ಷೇರುಪೇಟೆಯಲ್ಲಿ ಷೇರಿನ ದರಗಳಲ್ಲಿ ರಭಸದ ಏರುಪೇರುಗಳ ಹಿಂದೆ ಅಡಕವಾಗಿರುವ ಪ್ರಮುಖ ಅಂಶ ಎಂದರೆ ಕಾರ್ಪೊರೇಟ್ ಫಲಗಳ ಪ್ರಮಾಣ. ವಹಿವಾಟಾದ ಷೇರಿನ ಪ್ರಮಾಣವು ಸಂಪೂರ್ಣವಾಗಿ ವಿಲೇವಾರಿಯಾಗುತ್ತದೆಂಬ ಭ್ರಮೆ ಬೇಡ. ಹೆಚ್ಚಿನ ಕಂಪನಿಗಳಲ್ಲಿ ಡೇ ಟ್ರೇಡಿಂಗ್ ಪ್ರಮಾಣದ ಭಾಗವೇ ಹೆಚ್ಚಿರುತ್ತದೆ. ಒಂದೊಂದು ಕಂಪನಿಯು ಒಂದೊಂದು ರೀತಿ ಪ್ರದರ್ಶಿಸುತ್ತವೆ. ಕೆಲವು ಕಂಪನಿಗಳ ಬದಲಾವಣೆಗಳು ಇಲ್ಲಿವೆ.
ಷೇರುಪೇಟೆಯಲ್ಲಿನ ಉತ್ಸಾಹವು ಸಂಭ್ರಮೋಲ್ಲಾಸಗಳಿಂದ ತಾಂಡವವಾಡುತ್ತಿದೆ. ಸೂಚ್ಯಂಕಗಳು, ಪೇಟೆಯ ಬಂಡವಾಳೀಕರಣ ಮೌಲ್ಯವು ಸರ್ವಕಾಲೀನ ಗರಿಷ್ಠ ಹಂತದಲ್ಲಿವೆ. ಆದರೂ ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿದೆ ಎಂದು ಬಿಂಬಿತವಾಗುತ್ತಿದೆ. ವಾಸ್ತವವಾಗಿ ಹಿಂದಿನ ವಾರದಲ್ಲಿ ಕಂಡ ಟೆಕ್ನಾಲಜಿ ಕಂಪನಿಗಳ ತೇಜಿಯು ಕಲ್ಪನಾತೀತ ಮಟ್ಟದಲ್ಲಿದ್ದು, ಇಸವಿ 2000 ದಲ್ಲಿ ಈ ವಲಯ ಕಂಡ ರಭಸದ ಏರಿಕೆಯ ಪ್ರತಿ ರೂಪವೇನೋ ಎಂಬಂತೆ ಭಾಸವಾಗುತ್ತಿತ್ತು. ಗುರುವಾರದಂದು ಎಲ್ ಅಂಡ್ ಟಿ ಇನ್ಫೋಟೆಕ್ ಷೇರಿನ ಬೆಲೆ ರೂ.4,250 ರಿಂದ ರೂ.4,600 ರವರೆಗೂ ಜಿಗಿತ ಕಂಡಿದೆ. ಆದರೆ ಶುಕ್ರವಾರದಂದು ರೂ.4,253 ರವರೆಗೂ ಹಿಂದಿರುಗಿ ರೂ.4,288 ರಲ್ಲಿ ಕೊನೆಗೊಂಡಿದೆ. ಆದರೆ ವಿಲೇವಾರಿಯಾದ ಷೇರುಗಳ ಪ್ರಮಾಣ ಮಾತ್ರ ಗುರುವಾರ ಶೇ.26.43, ಶುಕ್ರವಾರ ಶೇ.18.26 ಮಾತ್ರ.
ಸೈಯೆಂಟ್ ಕಂಪನಿಯ ಷೇರಿನ ಬೆಲೆ ರೂ.882 ರ ಸಮೀಪದಿಂದ ರೂ.995 ರವರೆಗೂ ಏರಿಕೆ ಕಂಡು ಶುಕ್ರವಾರ ಫಲಿತಾಂಶದ ಕಾರಣ ನೀರಸಮಯವಾಗಿ ಆರಂಭವಾಗಿ ರೂ.910 ರ ಸಮೀಪಕ್ಕೆ ಕುಸಿದು ನಂತರ ಭಾರಿ ಚಟುವಟಿಕೆಯಿಂದ ರೂ.1,091 ರವರೆಗೂ ಏರಿಕೆ ಕಂಡು ರೂ.1,061 ರಲ್ಲಿ ಕೊನೆಗೊಂಡಿದೆ. ಈ ಪ್ರಮಾಣದ ಏರಿಳಿತಗಳು ಪ್ರದರ್ಶನವಾದರೂ ಗುರುವಾರದಂದು ವಿಲೇವಾರಿಯಾದ ಷೇರುಗಳ ಪ್ರಮಾಣ ಶೇ.31 ರಷ್ಠಿದ್ದರೆ, ಶುಕ್ರವಾರ ಶೇ.46 ರಷ್ಟಿತ್ತು.
