ಮಾಗಡಿಯ ಮಂಚನಬೆಲೆ ಜಲಾಶಯದ ಸಮೀಪ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸಲು ಅರಣ್ಯ, ವಸತಿ ಮತ್ತು ವಿಹಾರಧಾಮ (ಜೆ.ಎಲ್.ಆರ್.) ವತಿಯಿಂದ ಸುಸಜ್ಜಿತ ರೆಸಾರ್ಟ್ಗಳನ್ನು ನಿರ್ಮಾಣ ಮಾಡುವ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಅವರು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪ್ರವಾಸೋದ್ಯಮ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಗಳ ಜೊತೆ ಸಭೆ ನಡೆಸಿದರು.
ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಸಿಂಧು ಬಿ. ರೂಪೇಶ್, ಜೆ.ಎಲ್.ಆರ್. ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ಶರ್ಮ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡರು, ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಹಾಗೂ ಸಿ.ಇ.ಓ. ಇಕ್ರಂ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಮಂಚನಬೆಲೆ ಜಲಾಶಯ ಪ್ರದೇಶವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಬೆಂಗಳೂರಿಗೆ ಅತ್ಯಂತ ಹತ್ತಿರವಾಗಿರುವ ಈ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ಸ್ನೇಹಿಯಾಗಿ ಮಾಡಿದರೆ ಜನ ಸಾಮಾನ್ಯರು ಬರುತ್ತಾರೆ ಎಂದು ಸಚಿವರು ಹೇಳಿದರು.
ಮಂಚನಬೆಲೆ ಜಲಾಶಯದಲ್ಲಿ ನಿರ್ಮಾಣ ಮಾಡುವ ಜಂಗಲ್ ಲಾಡ್ಜ್ ರೆಸಾರ್ಟ್ ಪರಿಸರ ಸ್ನೇಹಿಯಾಗಿರಬೇಕು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಹಾಗೂ ಜಲಾಶಯಕ್ಕೆ ಯಾವುದೇ ರೀತಿ ಧಕ್ಕೆ ಉಂಟಾಗದಂತೆ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 10 ಎಕರೆ ಕಂದಾಯ ಜಮೀನನ್ನು ಜಂಗಲ್ ಲಾಡ್ಜ್ಸ್ ಗೆ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ತೆರಳಿ ಜಮೀನನ್ನು ವರ್ಗಾಯಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಕಳೆದ ವಾರ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಚಿವರಾದ ನಾರಾಯಣಗೌಡರ ಜೊತೆ ಕೆ.ಆರ್.ಎಸ್. ಗೆ ತೆರಳಿದ್ದಾಗ 40 ಕಿ.ಮೀ. ಕೆ.ಆರ್.ಎಸ್. ಹಿನ್ನೀರಿನಲ್ಲಿ ಸ್ಪೀಡ್ ಬೋಟ್ನಲ್ಲಿ ತೆರಳಿದ್ದಾಗಿ ತಿಳಿಸಿದ ಸಚಿವ ಯೋಗೇಶ್ವರ್ ಸುಮಾರು 3 ದ್ವೀಪಗಳನ್ನು ತಾವು ವೀಕ್ಷಿಸಿದ್ದಾಗಿ ಹೇಳಿದರು. ಇಲ್ಲಿ ಜಲ ಕ್ರೀಡೆಗಳನ್ನು ಆರಂಭಿಸಬೇಕೆಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಅವರಿಗೆ ಹೇಳಿದರು.
ಕೆ.ಆರ್.ಎಸ್. ಹಿನ್ನೀರಿನಲ್ಲಿ 330 ಎಕರೆ ಜಮೀನಿದೆ ಹಾಗೂ ಅತ್ಯಂತ ಪುರಾತನವಾದ ವೇಣುಗೋಪಾಲ ದೇವಾಲಯವಿದೆ. ಕೆ.ಆರ್.ಎಸ್. ಜಲಾಶಯದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ರವರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಜಲಕ್ರೀಡೆಗಳನ್ನು ಆರಂಭಿಸಲು ಸಹ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ರವರಿಗೆ ಇದೇ ವೇಳೆ ತಿಳಿಸಿದರು.