ಕಳೆದ ವರ್ಷ ಇದೇ ದಿನ ಪ್ರಕಟವಾಗಿದ್ದ ಈ ಲೇಖನ ಮಳೆಯ ಸೊಬಗನ್ನು ಸುಂದರವಾಗಿ ಕಟ್ಟಿ ಕೊಟ್ಟಿತ್ತು. ಈಗಲೂ ಹಾಗೆಯೇ ಮೂರು ವಾರ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಶುರುವಾಗಿದೆ. ಈ ನೆಪದಲ್ಲಿ ಈ ಲೇಖನವನ್ನು ಪುನ ಪ್ರಕಟಿಸುತ್ತಿದ್ದೇವೆ. ಮಳೆಯ ಸಿಂಚನದ ನಡುವೆ ಬೆಚ್ಚಗಿನ ಓದು ನಿಮ್ಮದಾಗಲಿ
ಮಳೆ ಮತ್ತು ಇಳೆಗೆ ಪ್ರೀತಿಯ ಬಂಧ. ಏಪ್ರಿಲ್ ತಿಂಗಳ ಬಿಸಿಲ ಧಗೆಗೆ ಮೈಸುಟ್ಟುಕೊಂಡಂತಿದ್ದ ನೆಲ, ಮರಗಿಡಗಳು, ಚಿಗುರೊಡೆದು ನಳನಳಿಸುವುದು ಮಳೆಯ ಸಿಂಚನದಿಂದಲೇ. ಮಳೆಗಾಲದಲ್ಲಿ ಪ್ರಕೃತಿ ಹಸಿರು ಹೊದ್ದು ಮಲಗಿದಂತಿರುತ್ತದೆ. ಭತ್ತದ ಬೇಸಾಯ ಆರಂಭಗೊಳ್ಳುವುದು ಮಳೆಗಾಲದಲ್ಲಿಯೇ. ಹಾಗಾಗಿ ಮಳೆಗಾಲದಲ್ಲಿ ಮಲೆನಾಡು ಚಟುವಟಿಕೆಯಿಂದಲೇ ಕೂಡಿರುತ್ತದೆ. ಮಳೆಗಾಲಕ್ಕೆ ಬೇಕಾದ ಸಿದ್ಧತೆಗಳನ್ನು ಆಗಲೇ ಮಾಡಿಕೊಂಡಿರುತ್ತಾರೆ. ಮಲೆನಾಡಲ್ಲಿ ಬಿರುಸಾಗಿ ಸುರಿವ ಮಳೆಗೆ ಅಲ್ಲಿನವರು ಒಂದು ರೀತಿಯಲ್ಲಿ ಒಗ್ಗಿಕೊಂಡಿರುತ್ತಾರೆ. ಹಾಗಾಗಿ ಬಿಡದೇ ಸುರಿವ ಮಳೆ ಎಂದೂ ಕಿರಿಕಿರಿ ಎನ್ನಿಸುವುದಿಲ್ಲ. ಮಳೆಗಾಲಕ್ಕೆಂದೇ ತಯಾರಿಸಿಟ್ಟ ಹಲಸಿನಕಾಯಿ ಹಪ್ಪಳ, ಚಿಪ್ಸ್, ಸಂಡಿಗೆಗಳು ಜಿಟಿ ಜಿಟಿ ಸುರಿವ ಸಂಜೆಯ ಮಳೆಗೆ ಸಾಥ್ ನೀಡುತ್ತವೆ.
ಮಲೆನಾಡಿನಲ್ಲಿ ಮಳೆಗಾಲ ಅಂದರೆ ಅದೇನೋ ಸಂಭ್ರಮ. ಪ್ರಕೃತಿಯಲ್ಲಿ ಸಿಗುವ ಕಣಿಲೆ, ಚಗಟೆ ಸೊಪ್ಪು, ಪತ್ರೋಡೆ, ಮೊಳಕೆಯೊಡೆದ ಗೇರುಬೀಜ… ಹೀಗೆ ನಿತ್ಯವೂ ಪ್ರಕೃತಿಯಲ್ಲಿ ಅದರಲ್ಲೂ ಮಳೆಗಾಲದಲ್ಲಿ ಮಾತ್ರ ಸಿಗುವ ಆಹಾರ ಪದಾರ್ಥಗಳಿಂದ ತರಹೇವಾರಿ ತಿನಿಸು ತಯಾರಿಸಿ ಸವಿಯುವ ಸಂಭ್ರಮ.
ಎತ್ತ ನೋಡಿದರೂ ಹಸಿರು. ಅಲ್ಲಲ್ಲಿ ನೀರಿನ ಝರಿಗಳು, ಬತ್ತದ ಒರತೆಗಳು, ಕೆರೆ, ಕುಂಟೆ, ತೋಡುಗಳಲ್ಲಿ ಹರಿಯುವ ನೀರಿನ ಜುಳು ಜುಳು ನಾದ, ರಾತ್ರಿಯಾದರೆ ಸಾಕು ವಟಗುಟ್ಟುವ ಕಪ್ಪೆಗಳು, ಇವು ಪ್ರಕೃತಿಯ ನಡುವೆ ಇರುವವರ ಪಾಲಿಗೆ ಮಳೆಗಾಲದ ಮಾತ್ರ ದಕ್ಕುವ ಸೌಭಾಗ್ಯ.
