21.2 C
Karnataka
Sunday, September 22, 2024

    ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಯಶಸ್ಸು ನಿಶ್ಚಿತ

    Must read

    ಎಂ.ವಿ. ಶಂಕರಾನಂದ

    ಸನಾತನ ಗುರು ಪರಂಪರೆಯನ್ನು ಸ್ಮರಿಸಿ ವಂದಿಸುವ ದಿನ ಆಷಾಢ ಮಾಸದ ಪೂರ್ಣಿಮೆ, ಗುರು ಪೂರ್ಣಿಮೆ. ಇದನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಗುರುಪೂರ್ಣಿಮೆಯಂದು ಗುರುವಿಗೆ ವಿಶೇಷ ನಮನ ಸಲ್ಲಿಸುವುದರೊಂದಿಗೆ ಸಾಧಿಸಬೇಕಾಗಿರುವ ಗುರಿಯತ್ತ ಪುನಶ್ಚೇತನಗೊಳ್ಳಬೇಕಾಗಿರುವುದು ಮುಖ್ಯ. ಆದ್ದರಿಂದಲೇ ಸನ್ಯಾಸಿಗಳು ಚಾತುರ್ಮಾಸ ವ್ರತವನ್ನು ಈ ದಿವಸದಿಂದಲೇ ಆರಂಭಿಸುತ್ತಾರೆ.

    ಭಾರತದ ಪ್ರಾಚೀನ ಗುರು ಶಿಷ್ಯ ಪರಂಪರೆ ಜಗತ್ತನ್ನು ಸುಶೋಭಿತಗೊಳಿಸುತ್ತಿತ್ತು. ಭೌತಿಕ ವಿಜ್ಞಾನಿಗಳ ನಿಷ್ಕರ್ಷೆಗೆ ಸಿಗದಂಥ ಅದ್ಭುತ ಜ್ಞಾನ, ವಿಜ್ಞಾನದ ಕಿರಣಗಳನ್ನು ಕಂಡುಕೊ0ಡು ವಿಶ್ವಧರ್ಮ, ವಿಶ್ವಬಂಧುತ್ವಗಳನ್ನು ಇವರ ಏಕತ್ವದ ಅನುಭೂತಿಯ ಆಧಾರದ ಮೇಲೆ ಘೋಷಿಸಿದ್ದರು.

    ಗುರು ಎಂದರೆ ಯಾರು? ವಿದ್ಯಾದಾನ ಮಾಡುವವನು, ಉಪಾಧ್ಯಾಯ, ಶಿಕ್ಷಕ ಎಂದರ್ಥ. ಶಿಷ್ಯನಾದವನು ಗುರುವಿನಲ್ಲಿ ಇಡಬೇಕಾದ ಪ್ರೀತಿ, ವಿಶ್ವಾಸ, ಗೌರವ, ಶ್ರದ್ಧೆ, ಸಮರ್ಪಣಾ ಮನೋಭಾವ, ನಿಸ್ವಾರ್ಥ ಸೇವಾಪ್ರವೃತ್ತಿ, ನಿಷ್ಕಲ್ಮಶ ಭಾವಗಳಿಗನುಗುಣವಾಗಿ ಗುರು ಕರುಣೆಯಿಂದ ತನ್ನ ಆಧ್ಯಾತ್ಮ ಶಕ್ತಿಯನ್ನು ಶಿಷ್ಯನಿಗೆ ಧಾರೆ ಎರೆಯುತ್ತಾನೆ. ಯಾವ ಗುರು ಶಿಷ್ಯನಿಗೆ ಶುದ್ಧ ಮನಸ್ಸು, ಸದೃಢ ಆರೋಗ್ಯ, ಸುಜ್ಞಾನದ ಉಪಯುಕ್ತತೆ ಪಾರದರ್ಶಕ ಜೀವನ ಪದ್ಧತಿ ಎಂಬ ಉತ್ತಮ ವಿದ್ಯೆ ಕಲಿಸುತ್ತಾ, ದುಷ್ಪರಿಣಾಮ ಎಂಬ ಕೆಟ್ಟ ವಿದ್ಯೆಯನ್ನು ನಾಶಮಾಡುವನೋ ಅವನೇ ನಿಜವಾದ ಗುರು ಎಂದು ಪ್ರಸಿದ್ಧ ಇಂಗ್ಲಿಷ್ ಲೇಖಕ ಜಾರ್ಜ್ ಬರ್ನಾಡ್ ಷಾ ಹೇಳುತ್ತಾನೆ.

