2022ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ (ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ) ಗಳಿಗೆ ಸಾಧಕರ ಹೆಸರುಗಳ ಆನ್ ಲೈನ್ ನಾಮನಿರ್ದೇಶನ / ಶಿಫಾರಸು ಮಾಡಲು 2021 ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಹೆಸರನ್ನು 2022ರ ಗಣರಾಜ್ಯೋತ್ಸವ ದಿನದಂದು ಪ್ರಕಟಿಸಲಾಗುತ್ತದೆ. ಈ ಪದ್ಮ ಪ್ರಶಸ್ತಿಗಳಿಗೆ ಮಾಡುವ ಸಾಧಕರ ಹೆಸರುಗಳ ನಾಮನಿರ್ದೇಶನ/ ಶಿಫಾರಸುಗಳನ್ನು ಆನ್ಲೈನ್ ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಆನ್|ಲೈನ್|ನಲ್ಲಿ ಹೆಸರು ಕಳಿಸಲು ಪೋರ್ಟಲ್ https://padmaawards.gov.in ಸಂಪರ್ಕಿಸಬಹುದು.
1954ರಲ್ಲಿ ಸ್ಥಾಪನೆಯಾದ ಪದ್ಮ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಪ್ರಕಟಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಹಾಗೂ ಅವರನ್ನು ಸಮಾಜಕ್ಕೆ ಪರಿಚಯಿಸುವ ಘನ ಉದ್ದೇಶದಿಂದ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆಗಳು, ವ್ಯಾಪಾರ, ಉದ್ಯಮ ಮತ್ತು ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅನನ್ಯ ಸಾಧನೆ ಮತ್ತು ಸೇವೆ ನೀಡಿರುವ ಗಣ್ಯರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ.
ಜಾತಿ, ಜನಾಂಗ,ಸಮುದಾಯ, ಉದ್ಯೋಗ, ಸ್ಥಾನ ಅಥವಾ ಲಿಂಗ ಭೇದವಿಲ್ಲದೆ ಎಲ್ಲ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ, ಸಾರ್ವಜನಿಕ ವಲಯದ ಘಟಕಗಳಲ್ಲಿ ಕೆಲಸ ಮಾಡುವ ನೌಕರರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಾಗಿರುವುದಿಲ್ಲ.
ಪದ್ಮ ಪ್ರಶಸ್ತಿಗಳನ್ನು ‘ಜನತೆಯ ಪದ್ಮ’ವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಆದ್ದರಿಂದ ದೇಶದ ನಾಗರೀಕರು ಸ್ವಯಂ-ನಾಮನಿರ್ದೇಶನದ ಜತೆಗೆ, ಸಾಧಕರ ನಾಮನಿರ್ದೇಶನ/ ಶಿಫಾರಸು ಮಾಡಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಸಮಾಜದ ಒಳಿತಿಗಾಗಿ ಬದುಕನ್ನೇ ಮುಡಿಪಾಗಿಟ್ಟಿರುವ ಮಹಿಳೆಯರು, ದುರ್ಬಲ ವರ್ಗಗಳು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಸಾಧಕರು, ವಿಶೇಷ ಚೇತನರು, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಶ್ರೇಷ್ಠತೆ ಗಳಿಸಿರುವ ನೈಜ ಸಾಧಕರು ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳಲು ಅರ್ಹರಾದ ಎಲ್ಲಾ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ.
ಆನ್|ಲೈನ್|ನಲ್ಲಿ ಕಳಿಸುವ ನಾಮನಿರ್ದೇಶನಗಳು/ ಶಿಫಾರಸುಗಳಲ್ಲಿ ಸಂಬಂಧಿತ ಎಲ್ಲಾ ಮಾಹಿತಿಗಳು ಇರಬೇಕು. ಪದ್ಮ ಪೋರ್ಟಲ್ ನಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಒದಗಿಸಬೇಕು. ಪೋರ್ಟಲ್ ನಲ್ಲಿ ಒದಗಿಸಿರುವ ನಮೂನೆಯಲ್ಲಿ ಗರಿಷ್ಠ 800 ಪದಗಳಲ್ಲಿ ಸಾಧಕರ ಮಾಹಿತಿಯನ್ನು ನಿರೂಪಣೆ ರೂಪದಲ್ಲಿ ಒದಗಿಸಬೇಕು. ಶಿಫಾರಸು ಮಾಡಿದ ಸಾಧಕರ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು ಮತ್ತು ಸೇವೆಯನ್ನು ಸಂಬಂಧಿಸಿದ ಕಾಲಂಗಳಲ್ಲಿ ತುಂಬಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.