ಮಳೆಗಾಲ ಕುರಿತು ಕವಿವರೇಣ್ಯರು ಹಲವಾರು ಹಾಡುಗಳನ್ನು ಬರೆದಿದ್ದಾರೆ. ಹಾಡುಗಳಲ್ಲೆಲ್ಲ ಮಳೆಯ ಬಗೆಗಿನ ವರ್ಣನೆ ಬಲು ಸೊಗಸು. ಮಳೆ ಮಳೆ ಒಲವಿನಾ ಸುರಿಮಳೆ, ಮನ ಹರೆಯದ ನದಿಯಾಗಿದೆ…. ಮಳೆ ಎಲ್ಲರ ಮನಸ್ಸಿಗೂ ಹರೆಯದ ಸ್ಪರ್ಶವನ್ನು ನೀಡುತ್ತದೆ. ಅಂದರೆ ಮಳೆಯನ್ನು ಎಲ್ಲರೂ ಖುಷಿಯಿಂದಲೇ ಅನುಭವಿಸುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಮಳೆಯನ್ನು ಅನುಭವಿಸದವರಿಲ್ಲ. ಮಳೆ ಮಾಡುವ ಚಮತ್ಕಾರವೇ ಅಂತಹದ್ದು.
ಜೂನ್ ತಿಂಗಳಿನಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇರುತ್ತದೆ. ಶಾಲೆ ಆರಂಭವಾಗುವುದೂ ಜೂನ್‍ನಲ್ಲಿಯೇ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಕೊರೊನಾ ಕಾರಣದಿಂದ ಮಕ್ಕಳಿಗೆ ಮಳೆಗಾಲವನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶ.
ಮಕ್ಕಳು ಮಳೆಯಲ್ಲಿ ನೆಪ ಮಾತ್ರಕ್ಕೆ ಕೊಡೆ ಹಿಡಿದು ಆಡುವುದು. ಆದರೆ ಮಳೆ ನೀರಿನಲ್ಲಿ ಪೂರ್ತಿ ಒದ್ದೆಯಾಗಿಸಿಕೊಂಡು ಮೈಮರೆಯುವುದೇ ಸಂಭ್ರಮ. ಗದ್ದೆ ಬದಿಗಳಲ್ಲಿ, ಸಣ್ಣ ಸಣ್ಣ ತೋಡುಗಳಲ್ಲಿ ಚಳಪಳ ಮಾಡಿಸಿಕೊಂಡು, ಒಬ್ಬರ ಮೇಲೊಬ್ಬರು ನೀರೆರಚಿಕೊಂಡು, ಆಟವಾಡಿ ದಿನಕ್ಕೆ ಕನಿಷ್ಟ ಮೂರು ನಾಲ್ಕು ಬಾರಿಯಾದರೂ ಬಟ್ಟೆ ಬದಲಾಯಿಸಿಕೊಳ್ಳದಿದ್ದರೆ ಸಮಾಧಾನವಿಲ್ಲ. ಸರಳೀ ಹಣ್ಣು, ಮೊಗ್ಗರೆಕಾಯಿ, ಚಾಕೋಟೆ ಹಣ್ಣು, ಚೂರಿ ಕಾಯಿ, ಹೀಗೆ ಗುಡ್ಡ ಗಾಡು ಅಲೆದು ಮಕ್ಕಳ ಪಾಲಿನ ಕಾಡಿನ ಸಂಪತ್ತನ್ನು ತಂದು ಸವಿಯುವುದು ಮಳೆಗಾಲದ ಸಂಭ್ರಮ. ಆದರೆ ಮಳೆ ಗಾಳಿಗೆ ಶೀತ, ನೆಗಡಿಯಾದೀತು ಎಂಬ ಭಯ ಹೆತ್ತವರಿಗಷ್ಟೇ.
ಮಳೆಗಾಲದಲ್ಲಿ ಪ್ರಕೃತಿಯಲ್ಲಿ ಅಮೋಘ ಬದಲಾವಣೆ. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹಸಿರು ವನ, ಹರಿಯುವ ನದಿಯ ಜುಳು ಜುಳು ನಿನಾದ ಕಣ್ಣಿಗೆ ತಂಪು, ಕಿವಿಗೆ ಇಂಪು. ಗದ್ದೆ ಉಳುವ ಯೋಗಿ, ಭತ್ತ ಬಿತ್ತುವ ಖುಷಿ, ಪುರುಷರು ಮಹಿಳೆಯರು ಸೇರಿ ಗದ್ದೆಯಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡುವ ಸಂಭ್ರಮ ಹೀಗೆ…. ಎಲ್ಲವೂ ಕಣ್ಣಿಗೆ ಕಳೆಗಟ್ಟುವುದು ಮಳೆನಾಡು ಎನ್ನಿಸಿಕೊಂಡ ಮಲೆನಾಡಿನಲ್ಲಿ ಮಾತ್ರ ಸಾಧ್ಯ.
ಕಾಂಕ್ರೀಟ್ ಕಾಡಿನ ನಡುವೆ ಬದುಕುವ ಜೀವಗಳು ಪ್ರಕೃತಿಯ ಸೊಬಗನ್ನು ಪದಗಳಲ್ಲಿ ಕಾಣಬೇಕಷ್ಟೇ. ಅದನ್ನು ಅನುಭವಿಸಲು ಮಲೆನಾಡಿಗೇ ಬರಬೇಕು