ಮಾಜಿ ಸಚಿವ, ಮಂಡ್ಯದ ಮಾಜಿ ಸಂಸದ, ರೈತ ನಾಯಕ ಜಿ.ಮಾದೇಗೌಡ ಅವರು ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಿಧನರಾದರು. 92 ವರ್ಷ ವಯಸ್ಸಿನ ಅವರು ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ,ಒಂದು ಬಾರಿ ರಾಜ್ಯದ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಮಾದೇಗೌಡ ಅವರು ಕಾವೇರಿ ನೀರಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದರು.
ಮಂಡ್ಯದ ಬಂಧೀಗೌಡ ಬಡಾವಣೆ ನಿವಾಸಿಯಾಗಿದ್ದ ಮಾದೇಗೌಡರು, ಮದ್ದೂರು ತಾಲೂಕಿನ ಗುರುದೇವರ ಹಳ್ಳಿ ಗ್ರಾಮದವರು.
ಮಾದೇಗೌಡರು, ಪತ್ನಿ , ಡಾ. ಪ್ರಕಾಶ್, ಮಧು ಮಾದೇಗೌಡ ಸೇರಿದಂತೆ ನಾಲ್ವರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧುಗಳು ಅಭಿಮಾನಿಗಳನ್ನು ಅಗಲಿದ್ದಾರೆ.
ಒಂಭತ್ತು ದಶಕಗಳ ನಿರಂತರ ಹೋರಾಟ, ಅಭಿವೃದ್ಧಿ ಬಗ್ಗೆ ಸದಾ ಚಿಂತನೆ ಇಟ್ಟು ಬದುಕು ಸವೆಸಿದ ಗೌಡರು, ಬದುಕಿನಲ್ಲಿ ಗಾಂಧೀವಾದವನ್ನು ಅಳವಡಿಸಿಕೊಂಡರು. ಮಂಡ್ಯದಲ್ಲಿ ಹಾಗೂ ಭಾರತೀನಗರದಲ್ಲಿ ಗಾಂಧೀಭವನ, ಗಾಂಧೀಗ್ರಾಮ, ಗುಡಿ ಕೈಗಾರಿಕೆ, ವಾಚನಾಲಯ ಹೀಗೆ ಹಲವು ಗಾಂಧೀ ಮಾರ್ಗ ಅನುಸರಿಸಿ , ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಗೌಡರದು.
ಮದ್ದೂರು ತಾಲೂಕಿನ ಕಾಳಮುದ್ದನದೊಡ್ಡಿ ಗ್ರಾಮ ಎಂದರೆ ಗೌಡರಿಗೆ ಅಚ್ಚುಮೆಚ್ಚು. ಈ ಗ್ರಾಮಕ್ಕೆ ಪಟ್ಟಣದ ಸ್ವರೂಪ ತಂದು ಕೊಟ್ಟು , ಭಾರತೀನಗರ ಎಂದು ಹೊಸ ಹೆಸರನ್ನು ಖ್ಯಾತಿಗೊಳಿಸಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಮಾದೇಗೌಡರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.