18.8 C
Karnataka
Friday, November 22, 2024

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ರೂವಾರಿ ಪ್ರೊ. ಎಂ ಎಸ್ ನಂಜುಂಡರಾವ್ ನೆನಪಿನ ಕಲಾ ಪ್ರದರ್ಶನ

    Must read


    ಡಾ. ಆರ್.ಎಚ್.ಕುಲಕರ್ಣಿ

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರೂಆಗಿದ್ದ ದಿ.ಪ್ರೊ. ಎಂ ಎಸ್ ನಂಜುಂಡರಾಯರದು ಚಿತ್ರಕಲಾ ಲೋಕಕ್ಕೆ ಅಪೂರ್ವವಾದಕೊಡುಗೆಇದೆ. ಒಂದು ಸಾಮನ್ಯವಾದ ಕಲಾ ಸಂಸ್ಥೆಯನ್ನುರಾಜ್ಯದ ಮತ್ತುದೇಶದ ಮುಂಚೂಣಿ ಕಲಾ ಸಂಸ್ಥೆಯನ್ನಾಗಿರೂಪಿಸುವಲ್ಲಿ ಮತ್ತು ಬೆಳೆಸುವಲ್ಲಿ ಅವರ ಪಾತ್ರ ಬಹು ದೊಡ್ಡದು.

    ಪ್ರಸ್ತುತ ಜುಲೈ ತಿಂಗಳ 5 ನೆಯ ತಾರೀಖು ಅವರ 90ನೆಯ ಜನ್ಮದಿನವನ್ನು ವಾರ್ಷಿಕವಾಗಿ ಆಚರಿಸಲಾಯಿತು. ಅವರ 90 ನೆ ವರ್ಷದ ಸವಿ ನೆನಪಿನಲ್ಲಿ ಚಿತ್ರಕಲಾ ಪರಿಷತ್ತು ಒಂದುಅಪೂರ್ವವಾದ ಚಿತ್ರಕಲಾ ಪ್ರದರ್ಶನವನ್ನು ಚಿತ್ರಕಲಾ ರಸಿಕರಿಗೆ ರಸದೌತಣವೆಂಬಂತೆ ಏರ್ಪಡಿಸಿದೆ.ಪರಿಷತ್ತಿನ ಸಂಗ್ರಹದಲ್ಲಿರುವ ಇದುವರೆಗೂ ಪ್ರದರ್ಶನಗೊಳ್ಳದ ರಾಜ್ಯದ ಮತ್ತು ರಾಷ್ಟ್ರದ ಖ್ಯಾತ ಕಲಾವಿದರ ಕಲಾಕೃತಿಗಳನ್ನು ನಾಲ್ಕೂ ಗ್ಯಾಲರಿಗಳಲ್ಲಿ ಪ್ರದರ್ಶನವನ್ನು ಅಣಿಗೊಳಿಸಲಾಗಿದೆ. 90 ಕ್ಕೂ ಅಧಿಕ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

