ರಾಜ್ಯ ಸರಕಾರಿ ನೌಕರರಿಗೆ ಬಾಕಿ ಉಳಿದ ತುಟ್ಟಿ ಭತ್ಯೆಯ ಕಂತುಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಗಳವಾರ ಆದೇಶ ನೀಡಿದ್ದಾರೆ.
ಹಣಕಾಸು ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಈ ಸಂಬಂಧದ ಕಡತ ಮಂಗಳವಾರ ಸಂಜೆ ರವಾನೆಯಾಗಿದೆ. ಈ ಹಿಂದೆ ಇದಕ್ಕೆ ಒಪ್ಪಿಗೆ ನೀಡದ ಮುಖ್ಯಮಂತ್ರಿಗಳು ದೇಶದ ಹಲ ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನದಲ್ಲೇ ಕಡಿತ ಮಾಡಲಾಗಿದೆ.ಆದರೆ ನಾವು ಕಡಿತ ಮಾಡಿಲ್ಲ ಎಂದು ಈ ಬಗ್ಗೆ ಸಲ್ಲಿಸಿದ್ದ ಮನವಿಗೆ ಮಾರ್ಮಿಕ ಸಂದೇಶ ನೀಡಿದ್ದರು ಎಂದು ಮೂಲಗಳು ಹೇಳಿವೆ.
ಆದರೆ, ಇಂದು ವಿಧಾನಸೌಧಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ತುಟ್ಟಿಭತ್ಯೆ ಸಂಬಂಧದ ಕಡತವನ್ನು ತರಿಸಿಕೊಂಡು ಅದಕ್ಕೆ ಸಹಿ ಹಾಕಿದರು. ಸರಕಾರಿ ನೌಕರರಿಗೆ ನೀಡಬೇಕಿರುವ ಬಾಕಿ ತುಟ್ಟಿ ಭತ್ಯೆಯನ್ನು ಮಂಜೂರು ಮಾಡುವಂತೆ ಷರಾ ಬರೆದರು ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರಿ ನೌಕರರಿಗೆ ಶೇ.11 % ತುಟ್ಟಿಭತ್ಯೆ ಬಿಡುಗಡೆ- ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಸಿಎಂಗೆ ಅಭಿನಂದನೆ
ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1, 2021 ರಿಂದ ಶೇ.11% ತುಟ್ಟಿಭತ್ಯೆ ಬಿಡುಗಡೆಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಆದೇಶ ಹೊರಡಿಸಿದ್ದಾರೆ. ಇದರಿಂದ 6.00 ಲಕ್ಷ ರಾಜ್ಯ ಸರ್ಕಾರಿ ನೌಕರರು, 4.50 ಲಕ್ಷ ಪಿಂಚಣಿದಾರರು, 3.00 ಲಕ್ಷ ನಿಗಮ – ಮಂಡಳಿಗಳ ನೌಕರರು ಆರ್ಥಿಕ ಸೌಲಭ್ಯ ಪಡೆಯಲಿದ್ದಾರೆ. ಹಣಕಾಸು ಇಲಾಖೆ ಇನ್ನು 2-3 ದಿನಗಳಲ್ಲಿ ಆದೇಶ ಹೊರಡಿಸಲಿದ್ದು, ರಾಜ್ಯದ ಎಲ್ಲಾ ನೌಕರರಿಗೆ ಜುಲೈ 1, 2021 ರಿಂದ ಮಂಜೂರಾಗುವ ತುಟ್ಟಿಭತ್ಯೆಯು ಮೂಲ ವೇತನದಲ್ಲಿ ಸೇರ್ಪಡೆಗೊಳ್ಳಲಿದೆ. ಈ ಆದೇಶ ನೀಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅಭಿನಂದಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಜನವರಿ 1, 2020 ರಿಂದ ತಡೆಹಿಡಿಯಲಾಗಿದ್ದ ಮೂರು ಕಂತುಗಳ ತುಟ್ಟಿಭತ್ಯೆಯನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು.
ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಜುಲೈ 1, 2021 ರಿಂದ ಅನ್ವಯವಾಗುವಂತೆ ಶೇ. 11% ತುಟ್ಟಿಭತ್ಯೆ ಮಂಜೂರು ಮಾಡಿದೆ. ಅದೇ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಹ ಶೇ. 11% ತುಟ್ಟಿಭತ್ಯೆ ಮಂಜೂರು ಮಾಡಲು ಸಂಘವು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಜುಲೈ 1, 2021 ರಿಂದ ಅನ್ವಯಗೊಳ್ಳುವಂತೆ ಬಾಕಿ ಇರುವ ಶೇ.11% ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟದ ಎಲ್ಲಾ ಸಚಿವರು, ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಧನ್ಯವಾದ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.