ಎಂ.ವಿ.ಶಂಕರಾನಂದ
ಬೋರಾಗುಂಟೆ ಮರುಳಯ್ಯನವರು ರಸಾಯನಶಾಸ್ತ್ರದ ಉಪನ್ಯಾಸಕರಾಗಿದ್ದು ನಂತರ ತುಮಕೂರಿನ ಎಂಪ್ರೆಸ್ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದರು. ನಂತರ ಪ್ರಸಕ್ತ ತುಮಕೂರಿನ ವಿಜ್ಞಾನ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಬಳಿಯ ಬೋರಾಗುಂಟೆ ಗ್ರಾಮದಲ್ಲಿ ಅವರ ತೋಟವಿದೆ. ಹತ್ತು ಎಕರೆ ಪ್ರದೇಶದಲ್ಲಿ ಮುನ್ನೂರು ತೆಂಗು, ಎರಡು ಸಾವಿರ ಅಡಿಕೆ, ಒಂದೂವರೆ ಸಾವಿರ ಬಾಳೆ, ಒಂದು ಸಾವಿರ ಮೆಣಸು, ನೂರು ಕಾಫಿ ಗಿಡಗಳಲ್ಲದೆ ತೋಟದ ಸುತ್ತಲೂ ತೇಗ, ಹೊನ್ನೆ ಇತ್ಯಾದಿ ಮರಗಳು ಹಸಿರು ಬೇಲಿಯಿಂದ ನಳನಳಿಸುತ್ತಿವೆ. ಇದು ಅವರ ಎರಡು ದಶಕದ ಪ್ರಯತ್ನದ ಫಲ.
ಮರುಳಯ್ಯ ಜಪಾನ್ ಕೃಷಿ ವಿಜ್ಞಾನಿ ಫುಕುವೋಕಾನಿಂದ ಸ್ಫೂರ್ತಿಗೊಂಡವರಂತೆ ಶೂನ್ಯ ಬೇಸಾಯಕ್ಕೆ ಒಲಿದರು. ಸಾಕಷ್ಟು ಪ್ರಮಾಣದಲ್ಲಿ ನೀರು ಗೊಬ್ಬರ, ಗೊಬ್ಬರ ಅಂದರೆ ಕೊಳೆಯುವ ತ್ಯಾಜ್ಯ, ಕೊಡುತ್ತಿರುವುದು ಇವರ ತೋಟಗಾರಿಕೆ ಯಶಸ್ಸಿನ ಗುಟ್ಟು. ಮೂರು ಬೋರ್‌ವೆಲ್ ಕ್ರಿಯಾಶೀಲವಾಗಿವೆ.
ತೋಟದ ಪಕ್ಕ ಪಶ್ಚಿಮದಲ್ಲಿ ಕೆರೆ, ಪೂರ್ವದಲ್ಲಿ ಗುಡ್ಡ ಪ್ರದೇಶ. ಮಳೆಯಾಗಿ ಕೆರೆ ತುಂಬಿದಾಗ ಈ ಪ್ರದೇಶವನ್ನು ನೋಡುವುದೇ ಚೆಂದ. ಇವರನ್ನು ತುಮಕೂರಿನ ವಲಯದಲ್ಲಿ ಬೋರಾಗುಂಟೆಯ ಸಾವಯವ ರೈತ ವಿಜ್ಞಾನಿ ಎಂದೇ ಕರೆಯುತ್ತಾರೆ.
ತೋಟಗಾರಿಕೆಯ ಖರ್ಚು ಕಳೆದು ಇವರಿಗೆ ತಿಂಗಳಿಗೆ ಸುಮಾರು ಒಂದು ಲಕ್ಷ ರೂಪಾಯಿಯ ಆದಾಯವೂ ಇದೆ. ತಾನು ದುಡಿಮೆಯ ಆದಾಯ ಕಂಡರೆ ಸಾಲದು, ನಮ್ಮ ರೈತಾಪಿ ಜನರಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಆಗಾಗ್ಗೆ ಬೇಸಾಯಕ್ಕೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು, ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಾರೆ.
ಸಾಮಾನ್ಯವಾಗಿ ಬೇಸಾಯದ ಬಗ್ಗೆ ತಿಳಿದುಕೊಂಡೋ, ಕಾಲೇಜಿನಲ್ಲಿ ಅಧ್ಯಯನ ಮಾಡಿಯೋ ಸಂಪನ್ಮೂಲ ವ್ಯಕ್ತಿಗಳಾಗಿ ನೆರಳಲ್ಲಿ ಕುಳಿತೋ, ವೇದಿಕೆಯಲ್ಲಿ ನಿಂತೋ ಮಾತನಾಡುವ-ಭಾಷಣ ಮಾಡುವ ವ್ಯಕ್ತಿಗಳಿಗಿಂತ ವಿಷಯ ತಿಳಿದುಕೊಂಡು ತಾವೇ ಜಮೀನಿನಲ್ಲಿ ಕೆಲಸ ಮಾಡಿ ಮಾತನಾಡುವ ವ್ಯಕ್ತಿಗಳು ಶ್ರೇಷ್ಠ. ಇನ್ನು ವಿಷಯ ತಿಳಿದು, ಅನುಭವಿಸಿ ತಮ್ಮ ಪಾಡಿಗೆ ತಾವು ಬೇಸಾಯ ಮಾಡಿಕೊಂಡಿರುವವರೂ ಇದ್ದಾರೆ.
