್ದಾರೆ.
ಒಂದೇ ಕಾರ್ಯಕ್ರಮದಲ್ಲಿ ಎರಡು ಘನೋದ್ದೇಶದ ಈಡೇರಿಕೆಗೆ ನಾಂದಿ ಹಾಡಿದ್ದಾರೆ. ಲಸಿಕೆಗೆ ಉತ್ತೇಜನ ಹಾಗೂ ಹಸಿರೀಕರಣದ ಮಹದಾಸೆ. ಲಸಿಕೆಗೆ ನೂಕು ನುಗ್ಗಲು ತಪ್ಪಿಸಲು ವಾರ್ಡ್ ಪ್ರಕಾರ ಲಸಿಕಾ ಕಾರ್ಯಕ್ರಮವನ್ನು ನಿಗದಿಗೊಳಿಸಿದ್ದಾರೆ. ಅದಕ್ಕಾಗಿ ಸ್ವಂತ ಖರ್ಚಿನಲ್ಲಿ ಸಾರ್ವಜನಿಕರಿಗೆ ಅನುಕೂಲ ಸ್ಥಳ ನಿಯೋಜಿಸುತ್ತಿದ್ದಾರೆ. ಲಸಿಕೆ ಕೊಡುವ ಮಾಹಿತಿಯನ್ನು ಆಯಾ ವಾರ್ಡ್ ಸದಸ್ಯರು ಮನೆಗಳಿಗೆ ತೆರಳಿ ಮಾಹಿತಿ ನೀಡುತ್ತಾರೆ. ಲಸಿಕೆ ಲಭ್ಯತೆ ಅನುಸರಿಸಿ ಸರಾಗವಾಗಿ ಲಸಿಕೆ ಪಡೆಯಲು ಸ್ಥಳದಲ್ಲೇ ಹಾಜರಿದ್ದು ಗಮನ ಹರಿಸುತ್ತಾರೆ. ಆನಂತರ ಅರಣ್ಯ ಇಲಾಖೆಯಿಂದ ಪಡೆದ ಸಸಿಗಳನ್ನು ಕೊಟ್ಟು ಬೀಳ್ಕೊಡುವುದು ಗಮನ ಸೆಳೆದಿದೆ.
ಇಲ್ಲಿನ ಎರಡನೇ ವಾರ್ಡ್ ನಲ್ಲಿ ಸುಮಾರು 400 ಸಸಿಗಳನ್ನು ಕೊಡಲಾಗಿದೆ. ಹೊನ್ನೆ, ಹಲಸು, ಹುಣಸೆ ಸೇರಿದಂತೆ ಹಲವು ಬಗೆಯ ಸಸಿಗಳು ಲಭ್ಯವಿದೆ. ಮಹಿಳೆಯರು ವಿಶೇಷವಾಗಿ ಸಸಿ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರ ಮನೆಗಳಿಗೆ ತೆರಳಿ ಗಿಡಗಳನ್ನು ನೀಡಿ ಗೌರವಿಸಿದ್ದಾರೆ. ಗ್ರಾಮದ ರಸ್ತೆ, ದೇಗುಲಗಳಲ್ಲಿ ವಿವಿಧ ಬಗೆಯ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ಪ್ರಕೃತಿ ವಿನಾಶದ ದಾರುಣ ಸ್ಥಿತಿಯಲ್ಲಿ ಹಸಿರೀಕರಣದ ಉದಾತ್ತ ಯುವ ಚಿಂತನೆ ಮಾದರಿ ಆಗಿದೆ.
ಮರಗಿಡಗಳಿಂದ ಬರಡಾದ ಪರಿಸರವನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತಾಗಿಸಲು ಅಳಿಲು ಸೇವೆ. ಹವಾಮಾನ ವೈಪರಿತ್ಯದಿಂದ ರೈತರ ಇಳುವರಿ ಅನಿಶ್ಚಿತ. ತೂಗೂಯ್ಯಲೆಯ ಮಳೆ ಭರವಸೆ ಕುಸಿದಿದೆ. ಈ ನಿಟ್ಟಿನಲ್ಲಿ ಹಸರೀಕರಣ ಎಲ್ಲರ ಬದ್ಧತೆ ಆಗಬೇಕು. ಈ ನಿಟ್ಟಿನಲ್ಲಿ ಜಾಗೃತಿಗೆ ಸದಾ ಸಿದ್ದ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಆಸೀಫ್, ಜಿ.ಎಸ್. ಶಿವರಾಜ್, ಪಿ.ಆರ್.ರುದ್ರೇಶ್, ಉಲ್ಲಾಸ್.
Good initiative 👍 proud of you all
❤️Best service… 💐💐