18.6 C
Karnataka
Friday, November 22, 2024

    ತಿಂದು ಬದುಕುವವರಿಗಿಂತ ತಿಳಿದು ಬದುಕುವವರಾಗಬೇಕು

    Must read

    ಸುಮಾ ವೀಣಾ

    ಮನುಷ್ಯ ಬೇರೆ! ಮಾನವಿಯತೆ ಬೇರೆ! ಹೌಸ್ ಮತ್ತು ಹೋಂ ನಡುವೆ ವ್ಯತ್ಯಾಸವಿದೆಯಲ್ಲಾ ಹಾಗೆ. ಸಮಾಜ ಆರೋಗ್ಯಕರವಾಗಿ ಇರಬೇಕು ಎಂದರೆ  ಉಪಕಾರ,ಉಪಕಾರ ಸ್ಮರಣೆ ಇರಬೇಕು ಅದನ್ನೆ ಕೃತಜ್ಞತೆ ಎನ್ನುವುದು.  ಇದು ಮಾನವನಲ್ಲಿ ಅವಶ್ಯವಾಗಿ ಇರಲೇಬೇಕು.ಅದನ್ನು ಬಿಟ್ಟು ದುರಹಂಕಾರ , ಒಣಪ್ರತಿಷ್ಠೆ  ಸೇರಿದರೆ ಮಾನವ ಸಮಾಜ ಅಪಮೌಲ್ಯಗಳ ಗೂಡಾಗುತ್ತದೆ. ನೈತಿಕ ಅಧಃಪತನದ ಗೂಡಾಗುತ್ತದೆ.

     ನಮ್ಮ ಜಾನಪದರ ಉಪಕಾರ ಸ್ಮರಣೆಯ ಕುರಿತು ಯೋಚಿಸುವುದಾದರೆ

    ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ |   ಎಳ್ಳು-ಜೀರಿಗೆ ಬೆಳೆಯೋಳ |   ಭೂಮ್ತಾಯ ಎದ್ದೊಂದು ಘಳಿಗೆ ನೆನೆದೇನು |

    ಬೆಳಗಾಗೆದ್ದು ದಿನಚರಿ ಆರಂಭಿಸುವಾಗ ಭೂಮಾತೆ ಸ್ತುತಿಸಲ್ಪಡುತ್ತಾಳೆ. ಕಲಿಗಾಲ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ರೈತರಿಲ್ಲಿ ಆದಿ ವಂದ್ಯನು. ಪರಿಶ್ರಮದಿಂದ ದುಡಿದು ಮನುಕುಲಕ್ಕೆ ಅನ್ನವನ್ನು ಕೊಡುವ ರೈತನೇ ಇಲ್ಲಿ ಅಗ್ರವಂದ್ಯನು. ಎಳ್ಳು- ಜೀರಿಗೆ ಸಂಬಂಧ ಸೂಚಕವಾಗಿದೆ. ಭೂಮಿತಾಯಿಗೆ ವಂದಿಸುವ  ಮೂಲಕ ಉಪಕಾರ ಸ್ಮರಣ ಮಾಡಿರುವುದು ಅವರ ವ್ಯಕ್ತಿತ್ವದ ಘನತೆಯನ್ನು ಎತ್ತಿ  ತೋರಿಸುತ್ತದೆ.