    ನಂಜುಂಡರಾಯರ ದೂರದೃಷ್ಟಿ

    ಕರ್ನಾಟಕಚಿತ್ರಕಲಾ ಪರಿಷತ್ತುಇಂದುರಾಷ್ಟ್ರದ ಮುಂಚೂಣಿ ಚಿತ್ರಕಲಾ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಬೆಳೆಯುವಲ್ಲಿ ದಿ. ನಂಜುಂಡರಾಯರ ದೂರದೃಷ್ಟಿ ಮುಖ್ಯವಾಗಿತ್ತು.ಯಾವುದೇ ಹಣಕಾಸಿನ ಬೆಂಬಲವಿಲ್ಲದೇ, ಒಂದು ಸಂಸ್ಥೆಯನ್ನು ಕಲಾ ಸಮುದಾಯದ ಅಭಿವೃದ್ಧಿಗಾಗಿ ಕಲಾಸಂಕುಲವನ್ನೆ ಪ್ರಾರಂಭಿಸಿದರು. ಚಿತ್ರಕಲಾ ಶಿಕ್ಷಣದಲ್ಲಿ ಪ್ರಾಯಶಃ ಕರ್ನಾಟಕದಲ್ಲಿ ಮೊದಲು ಬಾರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಕಲ್ಪನೆಗಳನ್ನು ಸಾಕಾರಗೊಳಿಸಿದ್ದು ನಂಜುಂಡರಾಯರೆ.ಚಿತ್ರಕಲಾ ಶಿಕ್ಷಣದ ಜೊತೆಯಲ್ಲಿ ಗ್ಯಾಲರಿಗಳು ಕಾಯಂ ಆಗಿ ಪ್ರದರ್ಶನಗೊಳ್ಳುವ ವಸ್ತುಸಂಗ್ರಹಾಲಯ ಮಾದರಿಯ 13 ಗ್ಯಾಲರಿಗಳು ಅಭಿವೃದ್ಧಿಗೊಂಡವು.

    ಕರ್ನಾಟಕದ ಪ್ರಾಚೀನ ಸಂಸ್ಕೃತಿಯ ಕುರುಹುಗಳಾಗಿರುವ ಮೈಸೂರು ಪಾರಂಪರಿಕ ಚಿತ್ರಕಲೆ ಮತ್ತು ಕಲಾಕೃಗಳ ಸಂಗ್ರಹ, ತೊಗಲು ಗೊಂಬೆಗಳ ಸಂಗ್ರಹ ಅಲ್ಲದೇ ಸಮಕಾಲೀನ ಹಾಗೂ ಭಾರತದ ಆಧುನಿಕ ಕಲಾಕೃತಿಗಳನ್ನು ಸಂಗ್ರಹಿಸಿ ಪರಿಷತ್ತಿನ ಗ್ಯಾಲರಿಗಳಲ್ಲಿ ಕಾಯಂ ಆಗಿ ಪ್ರದರ್ಶಿಸಲಾಗಿದೆ. ವಿಶೇಷವಾಗಿ ರಷ್ಯಾದೇಶದ ಕಲಾವಿದರಾಗಿದ್ದ ನಿಕೋಲಸ್ ರೋರಿಚ್ ಮತ್ತು ಸ್ವೆತಾಸ್ಲೋವ್‌ ರೋರಿಚ್ ಅವರುಗಳ ಕಲಾಕೃತಿಗಳನ್ನು ಪರಿಷತ್ತಿನ ಸಂಗ್ರಹಾಲಯಕ್ಕೆ ಸೇರಿಸಿದ್ದಲ್ಲದೇ ಅವುಗಳಗಾಗಿ ಕಾಯಂಆದಂತಹ ಗ್ಯಾಲರಿಗಳನ್ನು ರೂಪಿಸಿ ಪ್ರದರ್ಶಿಸಲಾಗಿದೆ.

    ಅಂತಾರಾಷ್ಟ್ರೀಯ ಖ್ಯಾತಿಯ ಗ್ರಾಫಿಕ್ ಕಲಾವಿದರಾಗಿದ್ದ ದಿ.ಪ್ರೊ.ಕೃಷ್ಣಾರೆಡ್ಡಿಯವರ ಕಲಾಕೃತಿಗಳೂ ಗ್ಯಾಲರಿಗಳಲ್ಲಿ ಸೇರಿವೆ. ಒಟ್ಟಾರೆಯಾಗಿ ಇಂದು ಇಡೀ ದಕ್ಷಿಣ ಭಾರತದಲ್ಲಿ ಚಿತ್ರಕಲಾ ಪರಿಷತ್ತು ಕಲಾಕೃತಿಗಳ ಸಂಗ್ರಹ ಹೊಂದಿರುವ ಅಪೂರ್ವ ತಾಣವಾಗಿದೆ. ನಂಜುಂಡರಾಯರಿಗೆ ಇದ್ದಂತಹ ದೊಡ್ದ ಕನಸು ಎಂದರೆ, ಚಿತ್ರಕಲಾ ಪರಿಷತ್ತು ಕಲಾವಿದರಿಗೆ ಆಶ್ರಯ ತಾಣವಾಗಬೇಕು, ಕರ್ನಾಟಕದ ಕಲೆ ಬೆಳೆಯಬೇಕು. ವಿಶೇಷವಾಗಿ ಕಲಾಶಿಕ್ಷಣಕ್ಕೊಂದು ಸ್ಪಷ್ಟವಾದ ಸಂಮಾನ ದೊರೆಯಬೇಕೆಂಬುದು.ಅವರ ಆಸೆಯಂತೆ, ಕರ್ನಾಟಕ ದೃಶ್ಯಕಲಾ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಿ ಇಂದು ಚಿತ್ರಕಲಾ ಮಹಾವಿದ್ಯಾಲಯ ಬೆಳೆದಿದೆ.

