ರಾಜ್ಯ ಸರಕಾರ ಆಯೋಜಿಸುವ ಪ್ರತಿಷ್ಠಿತ ಬೆಂಗಳೂರು ಟೆಕ್ ಸಮಿಟ್-2021 (ಬಿಟಿಎಸ್) ನವೆಂಬರ್ 17-18 & 19ರಂದು ನಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಟೆಕ್ ಸಮಿಟ್‌ಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ ವರ್ಷ ಈ ಸಮಿಟ್‌ಗೆ ʼನೆಕ್ಸ್ಟ್ ಇಸ್ ನೌʼ (Next is Now) ಎಂಬ ಟ್ಯಾಗ್‌ಲೈನ್ ಇತ್ತು. ಈ ವರ್ಷ ʼಡ್ರೈವ್ ಇನ್ ದಿ ನೆಕ್ಸ್ಟ್ʼ (Driving thr Next) ಎನ್ನುವ ಟ್ಯಾಗ್‌ಲೈನ್ ನಿಗದಿ ಮಾಡಲಾಗಿದೆ ಎಂದರು.
ಕೋವಿಡ್ ಕಾರಣಕ್ಕೆ ಈ ವರ್ಷವೂ ವರ್ಚುಯಲ್ ಮತ್ತು ಭೌತಿಕ ವೇದಿಕೆ ಒಳಗೊಂಡಂತೆ ಹೈಬ್ರಿಡ್ ಪದ್ಧತಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು ಅವರು.
ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ:
ಈ ಟೆಕ್ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸುವ ಉದ್ದೇಶ ಇದ್ದು ಅವರನ್ನು ಆಹ್ವಾನಿಸಲಾಗುವುದು. ಅದೇ ರೀತಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರನ್ನು ಸಮಿಟ್‌ಗೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಜತೆಗೆ, ತಂತ್ರಜ್ಞಾನ ಮತ್ತು ಹೆಲ್ತ್‌ಕೇರ್ ಕ್ಷೇತ್ರದ ಪ್ರಮುಖ ಕಂಪನಿಗಳ ಮುಖ್ಯಸ್ಥರನ್ನು ಕರೆಯುವ ಉದ್ದೇಶ ಇದೆ ಎಂದರು.
ಬಿಯಾಂಡ್ ಬೆಂಗಳೂರು:
ಟೆಕ್ ಸಮಿಟ್‌ಗೆ ಪೂರ್ವಭಾವಿಯಾಗಿ ಬಿಯಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಟೆಕ್ ಸಮಿಟ್‌ಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮಗಳನ್ನೂ ದೊಡ್ಡ ಪ್ರಮಾಣದಲ್ಲೇ ನಡೆಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಹಿಂದಿನ ಶೃಂಗದಲ್ಲಿ ಗ್ಲೋಬಲ್ ಅಲೆಯನ್ಸ್ ಒಕ್ಕೂಟಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಬಾರಿ ಭಾರತೀಯ ಹೂಡಿಕೆದಾರರ ಮೈತ್ರಿಕೂಟಕ್ಕೆ ಮಹತ್ವ ಕೊಡಲಾಗುತ್ತಿದೆ. ಈ ಮೂಲಕ ವಿವಿಧ ರಾಜ್ಯಗಳು ಹಾಗೂ ಎತ್ತರದ ಸಾಧನೆ ಮಾಡಿರುವ ಖಾಸಗಿ ಕಂಪನಿ, ವ್ಯಕ್ತಿಗಳು ಭಾಗಿಯಾಗವಂತೆ ಮಾಡಲಾಗುತ್ತಿದೆ ಎಂದು ಡಿಸಿಎಂ ವಿವರಿಸಿದರು.
ಈ ಮೂರು ನಗರಗಳಲ್ಲಿ ನಡೆಯಲಿರುವ ಸಭೆಗಳಲ್ಲಿ ವರ್ಚುಯಲ್ ವೇದಿಕೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಐಟಿ ಸಚಿವ ರವಿಶಂಕರ್ ಪ್ರಸಾದ್, ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ. ಜತೆಗೆ, ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಳ್ಳುವರು ಎಂದು ಡಿಸಿಎಂ ಮಾಹಿತಿ ನೀಡಿದರು.
ಈ ಸಭೆಗಳಲ್ಲಿ ರಾಜ್ಯದ ಉದ್ಯಮಶೀಲತಾ ಗುಣಮಟ್ಟದ ಚೌಕಟ್ಟು ಮಾಹಿತಿ ನೀಡಿದರು.
ಜಿಲ್ಲೆಗಳಲ್ಲಿ ನಡೆಯುವ ಟೆಕ್ ಸಮಿಟ್ ಪೂರ್ವಭಾವಿ ಸಭೆಗಳಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM), ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ (ER &D) ಹಾಗೂ ಭಾರತೀಯ ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (IESA)ಗೆ ಸಂಬಂಧಿಸಿದ ವರದಿಗಳನ್ನು ಅನಾವರಣ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕೂಡ ಈ ಬಾರಿಯ ಬಿಟಿಎಸ್ ನಲ್ಲಿ ಹೆಚ್ಚಿನ ಪಾತ್ರ ವಹಿಸಲಿವೆ ಎಂದು ಅವರು ತಿಳಿಸಿದರು.
ರಾಜ್ಯದ ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲ ಕೃಷ್ಣ, ಜೈವಿಕ ತಂತ್ರಜ್ಣಾನ ವಿಷನ್ ಗ್ರೂಪ್ ನ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕರೂ ಆದ ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್ ಪ್ರಕಾಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಡಿಸಿಎಂ ಕಾರ್ಯದರ್ಶಿ ಪಿ.ಪ್ರದೀಪ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.