21.4 C
Karnataka
Thursday, November 21, 2024

    721 ಕೋಟಿ ರೂಪಾಯಿ ಬೆಂಬಲ ಬೆಲೆ ಮೊತ್ತ ಬಿಡುಗಡೆ; 2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರ ಜಮಾ

    Must read

    ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 4-5 ತಿಂಗಳ ಹಿಂದೆ ಖರೀದಿ ಮಾಡಲಾಗಿದ್ದ ರಾಗಿ, ಭತ್ತ ಹಾಗೂ ಗೋಧಿಗೆ ಬಾಕಿ ಹಣವು ಸುಮಾರು 721 ಕೋಟಿ ರೂಪಾಯಿಯಷ್ಟಿದ್ದು, ಇದನ್ನು ಇನ್ನು 2-3 ದಿನಗಳಲ್ಲಿ ಪಾವತಿಸುವುದಾಗಿ ಎಂದು ಸಹಕಾರ ಸಚಿವರು ಹಾಗೂ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.

    ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಸೋಮಶೇಖರ್ ಅವರು, ನಾಲ್ಕೈದು ತಿಂಗಳ ಹಿಂದೆಯೇ ರಾಗಿ, ಭತ್ತ ಹಾಗೂ ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಲಾಗಿತ್ತು. ಆದರೆ, ಬೆಂಬಲ ಬೆಲೆ ಹಣ ಬಿಡುಗಡೆಯಾಗದೆ ಸಮಸ್ಯೆಯಾಗುತ್ತಿದೆ. ಕೂಡಲೇ ಬಾಕಿ ಹಣವನ್ನು ಪಾವತಿಸುವಂತೆ ಒತ್ತಡಗಳು ಬರುತ್ತಿದ್ದವು. ಇದೀಗ ಬಾಕಿ 721 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲು ಆದೇಶ ನೀಡಿದ್ದು, ಇನ್ನು 2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

    ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ , ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಪ್ರಕ್ರಿಯೆ ಮತ್ತು ರೈತರಿಗೆ ಹಣ ಪಾವತಿಸುವ ಸಂಬಂಧ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳು ಸಾಕಷ್ಟಿದ್ದು, ಅವುಗಳ ಸಂಬಂಧ ಚರ್ಚೆ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಮುಂದಿನ ಸಾಲಿನಲ್ಲಿ ಅಂದರೆ 2021-22ರ ಸಾಲಿನಲ್ಲಿ ಇಂತಹ ಸಮಸ್ಯೆಗಳು ತಲೆದೋರದಿರುವಂತೆ ಮಾಡಲು ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಏನು ಮಾಡಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಜುಲೈ 29ರಂದು ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ಕರೆಯಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಯಾವ ರೀತಿಯಾಗಿ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    “ಬೆಂಬಲ ಬೆಲೆ” ಪ್ರಥಮ ಸಭೆ

    ರೈತರಿಗೆ ಬೆಂಬಲ ಬೆಲೆ ನೀಡುವ ಸಂಬಂಧ ಇಂದು ಪ್ರಥಮ ಸಭೆಯನ್ನು ನಡೆಸಲಾಯಿತು. ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಉಮೇಶ್ ಕತ್ತಿ ಅವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಅವರು, ಪೌರಾಡಳಿತ ಮತ್ತು ಸಕ್ಕರೆ ಸಚಿವರಾದ ಶಂಕರ್ ಅವರು, ಪಶುಸಂಗೋಪನೆ ಸಚಿವರಾದ ಪ್ರಭು ಚೌವ್ಹಾಣ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ರೈತರಿಗಾಗುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಬೇಕಿರುವ ಪರಿಹಾರಗಳ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ಅಪರ ಮುಖ್ಯ ಕಾರ್ಯದರ್ಶಿಯವರಾದ ವಂದಿತಾ ಶರ್ಮ, ಅನಿಲ್ ಕುಮಾರ್ ಅವರು, ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನುಮನಗೌಡ ಅವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಾದ ತುಷಾರ್ ಗಿರಿನಾಥ್ ಅವರು, ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಾದ ಜಾಫರ್ ಅವರು, ಎಪಿಎಂಸಿ ನಿರ್ದೇಶಕರಾದ ಕರೀಗೌಡ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

    ಕೇಂದ್ರದಲ್ಲಿ ಸಹಕಾರ ಸಚಿವಾಲಯ; ಎಸ್ ಟಿ ಎಸ್ ಅಭಿನಂದನೆ

    ಸಹಕಾರ ಕ್ಷೇತ್ರ ಎಂದರೆ ಕೃಷಿಗೆ ಪೂರಕವಾಗಿರುವ ಕ್ಷೇತ್ರವಾಗಿದೆ. ಕೃಷಿ ಚಟುವಟಿಕೆಗೆ ನೇರ ಸಂಬಂಧವನ್ನು ಹೊಂದಿರುವ ಸಹಕಾರ ಕ್ಷೇತ್ರಕ್ಕೆ ಕೃಷಿ ಇಲಾಖೆಯಷ್ಟು ಮಹತ್ವವಾಗಲೀ, ಸಮಯವಾಗಲೀ ಸಿಗುತ್ತಿರಲಿಲ್ಲ. ಈಗ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಿಂದ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಪ್ರತ್ಯೇಕವಾಗಿ ಸಹಕಾರ ಸಚಿವಾಲಯ ಹಾಗೂ ಸಚಿವರನ್ನು ನೇಮಿಸುವ ಮೂಲಕ ದಿಟ್ಟ ಹೆಜ್ಜೆಯನ್ನು ಇಡಲಾಗಿದೆ. ಇದಕ್ಕೆ ಪ್ರಧಾನಿಗಳಿಗೆ ನನ್ನ ಅಭಿನಂದನೆಗಳು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ಈಗ ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ನಮಗೆ ಯಾವುದಾದರೂ ಸಮಸ್ಯೆ ತಲೆದೋರಿದರೆ ನೇರವಾಗಿ ಕೇಂದ್ರದಲ್ಲಿ ಸಹಕಾರ ಸಚಿವರನ್ನು ಭೇಟಿ ಮಾಡಬಹುದಾಗಿದೆ. ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!