ಷೇರುಪೇಟೆ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಈಕ್ವಿಟಿ ಷೇರುಗಳು. ಅವುಗಳಲ್ಲಿ ಅಗ್ರಮಾನ್ಯ ಪ್ರವರ್ತಕರ ಕಂಪನಿಗಳು, ವಿಶೇಷವಾಗಿ ಹೂಡಿಕೆದಾರರನ್ನು, ತಾನು ವಿತರಿಸುತ್ತಿದ್ದ ಕಾರ್ಪೊರೇಟ್ ಫಲಗಳ ಗಾತ್ರದಿಂದ ಹರ್ಷಿತಗೊಳಿಸುತ್ತಿದ್ದ ಕಂಪನಿಗಳಾದ ಟಾಟಾ ಸಮೂಹ, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಕಾಲ್ಗೇಟ್, ಹಿಂದೂಸ್ಥಾನ್ ಯುನಿಲೀವರ್, ಲಾರ್ಸನ್ ಅಂಡ್ ಟೋಬ್ರೊ ನಂತಹ ಕಂಪನಿಗಳು ಮುಖ್ಯವಾಗಿದ್ದವು.
ಜಾಗತೀಕರಣಕ್ಕೂ ಮುಂಚೆ ಷೇರುಗಳು ಎಂದರೆ ಈಕ್ವಿಟಿ ಮತ್ತು ಪ್ರಿಫರನ್ಸ್ ಷೇರುಗಳು ಮಾತ್ರ. ನಂತರದಲ್ಲಿ ಡಿ ವಿ ಆರ್ ಎಂಬ ಮತದಾನ ವ್ಯತ್ಯಯದ ಷೇರುಗಳು ತೇಲಿಬಂದವು. ಡಿ ವಿ ಆರ್ ಗಳಿಗೆ ಹೆಚ್ಚಿನ ಬೆಂಬಲ ದೊರೆಯಲಿಲ್ಲ. ಈಕ್ವಿಟಿ ಷೇರುಗಳಿಗೆ ಹೋಲಿಸಿದಲ್ಲಿ, ಡಿ ವಿ ಆರ್ ಗಳು ಕೇವಲ ಶೇ. 25 ರಷ್ಟು ಮಾತ್ರ ಮತದಾನದ ಹಕ್ಕು ಪಡೆದಿರುತ್ತವೆ. ಆದರೆ ಇದನ್ನು ಸರಿದೂಗಿಸಲು ಈಕ್ವಿಟಿ ಷೇರುಗಳಿಗೆ ನೀಡುವ ಡಿವಿಡೆಂಡ್ ಗಿಂತ ಶೇ.5 ರಷ್ಟನ್ನು ಹೆಚ್ಚಿಗೆ ನೀಡಲಾಗುವುದು. ಆದರೂ ಡಿ ವಿ ಆರ್ ಗಳಿಗೆ ಬೆಂಬಲ ದೊರೆಯುತ್ತಿಲ್ಲ. ಕಾರಣ ಡಿ ವಿ ಆರ್ ವಿತರಿಸಿದ ಕಂಪನಿಗಳು ಸೂಕ್ತ ಪ್ರಮಾಣದ ಡಿವಿಡೆಂಡ್ ಗಳನ್ನು ವಿತರಿಸುತ್ತಿಲ್ಲ.
