ಮ್ಯುಚುಯಲ್ ಫಂಡ್ ಹೂಡಿಕೆದಾರರ ಸಂಖ್ಯೆಯು ನಾಲ್ಕು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಮ್ಯುಚುಯಲ್ ಫಂಡ್ ಗಳ ಸ್ವತ್ತು 34 ಲಕ್ಷ ಕೋಟಿ ತಲುಪಿರುವ ಅಂಶ ಮತ್ತು ಎಸ್ ಐ ಪಿ ಹೂಡಿಕೆಯು ರೂ.9,000 ಕೋಟಿಗೆ ಹಿಂದಿರುಗಿದೆ. ಸೆಂಟ್ರಲ್ ಡಿಪಾಜಿಟರಿ ಸರ್ವಿಸಸ್ ಲಿ ತನ್ನ ಖಾತೆದಾರರ ಸಂಖ್ಯೆಯನ್ನು ನಾಲ್ಕು ಕೋಟಿ ದಾಟಿದೆ. ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ , ಫಿಚ್ ಭಾರತದ ಆರ್ಥಿಕ ವರ್ಷ 2022 ರ ಬೆಳವಣಿಗೆಯನ್ನು ಹಿಂದಿನ 12.8% ನಿಂದ 10 ಕ್ಕೆ ಮೊಟಕುಗೊಳಿಸಿದೆ. ಜೂನ್ ತಿಂಗಳ ಜಿ ಎಸ್ ಟಿ ಸಂಗ್ರಹಣೆ ಎಂಟು ತಿಂಗಳ ನಂತರ ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ನ್ಯಾಶನಲ್ ಸ್ಟಾಕ್ ಎಕ್ಸ್ ಚೇಂಜ್ ಪ್ರಕಟಣೆಯ ಪ್ರಕಾರ ಅದರ ಹಿಂದಿನ ಸದಸ್ಯ ಸಂಸ್ಥೆಗಳಾದ ಸಧ್ಯ ಡಿಫಾಲ್ಟರ್ ಎಂದು ಘೋಷಿತವಾಗಿರುವ ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿ, ಅನುಗ್ರಹ್ ಸ್ಟಾಕ್ ಅಂಡ್ ಬ್ರೋಕಿಂಗ್ ಪ್ರೈ ಲಿ., ಬಿ ಎಂ ಎ ವೆಲ್ತ್ ಕ್ರಿಯೇಟರ್ಸ್ ಲಿ., ಗಳ ಮೇಲಿನ ಕ್ಲೇಮ್ಸ್ ಗಳನ್ನು ಸಲ್ಲಿಸಲು ಕರೆ ಕೊಟ್ಟಿದೆ. ಇಂತಹ ಅಸಹಜ ವಾತಾವರಣದಲ್ಲೂ ಷೇರುಪೇಟೆಯ ಸೂಚ್ಯಂಕಗಳು ದಾಖಲೆಯ ಮಟ್ಟದಲ್ಲಿ ಸಾಗುತ್ತಿರುವುದು ಹೂಡಿಕೆದಾರರ ನಿರ್ಧಾರದ ಸಾಮರ್ಥ್ಯಕ್ಕೆ ಸವಾಲಾಗಿದೆ.
ಸಂಪನ್ಮೂಲ ಸಂಗ್ರಹಣೆಗೆ ಹೆಚ್ಚು ಮನ್ನಣೆ:
ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಕಂಪನಿಯು 400 ದಶಲಕ್ಷ ಡಾಲರ್ ಗಳನ್ನು, ಶೇ.2.75 ರಂತೆ , ಬಾಂಡ್ ಗಳ ಮಾರಾಟದ ಮೂಲಕ ಸಂಗ್ರಹಣೆ ಮಾಡಿದೆ. ಜೂನ್ ಮೂರನೇ ವಾರದಲ್ಲಿ ಸಾರ್ವಜನಿಕ ವಲಯದ ಎನ್ ಎಂ ಡಿ ಸಿ ಕಂಪನಿಯು ತನ್ನ 4 ನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿತು. ಅದರ ಪ್ರಕಾರ ತನ್ನ ಲಾಭವನ್ನು 8 ಪಟ್ಟು ಹೆಚ್ಚಾಗಿತ್ತು. ಆ ಕಾರಣ ಷೇರಿನ ಬೆಲೆ ರೂ.174 ರ ಸಮೀಪದಿಂದ ರೂ.190 ರ ಸಮೀಪಕ್ಕೆ ಜಿಗಿಯಿತು. ಈ ತೇಜಿ ವಾತಾವರಣವನ್ನು ಸದವಕಾಶವೆಂದು ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದಡಿ ಎನ್ ಎಂ ಡಿ ಸಿ ಷೇರುಗಳನ್ನು ರೂ.165 ರ ಮೂಲ ಬೆಲೆಯಲ್ಲಿ, ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಿ ರೂ.3,700 ಕೋಟಿ ಸಂಪನ್ಮೂಲ ಸಂಗ್ರಹಣೆ ಮಾಡಿಕೊಂಡಿತು. ಷೇರಿನ ಬೆಲೆ ರೂ.165/66 ರ ಸಮೀಪಕ್ಕೆ ಕುಸಿಯಿತು.