ಈ ಮೂರು ರೀತಿಯ ಜನರಲ್ಲಿ, ಮೂರೂ ರೀತಿಯವರು ಮುಖ್ಯರಾದವರೂ ಕೂಡ ಮಧ್ಯದ ವ್ಯಕ್ತಿಗಳು ಅತಿಮುಖ್ಯರಾಗಲು ಕಾರಣ ಅವರು ಮಾತು ಮತ್ತು ಕೃತಿಯ ಮಧ್ಯೆ ಸಮನ್ವಯತೆ ಸಾಧಿಸಬೇಕಾಗುತ್ತದೆ. ಅದು ಕಷ್ಟದ ಕೆಲಸವೂ ಹೌದು. ಸಂವಹನ ಕೌಶಲ್ಯವೂ ಹೌದು. ಮಾತಾಡಿಕೊಂಡೇ ಇರಬಹುದು, ಕೆಲಸ ಮಾಡಿಕೊಂಡೇ ಇರಬಹುದು. ಎರಡಕ್ಕೂ ಚ್ಯುತಿ ಬಾರದೇ ನಡೆಯುವವರ ಹೇಗೆ ಬಣ್ಣಿಸಲು ಸಾಧ್ಯ? ಅಂಥ ಅಪರೂಪದವರ ಸಾಲಿನಲ್ಲಿ ಮರುಳಯ್ಯನವರೂ ಒಬ್ಬರು.
ಮರುಳಯ್ಯನವರು ನನಗೆ ಮೊದಲು ಪರಿಚಯವಾದದ್ದು 2010ರಲ್ಲಿ ಅವರು ಎಂಪ್ರೆಸ್ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾಗ. ಆ ಸಮಯದಲ್ಲಿ ಮಿತ್ರರಾದ ಡಾ.ಸಿದ್ಧಗಂಗಯ್ಯನವರು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದರು. ಅವರು ಡಾ. ಚಂದ್ರಶೇಖರ ಕಂಬಾರರ `ಸಿರಿಸಂಪಿಗೆ’ ನಾಟಕವನ್ನು ಪ್ರದರ್ಶಿಸುವ ಉದ್ದೇಶದಿಂದ ಪೂರ್ವಬಾವಿ ತಯಾರಿಯಾಗಿ ಪ್ರಾಕ್ಟೀಸ್ ಮಾಡಲು ಎಂಪ್ರೆಸ್ ಕಾಲೇಜಿನಲ್ಲಿ ಸಂಜೆ ವೇಳೆ ಜಾಗಕ್ಕೆ ಅನುಮತಿಗಾಗಿ ಮರುಳಯ್ಯ ನವರು ಭೇಟಿ ಮಾಡಿದ್ದರು. ಆ ಭೇಟಿ ಮಾಡಿದಾಗ ನಾನೂ ಜೊತೆಯಲ್ಲಿದ್ದೆ.
ಒಂದು ಸಾವಿರಕ್ಕೂ ಅಧಿಕವಿರುವ ವಿದ್ಯಾರ್ಥಿನಿಯರ ಕಾಲೇಜಿನಲ್ಲಿ ಉತ್ತಮವಾದ ಶಿಸ್ತು ಕಾಪಾಡಿಕೊಂಡು, ಪಾಠ ಪ್ರವಚನಗಳನ್ನು ನಡೆಸುತ್ತಾ, ಕ್ಯಾಂಪಸ್ಸನ್ನೂ ಸುಂದರವಾಗಿಟ್ಟುಕೊಂಡಿದ್ದನ್ನು ನೋಡಿದ್ದೆ. ಅವರ ತೋಟಗಾರಿಕೆ ಬಗ್ಗೆ ತಿಳಿದಿರಲಿಲ್ಲ. ಅವರು ನಿವೃತ್ತರಾದಾಗ ಅವರಿಗೊಂದು ಅಭಿನಂದನಾ ಕಾರ್ಯಕ್ರಮವನ್ನು ಅಭಿಮಾನಿಗಳು, ಸ್ನೇಹಿತರು ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ತೋವಿನಕೆರೆ ಸಮೀಪ ಹತ್ತು ಎಕರೆಯಲ್ಲಿ ತೋಟ ಬೆಳೆಸಿದ್ದಾರೆಂದು ಕೇಳಿದ್ದೆ. ಈಗ ನೋಡಿದರೆ, ತೋಟ ಬೆಳೆಸಿರುವುದು ಮಾತ್ರವಲ್ಲದೆ, ಸ್ಥಳೀಯ ರೈತರಿಗೆ ಅನುಕೂಲವಾಗುವಂತೆ ಪಾಠವನ್ನು ಆರಂಭಿಸಿದ್ದಾರೆ.
