26 C
Karnataka
Thursday, November 21, 2024

    ರಾಮನಗರ ಮಾವು ಸಂಸ್ಕರಣಾ ಘಟಕ, ಹೈಟೆಕ್ ರೇಷ್ಮೆ ‌ಮಾರುಕಟ್ಟೆ ಯೋಜನೆಗೆ ಡಿಸೆಂಬರ್‌ನಲ್ಲಿ ಕಾರ್ಯಾದೇಶ

    Must read

    ರಾಮನಗರ ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಮಾವು ಸಂಸ್ಕರಣಾ ಘಟಕ ಹಾಗೂ ಹೈಟೆಕ್ ರೇಷ್ಮೆ ‌ಮಾರುಕಟ್ಟೆ ನಿರ್ಮಾಣ ಯೋಜನೆಗಳಿಗೆ ಅಕ್ಟೋಬರ್‌ನಲ್ಲಿ ಸಮಗ್ರ ಯೋಜನಾ ವರದಿ (DPR)‌ ಅಂತಿಮಗೊಳಿಸಿ ಡಿಸೆಂಬರ್‌ನಲ್ಲಿ ಟೆಂಡರ್‌ ಕರೆದು ಕಾರ್ಯಾದೇಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಈ ಎರಡೂ ಯೋಜನೆಗಳಿಗೆ ಸಂಬಂಧಿಸಿದಂತೆ ರೇಷ್ಮೆ ಖಾತೆ ಸಚಿವ ಆರ್.‌ಶಂಕರ್‌, ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಗಡಿ ಶಾಸಕ ಮಂಜುನಾಥ್‌ ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ನಂತರ ಮಾಧ್ಯಮಗಳ ಜತೆ ಡಿಸಿಎಂ ಮಾತನಾಡಿದರು.

    ರಾಮನಗರ ಜಿಲ್ಲೆಗೆ ಇವೆರಡೂ ಯೋಜನೆಗಳು ಬಹಳ ಉಪಯುಕ್ತವಾಗುತ್ತವೆ. ರೈತರಿಗೆ ಒಳ್ಳೆಯದಾಗಲಿದೆ ಎಂದ ಅವರು, ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮುಗಿಸಲಾಗುವುದು ಎಂದರು.

    ಮಾವು ಸಂಸ್ಕರಣಾ ಘಟಕ:ಬೈರಾಪಟ್ಟಣದಲ್ಲಿ ಗುರುತಿಸಲಾಗಿರುವ ಒಟ್ಟು 40 ಎಕರೆ ಪ್ರದೇಶವಿದ್ದು, ಮೊದಲ ಹಂತದಲ್ಲಿ 15 ಎಕರೆಯ 4 ಎಕರೆ ಪ್ರದೇಶದಲ್ಲಿ ಸಾಮಾನ್ಯ ಸೌಲಭ್ಯಗಳನ್ನು ಕಲ್ಪಿಸಿ ಉಳಿದ ಜಾಗದಲ್ಲಿ ಆಹಾರ ಸಂಸ್ಕರಣಾ ಕ್ಲಸ್ಟರ್‌ ಮಾಡಲಾಗುವುದು. ಇದರಲ್ಲಿಯೇ ಮಾವು ಸಂಸ್ಕರಣಾ ಘಟಕ ಕೂಡ ಬರುತ್ತದೆ. ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಐದು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ರಫ್ತಾರ್‌ ಯೋಜನೆ ಅಡಿಯಲ್ಲಿ 10 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಕೇಂದ್ರವನ್ನು  ಕೋರಲಾಗಿದೆ. ಈಗಾಗಲೇ ಯೋಜನೆಗೆ ಪ್ರಾಥಮಿಕ ಒಪ್ಪಿಗೆ ಪಡೆಯಲಾಗಿದೆ. ಅಂತಿಮ ಒಪ್ಪಿಗೆಯ ಪ್ರಕ್ರಿಯೆಗಳಷ್ಟೇ ಬಾಕಿ. ಈ ಯೋಜನೆಗೆ ಖಾಸಗಿ ಕ್ಷೇತ್ರದಿಂದ 500 ಕೋಟಿ ರೂ. ಹೂಡಿಕೆ ಅಗತ್ಯವಿದ್ದು, ಹೂಡಿಕೆ ಮಾಡಿದವರಿಗೆ ಶೇ.40ರಷ್ಟು ಸಬ್ಸಿಡಿ ದೊರೆಯುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    20 ಎಕರೆಯಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆ:ಚನ್ನಪಟ್ಟಣ ಸಮೀಪದ ರೇಷ್ಮೆ ತರಬೇತಿ ಕೇಂದ್ರದಲ್ಲಿರುವ 20 ಎಕರೆ ಜಾಗದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ. ನಬಾರ್ಡ್‌ನಿಂದ 75 ಕೋಟಿ ರೂ. ಆರ್ಥಿಕ ನೆರವು ಸಿಗುತ್ತಿದೆ. ಮುಂಗಡ ಪತ್ರದಲ್ಲಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇವತ್ತಿನ ಸಭೆಯಲ್ಲಿ ನಾಲ್ವರು ಆರ್ಕಿಟೆಕ್ಟ್‌ಗಳು ಯೋಜನೆಯ ಪ್ರಾತ್ಯಕ್ಷಿಕೆ ನೀಡಿದರು ಎಂದು ಡಿಸಿಎಂ ಹೇಳಿದರು. 

    ಈ ಸಭೆಯಲ್ಲಿ ಶಾಸಕ ಸಾ.ರಾ.ಮಹೇಶ್‌, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಮೂಲಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌, ಡಿಸಿಎಂ ಅವರ ಕಾರ್ಯದರ್ಶಿ ಪ್ರದೀಪ್‌, ರಾಮನಗರ ಜಿಲ್ಲಾಧಿಕಾರಿ ರಾಕೇಶ್‌ಕುಮಾರ, ಸಿಇಒ ಇಕ್ರಂ ಮುಂತಾದವರು ಭಾಗಿಯಾಗಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!