    ಕಲಾ ಶಿಕ್ಷಣದ ಮೇರು ಸಂಸ್ಥೆ

    ದೃಶ್ಯಕಲಾ ಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿ ಎಚ್ ಡಿ ಗಳವರೆಗೂ ಇಂದು ಇಲ್ಲಿ ಅಧ್ಯಯನಕ್ಕೆ ಅನುಕೂಲವಿದೆ. ಹೊರ ರಾಜ್ಯದ ಮತ್ತು ವಿದೇಶಿ ವಿದ್ಯಾರ್ಥಿಗಳು ನಮ್ಮರಾಜ್ಯದ ವಿದ್ಯಾರ್ಥಿಗಳೊಡನೆ ಅಧ್ಯಯನಕ್ಕೆಇಲ್ಲಿಗೆ ಬರುತ್ತಾರೆ. ಅಂದರೆ ಒಂದುಕಾಲದಲ್ಲಿ ಗುಜರಾತ್ ನ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯ, ಶಾಂತಿನಿಕೇತನಗಳ ಪ್ರಸಿದ್ಧಿಯಂತೆ ಇಂದುಚಿತ್ರಕಲಾಪರಿಷತ್ತು ವಿದ್ಯಾರ್ಥಿಗಳ ಶಿಕ್ಷಣದ ಉನ್ನತ ಸಂಸ್ಥೆಯಾಗಿದೆ.

    ಚಿತ್ರಕಲಾ ಪರಿಷತ್ತು ಉತ್ತರಹಳ್ಳಿಯ ಡಾ ವಿಷ್ಣುವರ್ಧನರಸ್ತೆಯಲ್ಲಿ 14 ಎಕರೆ ನಿವೇಶನದಲ್ಲಿ ಬೃಹತ್ತಾದ ಕಾಲೇಜು ಕಟ್ಟಡವನ್ನು ನಿರ್ಮಿಸಿದೆ. ವಿಶ್ವದರ್ಜೆಯ ಶಿಕ್ಷಣ ಮತ್ತು ಸೌಲಭ್ಯ ಸಿಗಬೆಂಕೆಂಬುದು ಪ್ರಸ್ತುತ ಆಡಳಿತ ಮಂಡಳಿಯ ಡಾ. ಬಿ.ಎಲ್.ಶಂಕರ್ ಮತ್ತುಅವರಕಾರ್ಯಾಕಾರಿ ಸಮಿತಿಯಆಶಯವಾಗಿದೆ. ಹೊಸ ವಿಚಾರ ಹಾಗೂ ದೃಶ್ಯಕಲಾ ಶಿಕ್ಷಣದ ಆವಶ್ಯಕತೆಗಳನ್ನು ಮನಗಂಡು, ಚಿತ್ರಕಲಾ ಸಂಜೆಕಾಲೇಜನ್ನು ಪ್ರಾರಂಭಿಸಲಾಗಿದೆ. ಇದು ಪ್ರಾಯಶಃ ಇಡೀ ಭಾರತದಲ್ಲಿಯೇ ಮೊಟ್ತಮೊದಲ ಸಂಜೆ ದೃಶ್ಯಕಲಾ ಕಾಲೇಜಾಗಿದೆ.

