ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನಾರಚನೆ ನಾಳೆ ಸಂಜೆ 6ಗಂಟೆಗೆ ನಡೆಯಬಹುದೆಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಎನ್ ಡಿ ಟೀವಿ ಪ್ರಕಾರ ಈ ವಿಸ್ತರಣೆಯಲ್ಲಿ ಯುವ ಜನರಿಗೆ ಆದ್ಯತೆ ಸಿಗಲಿದ್ದು ಅದು ಭಾರತೀಯ ಇತಿಹಾಸದಲ್ಲಿ ಅತ್ಯಂತ ಯಂಗ್ ಸಚಿವ ಸಂಪುಟ ಆಗಿರುತ್ತದೆ. ಮಹಿಳೆಯರಿಗೆ ಮತ್ತು ಆಡಳಿತದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ ಎನ್ನಲಾಗಿದೆ.
ಪ್ರತಿಯೊಂದು ರಾಜ್ಯ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಪುನಾರಚನೆ ನಡೆಯುತ್ತದೆ ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಪ್ರಧಾನಿ ಹಾಲಿ ಸಚಿವರ ಮೌಲ್ಯ ಮಾಪನ ನಡೆಸಿದ್ದಾರೆ. ಹೀಗಾಗಿ ಸಾಧನೆ ತೋರದ ಹಲವು ಸಚಿವರನ್ನು ಕೈ ಬಿಡುವ ಸಂಭವ ಕಾಣುತ್ತಿದೆ. ಈಗಾಗಲೇ ಸಂಭನೀಯರು ಎನ್ನಲಾಗುತ್ತಿರುವ ಮಧ್ಯಪ್ರದೇಶದ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ, ಮಹಾರಾಷ್ಟ್ರದ ನಾರಾಯಣ ರಾಣೆ ಮತ್ತು ವರುಣ್ ಗಾಂಧಿ ದೆಹಲಿ ತಲುಪಿದ್ದಾರೆ. ಲೋಕ ಜನಶಕ್ತಿ ಪಾರ್ಟಿಯ ಪಶುಪತಿ ಪರಸ್ ಅವರ ಹೆಸರೂ ಕೇಳಿಬರುತ್ತಿದೆ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದ ಸರ್ಬಾನಂದ ಸೋನವಾಲ್ ಕೂಡ ದೆಹಲಿ ತಲುಪಿದ್ದು ಅವರು ಕೇಂದ್ರ ಸಂಪುಟ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.
ನಾಳೆ ವಿಸ್ತರಣೆ ಬಹುತೇಕ ಖಚಿತ ಎಂದು ಹಿಂದೂಸ್ತಾನ್ ಟೈಮ್ಸ್ ಕೂಡ ವರದಿ ಮಾಡಿದೆ. ಜೆಡಿ ಯು ಗೂ ಈ ಬಾರಿ ವಿಸ್ತರಣೆಯಲ್ಲಿ ಪ್ರಾಮುಖ್ಯ ಸಿಗುವ ನಿರೀಕ್ಷೆ ಇದೆ. ಜೆಡಿ ಯು ನಿಂದ ಯಾರು ಸಂಪುಟ ಸೇರಬಹುದು ಎಂಬ ಪ್ರಶ್ನೆಗೆ ಅದನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಆ ಪಕ್ಷದ ಆರ್ ಸಿ ಸಿಂಗ್ ಮತ್ತು ಲಲನ್ ಸಿಂಗ್ ಈಗಾಗಲೇ ದೆಹಲಿ ವಿಮಾನ ಹತ್ತಿದ್ದಾರೆ.ಮೋದಿ ಬಂಗಾಳ ಪ್ರವಾಸದಲ್ಲಿ ಜೊತೆಯಾಗಿದ್ದ ಸಂಸದ ಶಂತನು ಠಾಕೂರ್ ಕೂಡ ಸಂಪುಟ ಸೇರುವ ನಿರೀಕ್ಷೆ ಇದೆ.
ಕರ್ನಾಟಕದಿಂದ ಯಾರು ಸಂಪುಟ ಸೇರುವವರು ಎಂಬುದರ ಬಗ್ಗೆ ಖಚಿತವಾಗಿಲ್ಲ. ಆದರೆ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ದೆಹಲಿಗೆ ಪ್ರಯಾಣ ಬೆಳಿಸಿರುವುದನ್ನು ಸ್ಥಳೀಯ ಸುದ್ದಿ ವಾಹಿನಿಗಳು ಖಚಿತ ಪಡಿಸಿವೆ. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಸಂಪುಟ ಸೇರಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ಹೇಳುತ್ತಿದೆ. ಉಳಿದಂತೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಮತ್ತು ಕಲಬುರ್ಗಿ ಸಂಸದ ಡಾ .ಜಾದವ್ ಅವರ ಹೆಸರು ಕೇಳಿಬರುತ್ತಿದೆ.
ಇಂಡಿಯಾ ಟುಡೆ 20 ಹೊಸ ಮುಖಗಳು ಸಂಪುಟ ಸೇರಬಹುದು ಎಂದು ಹೇಳಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಲಕ್ಕೆ ಆದ್ಯತೆ ಸಿಗಬಹುದು ಎಂದು ಅದು ಅಂದಾಜಿಸಿದೆ.
ಈಗ ಸಚಿವ ಸಂಪುಟದಲ್ಲಿ ಪ್ರಧಾನ ಮಂತ್ರಿಗಳನ್ನು ಹೊರತು ಪಡಿಸಿ 53 ಸದಸ್ಯರಿದ್ದು 81 ರವರೆಗೂ ವಿಸ್ತರಿಸುವ ಅವಕಾಶ ಇದೆ. ಆದರೆ ಮೋದಿ 81 ಸ್ಥಾನವನ್ನೂ ಭರ್ತಿ ಮಾಡುವ ಸಾಧ್ಯತೆ ತೀರಾ ವಿರಳ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇದುವರೆವಿಗೂ ಯಾವುದೇ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.