ಡಿ ವಿ ಆರ್ ವಿತರಿಸಿದ ಕಂಪನಿಗಳು:
ಟಾಟಾ ಮೋಟಾರ್ಸ್, ಪೆಂಟಲೂನ್ ಫ್ಯಾಷನ್ಸ್, ಜೈನ್ ಇರ್ರಿಗೇಷನ್, ಗುಜರಾತ್ ಎನ್ ಆರ್ ಇ ಕೋಕ್ ಕಂಪನಿಗಳು ಡಿ ವಿ ಆರ್ ಗಳನ್ನು ವಿತರಿಸಿವೆ. ಇವುಗಳಲ್ಲಿ ಗುಜರಾತ್ ಎನ್ ಆರ್ ಇ ಕೋಕ್ ಕಂಪನಿಯು ವಹಿವಾಟಿನಿಂದ ಡಿಲೀಸ್ಟ್ ಆಗಿದೆ. ಪೆಂಟಲೂನ್ ಫ್ಯಾಷನ್ಸ್ ಕಂಪನಿಯು 2016 ರಲ್ಲಿ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ನಲ್ಲಿ ವಿಲೀನಗೊಂಡಿದೆ. ಜೈನ್ ಇರಿಗೇಷನ್ ಮತ್ತು ಟಾಟಾ ಮೋಟಾರ್ ಡಿ ವಿ ಆರ್ ಗಳು ಮಾತ್ರ ವಹಿವಾಟಾಗುತ್ತಿವೆ. 2016 ರಿಂದಲೂ ಡಿವಿಡೆಂಡ್ ಘೋಷಿಸದೇ ಇರುವ ಟಾಟಾ ಮೋಟಾರ್ಸ್ ಷೇರು ಈಗ ರೂ.340 ರ ಸಮೀಪ ವಹಿವಾಟಾಗುತ್ತಿದ್ದು ಈ ಕಂಪನಿಯ ಡಿ ವಿ ಆರ್ ಗಳು ಷೇರುಗಳಿಗಿಂತ ಅತಿ ಕಡಿಮೆ ದರದಲ್ಲಿಅಂದರೆ ರೂ.155 ರ ಸಮೀಪ ವಹಿವಾಟಾಗುತ್ತಿವೆ. ಸಧ್ಯ ಈ ಕಂಪನಿಯು ಲಾಭ ಗಳಿಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಆಕರ್ಷಕ ಡಿವಿಡೆಂಡ್ ನಿರೀಕ್ಷಿಸಬಹುದಾಗಿದೆ. ಈ ಅಂಶವನ್ನಾಧರಿಸಿ ಡಿ ವಿ ಆರ್ ಗಳು ಹೂಡಿಕೆಗೆ ಉತ್ತಮವೆನಿಸುತ್ತವೆ.
ಬದಲಾದ ಸಂಪನ್ಮೂಲ ಸಂಗ್ರಹಣೆ ವೈಖರಿ:
ಪ್ರಿಫರನ್ಸ್ ಷೇರುಗಳು, ವ್ಯತ್ಯಯ ಮತದಾನದ ಷೇರುಗಳು ಕಣ್ಮರೆಯಾದ ನಂತರ ಮಹತ್ತರವಾದ ಬದಲಾವಣೆಗಳನ್ನು ಸಂಪನ್ಮೂಲ ಸಂಗ್ರಹಣಾ ವಿಧದಲ್ಲಿ ಕಾಣಬಹುದಾಗಿದೆ. ವಿತ್ತೀಯ ವಲಯದಲ್ಲಿ ವಿಶೇಷವಾಗಿ ಬ್ಯಾಂಕಿಂಗ್ ವಲಯದಲ್ಲಿ ಟೈರ್ 1 ಮತ್ತು ಟೈರ್ 2 ಪರ್ಪೆಚುಯಲ್ ಬಾಂಡ್ ಗಳ ಯೋಜನೆ ಅಳವಡಿಸಿಕೊಳ್ಳಲಾಯಿತು. ಇದರಲ್ಲಿ ಅಡಕವಾಗಿರುವ ಅಪಾಯದ ಮಟ್ಟವು ಯೆಸ್ ಬ್ಯಾಂಕ್ ನಲ್ಲಿ ಮಾಡಿದ್ದ ಸುಮಾರು ರೂ.8,400 ಕೋಟಿ ಮೌಲ್ಯದ ಬಾಂಡ್ ಗಳನ್ನು ಶೂನ್ಯೀಕರಿಸಿದಾಗ( ಹೂಡಿಕೆದಾರರ ಹಣ ಹಿಂದಿರುಗಿಸದೆ, ರದ್ದು ಮಾಡಿದ ಕ್ರಮ) ಮತ್ತು ಲಕ್ಷ್ಮೀ ವಿಲಾಸ್ ಬ್ಯಾಂಕ್ ನ ಸುಮಾರು ರೂ.318 ಯ ಬಾಂಡ್ ಗಳನ್ನು ಶೂನ್ಯೀಕರಿಸದಾಗ ಅರಿವಾಯಿತು.