    ಕರ್ನಾಟಕ ಚಿತ್ರಕಲಾ ಪರಿಷತ್ತು ಅವಿರತವಾಗಿ ಕ್ಷೇತ್ರದ ಅಭ್ಯುದಯಕ್ಕೆ ಮತ್ತು ಕಲಾವಿದರ ಬೆಳವಣಿಗೆ ಪೂರಕವಾದ ಕಲಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ.ಚಿತ್ರ ಸಂತೆಯಂತಹ ಅಭೂತಪೂರ್ವ ಕಾರ್ಯಕ್ರಮ ದೇಶದೆಲ್ಲಡೆ ಇಂದು ಮನೆಮಾತಾಗಿದೆ.

    ಚಿತ್ರಕಲಾ ಪ್ರದರ್ಶನ


    ದಿ. ಪ್ರೊ. ನಂಜುಂಡರಾವ್‌ಅವರ 90 ನೆಯಜನ್ಮದಿನದ ಪೂರಕವಾಗಿ ಏರ್ಪಡಿಸಲಾಗಿರುವ ಚಿತ್ರಕಲಾ ಪ್ರದರ್ಶನ ಚಿತ್ರಕಲಾ ಪರಿಷತ್ತಿನ ಅಪೂರ್ವ ಸಂಗ್ರದಿಂದ ಆಯ್ಕೆ ಮಾಡಾಲಾದ ಖ್ಯಾತ ಕಲಾವಿದರ ಕಲಾಕೃತಿಗಳವೆ. ಈ ಪ್ರದರ್ಶನದಲ್ಲಿ ದಿ. ಕೆ.ಕೆ ಹೆಬ್ಬಾರ್, ಪ್ರೊ.ಅಲ್ಫನ್ಸೋ, ಪ್ರೊ.ಆರ್.ಬಿ. ಭಾಸ್ಕರನ್. ಪ್ರೊ.ವಿ.ಜಿ ಅಂದಾನಿ, ಬಿ.ಕೆ.ಎಸ್.ವರ್ಮ, ಬಾದ್ರಿ ನಾರಾಯಣ, ವಿ ಸಂತಾನಮ್, ಆರ್ ಎಂ ಹಡಪದ್, ಪ್ರೊ.ಜೆ.ಎಸ್.ಖಂಡೇರಾವ್, ಆರ್ ವರದರಾಜ್, ಪ್ರೊ.ವಿದ್ಯಾಭೂಷಣ್, ಡಾ.ಪುಷ್ಪಾದ್ರಾವಿಡ್, ಯುಸೂಫ್‌ಅರಕ್ಕಾಲ್, ಜಿ.ಎಸ್.ಶೆಣೈ, ಜೆ.ಎಂ.ಎಸ್. ಮಣಿ, ಇನ್ನೂ ಹಲವಾರು ಖ್ಯಾತನಾಮರಾದ ಕಲಾವಿದರ ಕಲಾಕೃತಿಗಳಿವೆ. ಎಲ್ಲ ಕಲಾಕೃತಿಗಳನ್ನು ವಿವರವಾಗಿ ಗಮನಿಸಿದಾಗ- ಭಾರತೀಯಆಧುನಿಕಕಲೆಯ ವಿವಿಧ ಹಂತಗಳನ್ನು ಈ ಕಲಾಕೃತಿಗಳು ಅನಾವರಣ ಮಾಡುತ್ತವೆ. (ಮೇಲಿನ ಸ್ಲೈಡ್ ಶೋ ನೋಡಿ)