ಎಚ್ ಸಿ ಎಲ್ ಟೆಕ್ನಾಲಜೀಸ್ ಕಂಪನಿಯ ಷೇರಿನ ಬೆಲೆ ಗುರುವಾರದಂದು ರೂ.991 ರ ಸಮೀಪದಿಂದ ರೂ.1,052 ರವರೆಗೂ ಜಿಗಿತ ಕಂಡಿತು. ಶುಕ್ರವಾರ ರೂ.1,040 ರ ಸಮೀಪ ಆರಂಭವಾಗಿ ರೂ.998 ರವರೆಗೂ ಇಳಿಕೆ ಕಂಡು ರೂ.1,004 ರ ಸಮೀಪ ಕೊನೆಗೊಂಡಿದೆ. ಅಚ್ಚರಿಯ ಅಂಶವೆಂದರೆ ಈ ಕಂಪನಿಯ ಷೇರುಗಳ ವಿಲೇವಾರಿ ಪ್ರಮಾಣವು ಗುರುವಾರದಂದು ಶೇ.53.76 ರಷ್ಟಿದ್ದರೆ ಶುಕ್ರವಾರ ಶೇ 45.71 ರಷ್ಠು ಷೇರುಗಳು ವಿಲೇವಾರಿಗೊಂಡಿವೆ. ಆದರೆ ಸೋಮವಾರದಂದು ವಿಲೇವಾರಿಯಾದ ಪ್ರಮಾಣವು ಶೇ.87.55, ಮಂಗಳವಾರ ಶೇ.79.31 ರಷ್ಠಿದೆ. ಅಂದರೆ ಸೋಮವಾರ ಖರೀದಿಸಿದ ಭಾರಿ ಸಂಖ್ಯೆಯ ಷೇರುಗಳನ್ನು ಗುರುವಾರ ಮತ್ತು ಶುಕ್ರವಾರ ಮಾರಾಟಮಾಡಿರಲೂಬಹುದಲ್ಲವೇ?
ಎಂಫೆಸಿಸ್ ಷೇರು ಪ್ರದರ್ಶಿಸಿದ ಏರುಪೇರು ಈ ಒಂದು ವಾರದಲ್ಲಿ ರೂ.2,193 ರ ಸಮೀಪದಿಂದ ರೂ.2,422 ರವರೆಗಿದ್ದಿತಾದರೂ. ವಿಲೇವಾರಿಯಾದ ಷೇರಿನ ಗಾತ್ರ ಮಾತ್ರ ಶೇ.12 ರಿಂದ ಶೇ 28.05 ಮಾತ್ರ ಅಂದರೆ ಷೇರುಪೇಟೆಯಲ್ಲಿ ನಡೆಯುತ್ತಿರುವ ವ್ಯವಹಾರವು ಹೆಚ್ಚಾಗಿ ಸ್ಪೆಕ್ಯುಲೇಷನ್ ಆಗಿದೆ ಎನ್ನಬಹುದು.
ರೆಡಿಂಗ್ ಟನ್ (ಇಂಡಿಯಾ ) ಲಿ ಕಂಪನಿ ಪ್ರತಿ ಷೇರಿಗೆ ರೂ.11.60 ರಂತೆ ಡಿವಿಡೆಂಡ್ ಪ್ರಕಟಿಸಿ, 16 ರಿಂದ ಎಕ್ಸ್ ಡಿವಿಡೆಂಡ್ ಆಗಿದೆ. ಅಲ್ಲದೆ 1:1 ರ ಅನುಪಾತದ ಬೋನಸ್ ಷೇರು ಸಹ ಪ್ರಕಟಿಸಿದೆ. ಬೋನಸ್ ಷೇರಿಗೆ ಆಗಸ್ಟ್ 18 ರಿಂದ ಎಕ್ಸ್ ಬೋನಸ್ ಆರಂಭವಾಗಲಿದೆ. ಬೋನಸ್ ಷೇರು ಪ್ರಕಟಿಸಿದ ದಿನ ಈ ಷೇರಿನ ಬೆಲೆ ರೂ.301 ರ ಸಮೀಪವಿದ್ದು ವಿಲೇವಾರಿಯಾದ ಷೇರಿನ ಪ್ರಮಾಣ ಶೇ.32 ರ ಸಮೀಪವಿತ್ತು. ಆದರೆ ನಂತರದ ದಿನದಲ್ಲಿ ಶೇ.51 ರ ಸಮೀಪಕ್ಕೆ ಜಿಗಿಯಿತು. ಸೋಮವಾರ 12 ರಂದು ಷೇರಿನ ಬೆಲೆ ರೂ.345 ರ ಗರಿಷ್ಠ ತಲುಪಿದ್ದಲ್ಲದೆ ವಿಲೇವಾರಿ ಷೇರಿನ ಪ್ರಮಾಣ ಶೇ.89.94 ಕ್ಕೆ ಜಿಗಿತ ಕಂಡಿತು. 14 ರಂದು ಶೇ.70 ರಷ್ಟರ ವಿಲೇವಾರಿ ಪ್ರಮಾಣವಾಗಿ, ಗುರುವಾರ ಡಿವಿಡೆಂಡ್ ಗೆ ಕೊನೆಯದಿನವಾದ ಕಾರಣ ಮಾರಾಟದ ಒತ್ತಡಕ್ಕೊಳಗಾಗಿ ಷೇರಿನ ಬೆಲೆ ರೂ.343 ರ ಸಮೀಪದಿಂದ ರೂ.333.95 ಕ್ಕೆ ಕುಸಿಯಿತು. ವಿಲೇವಾರಿಯಾದ ಪ್ರಮಾಣವು ಶೇ.55 ರ ಸಮೀಪಕ್ಕೆ ಕುಸಿಯಿತು.