ಈಗಲೂ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿ ಎಫ್ ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಲವಾರು ವಿಧದ ಬಾಂಡ್ ಗಳು ಮತ್ತು ಪರ್ಪೆಚುಯಲ್ ಬಾಂಡ್ ಗಳ ಯೋಜನೆಗಳನ್ನು ತೇಲಿಬಿಟ್ಟು ಸಂಪನ್ಮೂಲ ಸಂಗ್ರಹಣೆ ಮಾಡಿವೆ.
ಬಾಂಡ್ ಗಳು ಮತ್ತು ಪರ್ಪೆಚುಯಲ್ ಬಾಂಡ್ ಯೋಜನೆ:
ಬ್ಯಾಂಕ್ ಬಡ್ಡಿಯ/ ಸಾಲದ ಹೊರೆಯ ಹೊಣೆಯಿಂದ ತಪ್ಪಿಸಿಕೊಳ್ಳಲು ಕಾರ್ಪೊರೇಟ್ ಗಳು, ಪೇಟೆಗಳು ಚಟುವಟಿಕೆ ಭರಿತವಾಗಿರುವ ಸಮಯದಲ್ಲಿ ಹೆಚ್ಚಿನ ಬೆಲೆಯಲ್ಲಿ ಬಾಂಡ್ ಮೌಲ್ಯವನ್ನು ಷೇರುಗಳಾಗಿ ಪರಿವರ್ತನೆ ಮಾಡುವ ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ ಗಳನ್ನು 2007 ರ ಸಮಯದಲ್ಲಿ ತೇಲಿಬಿಟ್ಟವು. ನಂತರ ಪೇಟೆಯ ಕುಸಿತದ ಕಾರಣ ಬಾಂಡ್ ಮೌಲ್ಯವನ್ನು ಹಿಂದಿರುಗಿಸಲಾಗದೆ ಭಾರಿ ತೊಂದರೆಗಳನ್ನು ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿ ಕಂಪನಿಗಳು ಎದುರಿಸಬೇಕಾಯಿತು.
ಎಫ್ ಸಿ ಸಿ ಬಿ ಪ್ರಮಾದ :
ಆ ಸಮಯದಲ್ಲಿ ತುಲಿಪ್ ಟೆಲಿ ಕಂಪನಿಯು ಕನ್ವರ್ಷನ್ ದರ ಪ್ರತಿ ಷೇರಿಗೆ ರೂ.2,274 ಎಂದು ನಿಗದಿಪಡಿಸಿತು. ಈ ಕಂಪನಿ 2005 ರಲ್ಲಿ ಪ್ರತಿ ಷೇರಿಗೆ ರೂ.120 ರಂತೆ ಐ ಪಿ ಒ ಮೂಲಕ ವಿತರಣೆ ಮಾಡಿತ್ತು. 2012 ರಲ್ಲಿ ಎಫ್ ಸಿ ಸಿ ಬಿ ಗಳ ಬಾಕಿ 140 ದಶ ಲಕ್ಷ ಅಮೇರಿಕನ್ ಡಾಲರ್ ಮೌಲ್ಯ ಮೊತ್ತವನ್ನು ಹಿಂದಿರುಗಿಸಲು ವಿಫಲವಾಯಿತು. 2014 ರ ವೇಳೆಗೆ ಸುಮಾರು ರೂ.85 ಕೋಟಿ ಹಾನಿಗೊಳಗಾಗಿ, ನಂತರ ತನ್ನ ಅಸ್ಥಿತ್ವವನ್ನೇ ಉಳಿಸಿಕೊಳ್ಳಲು ವಿಫಲವಾಯಿತು.
ರೋಲ್ಟಾ ಇಂಡಿಯಾ ಸಹ 2012 ರ ಸಮಯದಲ್ಲಿ ಎಫ್ ಸಿ ಸಿ ಬಿ ಮೂಲಕ ಪ್ರತಿ ಷೇರಿನ ಪರಿವರ್ತನೆಯ ದರವನ್ನು ರೂ.368.50 ಯಂತೆ ನಿಗದಿಪಡಿಸಿತಾದರೂ, ಷೇರಿನ ದರದಲ್ಲಿ ಉಂಟಾದ ಭಾರಿ ಕುಸಿತದ ಕಾರಣ ಬಾಂಡ್ ಗಳ ಮೊತ್ತವನ್ನು ಹಿಂದಿರುಗಿಸಬೇಕಾಯಿತು. ಆ ಸಮಯದಲ್ಲಿ ಸುಮಾರು ರೂ.765 ಕೋಟಿ ಹಣವನ್ನು ಹಿಂದಿರುಗಿಸಲು ಯಶಸ್ವಿಯಾಯಿತು. ಆದರೆ ಈ ಆಘಾತದಿಂದ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ.