    ಪ್ರೊ. ವಿ.ಜಿ ಅಂದಾನಿಯವರ ಕಲಾಕೃತಿಗಳಲ್ಲಿ ಕೃಷ್ಣ ಕಥೆಯ ದೃಶ್ಯಗಳ ಅನಾವರಣಗೊಂದಿವೆ. ಕೆ ಕೆ ಹೆಬ್ಬರರು ರಚಿಸಿದ್ದ ದಿ. ನಂಜುಂಡರಾಯರ ಭಾವಚಿತ್ರವು ಪ್ರಾಯಶಃ ನಂಜುಂಡರಾಯರ ವಯಕ್ತಿಕ ಅಂತಃ ಸತ್ವವನ್ನು ಮುಖಭಾವನೆಯಲ್ಲಿ ಪ್ರದರ್ಶಿಸುವಂತಿದೆ. ಯುಸುಫ್‌ ಅರಕ್ಕಾಲ್‌ರ ಸಮಾಜಮುಖಿ ದೃಶ್ಯಾವತರಣಿಕೆಗಳು ನೆಳಲು ಬೆಳಕಿನ ಸೋಜಿಗವೆಂಬಂತಹದೃಶ್ಯಭಾಷೆಯನ್ನು ಬಿಂಬಿಸುತ್ತವೆ. ಕಲಾವಿದ ಪ್ರಾಧ್ಯಾಪಕ ಆರ್ ಬಿ, ಭಾಸ್ಕರನ್‌ ಅವರು ತಮ್ಮ ಕಲಾಕೃತಿಗಳಲ್ಲಿ ಬೆಕ್ಕನ್ನು ಸಾಂಕೇತಿಕವಾಗಿ ಮಾನವ ಸಹಜ ವಾಂಛೆಗಳ ಭಾಗವಾಗಿ ಬಳಸುತ್ತಾರೆ. ಬೆಕ್ಕು, ಸಾಂಕೇತಿಕವಾಗಿ ಬಹು ಶ್ರುತ ಭಾಷೆಯನ್ನು ಪ್ರತಿನಿಧಿಸುತ್ತದೆ.

    ಪ್ರಸ್ತುತ ಕಲಾ ಪ್ರದರ್ಶನದಲ್ಲಿ ತೊಂಭತ್ತಕ್ಕೂಅಧಿಕ ಕಲಾಕೃತಿಗಳು ಕಲಾಸಕ್ತರನ್ನು ಮತ್ತುಚಿಂತಕರನ್ನು ಕ್ರಿಯಾತ್ಮಕವಾದ ಚಿಂತನೆಗೆ ಹಚ್ಚುತ್ತವೆ. ಕರ್ನಾಟಕ ಚಿತ್ರಕಲಾಪರಿಷತ್ತು ತನ್ನಅಗಾಧವಾದ ಸಂಗ್ರಹದಿಂದ ಅನಾವರಣಮಾಡಿದ ಪ್ರಸ್ತುತ ಕಲಾಕೃತಿಗಳ ಪ್ರದರ್ಶನ ಇಂದಿನ ಕೋವಿಡ್ ಸಂದರ್ಭವನ್ನು ಮೀರಿಕಲಾಸಕ್ತರನ್ನು ಆಕರ್ಷಿಸುತ್ತಿದೆ.ಆಗಸ್ಟ್ ಮೊದಲ ವಾರದವರೆಗೆ ಆ ಪ್ರದರ್ಶನವಿದ್ದು ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾಪರಿಷತ್ತಿನಲ್ಲಿ ಈ ಪ್ರದರ್ಶನ ವೀಕ್ಷಿಸಬಹುದಾಗಿದೆ.


    ಡಾ. ಆರ್.ಎಚ್.ಕುಲಕರ್ಣಿ ಅವರು ಚಿತ್ರಕಲಾಪರಿಷತ್ತಿನಲ್ಲಿ ಪ್ರಾಧ್ಯಾಪಕ. ಕಲಾ ಇತಿಹಾಸ ಮತ್ತು ಕಲಾ ಲೇಖಕ

    spot_img

    More articles

    1 COMMENT

    1. ಸಕಾಲಿಕ ಬರಹ. ಕುಲಕರ್ಣಿ ಸರ್ ತುಂಬಾ ಚೆನ್ನಾಗಿ ಬರೆದಿದ್ದಾರೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!