ಅತ್ತ ದರಿ ಇತ್ತ ಪುಲಿ- ರನ್ನನ ‘ಗದಾಯುದ್ಧ’ ಕೃತಿಯಲ್ಲಿ ಈ ಸಾಲು ಬರುತ್ತದೆ. ‘ದುರ್ಯೋಧನಾವಸಾನಂ’ ಅಧ್ಯಾಯದ ಒಂಬತ್ತನೆಯ ಪದ್ಯದಲ್ಲಿ “ಅತ್ತಲಸುರಾರಿ ಬೆಸಸಿದನಿತ್ತಲ್ ರುದ್ರಾವತಾರನೆರೆದುಯ್ದಪನೆಂದತ್ತ ಪುಲಿಯಿತ್ತ ದರಿಯೆಂದತ್ತಿತ್ತಡಿಯಿಡದೆ ಲಕ್ಷ್ಮಿ ತಳವೆಳಗಾದಳ್” ಅಂದರೆ ಸಾಕ್ಷಾತ್ ಲಕ್ಷ್ಮಿಗೆ ಯಾವ ಕಡೆ ಹೋಗಲಿ, ಯಾರ ಜೊತೆ ಸೇರಲಿ ಪಾಂಡವರೆಡೆಗೋ ಕೌರವನೆಡೆಗೋ ನಿರ್ಧಾರ ಮಾಡಲಾಗುತ್ತಿಲ್ಲ. ಈ ಅಶ್ವತ್ಥಾಮನೋ ಗದರಿಸುತ್ತಿದ್ದಾನೆ ಎಂದು ಲಕ್ಷ್ಮಿಗಾಗುವ ಧರ್ಮ ಸಂಕಟ ವಿವರಿಸುವ ಸಂದರ್ಭಲ್ಲಿ “ಅತ್ತ ದರಿ ಇತ್ತ ಪುಲಿ” ಎಂಬ ಮಾತು ಬರುತ್ತದೆ.
ಇದು ಲೋಕೋತ್ತರವಾಗಿರುವ ನಾಣ್ಣುಡಿ ಅಲ್ಲದೆ ಇದು ತೆಲುಗು ಭಾಷೆಯ ಮೂಲದ್ದು ಅನ್ನುವ ವಾದವೂ ಇದೆ. ‘ದರಿ’ ಎಂದರೆ ಬಾವಿ ಇಲ್ಲವೆ ನದಿ,ಕೆರೆ ಹೊಳೆಗೆ ಹೇಳುವಂಥದ್ದು ಪುಲಿ ಕನ್ನಡದ್ದೆ ಪ>ಹ ಆಗಿರುವುದಷ್ಟೆ. ಒಂದೆಡೆ ದರಿ ಇನ್ನೊಂದೆಡೆ ಹುಲಿ ಇವರಡೂ ಅಪಾಯವನ್ನೇ ತರುವಂಥದ್ದು. ಇಬ್ಬಂದಿತನಕ್ಕೆ ಸಿಲುಕಿ ಅನುಭವಿಸುವ ನೋವು ದುಃಖ, ಭಯ ಅನುಭವಿಸಲಸಾಧ್ಯ , ಹೇಳಲಸಾಧ್ಯ.
‘ಅತ್ತ ಪುಲಿ ಅತ್ತ ಧರಿ’ ಎಂಬುದನ್ನು ‘ಕಾದ ಬಾಣಲೆಯಿಂದ ಕುದಿಯುವ ಎಣ್ಣೆಗೆ’ ಎಂಬ ಮಾತಿಗೂ ಹೋಲಿಸಬಹುದು. ನಿತ್ಯದ ಬದುಕು ಜೀವನ್ಮರಣದ ಹೊರಾಟವೆ ಸರಿ! ಕೆಲವೊಮ್ಮೆ ಬದುಕಲು ಆಕಾಶದಷ್ಟು ಅವಕಾಶವಿದ್ದರೂ ಅನುಭವಿಸಲು ಮನಸ್ಸಿರುವುದಿಲ್ಲ. ಇನ್ನೇನೋ ಮಾಡಹೋಗಿ ಸಮಸ್ಯೆಯಲ್ಲಿ ಸಿಲುಕಿಬಿಡುವುದು ಆ ಸಮಸ್ಯೆಗೆ ಇನ್ನೊಂದು ಸಮಸ್ಯೆ ಎಡತಾಕುವುದು ಕಡೆಗೆ ಸಮಸ್ಯೆಗಳ ಕಗ್ಗಂಟು ಗೋಜಲು ಗೋಜಲಾಗುವುದು ನಂತರ ಬಿಡುಗಡೆಯ ಎಲ್ಲಾ ದಾರಿಗಳು ಸಂಪೂರ್ಣ ಮುಚ್ಚಿ ಹೋಗುವುದು ಎಲ್ಲಿ ಹೋದರೂ ಏನೇ ಮಾಡಿದರೂ ಅಪಾಯಗಳೆ ಕಾಣಿಸಿಕೊಳ್ಳುವುದು.
ಈ ಸಂದಿಗ್ಧತೆಯನ್ನು ನೋಡಿ ನಮ್ಮ ಹಿರಿಯರು ಅನುಭವದಿಂದ ಪ್ರಸ್ತುತ ಮಾತನ್ನು ಹೇಳಿರುವುದಷ್ಟು ಸತ್ಯವೋ ಅಂತೆಯೇ ರನ್ನನೂ ತನ್ನ ಕಾವ್ಯದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾನೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಸೊಗಸಾಗಿದೆ ನಾಣ್ಣುಡಿ ನಿಮ್ಮ ಲೇಖನ ಸ್ವಾರಸ್ಯಕರ 🙏🙏🙏