ಇದೇ ರೀತಿ ಈಗ ವಹಿವಾಟಿನಿಂದ ಅಮಾನತುಗೊಂಡಿರುವ ಆಮ್ ಟೆಕ್ ಆಟೋ ರೂ.210 ರಂತೆ, ಭಾರತಿ ಶಿಪ್ ಯಾರ್ಡ್ ಪ್ರತಿ ಷೇರಿಗೆ ರೂ.498 ರಂತೆ ಪರಿವರ್ತಿಸುವ ಬೆಲೆಯನ್ನು ನಿಗದಿಪಡಿಸಿದ್ದವು. ಈಗ ರೂ.45 ರ ಸಮೀಪ ವಹಿವಾಟಾಗುತ್ತಿರುವ ಅಬ್ಬಾನ್ ಆಫ್ ಷೋರ್ ಪ್ರತಿ ಷೇರಿಗೆ ರೂ.2,789 ರಂತೆ ಪರಿವರ್ತನೆಯ ಬೆಲೆ ನಿಗದಿಪಡಿಸಿ ಅನಿವಾರ್ಯವಾಗಿ 2011 ರಲ್ಲಿ ಹಿಂದಿರುಗಿಸಿತಾದರೂ, ಮತ್ತೆ 2013 ರಲ್ಲಿ ರೂ.2,200 ಕೋಟಿ ಮೌಲ್ಯದ ಎಫ್ ಸಿ ಸಿ ಬಿ ವಿತರಿಸಲು ಪ್ರಯತ್ನಿಸಿತು. ಈ ಎಫ್ ಸಿ ಸಿ ಬಿ ಗೊಂದಲದಲ್ಲಿ ಹೆಚ್ಚು ತೊಂದರೆಗೊಳಗಾದವೆಂದರೆ ಮಧ್ಯಮ ಮತ್ತು ಕೆಳಮಧ್ಯಮ ವಲಯದ ಕಂಪನಿಗಳೆಂಬುದು ಗಮನಾರ್ಹ. ಹಾಗೆಂದು ಎಲ್ಲಾ ಎಫ್ ಸಿ ಸಿ ಬಿ ವಿತರಿಸಿದ ಎಲ್ಲಾ ಕಂಪನಿಗಳೂ ವಿಫಲವಾಗಿವೆ ಎಂದಲ್ಲ. ಯಶಸ್ಸು ಕಂಡ ಕಂಪನಿಗಳು ಇವೆ. ಒಟ್ಟಿನಲ್ಲಿ ಅಯಾ ಸಂದರ್ಭದಲ್ಲಿರುವ ಪರಿಸ್ಥಿತಿಯಕಲನ್ನಾಧರಿಸಿ ವಿಶ್ಲೇಷಿಸಲಾಗುವುದು. ಹೂಡಿಕೆ ನಿರ್ಧಾರ ಮಾಡುವಾಗ ನಮ್ಮ ಸ್ವಂತ ತೀರ್ಮಾನ ಅತ್ಯವಶ್ಯಕ.