ಐಪಿಒ ಗಳ ಸುದ್ಧಿ:
ನೀತಿ ಆಯೋಗವು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಯುನೈಟೆಡ್ ಇಂಡಿಯಾ ಇನ್ಶೂರನ್ಸ್ ನ್ನು ಖಾಸಗೀಕರಣ ಮಾಡಲು ಶಿಫಾರಸು ಮಾಡಿದೆ. ಪಿರಾಮಲ್ ಕ್ಯಾಪಿಟಲ್ ಸಂಸ್ಥೆಯು ರೂ.1,000 ಕೋಟಿ ಮೌಲ್ಯದ ಎನ್ ಸಿ ಡಿ ಗಳನ್ನು ತೇಲಿಬಿಡಲಿದೆ. ಹಿಂದಿನವಾರವಷ್ಠೆ ಜಿ ಆರ್ ಇನ್ ಫ್ರಾ, ಕ್ಲೀನ್ ಸೈನ್ಸ್ ಕಂಪನಿಗಳು ಐ ಪಿ ಒ ಮೂಲಕ ಷೇರು ವಿತರಿಸಿವೆ. ಈ ವಾರ ಆಹಾರವನ್ನು ತಲುಪಿಸುವ ಝೊಮಟೊ ಲಿಮಿಟೆಡ್ ರೂ.9,375 ಕೋಟಿ ಮೌಲ್ಯದ ಷೇರುಗಳನ್ನು 14 ರಿಂದ ವಿತರಣೆ ಮಾಡಲಿದೆ. ಇದರಲ್ಲಿ ಹೂಡಿಕೆದಾರ ಸಂಸ್ಥೆ ನೌಕರಿ ಡಾಟ್ ಕಾಂ ನ ಇನ್ ಫೋ ಎಡ್ಜ್ ಸಂಸ್ಥೆ ರೂ.375 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಿದೆ.
ಇನ್ ಫೋ ಎಡ್ಜ್ ಸಂಸ್ಥೆ ಖರೀದಿಸಿದ ಈ ಷೇರುಗಳ ಬೆಲೆ ( acqusition price) ರೂ.1.16 ಈ ಕಂಪನಿಯ red herring ಪ್ರಾಸ್ಪೆಕ್ಟಸ್ ನ 30 ನೇ ಪುಟದ ಮಾಹಿತಿ ಪ್ರಕಾರ ಕಂಪನಿಯ ಷೇರು ಬಂಡವಾಳ ಕೇವಲ ರೂ.3.1 ಲಕ್ಷ, revenues from operation : ರೂ.1,993.789 ಕೋಟಿ, net asset value of share: ರೂ. 15.09. ಈ ಗಾತ್ರದ ವಹಿವಾಟಿಗೆ ತೆರಿಗೆ ಮತ್ತು ಇತರೆ ತಗಾದೆಗಳ ಪ್ರಮಾಣ ಹೆಚ್ಚೆನಿಸುತ್ತದೆ. ಮುಖ್ಯವಾಗಿ ಈ ಕಂಪನಿಯು ಸೇವಾ ವಲಯದಲ್ಲಿರುವುದರಿಂದ ತನ್ನ ಚಟುವಟಿಕೆಯಲ್ಲಿ ಭಾರಿ ಪ್ರಮಾಣದ ಹೂಡಿಕೆಯ ಅಗತ್ಯವಿರುವುದಿಲ್ಲ. ರೂ.1 ರ ಮುಖಬೆಲೆ ಷೇರನ್ನು ರೂ.76 ರಲ್ಲಿ ವಿತರಿಸುವುದು ಹೆಚ್ಚೆನಿಸುತ್ತದೆ.
