26.3 C
Karnataka
Saturday, November 23, 2024

    ಎಲ್ಲಿದೆ ಗುಜರಾತ್ ಮಾಡೆಲ್? ಅಲ್ಲಿಗೆ ಸಿಕ್ಕಷ್ಟು ಲಸಿಕೆ ರಾಜ್ಯಕ್ಕೆ ಸಿಕ್ಕಿದೆಯಾ?- ಡಿಕೆಶಿ ಪ್ರಶ್ನೆ

    Must read

    ಎಲ್ಲದಕ್ಕೂ ಗುಜರಾತ್ ಮಾಡೆಲ್ ಎನ್ನುವ ಬಿಜೆಪಿ ಸರ್ಕಾರ, ಕೋವಿಡ್ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡಿರುವುದು ಏಕೆ? ಗುಜರಾತಿಗೆಷ್ಟು ಲಸಿಕೆ ಪೂರೈಸಿದೆ? ಕರ್ನಾಟಕಕ್ಕೆಷ್ಟು ಪೂರೈಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

    ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:

    ‘ಗುಜರಾತ್ ಮಾಡೆಲ್ ಎಲ್ಲಿದೆ? ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಎಲ್ಲ ಮಾಡಲಾಯ್ತು. ವ್ಯಾಪಾರಿಗಳು ಉದ್ಯಮಿಗಳ ಪರ ಅಂತಾ ಬಿಂಬಿಸಿಕೊಂಡ ಬಿಜೆಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರಿಗೆ ಮನ್ನಾ ಮಾಡಲಿಲ್ಲಾ ಯಾಕೆ? ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ..? ಸರ್ಕಾರದವರು ಅಧ್ಯಯನ ಮಾಡಲು ಗುಜರಾತಿಗೆ ಹೋಗಲಿ, ನಮ್ಮ ಅಭ್ಯಂತರವಿಲ್ಲ. ಅವರು ಯಾವ ಮಾಡೆಲ್ ಆದರೂ ನೀಡಲಿ. ಆದರೆ ನಮ್ಮ ಜನರಿಗೆ ನ್ಯಾಯ ಒದಗಿಸಲಿ, ಸರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲಿ.

    ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೆ? ಗುಜರಾತಿಗೆ ನೀಡಿರುವುದರಲ್ಲಿ ಶೇ.50 ರಷ್ಟಾದರೂ ನಮ್ಮ ರಾಜ್ಯಕ್ಕೆ ನೀಡಲಿಲ್ಲ. ಬಿಜೆಪಿಗೆ ಗುಜರಾತ್ ಮಾತ್ರ ಆದ್ಯತೆ. ಅವರು ಗುಜರಾತ್ ಉದ್ಧಾರ ಮಾಡಲಿ ಬೇಡ ಅನ್ನುವುದಿಲ್ಲ. ಆದರೆ ಲಸಿಕೆ ವಿಚಾರದಲ್ಲಿ ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೋ ಅಷ್ಟನ್ನೇ ರಾಜ್ಯಕ್ಕೂ ನೀಡಲಿ ಎಂದು ಮುಖ್ಯಮಂತ್ರಿಗಳು ಧ್ವನಿ ಎತ್ತಬೇಕು. ಈ ಬಗ್ಗೆ ಎಲ್ಲ ಸಂಸದರು ಮಾತನಾಡಬೇಕು.

    ಸರ್ಕಾರದಿಂದ ಶ್ರಮಿಕರಿಗೆ ಸಿಗಲಿ ಪರಿಹಾರ;

    ಕೋವಿಡ್ ನಿಂದ ಮೃತಪಟ್ಟವರಿಗೆ ಸಹಜ ಸಾವು ಎಂದು ಮರಣ ಪ್ರಮಾಣ ಪತ್ರ ನೀಡಲಾಗಿದೆ. ಇವರ ಮರಣ ಪ್ರಮಾಣ ಪತ್ರವನ್ನು ಹೇಗೆ ಮಾರ್ಪಾಡು ಮಾಡಲು ಆಗುತ್ತದೆ? ಕೋವಿಡ್ ನಿಂದ ತೊಂದರೆಗೆ ಒಳಗಾದವರಿಗೆ, ಸಾಂಪ್ರಾದಾಯಿಕ ವೃತ್ತಿ ಉಳಿಸಿಕೊಂಡು ಬಂದವರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಸಿಗುವ ಬಗ್ಗೆ ಯಾವುದೇ ಸ್ಪಷ್ಟತೆ, ಭರವಸೆ ಇಲ್ಲ.

    ಆನ್ಲೈನ್ ನೋಂದಣಿ ಮಾಡಲು ಅವರಿಗೆ ಗೊತ್ತಿದ್ದರೆ, ಅವರು ಯಾಕೆ ಇವರ ಮುಂದೆ ಕೈಚಾಚುತ್ತಿದ್ದರು? ಒಬ್ಬನೇ ಒಬ್ಬ ರೈತ, ಕಾರ್ಮಿಕ, ವೃತ್ತಿದಾರ ನೋಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಆರಂಭದಲ್ಲಿ 25 ಲಕ್ಷ ಚಾಲಕರಿಗೆ ಪರಿಹಾರ ಕೊಡುತ್ತೇವೆ ಅಂದರು. ನಂತರ ಅದನ್ನು ಏಳೂವರೇ ಲಕ್ಷಕ್ಕೆ ಇಳಿಸಿದರು. ಈಗ ನೋಂದಣಿ ಸಮಸ್ಯೆಯಿಂದ ಕೇವಲ ಎರಡೂವರೆ ಲಕ್ಷ ಚಾಲಕರಿಗೆ ಮಾತ್ರ ಪರಿಹಾರ ನೀಡಿದ್ದಾರೆ.

    ಹೀಗಾಗಿ ಎಲ್ಲ ಶ್ರಮಿಕ ವರ್ಗದವರಿಗೂ ಸರ್ಕಾರ ಘೋಷಿಸಿರುವ ಪರಿಹಾರ ತಲುಪಿಸಬೇಕು. ಅನ್ಯಾಯ ಆಗಿರುವವರಿಗೆ ನ್ಯಾಯ ಒದಗಿಸಬೇಕಿದೆ. ಬೆಂಗಳೂರು ನಗರದಲ್ಲಿ ಒಂದೂವರೇ ಕೋಟಿ ಜನಸಂಖ್ಯೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರದಲ್ಲಿ ಈ ವರ್ಗದವರ ಲೆಕ್ಕ ಬೇರೆ ಇದೆ. ಹೀಗಾಗಿ ಇವರಿಗೆ ನ್ಯಾಯ ಒದಗಿಸಲು ಏನು ಮಾಡಬೇಕು ಎಂದು ನಮ್ಮ ನಾಯಕರ ಸಲಹೆ ಪಡೆಯಲು ಸಭೆ ಕರೆದಿದ್ದೆ. ಪ್ರತಿ ಕ್ಷೇತ್ರದ ನಾಯಕರ ಅಭಿಪ್ರಾಯ ಪಡೆದು, ನಮ್ಮ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದ್ದೇವೆ.’ ಎಂದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!