ಡೆಲಿವರಿ ಟ್ರೇಡ್ ಮೇಲೆ ಕಾರ್ಪೊರೇಟ್ ಫಲಗಳ ಪ್ರಭಾವ
ಷೇರಿನ ದರಗಳಲ್ಲಿ ಏರಿಳಿತಗಳ ಹಿಂದೆ ಕಂಪನಿಗಳ ಕಾರ್ಪೊರೇಟ್ ಫಲಗಳಾದ ಡಿವಿಡೆಂಡ್, ಬೋನಸ್ ಗಳು ನೇರವಾಗಿ ಪ್ರಭಾವಿಯಾಗುತ್ತವೆ. ಈ ಪ್ರಭಾವವು ವಹಿವಾಟಿನ ಗಾತ್ರದ ಮೇಲೂ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ವಹಿವಾಟಾದ ಎಲ್ಲಾ ಷೇರುಗಳು ವಿಲೇವಾರಿ (delivery)ಯಾಗುತ್ತದೆ ಎಂಬ ಭ್ರಮೆ ಹೆಚ್ಚಿನವರಲ್ಲಿರುತ್ತದೆ. ವಹಿವಾಟಾದ ಹೆಚ್ಚಿನ ಭಾಗವು ಡೇ ಟ್ರೇಡಿಂಗ್ ಕಾರಣ ಅಂದೇ ಚುಕ್ತಾ ಆಗುವುದರಿಂದ ವಿಲೇವಾರಿ ಪ್ರಮಾಣವು ಕಡಿಮೆಯಾಗಿರುತ್ತದೆ. ಕಾರ್ಪೊರೇಟ್ ಫಲಗಳನ್ನು ಘೋಷಿಸಿದಾಗ, ಅದು ಆಕರ್ಷಕವಾಗಿದ್ದಲ್ಲಿ ವಿಲೇವಾರಿ ಪ್ರಮಾಣ ಹೆಚ್ಚಾಗಿರುತ್ತದೆ.
ತೆರಿಗೆ ತಾರಾತಮ್ಯದ ಪ್ರಭಾವ
ಡಿವಿಡೆಂಡ್ ಗೆ ನಿಗದಿತ ದಿನ ಸಮೀಪವಿದ್ದಾಗ ಷೇರಿನ ಬೆಲೆಗಳು ಇಳಿಕೆ ಕಾಣಲು ಪ್ರಮುಖ ಕಾರಣವೆಂದರೆ ಷೇರುಗಳ ದರ ಏರಿಕೆಯಾಗಿರುವುದರಿಂದ, ಕಡಿಮೆ ದರದಲ್ಲಿ ಖರೀದಿಸಿದವರು ಮಾರಾಟಕ್ಕೆ ಮುಂದಾಗುತ್ತಾರೆ. ಕಾರಣ ಡಿವಿಡೆಂಡ್ ನ್ನು ಕಂಪನಿಯಿಂದ ಪಡೆದರೆ ಅದು ಪೂರ್ಣಪ್ರಮಾಣದ ಆದಾಯ ತೆರಿಗೆ ಸ್ಲಾಬ್ ಗೆ ಸೇರುತ್ತದೆ. ಆದರೆ ಮುಂಚೆಯೇ ಮಾರಾಟ ಮಾಡಿದಲ್ಲಿ ಅದು ಅಲ್ಪಕಾಲೀನ ಲಾಭ (short term capital gain) ಎಂದು ಶೇ.15 ರಷ್ಟರ ತೆರಿಗೆಯನ್ನು ಲಾಭದ ಮೇಲೆ ಕಟ್ಟಿದರೆ ಸಾಕು. ಈ ತಾರಾತಮ್ಯವು ಷೇರುಪೇಟೆಯಲ್ಲಿ ಕಂ-ಡಿವಿಡೆಂಡ್ ನ ಕೊನೆಯ ದಿನದ ಸಮೀಪ ಒತ್ತಡಕ್ಕೊಳಗಾಗುವಂತೆ ಮಾಡುತ್ತದೆ.