ಪೇಟೆಗಳು ಉತ್ತುಂಗದಲ್ಲಿರುವುದರಿಂದ ಎಲ್ಲವೂ ಆಕರ್ಷಣೀಯವಾಗಿ ಕಂಡರೂ, ಆಂತರಿಕವಾಗಿ ವಿತರಣೆಬೆಲೆ ಹೆಚ್ಚು. ಇತ್ತೀಚೆಗೆ ಬರುತ್ತಿರುವ ಹೆಚ್ಚಿನ ಐಪಿಒ ಗಳು ವಿತರಣೆಯಲ್ಲಿ ಭಾಗಿಯಾಗಿರುವವರಿಗಿಂತ, ಹಿಂದಿನ ಹೂಡಿಕೆದಾರರಿಗೆ ಮತ್ತು ಪ್ರವರ್ತಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶವೇ ಹೆಚ್ಚಾಗಿದ್ದಂತಿದೆ ಎಂದು ಭಾಸವಾಗುತ್ತದೆ.
ಗರಿಷ್ಠದಲ್ಲಿರುವ ಸೂಚ್ಯಂಕಗಳ ಈ ಸಂದರ್ಭದಲ್ಲಿ ಮುಂದೇನಾಗಬಹುದು?
ಲೀಸ್ಟಿಂಗ್ ನ ಆರಂಭಿಕ ದಿನಗಳಲ್ಲಿ ಮಾರಾಟಮಾಡುವುದು ಕ್ಷೇಮ ಎಂದೆನಿಸುತ್ತದೆ. ಪೇಟೆಯಲ್ಲಿ ಹರಿದಾಡುವ ಹಣದ ಕಾರಣ ಉತ್ಸಾಹದ ಅಮಲಿನಲ್ಲಿ ತೇಲಾಡುತ್ತಿರುವ ಷೇರುಪೇಟೆಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮಾರಾಟದ ಹಾದಿ ಹಿಡಿದಂತಿದೆ. ಈಗ ವ್ಯವಹಾರಗಳು ಲಾಕ್ ಡೌನ್ ತೆರವಿನ ಕಾರಣ ಆರಂಭವಾಗುತ್ತಿದ್ದು, ಪೇಟೆಯಲ್ಲಿ ಹೂಡಿಕೆ ಮಾಡಿದ ಹಣ ಕ್ರಮೇಣ ಹಿಂದಿರುಗಬಹುದು. ದೈನಂದಿನ ಅಗತ್ಯಗಳ ಬೆಲೆಗಳ ಏರಿಕೆಯಾಗುತ್ತಿರುವುದರಿಂದ ಹಣದುಬ್ಬರದ ನಿಯಂತ್ರಣ ಕ್ರಮವಾಗಿ ಆರ್ ಬಿ ಐ ಬಿಗಿ ನೀತಿ ಅಳವಡಿಕೆಯಾಗುವುದರಿಂದ ಪೇಟೆಗಳಲ್ಲಿ ಮಾರಾಟದ ಒತ್ತಡ ಹೆಚ್ಚಬಹುದು. ಮುಖ್ಯವಾಗಿ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಸುಮಾರು ಎರಡು ತಿಂಗಳ ಲಾಕ್ ಡೌನ್ ಇದ್ದ ಕಾರಣ ಕಾರ್ಪೊರೇಟ್ ಫಲಿತಾಂಶಗಳು ಪ್ರೋತ್ಸಾಹದಾಯಕವಾಗಿರಲಾರದು. ಈ ಎಲ್ಲಾ ಕಾರಣಗಳು ಪೇಟೆಯ ಮೇಲೆ ಒತ್ತಡ ಹೇರಿದರೆ ಪರಿಸ್ಥಿತಿ ಊಹೆಗೂ ನಿಲುಕದಂತಾಗಬಹುದು. ಹಾಗಾಗಿ ಹೆಚ್ಚಿನ ಆಸೆಗೆ ಆಸ್ಪದಕೊಡದೆ, ದುರಾಸೆಯೇ ವಿನಾಶಕ್ಕೆ ಮೂಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಕೈಗೆಟಕುವುದನ್ನು ಕಿಸೆಗೆ ಸೇರಿಸುವುದೇ ಒಳಿತಲ್ಲವೇ?