    ಇದನ್ನೂ ಓದಿ :Significance of Guru Poornima and an Ideal Teacher

    ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆದೂ, ರು ಎಂಬ ಅಕ್ಷರಕ್ಕೆ ಅದನ್ನು ತೊಲಗಿಸುವವನೆಂದೂ ಅರ್ಥ. ದೇವರಿಗಿಂತ ಗುರು, ಗುರುವಿಗಿಂತ ಗುರುಕೃಪೆ ದೊಡ್ಡದು. ಶ್ರೀರಾಮ, ಶ್ರೀಕೃಷ್ಣರು ಸಹ ವಶಿಷ್ಠ, ವಿಶ್ವಾಮಿತ್ರ, ಸಾಂದೀಪನಿಯಂತಹ ಗುರುಗಳ ಸೇವೆ ಮಾಡಿ ಫಲ ಪಡೆದವರು. ಗುರು ಪೂಜೆ ಮಾಡದೆ ಯಾವುದೇ ಕಾರ್ಯವನ್ನು ಆರಂಭಿಸಬಾರದು. ತಂದೆಯನ್ನು,ಉಪನಯನ ಮಾಡಿದವನನ್ನು, ವಿದ್ಯಾದಾನ ಮಾಡಿದವನನ್ನು,ಅನ್ನದಾತನನ್ನು, ಭಯದಲ್ಲಿ ರಕ್ಷಿಸಿದವನನ್ನು-ಈ ಐವರನ್ನೂ ಗುರುಗಳೆಂದು ಪರಿಗಣಿಸಲಾಗಿದೆ.

    ವ್ಯಾಸರನ್ನು ನಾವು ಆದಿಗುರು ಎಂದು ಪೂಜಿಸುತ್ತೇವೆ. ವ್ಯಾಸ ಮಹರ್ಷಿಗಳು ಪುನಃ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರೆಂದು ನಂಬಿಕೆ ಇದೆ. ಇಂದು ವ್ಯಾಸರನ್ನು ಗುರುವಿನ ನೆನಪಲ್ಲಿ ಸ್ಮರಣೆ ಮಾಡಿ, ಗುರುವಿನ ಪೂಜೆ ಮಾಡಿ ಅವರಿಗೆ ದಕ್ಷಿಣೆಯನ್ನು ಸಮರ್ಪಿಸಬೇಕು.
    ವ್ಯಾಸರು ಅಭ್ಯಾಸ ಮಾಡದ ವಿಷಯವಿಲ್ಲ. ಬ್ರಹ್ಮನಿಂದ ಉಗಮಿಸಿ, ಮನುಷ್ಯರ ಸಂಪರ್ಕವಿಲ್ಲದ್ದರಿಂದ ವೇದಗಳನ್ನು ಅಪೌರುಷೇಯಗಳೆನ್ನುವರು. ಬ್ರಹ್ಮನು ವಾಚಿಸಿದ್ದೆಲ್ಲಾ ವಿಪರೀತ ರಾಶಿಯಾಯಿತು. ಸಾಮಾನ್ಯರಿಗೆ ಅದನ್ನು ಕಲಿಯಲಾಗಲಿ, ಆಚರಿಸಲಾಗಿ ಅಸಾಧ್ಯವಾಯಿತು. ಇಷ್ಟು ಅಗಾಧವಾದ ವೇದಸಾರವನ್ನು ವರ್ಗೀಕರಿಸಿ, ಸಂಕೀರ್ಣವಾಗಿ ಹೆಣೆದು, ಸಾಮಾನ್ಯರಿಗೂ ಅದರ ಜ್ಞಾನವನ್ನು ತಲುಪಿಸುವ ಸಲುವಾಗಿ ಮಹಾವಿಷ್ಣು ವ್ಯಾಸಮಹರ್ಷಿಗಳ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದನು.

    ವ್ಯಾಸ ಎಂದರೆ ಪ್ರಜ್ಞಾ ವಿಕಾಸಕ್ಕೆ ನೆರವಾಗುವವನು ಎಂದರ್ಥ. ಅವರಿಗೆ ಕಪ್ಪು ಬಣ್ಣವಿದ್ದುದರಿಂದ ಕೃಷ್ಣ ಎಂದೂ, ದ್ವೀಪದಲ್ಲಿ ಹುಟ್ಟಿದ್ದರಿಂದ ದ್ವೆöÊಪಾಯನ ಎಂದೂ, ಪರಾಶರನ ಮಗನಾದ್ದರಿಂದ ಪಾರಶರ್ಯ ಎಂದೂ, ಬದರಿಕಾಶ್ರಮದಲ್ಲಿ ತಪಸ್ಸು ಮಾಡಿದ್ದರಿಂದ ಬಾದರಾಯಣ ಎಂದೂ ಹೆಸರು ಬಂತು ಎನ್ನುತ್ತಾರೆ.

