ನಾವು ಪರೀಕ್ಷೆ ಬರೆದಿದ್ದೆವು. ಈಗ ರಿಸಲ್ಟ್ ಬಂದಿದೆ. ನಾವೆಲ್ಲರೂ ಪಾಸಾಗಿದ್ದೇವೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಪಿ.ಯೋಗೇಶ್ವರ ಮಾರ್ಮಿಕವಾಗಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ರೋಪ್ ವೇ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಶುಕ್ರವಾರ ಬೆಳಗ್ಗೆ ಗಿರಿಧಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಾವು ಪರೀಕ್ಷೆ ಪಾಸಾಗಿದ್ದೇವೆ. ಫಲಿತಾಂಶ ಬಂದಾಯಿತು ಎಂದ ಅವರು, ಸುದ್ದಿಗಾರರು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಮಾರ್ಮಿಕವಾಗಿ ಉತ್ತರ ನೀಡಿದರು.
ಮುಂದುವರಿದು ಅವರು ಹೇಳಿದ್ದಿಷ್ಟು;
- ಯಾರಿಗೆ ಆಗಲಿ ಮಂತ್ರಿ ಸ್ಥಾನ ಸೇರಿ ಯಾವ ಸ್ಥಾನಮಾನವೂ ಶಾಶ್ವತವಲ್ಲ. ಇದನ್ನೇ ನಾನು ಅನೇಕ ಸಲ ಹೇಳಿದ್ದೇನೆ. ಕೆಲವರು ಅರ್ಥ ಮಾಡಿಕೊಂಡರು, ಇನ್ನು ಕೆಲವರಿಗೆ ಅರ್ಥವಾಗಲಿಲ್ಲ.
- ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ಸಂಬಂಧಿಸಿದಂತೆ ಸ್ವತಃ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಹಾಗೂ ಮೊನ್ನೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಅವರೇ ಮಾತನಾಡಿದ್ದಾರೆ. ಯಡಿಯೂರಪ್ಪ ಅವರು ಹಿರಿಯರಿದ್ದಾರೆ. ಈ ನಿಟ್ಟಿನಲ್ಲಿ ನನಗೆ ಹೆಚ್ಚಿನ ಮಾಹಿತಿಯಿಲ್ಲ.
- ರಾಜೀನಾಮೆಗೂ ಮುನ್ನ ಸಾವಿರಾರು ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಮುಖ್ಯಮಂತ್ರಿ ಸಹಿ ಮಾಡುತ್ತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಅರೋಪವನ್ನು ನಾನೂ ಮಾಧ್ಯಮಗಳ ಮೂಲಕ ಗಮನಿಸಿದೆ. ಅವರಿಗೆ ಬೇಕಾದಾಗ ಸಿಎಂ ಮನೆಗೆ ಹೋಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈಗ ಹೀಗೆ ಮಾತನಾಡುತ್ತಿದ್ದಾರೆ. ಅವರ ರಾಜಕಾರಣವೇ ಹಾಗೆ.
- ರಾಜ್ಯದಲ್ಲಿ ಇನ್ನು ಮುಂದೆ ಒಂದೇ ಪಕ್ಷದ ಸರಕಾರ ಅಸ್ತಿತ್ವದಲ್ಲಿ ಇರುತ್ತದೆ. ಬಿಜೆಪಿ ನೇತೃತ್ವದ ಸರಕಾರ ಒಂದೇ ಇರುತ್ತದೆ.
- ಕುಮಾರಸ್ವಾಮಿ ನನಗೆ, ನಮ್ಮ ಪಕ್ಷಕ್ಕೆ ರಾಜಕೀಯ ಎದುರಾಳಿ. ಅವರು ದ್ವಂದ್ವ ನಿಲುವಿನ ರಾಜಕಾರಣಿ. ಕೆಲಸ ಇದ್ದಾಗ ಸಿಎಂ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಈಗ ಸಿಎಂ ಅವರನ್ನೇ ದೂಷಿಸುತ್ತಾರೆ. ಅವಕಾಶವಾದಿ ರಾಜಕಾರಣ ಮಾಡುವ ಕಾರಣಕ್ಕೆ ಕುಮಾರಸ್ವಾಮಿ ಬಗ್ಗೆ ನಮ್ಮ ವಿರೋಧವಿದೆ.
- ನನ್ನ ಹಾಗೂ ನನ್ನ ಜಿಲ್ಲೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಾಗೂ ನನಗೆ ಇತರೆ ಪಕ್ಷಗಳು ನೀಡಿರುವ ತೊಂದರೆ ಬಗ್ಗೆ ಮಾತನಾಡಿದ್ದೇನೆ ವಿನಾ ಬೇರೆ ವಿಚಾರಗಳ ಬಗ್ಗೆ ಎಲ್ಲೂ ಮಾತನಾಡಿಲ್ಲ. ನಮ್ಮ ವರಿಷ್ಠರು ಹಾಗೂ ಹಿರಿಯರು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
- ನಾಯಕತ್ವ ಬದಲಾವಣೆ ಆದ ಮೇಲೆ ಕಾಂಗ್ರೆಸ್ʼನಿಂದ ಬಂದಿರುವ ಹತ್ತಕ್ಕೂ ಹೆಚ್ಚು ಶಾಸಕರಿಗೆ ಹೊಸ ಸರಕಾರದಲ್ಲಿ ಮತ್ತೆ ಸಚಿವ ಸ್ಥಾನ ಕೊಡುವುದಿಲ್ಲ ಎಂಬ ಮಾಹಿತಿ ಬಗ್ಗೆ ನನಗೆ ಗೊತ್ತಿಲ್ಲ. ಊಹಾಪೋಹಗಳಿಗೆ ಉತ್ತರ ನೀಡುವ ಹಕ್ಕು ನನಗಿಲ್ಲ.
- ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಮಠಾಧೀಶರು ತುಂಬಾ ದೊಡ್ಡವರು. ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ ನಿಟ್ಟಿನಲ್ಲಿ ಮಾತನಾಡುವುದಿಲ್ಲ.