ಟಾಟಾ ಮೋಟಾರ್ಸ್ ಕಂಪನಿಯ ಜೆ ಎಲ್ ಆರ್ ಗೆ ʼಚಿಪ್ ʼ ಕೊರತೆಯು ಮುಂದುವರೆಯುವ ಕಾರಣ ಈ ವರ್ಷದ ಮೊದಲೆರಡು ತ್ರೈಮಾಸಿಕಗಳಲ್ಲಿ ಕಂಪನಿ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚುಎಂಬ ನಿರೀಕ್ಷೆಯ ಕಾರಣ ಷೇರುಪೇಟೆಯಲ್ಲಿ ಈ ವಾರ ರೂ.358 ರ ಗರಿಷ್ಠದಿಂದ ರೂ.302 ರವರೆಗೂ ಕುಸಿದು ನಂತರ ರೂ.306 ರ ಸಮೀಪ ಕೊನೆಗೊಂಡಿತು. ಹೀಗಿರುವಾಗ ಕೆಲವು ಬ್ರೋಕಿಂಗ್ ಕಂಪನಿಗಳು ವ್ಯಕ್ತಪಡಿಸಿದ ಮತ್ತು ನೀಡಿದ ಟಾರ್ಗೆಟ್ ಗಳು ಮಾತ್ರ ಹೆಚ್ಚಿನ ಬದಲಾವಣೆ ಇಲ್ಲ. ಅಂದರೆ ಒಂದು ಪ್ರಮುಖ ಕಂಪನಿಯ ಷೇರಿನ ಬೆಲೆ ಕುಸಿತ ಕಂಡರೂ ಅದರ ಬೆಂಬಲಕ್ಕೆ ಅನೇಕ ಕಂಪನಿಗಳು ಸಿದ್ದವಿರುತ್ತವೆ ಎನ್ನಬಹುದು.
ಈ ದಿಶೆಯಲ್ಲಿ ಹಿಂದಿನ ವಾರದ ಲೇಖನದಲ್ಲಿ ಹೆಸರಿಸಿದ್ದ ಡಿ ವಿ ಆರ್ ಗಳ ಬಗ್ಗೆ ಹೆಚ್ಚಿನ ಓದುಗರು ವಿವರಣೆ ಕೇಳಿದ್ದರು. ಟಾಟಾ ಮೋಟಾರ್ಸ್ ಷೇರಿನ ಕುಸಿತದ ಸಂದರ್ಭದಲ್ಲಿ, ಷೇರಿನ ಅನಕೂಲಗಳೆಲ್ಲವನ್ನೂ ಹೊಂದಿರುವ, ಕೇವಲ ಓಟಿಂಗ್ ಹಕ್ಕನ್ನು ಈಕ್ವಿಟಿ ಷೇರಿನ ಶೇ.25% ರಷ್ಠನ್ನು ಮಾತ್ರ ಡಿವಿಆರ್ ಗಳು ಪಡೆದುಕೊಂಡಿರುತ್ತವೆ. ಇದಕ್ಕೆ ಬದಲಾಗಿ ಶೇ.5% ರಷ್ಟರ ಡಿವಿಡೆಂಡ್ ನ್ನು ಹೆಚ್ಚಾಗಿ ನೀಡಲಾಗುವುದು. ಈ ವಿಶೇಷ ಗುಣವಿರುವುದು ಇದುವರೆಗೂ ಹೆಚ್ಚಿಗೆ ಬೆಳಕಿಗೆ ಬರದೆಯಿರುವುದಕ್ಕೆ ಮುಖ್ಯ ಕಾರಣ ಟಾಟಾ ಮೋಟಾರ್ಸ್ ಕಂಪನಿಯು 2016 ರಿಂದಲೂ ಡಿವಿಡೆಂಡ್ ವಿತರಿಸಿಲ್ಲ. ಈಗ ಕಂಪನಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಡಿವಿಡೆಂಡನ್ನು ನಿರೀಕ್ಷಿಸಬಹುದಲ್ಲವೇ?
ನೆನಪಿನಲ್ಲಿಡಿ: ಆಸೆಯೇ ದು:ಖ ಕ್ಕೆ ಮೂಲ – ಅತಿಯಾಸೆಯೇ ವಿನಾಶಕ್ಕೆ ಮೂಲ