ಪ್ರಸ್ತುತ ಮರುಳಯ್ಯನವರು ತಮ್ಮ ತೋಟದ ಮನೆಯ ಎದುರಿಗೆ ಪೂರ್ವದಿಕ್ಕಿನಲ್ಲಿ ದಕ್ಷಿಣ-ಉತ್ತರ ಸುಮಾರು ಹತ್ತು ಕಿ.ಮೀ ಹಬ್ಬಿರುವ ಎ.ಎಂ. (ಅಮೃತ್‌ಮಹಲ್) ಕಾವಲ್ ಕರೇಕಲ್ ಗುಡ್ಡಪ್ರದೇಶದಲ್ಲಿ (ಸುಮಾರು ಆರು ಸಾವಿರದ ನಾಲ್ಕು ನೂರು ಎಕರೆಯಲ್ಲಿ) ಜಲ ಸಂವರ್ಧನೆ ಮತ್ತು ಬೀಜಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳುವ ತಯಾರಿಯಲ್ಲಿದ್ದಾರೆ. ಇಂಥ ಮಹದಾಶಯದ ಯೋಜನೆಯ ಹಿಂದಿನ ಪರಿಸರ ಪ್ರಜ್ಞೆಗೆ, ಪ್ರತಿಭೆಗೆ ಶರಣೆನ್ನಬೇಕು.
ಮರುಳಯ್ಯನವರ ತೋಟಕ್ಕೆ ಹೋದರೆ ಅಲ್ಲಿನ ಬಾಳೆಗೊನೆಗಳು ಎಲ್ಲರ ಗಮನ ಸೆಳೆಯುತ್ತವೆ. ಹಣ್ಣಿನ ರುಚಿ, ಸ್ವಾದ ಅತ್ಯದ್ಭುತ. ಇಷ್ಟು ಸೊಂಪಾಗಿ ಗೊನೆ ತೂಗುತ್ತಿರುವ ಗುಟ್ಟೇನು ಸಾರ್? ನೀವು ಸೀಮೆಗೊಬ್ಬರ ಬೇರೆ ಹಾಕುವುದಿಲ್ಲ'’ ಎಂದು ಕೇಳಿದ್ದಕ್ಕೆ ಅವರ ಉತ್ತರ ಅದ್ಭುತವಾಗಿತ್ತು!
ನೋಡಿ, ಸಾಮಾನ್ಯವಾಗಿ ನಮ್ಮ ರೈತರು ಹತ್ತು ಅಡಿ ಉದ್ದ, ಹತ್ತು ಅಡಿ ಅಗಲದ ಜಾಗದಲ್ಲಿ ತಿಪ್ಪೆ ಮಾಡಿಕೊಂಡಿರುತ್ತಾರೆ. ನಾವು ಇಡೀ ತೋಟವನ್ನೇ ತಿಪ್ಪೆ ಮಾಡಿದ್ದೇವೆ. ಬೇಸಿಗೆಯಲ್ಲಿ ತಿಪ್ಪೆಯ ಜಾಗದಲ್ಲಿ, ಬಚ್ಚಲ ಸಮೀಪ ಬಾಳೆ ವೇಗವಾಗಿ ಬೆಳೆಯುವುದನ್ನು ನೋಡಿದ್ದೀರಲ್ಲವೇ? ಇದೂ ಅಷ್ಟೇ. ತೋಟದ, ಹೊಲದ ತುಂಬ ತಿಪ್ಪೇ ಮಾಡಲು ಕಾಲಾವಕಾಶ ಬೇಕು. ಏಳೆಂಟು ವರ್ಷಗಳಷ್ಟು! ತಿಪ್ಪೆ ಎಂದರೆ ಬರಿ ಪ್ರಾಣಿಗಳ ಗೊಬ್ಬರವಲ್ಲ. ಸೊಪ್ಪು, ಸೆದೆ ಎಲ್ಲ ಜೈವಿಕ ಕರಗುವ ವಸ್ತುಗಳು ಸೇರುತ್ತವೆ. ಭೂಮಿ ಹದಗೊಳ್ಳುತ್ತದೆ’’.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.
ಮರುಳಯ್ಯನವರ ನೈಸರ್ಗಿಕ ಕೃಷಿ ಸೇವೆಗೆ ಕೋಟಿ ಕೋಟಿ ನಮನ. ಪರಿಚೈಸಿದ ಎಂ ವಿ ಶಂಕರಾನಂದರಿಗೆ ಧನ್ಯವಾದಗಳು
🙏🙏🙏🙏🙏🙏