18.6 C
Karnataka
Friday, November 22, 2024

    ಜಕ್ಕೂರ್ ಏರೋಡ್ರಮ್ ವ್ಯಾಪ್ತಿಯಲ್ಲಿ ನಿಯಮ ಮೀರಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಸೂಚನೆ

    Must read

    ಜಕ್ಕೂರು ಏರೋ ಡ್ರಮ್ ನ 5 ಕಿಮೀ ವ್ಯಾಪ್ತಿಯಲ್ಲಿ ನಿಯಮ ಮೀರಿ 45 ಮೀಟರ್ ಗಿಂತಲೂ ಎತ್ತರ ಕಟ್ಟಿರುವ ಕಟ್ಟಡಗಳನ್ನು ತಕ್ಷಣವೆ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ, ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ‌. ನಾರಾಯಣಗೌಡ ಆದೇಶಿಸಿದರು.

    ವಿಕಾಸ ಸೌಧದಲ್ಲಿ ಇಂದು ನಡೆದ ಸಭೆಯಲ್ಲಿ, ಜಕ್ಕೂರು ಏರೋಡ್ರಮ್ ನ 5ಕಿಮೀ ವ್ಯಾಪ್ತಿಯಲ್ಲಿ, 45 ಮೀಟರ್ ಗಿಂತ ಎತ್ತರದ ಕಟ್ಟಡ ಕಟ್ಟುವಂತಿಲ್ಲ. ಆದಾಗ್ಯೂ ಡಿಜಿಸಿಎ ನಿಯಮ ಮೀರಿ, ಪರವಾನಿಗೆ ಇಲ್ಲದೆ ಕಟ್ಟಡಗಳನ್ನು ಕಟ್ಟಿದ್ದಾರೆ. ಸಚಿವರ ಸೂಚನೆ ಮೇರೆಗೆ ಸರ್ವೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಪ್ರಾಥಮಿಕ ಸಮೀಕ್ಷೆಯಲ್ಲಿ 15 ಕಟ್ಟಡಗಳು ನಿಯಮ ಉಲ್ಲಂಘಿಸಿ 45 ಮೀಟರ್ ಗಿಂತ ಹೆಚ್ಚು ಎತ್ತರದ ಕಟ್ಟಡಗಳನ್ನು ನಿರ್ಮಿಸಿರುವುದು ಪತ್ತೆ ಹಚ್ಚಲಾಗಿದೆ. ಆದ್ದರಿಂದ ಅಕ್ರಮ ಕಟ್ಟಡಗಳನ್ನು ತಕ್ಷಣವೆ ತೆರವು ಮಾಡಬೇಕು. ನಿಯಮ ಮೀರಿ 5ಕಿಮೀ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಿರುವ ಪತ್ತೆ ಹಚ್ಚಲು ಡ್ರೋಣ್ ಸರ್ವೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ಜಂಟಿ ಸರ್ವೆ ನಡೆಸುವಂತೆ ಸಚಿವರು ಸೂಚಿಸಿದರು.

    ಕೆಲವರು ಎನ್ ಓ ಸಿ ಪಡೆಯದೆ ಕಟ್ಟಡ ನಿರ್ಮಿಸಿದ್ದು, ಮತ್ತೆ ಕೆಲವರು ಎನ್ ಓ ಸಿ ಪಡೆದರೂ ಅನುಮೋದಿತ ಎತ್ತರದ ಮಿತಿ ಉಲ್ಲಂಘಿಸಿದ್ದಾರೆ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಡೆಸಿದ ಸರ್ವೆಯಲ್ಲಿ 11 ಕಟ್ಟಡಗಳು ಹಾಗೂ ವೈಮಾನಿಕ ತರಬೇತಿ ಶಾಲೆಯಿಂದ ನಡೆಸಿದ ಸರ್ವೆಯಲ್ಲಿ 4 ಕಟ್ಟಡಗಳು ನಿಯಮ ಉಲ್ಲಂಘಿಸಿದ್ದು ಪತ್ತೆಯಾಗಿದೆ. ಕೆಲವರು ಸರ್ವೆ ನಡೆಸಲು ಅಸಹಕಾರ ತೋರಿದ್ದಾರೆ. ಹೀಗಾಗಿ ಮತ್ತೊಮ್ಮೆ ಸರ್ವೆ ನಡೆಸಲು ಸೂಚನೆ ನೀಡಿದರು‌.

    ಬಾಡಿಗೆ ಬಾಕಿ ನೀಡದ ಕಂಪೆನಿ ಆಸ್ತಿ ಜಪ್ತಿ

    ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಬಾಡಿಗೆ ಬಾಕಿ ನೀಡದ ಕಂಪೆನಿಗಳ ಆಸ್ತಿಯನ್ನು ಸೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಎಲ್ಲ ಕಂಪೆನಿಗಳಿಂದ ಸುಮಾರು ರೂ.5 ಕೋಟಿ ಬಾಡಿಗೆ ಹಣ ಬಾಕಿ ಇದೆ. ಬಾಕಿ ಹಣ ಪಾವತಿಸಲು ನೀಡಿರುವ ಕೊನೆಯ ನೋಟಿಸ್ ನ ಅವಧಿ ಮುಗಿದಿದೆ. ಕೆಲವು ಕಂಪೆನಿಗಳು ಸ್ವಲ್ಪ ಪ್ರಮಾಣದಲ್ಲಿ ಬಾಕಿ ಪಾವತಿಸಿದ್ದಾರೆ‌. ಎಲ್ಲ ಕಂಪೆನಿಗಳು ಹಣ ಪಾವತಿಸಬೇಕು. ಅದಕ್ಕಾಗಿ ಕಂಪೆನಿಗಳ ಮುಖ್ಯಸ್ಥರ ಜೊತೆ ಮಾತನಾಡುವಂತೆ ಸಚಿವರು ಸೂಚಿಸಿದರು.

    ಆಗಸ್ಟ್ 20 ರಿಂದ ವೈಮಾನಿಕ‌ ತರಬೇತಿ ಶಾಲೆ ಆರಂಭ

    ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆಗಸ್ಟ್ 20 ರಿಂದ ಆರಂಭಿಸಲಾಗುವುದು. ಮುಖ್ಯ ಬೋಧಕರ ನೇಮಕವಾಗಿದ್ದು, ಸಹಾಯಕ ಬೋಧಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಶ್ರೀಘ್ರದಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಿ, ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಡಾ. ಗೋಪಾಲಕೃಷ್ಣ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!