    ವೇದ ಜ್ಞಾನಕಾಂಡ ಮತ್ತು ಕರ್ಮಕಾಂಡ ಎಂಬ ಎರಡು ಶೀರ್ಷಿಕೆಗಳನ್ನು ಹೊಂದಿದೆ. ಈ ಜ್ಞಾನಕಾಂಡಕ್ಕೆ ಸೇರಿದ ವೇದಗಳ ಅಂತಿಮ ಸಾರಾಂಶವನ್ನು ನಮಗೆ ನೀಡುತ್ತಿರುವುದರಿಂದ ಉಪನಿಷತ್ತುಗಳನ್ನು ವೇದಾಂತ ಎಂದು ಕರೆಯುತ್ತಾರೆ. ಇಷ್ಟು ಕ್ರಮಬದ್ಧ ಕೆಲಸವನ್ನು ಮಾಡಿದ ವ್ಯಾಸರು ದೂರಾಲೋಚನೆಯುಳ್ಳವರಾಗಿ ಒಂದೊಂದು ವೇದಕ್ಕೂ ಒಬ್ಬೊಬ್ಬ ಅಧಿದೇವತೆ, ಋಷಿಯನ್ನು ನೇಮಿಸಿ, ತಮ್ಮ ತಮ್ಮ ವೇದಗಳ ಸಂರಕ್ಷಣೆ ಮಾಡುವಂತೆ ಆದೇಶಿಸಿದರು. ಹಾಗಾಗಿ ಋಗ್ವೇದಕ್ಕೆ ಪೈಲ ಋಷಿ, ಯಜುರ್ವೇದಕ್ಕೆ ವೈಶಂಪಾಯನ, ಸಾಮವೇದಕ್ಕೆ ಜೈಮಿನಿ ಋಷಿಗಳನ್ನು ಮತ್ತು ಅಥರ್ವಣ ವೇದಕ್ಕೆ ಸುಮಂತು ಋಷಿಗಳನ್ನು ಸಂಸ್ಥಾಪಿಸಿದರು. ಇದರಿಂದ ವ್ಯಾಸರನ್ನು ವೇದವ್ಯಾಸರು ಎಂದು ಕರೆಯುತ್ತಾರೆ. ಇವರು ಏಕಮೇವಾದ್ವಿತೀಯರು. ಆದ್ದರಿಂದಲೇ ನಾವು ಗುರುಗಳು ಆಸನದ ಮೇಲೆ ಕುಳಿತುಕೊಂಡಾಗ ಅದಕ್ಕೆ ವ್ಯಾಸಪೀಠವೆಂದು ಕರೆಯುತ್ತೇವೆ. ವ್ಯಾಸಪೀಠ ಸತ್ಯವನ್ನೇ ಮಾತನಾಡುತ್ತದೆ.

    ಈ ದಿನದ ಮಹತ್ವ ನಮ್ಮ ಜೀವನವನ್ನು ಸಾರ್ಥಕಗೊಳಿಸಿದ ಗುರುವನ್ನು ಸ್ಮರಿಸುವ ದಿನ. ನಮ್ಮ ವೇದಗಳು ಆಚಾರ್ಯದೇವೋಭವ ಎಂದು ಗುರುಗಳನ್ನು ಮನಸಾರಾ ಗೌರವಿಸಿದ್ದಲ್ಲದೆ, ಅವರಿಗೆ ತಂದೆ ತಾಯಿಗಳಿಗಿಂತ ಮಿಗಿಲಾದ ಸ್ಥಾನವನ್ನೂ ನೀಡಿದೆ. ಗುರು ಹೇಗಿರುವನು ಎಂದು ಈ ಶ್ಲೋಕ ಹೀಗೆ ವಿವರಿಸುತ್ತದೆ:
    “ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
    ಚಕ್ಷುರುನ್ಮೀಲಿತಂ ದೇವ ತಸ್ಮೈಶ್ರೀ ಗುರವೇ ನಮಃ’’
    ಶಿಷ್ಯನ ಅಜ್ಞಾನವೆಂಬ ಕುರುಡನ್ನು ಜ್ಞಾನವೆಂಬ ಔಷಧಿಯಿಂದ ಗುಣಪಡಿಸಿ, ಅವನ ಕೀರ್ತಿ ಎಲ್ಲೆಡೆ ಹರಡುವಂತೆ ಮಾಡಿದ ಶ್ರೀ ಗುರುವಿಗೆ ಕೃತಜ್ಞತೆಗಳು- ಎಂಬುದು ಇದರರ್ಥ. ಇಂಥ ಗುರುವಿಗೆ ವಂದಿಸಿ ನಾವು ಕಾರ್ಯೋನ್ಮುಖರಾದಾಗ ಬಾಳಿನಲ್ಲಿ ಸುಖ, ಸಂಪತ್ತು ಖಚಿತ. ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಕಾರ್ಯಗಳಲ್ಲಿ ಯಶಸ್ಸು ನಿಶ್ಚಿತ.

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!