ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಮ್ಮನ್ನು ʻಖಾದಿ ಪ್ರಾಕೃತಿಕ್ ಪೇಂಟ್ʼನ ʻಪ್ರಚಾರ ರಾಯಭಾರಿʼ ಆಗಿ ಘೋಷಿಸಿಕೊಂಡರು. ಸಗಣಿಯಿಂದ ತಯಾರಿಸುವ ಬಣ್ಣಗಳ ಉತ್ಪಾದನೆಗೆ ಯುವ ಉದ್ಯಮಿಗಳನ್ನು ಉತ್ತೇಜಿಸಲು ದೇಶಾದ್ಯಂತ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು.
ಜೈಪುರದಲ್ಲಿ ಇಂದು ಭಾರತದ ಮೊದಲ ಮತ್ತು ಏಕೈಕ ಸಗಣಿಯಿಂದ ತಯಾರಿಸಿದ ಖಾದಿ ಪ್ರಕೃತಿಕ್ ಪೇಂಟ್‌ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕವನ್ನು ವರ್ಚ್ಯುಯಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದ ಸಚಿವರು ತಂತ್ರಜ್ಞಾನದ ಹೊಸ ಶೋಧವನ್ನು ಶ್ಲಾಘಿಸಿದರು. ಇದು ದೇಶದ ಗ್ರಾಮೀಣ ಮತ್ತು ಕೃಷಿ ಆಧಾರಿತ ಆರ್ಥಿಕತೆಯನ್ನು ಸಶಕ್ತಗೊಳಿಸುವಲ್ಲಿ ದೀರ್ಘಕಾಲೀನ ಪರಿಣಾಮ ಹೊಂದಿರಲಿದೆ ಎಂದು ಹೇಳಿದರು.
ಲಕ್ಷಾಂತರ ಕೋಟಿ ರೂ.ಗಳ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರೂ ಸಹ ಈ ಉತ್ಪಾದನಾ ಘಟಕವನ್ನು ಉದ್ಘಾಟಿಸಿದಷ್ಟು ಸಂತೋಷ ಮತ್ತು ತೃಪ್ತಿ ದೊರೆತಿರಲಿಲ್ಲ ಎಂದು ಗಡ್ಕರಿ ಹೇಳಿದರು. ಯಶಸ್ವಿ ಸಂಶೋಧನೆಗಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ಹಳ್ಳಿಯಲ್ಲಿ ಇದರ ಘಟಕವನ್ನು ಸ್ಥಾಪಿಸುವ ಗುರಿಯನ್ನು ಹೊಂದಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಗಡ್ಕರಿ ಅವರು ನಾಗ್ಪುರದ ತಮ್ಮ ನಿವಾಸದಲ್ಲಿ ಬಳಸಲು 1,000 ಲೀಟರ್ (ಡಿಸ್ಟೆಂಪರ್ ಮತ್ತು ಎಮಲ್ಷನ್‌ನ ತಲಾ 500 ಲೀಟರ್) ʻಖಾದಿ ಪ್ರಕೃತಿಕ ಪೇಂಟ್ʼಗಾಗಿ ಬೇಡಿಕೆ ಸಲ್ಲಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಘಟಕವಾಗಿರುವ ಜೈಪುರದ ʻಕುಮಾರಪ್ಪ ರಾಷ್ಟ್ರೀಯ ಹಸ್ತ ತಯಾರಿಕಾ ಕಾಗದ ಸಂಸ್ಥೆʼಯ (ಕೆಎಮ್‌ಎಚ್‌ಪಿಐ) ಕ್ಯಾಂಪಸ್‌ನಲ್ಲಿ ಹೊಸ ಘಟಕವನ್ನು ಸ್ಥಾಪಿಸಲಾಗಿದೆ. ಈ ಹಿಂದೆ ʻಪ್ರಾಕೃತಿಕ್ ಪೇಂಟ್ʼ ಅನ್ನು ಮಾದರಿ ಯೋಜನೆ ಅಡಿಯಲ್ಲಿ ಕೈಯಿಂದಲೇ ತಯಾರಿಸಲಾಗುತ್ತಿತ್ತು. ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಿರುವುದರಿಂದ ʻಪ್ರಾಕೃತಿಕ್ ಪೇಂಟ್ʼನ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ. ಪ್ರಸ್ತುತ ʻಪ್ರಾಕೃತಿಕ್ ಪೇಂಟ್ʼನ ದೈನಂದಿನ ಉತ್ಪಾದನೆಯು 500 ಲೀಟರ್ ಆಗಿದ್ದು, ಇದನ್ನು ದಿನಕ್ಕೆ 1000 ಲೀಟರ್‌ಗಳಿಗೆ ಹೆಚ್ಚಿಸಲಾಗುವುದು.
“ಹೊಸ ಘಟಕವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಹೊಂದಿದ್ದು, ಗುಣಮಟ್ಟ ಹಾಗೂ ಏಕರೂಪತೆಯ ದೃಷ್ಟಿಯಿಂದ ಉತ್ಪನ್ನದ ಅತ್ಯುನ್ನತ ಮಾನದಂಡಗಳನ್ನು ಖಾತರಿಪಡಿಸುತ್ತದೆ,” ಎಂದು ʻಕೆವಿಐಸಿʼ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಅವರು ಹೇಳಿದರು.
ʻಖಾದಿ ಪ್ರಾಕೃತಿಕ್ ಪೇಂಟ್ʼ ಅನ್ನು ಗಡ್ಕರಿ ಅವರು 2021ರ ಜನವರಿ 12 ರಂದು ಉದ್ಘಾಟಿಸಿದ್ದರು. ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ದೇಶಾದ್ಯಂತ ಸ್ವಯಂ ಉದ್ಯೋಗವನ್ನು ಸೃಷ್ಟಿಸುವ ಅವಳಿ ಉದ್ದೇಶಗಳೊಂದಿಗೆ ಈ ಪೇಂಟ್ ಅನ್ನು ಪರಿಚಯಿಸಲಾಗಿದೆ. ʻಡಿಸ್ಟೆಂಪರ್ʼ ಮತ್ತು ʻಎಮಲ್ಷನ್ʼ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುವ ಖಾದಿ ಪ್ರಾಕೃತಿಕ್ ಪೇಂಟ್ ಬ್ಯಾಕ್ಟೀರಿಯಾ ಪ್ರತಿರೋಧಕ, ಶಿಲೀಂಧ್ರ ಪ್ರತಿರೋಧಕ ಮತ್ತು ನೈಸರ್ಗಿಕ ಉಷ್ಣ ನಿರೋಧಕ ಗುಣಲಕ್ಷಣಗಳಂತಹ ಎಂಟು ಪ್ರಯೋಜನಗಳನ್ನು ಒಳಗೊಂಡಿದೆ. ಈ ಪೇಂಟ್ ಅಗ್ಗದ ದರದ, ಪರಿಸರ ಸ್ನೇಹಿ, ವಿಷಕಾರಿಯಲ್ಲದ ಹಾಗು ವಾಸನಾರಹಿತವಾದುದಾಗಿದೆ. (ಪಿಐಬಿ ವರದಿ)