21.4 C
Karnataka
Thursday, November 21, 2024

    ಮಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾನಸಿಕ ಸ್ಥೈರ್ಯ ತುಂಬಲು ಕಾರ್ಯಗಾರ

    Must read

    ಕರ್ನಾಟಕ ಸರ್ಕಾರದ  ಶಿಕ್ಷಣ ಸುಧಾರಣೆಗಳ ಕಾರ್ಯಕ್ರಮದ ಅಡಿಯಲ್ಲಿ  ‘ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾನಸಿಕ ಸ್ಥೈರ್ಯ ಹಾಗೂ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಆನ್ಲೈನ್  ತರಬೇತಿ’ ಯನ್ನು  ಮಂಗಳೂರು ವಿವಿಯಲ್ಲಿ ಶನಿವಾರ ಆಯೋಜಿಸಲಾಗಿತ್ತು.  

    ಕಾರ್ಯಕ್ರಮದ ಮುಖ್ಯ ಪೋಷಕರಾದ ಪ್ರೊ. ಎಂ. ಆರ್. ದೊರೆಸ್ವಾಮಿ (ಸಲಹೆಗಾರರು – ಶಿಕ್ಷಣ ಸುಧಾರಣೆಗಳು ಕರ್ನಾಟಕ ಸರ್ಕಾರ  ಹಾಗೂ ಪಿ. ಇ. ಎಸ್ . ವಿಶ್ವವಿದ್ಯಾನಿಯದ ಕುಲಾಧಿಪತಿಗಳು)    ಅವರು ಸಮಯೋಚಿತವಾಗಿ ಇಂತಹ   ಕಾರ್ಯಕ್ರಮವನ್ನು ಆಯೋಜಿಸಿರುವುದನ್ನು  ಶ್ಲಾಘಿಸಿ   ಶುಭಕೋರಿದರು. 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.  ಪಿ. ಸುಬ್ರಹ್ಮಣ್ಯ  ಯಡಪಡಿತ್ತಾಯ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಕೋವಿಡ್ -19 ಸಂದಿಗ್ಧತೆಯ ಈ ಸನ್ನಿವೇಶದಲ್ಲಿ  ವಿದ್ಯಾರ್ಥಿಗಳು ಮುಖ್ಯವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರುಗಳಿಗೆ  ಅತಂತ್ರ ಸ್ಥಿತಿ  ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ  ಅವರಲ್ಲಿ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವುದು ನಮ್ಮ ಕರ್ತವ್ಯ.   ಎಲ್ಲರೂ   ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಕರೆ ನೀಡಿದರು.

    ಸುರಕ್ಷತೆ ಮತ್ತು   ಜನರ  ಹಿತದೃಷ್ಟಿಯಿಂದ   ಸರ್ಕಾರವು ಕಾಲಕಾಲಕ್ಕೆ ತೆಗೆದುಕೊಳ್ಳುವ ಕ್ರಮಗಳನ್ನು ಅನುಸರಿಸಿ ಶೀಘ್ರದಲ್ಲಿ  ಕೊರೊನಾಮುಕ್ತ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಕೈಜೋಡಿಸಬೇಕು.   ಸಂಪನ್ಮೂಲ ವ್ಯಕ್ತಿಗಳು  ನೀಡುವ ಸಲಹೆ ಸೂಚನೆಗಳನ್ನು  ಪಾಲಿಸಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಕೊಳ್ಳಬೇಕು ಎಂದು ಹೇಳಿದರು.

    ರಾಮಕುಂಜದ ಶ್ರೀ  ರಾಮಕುಂಜೇಶ್ವರ   ಪ್ರೌಢಶಾಲೆಯ   ಮುಖ್ಯೋಪಾಧ್ಯಾಯ ಹಾಗೂ  ಜೆಸಿಐ  ರಾಷ್ಟ್ರೀಯ ತರಬೇತುದಾರರಾದ ಸತೀಶ್ ಭಟ್ ಬಿಳಿನೆಲೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಈ  ಬಾರಿಯ ಪರೀಕ್ಷಾ ವಿಧಾನ,  ಪರೀಕ್ಷೆಗೆ ಹೇಗೆ ತಯಾರಿ ನೆಡೆಸಬೇಕು, ಉತ್ತಮ ಅಂಕಗಳನ್ನು ಗಳಿಸಲು  ಶಿಸ್ತುಬದ್ಧವಾಗಿ ಹೇಗೆ ಅಭ್ಯಾಸ ಮಾಡಬೇಕು.  ಗಣಿತ ಮತ್ತು ವಿಜ್ಞಾನದ  ಸೂತ್ರಗಳನ್ನು ಹೇಗೆ ಸುಲಭವಾಗಿ ನೆನಪಿಟ್ಟುಕೊಳ್ಳಬೇಕು, ಗಣಿತ ಸಮಸ್ಯೆಗಳನ್ನು  ಸರಳವಾಗಿ  ಪರಿಹರಿಸುವ ಬಗೆ, ಉತ್ತಮ ಅಂಕಗಳನ್ನು ಗಳಿಸಿದರೆ ಇರುವ ಅವಕಾಶಗಳು,   ಹೀಗೆ  ಅನೇಕ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.  

    ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಮಂಗಳೂರು ವಿವಿ ವಸ್ತುವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವನಾಥ ಟಿ ಅವರು ಪರೀಕ್ಷೆಗೆ ಬೇಕಾದ ಮಾನಸಿಕ ಸಿದ್ಧತೆ,  ಒತ್ತಡರಹಿತವಾಗಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ  ಮಕ್ಕಳಿಗೆ ಚಿತ್ರಗಳ ಮೂಲಕ ಉಪನ್ಯಾಸವನ್ನು  ಮಂಡಿಸಿದರು. 

    ಕಾರ್ಯಕ್ರಮದ ಸಂಯೋಜಕರಾದ  ಡಾ. ಪ್ರಶಾಂತ ನಾಯ್ಕ  ಪ್ರಸ್ತಾವನೆ ಗೈದು ಸ್ವಾಗತಿಸಿದರು ಹಾಗೂ  ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಸುಪ್ತಮನಸ್ಸನ್ನು ಬಳಸಿಕೊಳ್ಳುವ ವಿಧಾನವನ್ನು ಪ್ರಾತ್ಯಕ್ಷಿಕೆ ನೀಡಿದರು. 

    ವಿದಾರ್ಥಿಗಳು ಪ್ರಶ್ನೆಗಳನ್ನು ಕೇಳಿ ನೇರ ಸಂವಾದದಲ್ಲಿ  ಭಾಗವಹಿಸಿದರು. ಕುಲಸಚಿವ ಪ್ರೊ. ಸಿ. ಕೆ. ಕಿಶೋರ್ ಕುಮಾರ್, ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ. ಎಲ್. ಧರ್ಮ ಮತ್ತು ದತ್ತು ಸ್ವೀಕೃತ ಹತ್ತು ಶಾಲೆಗಳ ನೋಡಲ್ ಅಧಿಕಾರಿ ಪ್ರೊ. ಬಿ. ನಾರಾಯಣ ಅವರುಗಳು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ  ಶುಭ ಹಾರೈಸಿದರು. ನರಸಿಂಹಯ್ಯ ಎನ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ. ಗೋವಿಂದರಾಜು ಬಿ. ಎಂ.  ವಂದನಾರ್ಪಣೆ ಸಲ್ಲಿಸಿದರು.  

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!