ಬಿದಿರೆಲೆಯೊಳ್ ರಸಮನರಸುವ ಕಳ್ಳಿಯ ಪಾಲೊಳ್ ಬೆಣ್ಣೆಯನರಸುವ- ನಯಸೇನನ ಧರ್ಮಾಮೃತದಲ್ಲಿ ಉಲ್ಲೇಖವಾಗಿರುವ ಮಾತಿದು. ಬಿದಿರ ಎಲೆ ಅಷ್ಟೊಂದು ರಸಭರಿತವಾಗಿರುವುದಿಲ್ಲ ಹಣ್ಣಾಗಿ ಬಿದ್ದರೂ ಬಹುಬೇಗ ಒಣಗಿ ಹೋಗುತ್ತದೆ.
ಬಿದಿರಿನ ಗುಣವೇ ಅಂಥದ್ದು ಬಹುತೇಖ ಶುಷ್ಕ ಗುಣವುಳ್ಳ ಸಸ್ಯ. ಇದು ಸಂಪೂರ್ಣ ಒಣಗಿದ ನಂತರ ಅಲಂಕಾರಿಕ ವಸ್ತುಗಳು , ಪೀಠೋಪಕರಣಗಳಾಗಿ ಮಾತ್ರ ಇದರ ಉಪಯೋಗವಿದೆ.ಇನ್ನುಳಿದಂತೆ ಕಳ್ಳಿ ದಟ್ಟವಾಗಿ ಪೊದೆಯಾಗಿ ಬೆಳೆಯುವ ಸಸ್ಯ ಆರ್ದ್ರ ಗುಣವುಳ್ಳದ್ದು ಆದರೆ ಪ್ರಯೋಜನವಿಲ್ಲ. ಕಳ್ಳಿ ಎಲೆಯನ್ನು ಕೊಯ್ದಾಗ ಹಾಲಿನಂಥ ದ್ರವ ಒಸರಿದರೂ ಪ್ರಯೋಜನವಿಲ್ಲ. ಕ್ಷಾರ ಗುಣವುಳ್ಳದ್ದಾಗಿದ್ದು ಕೈಗೆ, ಕಣ್ಣಿಗೆ ತಾಗಿದರೆ ಅಪಾಯವುಂಟಾಗುತ್ತದೆ. ಯಾವುದೇ ಉಪಯೋಗಕ್ಕೆ ಬಾರದಿರುವ ಬೇಲಿಯಾಗಿ ಕೆಲವು ಪ್ರದೇಶಗಳಲ್ಲಿ ಮಾತ್ರವಿರುವ ಸಸ್ಯವಿದು.
ನಮ್ಮ ನಿರೀಕ್ಷೆಯೂ ಅನುಚಿತವಾಗಿರಬಾರದು ಎಂಬುದನ್ನು ಈ ಮಾತು ಹೇಳುತ್ತದೆ. ನಾಯಿ ಮತ್ತು ಸಿಂಹ, ಹುಲಿ ಮತ್ತು ಬೆಕ್ಕು ಒಂದೇ ಜಾತಿಗೆ ಸೇರಿದ ಪ್ರಾಣಿಗಳು ಅದಕ್ಕೆ ನಾಯಿಯನ್ನು ಗ್ರಾಮಸಿಂಹ ಎಂದು ಕರೆಯುವುದಿದೆ.
“ಬಿತ್ತಿದಂತೆ ಬೆಳೆ” ಎಂಬಂತೆ ನಾವು ಏನನ್ನು ಬಿತ್ತಿರುತ್ತೇವೆಯೋ ಅಂಥ ಬೆಳೆಯೇ ಬರುತ್ತದೆ ಅದು ತಪ್ಪಾಗಲು ಸಾಧ್ಯವಿಲ್ಲ ಇದನ್ನು ಬಿಟ್ಟು ಇನ್ನೇನನ್ನೋ ಅರಸುತ್ತಾ ಹೋದರೆ ಅದು ತಪ್ಪಾಗುತ್ತದೆ. ಹಾಗೆಯೇ ಯೋಗ್ಯವಾದುದರಲ್ಲಿ ಮಾತ್ರ ಯೋಗ್ಯವಾದದ್ದನ್ನು ಕಾಣಬಹುದು ಎಲ್ಲದರಲ್ಲೂ ಯುಕ್ತವಾದದ್ದನ್ನೆ ಅರಸುತ್ತೇವೆ ಅಂದರೆ ಅದು ನಮ್ಮ ಮೂರ್ಖತನ.
ಕಾಗೆಗೂ ಕೋಗಿಲೆಗೂ , ನವಿಲಿಗೂ ಕೆಂಬೂತಕ್ಕೂ ವ್ಯತ್ಯಾಸವಿದೆ. ಸಹಜವಾಗಿ ಅಂತರ್ಗತವಾಗಿರುವ ಗುಣಗಳನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಹುಟ್ಟಿನಿಂದಲೇ ಉಪಯೋಗಿ,ಬಹುಪಯೋಗಿ, ಅಪಾಯಕಾರಿ ಮೊದಲಾದ ವಿಶೇಷಣಗಳನ್ನು ಹೊಂದಿದೆ ಎಂದಮೇಲೆ ಮತ್ತೂ ಅವುಗಳಲ್ಲಿ ಅತೀ ನಿರೀಕ್ಷೆ ಇರಿಸಿಕೊಳ್ಳುವುದು ಸಲ್ಲ ಎಂಬುದನ್ನು ನಯಸೇನನ “ಬಿದಿರೆಲೆಯೊಳ್ ರಸಮನರಸುವ ಕಳ್ಳಿಯ ಪಾಲೊಳ್ ಬೆಣ್ಣೆಯನರಸುವ” ಎಂಬ ಮಾತಿನಿಂದ ತಿಳಿಯಬಹುದು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.