21.7 C
Karnataka
Tuesday, December 3, 2024

    ಜುಲೈ 26ರಿಂದ ಪದವಿ ಕಾಲೇಜು ಆರಂಭಕ್ಕೆ ಅಸ್ತು; ಚಿತ್ರಮಂದಿರ ಶೇ.50 ಭರ್ತಿಗೆ ಅವಕಾಶ

    Must read

    ಇದೇ ಜುಲೈ 26ರಿಂದ ಭೌತಿಕ ಪದವಿ ತರಗತಿಗಳನ್ನು ಆರಂಭಿಸಲು ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19 ರ ನಿರ್ವಹಣೆಗೆ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

    ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಾಣಿಜ್ಯ ವ್ಯವಹಾರಕ್ಕೆ ಮತ್ತಷ್ಟು ಸಡಿಲಕೆ ಮಾಡಲಾಗಿದ್ದು, ರಾಜ್ಯದಲ್ಲಿ ಕೋವಿಡ್ ಅನ್ಲಾಕ್ 4.O ಮಾರ್ಗಸೂಚಿಯನ್ನು ಭಾನುವಾರ ಹೊರಡಿಸಲಾಗಿದೆ.

    ಹೊಸ ಮಾರ್ಗಸೂಚಿ ಸೋಮವಾರದಿಂದ ಜಾರಿಗೆ ಬರಲಿದ್ದು, ಅರ್ಧ ಪ್ರಮಾಣದಲ್ಲಿ ಚಲನ ಚಿತ್ರಮಂದಿರಗಳು ತೆರೆದುಕೊಳ್ಳಲಿವೆ. ಮುಖ್ಯವಾಗಿ ಜುಲೈ 26ರಿಂದ ಪದವಿ ಕಾಲೇಜುಗಳು ಆರಂಭವಾಗಲಿವೆ.

    ಈಗಾಗಲೇ ಆನ್ಲೈನ್ ಮೂಲಕ ನಡೆಯುತ್ತಿರುವ ಪದವಿ ತರಗತಿಗಳನ್ನು ಭೌತಿಕವಾಗಿ ಆರಂಭಿಸಲು ಸರಕಾರ ನಿರ್ಧರಿಸಿದ್ದು, ಜುಲೈ 26ರಿಂದ ನೇರ ಅಥವಾ ಆಫ್ಲೈನ್ ತರಗತಿಗಳು ಶುರುವಾಗಲಿವೆ. ತರಗತಿಗಳಿಗೆ ಹಾಜರಾಗಲಿಚ್ಛಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿರಲೇಬೇಕು.

    ಭಾನುವಾರ ತಮ್ಮ ನಿವಾಸದಲ್ಲಿ ಹಿರಿಯ ಸಚಿವರು, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೋವಿಡ್ ಸೋಂಕು ಇಳಿಮುಖ ಆಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಮತ್ತಷ್ಟು ರಿಯಾಯಿತಿ ನೀಡುವ ನಿರ್ಧಾರ ಕೈಗೊಂಡರು. ಜತೆಗೆ, ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಅವಧಿಯಲ್ಲೂ ಒಂದು ಗಂಟೆ ಕಡಿತಗೊಳಿಸಿ, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಮಾತ್ರ ರಾತ್ರಿ ಕರ್ಫ್ಯೂ ವಿಧಿಸಿ ನಿರ್ಣಯ ಕೈಗೊಂಡಿದ್ದಾರೆ.

    ಉಳಿದಂತೆ ಬಾರ್ ಗಳಲ್ಲಿ ಮದ್ಯ ಸೇವನೆಗೆ ಈವರೆಗೆ ವಿಧಿಸಲಾಗಿದ್ದ ಶೇ.50 ರಷ್ಟು ಮಿತಿ ಮುಂದುವರಿಸಲಾಗಿದೆ. ರಾತ್ರಿ ಕರ್ಫ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ ಮಾಡಿದ ಕಾರಣಕ್ಕೆ ಬಾರ್ ಗಳಲ್ಲಿ ಮುಂದಿನ ದಿನಗಳಲ್ಲಿ ರಾತ್ರಿ 10 ಗಂಟೆ ತನಕ ಮದ್ಯ ಸೇವನೆಗೆ ಅವಕಾಶ ಕೊಡಲಾಗಿದೆ. ಆದರೆ, ಪಬ್ ನಲ್ಲಿ ಮದ್ಯ ಸೇವನೆ, ರಾತ್ರಿ ಪಾರ್ಟಿಗಳಿಗೆ ಅವಕಾಶ ಇಲ್ಲ. ಹಾಗೆಯೇ ಒಳಾಂಗಣ ಚಿತ್ರೀಕರಣ, ಕ್ರೀಡಾಂಗಣಗಳಿಗೂ ಅವಕಾಶ ನೀಡಲಾಗಿಲ್ಲ. ಮದುವೆಗೆ 100 ಜನರ ಮಿತಿ ಇದ್ದು, ಅಂತ್ಯಕ್ರಿಯೆಯಲ್ಲಿ 20 ಜನರಷ್ಟೇ ಪಾಲ್ಗೊಳ್ಳುವ ನಿಯಮವನ್ನು ಮುಂದುವರಿಸಲಾಗಿದೆ.

    ಡಾ.ಸುಧಾಕರ್ ಇರಲಿಲ್ಲ

    ಅತ್ಯಂತ ಮಹತ್ವದ ಈ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭಾಗಿಯಾಗಿರಲಿಲ್ಲ. ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಅಶೋಕ್, ಅರವಿಂದ ಲಿಂಬಾವಳಿ ಮಾತ್ರ ಭಾಗಿಯಾಗಿದ್ದರು. ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ಎಸ್. ರಮಣರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. ಸುಧಾಕರ್ ಗೈರಿಗೆ ಕಾರಣ ಗೊತ್ತಾಗಿಲ್ಲ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!