ಪ್ರೈವೇಟ್ ಈಕ್ವಿಟಿ, ವೆಂಚರ್ ಕ್ಯಾಪಿಟಲ್ ಹೂಡಿಕೆ ಮತ್ತು ಐಪಿಒ :
ಇತ್ತೀಚೆಗೆ ತೇಲಿಬಿಡಲಾಗುತ್ತಿರುವ ಐ ಪಿ ಒ ಗಳು ಅತಿ ಹೆಚ್ಚಿನ ದರಗಳಲ್ಲಿ ವಿತರಣೆಯಾಗುತ್ತಿವೆ. ಈ ಷೇರುಗಳು ಲಿಸ್ಟಿಂಗ್ ಆದ ಆರಂಭಿಕ ದಿನಗಳಲ್ಲಿ ಅತಿ ಹೆಚ್ಚಿನ ಬೆಲೆಗಳಲ್ಲಿ ವಹಿವಾಟಾಗುವುದು ಇದೆ. ಈ ರೀತಿ ಹೆಚ್ಚಾದಾಗ ಅವುಗಳ ಬಗ್ಗೆ ಸಕಾರಾತ್ಮಕ ಸುದ್ಧಿಗಳು ಹೆಚ್ಚು ಪ್ರಚಲಿತದಲ್ಲಿರುತ್ತವೆ. ಆದರೆ ಸುರಕ್ಷತೆಯ ದೃಷ್ಠಿಯಿಂದ ಸಣ್ಣ ಹೂಡಿಕೆ ದಾರರು ಸಾಧ್ಯವಾದಷ್ಟು ನಿರ್ಗಮಿಸಿ ನಗದೀಕರಿಸಿಕೊಳ್ಳುವುದು ಉತ್ತಮ. ಕಾರಣ ಈಗಿನ ಐಪಿಒ ಗಳು ಆ ಕಂಪನಿಗಳಲ್ಲಿ ಐ ಪಿ ಒ ಗೂ ಮೊದಲೇ ಫಂಡಿಂಗ್ ಒದಗಿಸಿರುವ ಸಂಸ್ಥೆಗಳು ತಮ್ಮ ಹೂಡಿಕೆಗೆ ಪ್ರತಿಫಲ ಪಡೆದುಕೊಳ್ಳಲಿ ಎಂಬುದಾಗಿರುವದರಿಂದ ಸಣ್ಣ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸಬೇಕು. ಪೂರ್ವಪರ ವಿಶ್ಲೇಷಿಸಿ ಹೂಡಿಕೆ ತೀರ್ಮಾನ ತೆಗೆದುಕೊಳ್ಳಬೇಕು.
ಜಿ ಆರ್ ಇನ್ಫ್ರಾ ಪ್ರಾಜೆಕ್ಟ್ಸ್ ಲಿ:ಬುಧವಾರ 7 ರಿಂದ ಆರಂಭವಾಗುವ ಈ ಕಂಪನಿಯ ಐಪಿಒ ವಿಚಾರ ಹೀಗಿದೆ. ಈ ಕಂಪನಿಯ ರೂ.5 ರ ಮುಖಬೆಲೆಯ ರೂ.962.33 ಕೋಟಿ ಮೌಲ್ಯದ ಷೇರುಗಳಲ್ಲಿ 1.15,08,704 ಷೇರುಗಳು ಆಫರ್ ಫಾರ್ ಸೇಲ್ ಮೂಲಕ ವಿತರಿಸಲಾಗುವುದು. ಅಂದರೆ ಈಗಾಗಲೇ ಹೂಡಿಕೆ ಮಾಡಿರುವ ಸಂಸ್ಥೆಗಳೊಂದಿಗೆ ಪ್ರವರ್ತಕರೂ ಸೇರಿ ತಮ್ಮ ಭಾಗಿತ್ವದ ಸ್ವಲ್ಪ ಷೇರುಗಳನ್ನು ಮಾರಾಟಮಾಡುವುದಾಗಿದೆ. ಇವರುಗಳು ಖರೀದಿಸಿರುವ ಷೇರಿನ ಬೆಲೆ ರೂ.2.50 ಯಿಂದ ರೂ.130.80 ರ ವರೆಗೂ ಇದೆ. ಅಂದರೆ ಈ ಅಲ್ಪ ಬೆಲೆಯಲ್ಲಿ ಖರೀದಿಸಿದವರಿಗೆ ರೂ.837 ರಂತೆ ಮಾರಾಟಮಾಡಲು ಒದಗಿಸುವ ವೇದಿಕೆ ಈ ಐ ಪಿ ಒ ಆಗಿದೆ.
ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ ಲಿ :ಬುಧವಾರ 7 ರಿಂದ ಆರಂಭವಾಗುವ ಈ ಕಂಪನಿಯ ಐ ಪಿ ಒ ವಿಚಾರ ಹೀಗಿದೆ. ಈ ಕಂಪನಿಯ ಷೇರಿನ ಮುಖಬೆಲೆ ರೂ.1, ನಿಗದಿ ಪಡಿಸಿದ ವಿತರಣೆಯ ʼಪ್ರೈಸ್ ಬ್ಯಾಂಡ್ʼ ರೂ.880 ರಿಂದ ರೂ.900. ರೂ.1,5,46.62 ಕೋಟಿ ಮೌಲ್ಯದ ವಿತರಣೆಯು ಪೂರ್ಣವಾಗಿ ಆಫರ್ ಫಾರ್ ಸೇಲ್ ಮೂಲಕ ಅಂದರೆ ಪ್ರವರ್ತಕರು ಮತ್ತು ಕೆಲವು ಷೇರುದಾರರು ಸೇರಿ ತಮ್ಮ ಭಾಗಿತ್ವವನ್ನು ಮಾರಾಟಮಾಡುತ್ತಿದ್ದಾರೆ. ಇವರುಗಳು ಪಡೆದುಕೊಂಡಿರುವ ಷೇರಿನ ಬೆಲೆ, ಪೇಟೆಯ ನಿಯಂತ್ರಕ ಸೆಬಿಯ ದಾಖಲೆಯಂತೆ ಕಂಪನಿಯು ROC ಗೆ ಸಲ್ಲಿಸಿರುವ ʼರೆಡ್ ಹೆರಿಂಗ್ ದಾಖಲೆಯಂತೆʼ ಕೆಲವು ಪೈಸೆಗಳಷ್ಠೆ. ಒಂದು ರೂಪಾಯಿಯೂ ಬಿದ್ದಿಲ್ಲ. ಅಂತಹ ಷೇರನ್ನು ರೂ.900 ರಂತೆ ವಿತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದರೆ ವಿತರಕರ ಚಿಂತನೆ ಏನಿರಬಹುದೆಂದು ನಿರ್ಧರಿಸಿ ತೀರ್ಮಾನಿಸಿ.
ಮುಂದಿನ ದಿನಗಳಲ್ಲಿ ಐ ಪಿ ಒ ಗಳ ಮಹಾಪೂರವೇ ಇದೆ. ಪೇಟಯು ಉತ್ತುಂಗದಲ್ಲಿ, ಉನ್ಮಾದದಲ್ಲಿರುವಾಗ ಹೆಚ್ಚಿನ ಬೆಲೆಯ ಐ ಪಿ ಒ ಗಳು ನುಸುಳುತ್ತವೆ. ಆದರೆ ಆಯ್ಕೆ ಮಾತ್ರ ಅವುಗಳ ಯೋಗ್ಯತೆ, ವಿತರಣೆಯ ಬೆಲೆ ಮುಂತಾದವುಗಳನ್ನು ತೂಗಿ, ಅರಿತು ನಿರ್ಧರಿಸುವುದು ಅತಿ ಮುಖ್ಯ. ದುಡುಕಿದರೆ ಹೂಡಿಕೆ ಮಾಡಿದ ಬಂಡವಾಳಕ್ಕೇ ಕುತ್ತಾಗಬಹುದು. ಪ್ರಚಾರವೇ ಬೇರೆ, ಪ್ರಚಲಿತ ವಾಸ್ತವವೇ ಬೇರೆ ಇರಬಹುದು.