    ಹಾಲುಂಡ ತವರಿಗೆ ಏನೆಂದು ಹಾಡಲಿ |ಹೊಳೆದಂಡೆಲಿರುವ ಗರಿಕೆಯ ಕುಡಿಹಾಂಗೆ |ಹಬ್ಬಲಿ ಅವರ ರಸಬಳ್ಳಿ

     ಜಾನಪದ ಹೆಣ್ಣು ಮಗಳು ತಾನು ಹುಟ್ಟಿದ, ಲೋಕದ ಬೆಳಕನ್ನು ಕಂಡ ತವರನ್ನು ಕುರಿತು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುವ ಹಾಗು ಶುಭ ಹಾರೈಕೆಯನ್ನು ಬಯಸುವ ತ್ರಿಪದಿ.  ಹೊಳೆ ದಂಡೆಯ ಗರಿಕೆಯ ಕುಡಿ ಯಾವಾಗಲು ಸಮೃದ್ಧಿಯಾಗಿರುತ್ತದೆ. ಎಂಥ ಬರಡು ನೆಲದಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ. ಅದರಲ್ಲೂ ಹೊಳೆ ತೀರದಲ್ಲಂತೂ ಹೇರಳವಾಗಿರುತ್ತದೆ.  ಹಾಗೆ ತನ್ನ ತವರು ಉತ್ತರೋತ್ತರ ಯಶಸ್ಸು ಕಾಣಲಿ ಎಂಬುದು ಜಾನಪದ ಹೆಣ್ಣ ಮಗಳ ಆಶಯವಾಗಿದೆ.

     ‘ಅಲ್ಪದಲ್ಲಿ ಕಲ್ಪ’ ಎಂಬಂತೆ ಅತ್ಯಂತ ಚಿಕ್ಕ ವಿಚಾರದಲ್ಲೂ ಕೃತಜ್ಞತಾ ಭಾವ ಇರಬೇಕೆಂದು ಹೇಳುವ ತ್ರಿಪದಿ

    ಕಲ್ಲು ಕೊಟ್ಟವ್ವಗೆ ಎಲ್ಲ ಭಾಗ್ಯವೂ ಬರಲಿ |ಪಲ್ಲಕ್ಕಿ ಮೇಲೆ ಮಗ ಬರಲಿ ಆ ಮನೆಗೆ | ಮಲ್ಲಿಗೆ ಮುಡಿಯೋ ಸೊಸೆ ಬರಲಿ

    ಎಂಥ ಹಾರೈಕೆ ಅಲ್ಲವೇ! ಭಾಗ್ಯ, ಪಲ್ಲಕ್ಕಿ, ತನಗೊಂದು ಬೀಸುವ ಕಲ್ಲನ್ನು ಎರವಲು ಕೊಟ್ಟಂಥ ಮನೆಗೆ ಶ್ರೇಯಸ್ಸನ್ನು ಬಯಸುವ ರೀತಿ ಅನುಕರಣನೀಯ. ಮಲ್ಲಿಗೆ  ಇವೆಲ್ಲವೂ ಸಿರಿ, ಸೌಭಾಗ್ಯ, ಹಾಗು ಮಾಧುರ್ಯದ ಲಕ್ಷಣವೇ ಆಗಿವೆ. 

    ನವನಾಗರಿಕರಲ್ಲಿ ಈ ಕೃತಜ್ಞತಾ ಭಾವ ಮರೀಚಿಕೆಯಾಗಿದೆ ಕೆಲಸ ಆದ ಮೇಲೆ ಮೂತಿ ತಿರುಗಿಸಿ ನನಗೂ ಅದಕ್ಕೂ ಸಂಬಂಧವಿಲ್ಲ ” ಧಿಂ ರಂಗ” ಎಂದು ಇದ್ದುಬಿಡುತ್ತಾರೆ. ಅಂಥವರ ಕೃತಘ್ನತೆಯನ್ನು ಧಿಕ್ಕರಿಸುವ ಕೃತಜ್ಞತಾ ಸಂಸ್ಕೃತಿಯನ್ನು ಹೇಳುವ ಈ ತ್ರಿಪದಿಗಳು ಮಾನವನಿಗೆ ಸಂಸ್ಕಾರದ ಪಾಠವನ್ನು ಹೇಳುತ್ತವೆ. ಕೃತಜ್ಞತೆಗೆ ಇನ್ನೊಂದು ಹೆಸರು ನಾಯಿ . ಕೃತಜ್ಞತೆ ಇಲ್ಲದಿದ್ದರೆ ಮನುಷ್ಯ  ಅದಕ್ಕಿಂತ ಕೀಳು . ತಿಂದು ಬದುಕುವವರಿಗಿಂತ ತಿಳಿದು ಬದುಕುವವರಾಗಬೇಕಲ್ವೇ!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!