ಈಗಾಗಲೇ ಕರೋನದ ಕ್ರೂರ ಪ್ರಭಾವಕ್ಕೊಳಗಾಗಿರುವ ಸಮಾಜದ ಆರ್ಥಿಕತೆಯನ್ನು ಚುರುಕುಗೊಳಿಸಲು ಸರ್ಕಾರಗಳು ನಿಯಂತ್ರಣವನ್ನು ಸಡಿಲಿಸಿದ ಸಮಯದಲ್ಲಿ ಅತಿ ಹೆಚ್ಚಿನ ಎಚ್ಚರದ ನಿರ್ಧಾರ ಅಗತ್ಯ. ಈಗಾಗಲೇ ವಿದ್ಯುತ್ ದರ ಹೆಚ್ಚಿಸಲಾಗಿದೆ, ಸದ್ದಿಲ್ಲದೆ ಬಿ ಡಿ ಎ ವಿಧಿಸಲಾದ ತೆರಿಗೆ ಪ್ರಮಾಣವನ್ನು ಹಲವು ಪಟ್ಟು ಹೆಚ್ಚಿಸಿದೆ, ಮುಂದೆ ನೀರಿನ, ಹಾಲಿನ, ಬಸ್ಸಿನ ದರ ಹೆಚ್ಚಳವೂ ಸಾಧ್ಯವಿದೆ. ಹೀಗಿರುವಾಗ ಹೆಚ್ಚಿನ ಹಣ ಸಂಪಾದನೆಯ ಆಸೆಯಿಂದ ಕೈಲಿರುವ ಹಣಕ್ಕೆ ಕುತ್ತು ತಂದುಕೊಳ್ಳದ ರೀತಿಯಲ್ಲಿ ಚಟುವಟಿಕೆ ನಡೆಸುವುದು ಅನಿವಾರ್ಯ. ಹಾಗೆಂದು ಷೇರುಪೇಟಯ ಚಟುವಟಿಕೆಯೇ ಅಪಾಯ ಎಂದು ಭಾವಿಸುವ ಅಗತ್ಯವಿಲ್ಲ. ಈಗಿನ ಸಂದರ್ಭವು ದೀರ್ಘಕಾಲೀನ ಹೂಡಿಕೆಗಿಂತ, ವಹಿವಾಟಿಗೆ ಅನುಕೂಲಕರವಾಗಿದೆ. ಹಿಂದಿನ ವಾರ ಕಂಪನಿಗಳಾದ ಕ್ಲಾರಿಯಂಟ್ ಕೆಮಿಕಲ್ಸ್, ಇಂಡಿಯಾ ಗ್ಲೈಕಾಲ್ಸ್, ಗುಜರಾತ್ ಫ್ಲೋರೋ, ಟಾಟಾ ಕೆಮಿಕಲ್ಸ್, ಜೆ ಕೆ ಟೈರ್ಸ್, ಸ್ಟರ್ಲಿಂಗ್ ಅಂಡ್ ವಿಲ್ಸನ್, ಪವರ್ ಮೆಕ್ ಪ್ರಾಜೆಕ್ಟ್, ಸ್ಟೀಲ್ ಆಥಾರಿಟೀಸ್, ಹ್ಯಾಪಿಯೆಸ್ಟ್ ಮೈಂಡ್ಸ್, ಭಾರತ್ ಡೈನಾಮಿಕ್ಸ್, ಹೆಚ್ ಸಿ ಎಲ್ ಟೆಕ್, ಕ್ಯಾಡಿಲ್ಲಾ ಹೆಲ್ತ್, ಇಂಡಿಯನ್ ಓವರ್ಸಿಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ, ಕೆಂಕಾನ್ ಸ್ಪೆಷಾಲಿಟಿ ಕೆಮಿಕಲ್ಸ್, ಟಾಟಾ ಎಲಾಕ್ಸಿ, ದಿಲೀಪ್ ಬ್ಯುಲ್ಡ್ ಕಾನ್ ಮುಂತಾದ ಅನೇಕ ಕಂಪನಿಗಳು ಪ್ರದರ್ಶಿಸಿದ ಏರಿಳಿತಗಳು ಈ ವಾದವನ್ನು ದೃಢೀಕರಿಸುತ್ತದೆ.
ಶ್ವಾನ ನಿದ್ದೆಯಂತೆ ಸದಾ ಎಚ್ಚರವಾಗಿದ್ದು, ಬಕ ಧ್ಯಾನದಂತೆ ಸದಾ ದೊರೆತಂತ ಲಾಭ ಗಳಿಕೆಯ ಅವಕಾಶಗಳನ್ನು ಬಳಸಿಕೊಂಡಲ್ಲಿ ಗಜ ಸ್ನಾನದ ತೃಪ್ತಿ ಖಂಡಿತಾ ದೊರೆಯುತ್ತದೆ. ಆಸೆಗೆ ಕಡಿವಾಣ ಹಾಕಿ, ಕೈಗೆಟುಕಿದ್ದರ ಆನಂದ ಪಡೆದಲ್ಲಿ ಯಶಸ್ವೀ ಹೂಡಿಕೆದಾರರಾಗುವಿರಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
Super article. Thanks for valuable information